COVID-19 Resources for Mental Health Coaches... Learn More

0836-2773878

“ವೈಫಲ್ಯ ಮರೆಮಾಚಲು ಹೋಗದಿರಿ ಪ್ರಯತ್ನ ಕೈಬಿಡದಿರಿ”


‘ನನ್ನ ಹಣೆಬರಹವೇ ಸರಿ ಇಲ್ಲ ಸರ್, ಏನು ಮಾಡೋದು? ನನ್ನ ಹೆತ್ತವರೂ ನನ್ನ ದಾರಿ ತಪ್ಪಿಸಿದರು. ಬರೀ ತಮ್ಮ ಸ್ವಾರ್ಥ ನೋಡಿಕೊಂಡರು.. – ಹೀಗೆ ಬರೀ ಪಾಲಕರ ಬಗ್ಗೆ ದೂರಿನ ಸುರಿಮಳೆ ಸುರಿಸಿದ ಈ ವ್ಯಕ್ತಿ ಗೊಣಗುವುದನ್ನು ಕೇಳುತ್ತಿದ್ದಂತೆ ನಾನಂದೆ, ನೀವೇನು ಮಾಡಿಕೊಂಡಿದ್ದೀರಾ ಎಂದು. ಅದಕ್ಕೆ ಆ ವ್ಯಕ್ತಿಯ ಉತ್ತರ ‘ಏನಿಲ್ಲ ಸರ್. ಖಾಲಿ ಇರುವೆ. ನಾನೇದರೂ ಮಾಡಬೇಕೆಂದರೆ ಇವರು ಯಾರೂ ಸಪೋರ್ಟ್ ಮಾಡಲಿಲ್ಲ’ ಎಂದ. ಯಾವ ರೀತಿ ಸಹಾಯ ಎಂದೊಡನೆ, ‘ಆರ್ಥಿಕ ನೆರವು ಕೊಡಲಿಲ್ಲ. ಬೇರೆ ಊರಿಗೆ ಕಳಿಸಲಿಲ್ಲ. ಸರಿಯಾಗಿ ಕಲಿಸಲಿಲ್ಲ… ಹೀಗೆ ಇನ್ನೊಬ್ಬರ ಮೇಲೆ ದೂರು ಹೇಳುತ್ತಾ ಹೋದ.
ಇಂತಹ ವ್ಯಕ್ತಿಗಳು ನಮ್ಮ ಮಧ್ಯೆ ಅನೇಕರು ಇರುತ್ತಾರೆ. ಬರೀ ಇನ್ನೊಬ್ಬರ ಮೇಲೆ ದೂರುವುದು, ತಮ್ಮ ಯತ್ನ ಅಥವಾ ಕೊಡುಗೆ ಬಗ್ಗೆ ಮಾತೇ ಆಡುವುದಿಲ್ಲ. ಎಲ್ಲದಕ್ಕೂ ಪರರೇ ಹೊಣೆ. ಇವರು ಮಾತ್ರ ಇದ್ದಲ್ಲೇ ಇದ್ದುಕೊಂಡು ಅದಾಗಲಿಲ್ಲ, ಇದಾಗಲಿಲ್ಲ. ಅವರು ಸಹಾಯ ಮಾಡಲಿಲ್ಲ, ಇವರು ಕೈ ಜೋಡಿಸಲಿಲ್ಲ ಎನ್ನುತ್ತಿರುತ್ತಾರೆ. ಇದು ವೈಫಲ್ಯ ಮರೆಮಾಚುವ ಸ್ವಭಾವ. ಇದು ಒಂಥರ ಮಾನಸಿಕ ರೋಗವೆಂದೂ ಹೇಳಬಹುದು. ಇವರಿಗೆ ತುಂಬಾ ಆಸೆ ಇರುತ್ತದೆ. ಅದು ಮಾಡಬೇಕು. ಇದು ಮಾಡಬೇಕು. ದೊಡ್ಡ ದೊಡ್ಡ ಕನಸುಗಳು. ಆದರೆ ಅದನ್ನು ನನಸಾಗಿಸಲು ಮಾತ್ರ ಬೇರೆಯವರು ಬರಬೇಕು. ಅವರೇ ಎಲ್ಲ ಮಾಡಿಕೊಡಬೇಕು. ಅದರ ಫಲ ನಾನು ಉಣ್ಣಬೇಕು ಎನ್ನುವ ಮನಸ್ಥಿತಿ, ಒಂದರ್ಥದಲ್ಲಿ ರಣಹೇಡಿಗಳು!. ಅದರಲ್ಲೂ ಹೆತ್ತವರನ್ನು ಹೊಣೆಗಾರರನ್ನಾಗಿಸುವುದು ಇದೆಯಲ್ಲ, ಇದು ಸ್ವೀಕಾರಾರ್ಹವಲ್ಲ. ಜೀವನದಲ್ಲಿ ಒಂದು ಹಂತದವರೆಗೆ ಹೆತ್ತವರು ಸೇರಿದಂತೆ ಎಲ್ಲರೂ ನೆರವಾಗುತ್ತಾರೆ. ಆದರೆ ಅದಕ್ಕೂ ಒಂದು ಮಿತಿ ಇರುತ್ತದೆ. ನಂತರ ಎಲ್ಲರೂ ಕೈ ಚೆಲ್ಲುತ್ತಾರೆ. ಈಗ ಈ ವ್ಯಕ್ತಿಯ ಪ್ರಕರಣದಲ್ಲೂ ಅದದ್ದು ಅದುವೇ. ಆತ ಹೇಳಿದ ಶಿಕ್ಷಣವನ್ನೇ ಕೊಡಿಸಿದರು. ಆದರೆ ಆತ ಅದನ್ನು ಸರಿಯಾಗಿ ಪೂರೈಸಲಿಲ್ಲ. ನನಗೆ ಇದು ಬೇಡವಾಗಿತ್ತು. ಬೇರೆ ಏನೋ ಕಲಿಸಬೇಕಿತ್ತು ಎನ್ನುತ್ತಾನೆ. ಆಯಿತು ಮುಂದೇನು ಮಾಡ್ತೀಯಾ ಎಂದರೆ ನಿರುತ್ತರ. ಇಂದಿನ ದಿನಮಾನಗಳಲ್ಲಿ ಎಲ್ಲರಿಗೂ ಅವರದೇ ಆದ ಉದ್ಯೋಗ, ವ್ಯವಹಾರದ ಕಾರ್ಯಬಾಹುಳ್ಳ ಇರುತ್ತದೆ. ಮೊದಲಿನ ಹಾಗೆ ಪುರಸೊತ್ತು ಸಿಗುವುದು ಅಪರೂಪ, ಅಂಥದರಲ್ಲಿ ಇಂತಹ ಮಕ್ಕಳು ಹುಟ್ಟಿದರೆ ಮುಗೀತು ಅವರ ಕಥೆ. ಕೊನೆಗೆ ಬೇಸತ್ತು ಏನಾದರೂ ಮಾಡಿಕೊ ಎಂದು ಅವರವರ ಕೆಲಸಕ್ಕೆ ಅವರು ಲಕ್ಷ್ಯ ವಹಿಸುತ್ತಾರೆ. ಇದನ್ನೇ ನೆಪವಾಗಿಟ್ಟುಕೊಂಡು ಇಂತಹ ಮಕ್ಕಳು ನನಗೆ ಪ್ರೋತ್ಸಾಹವಿಲ್ಲ ಎಂದು ಕಂಡಕಂಡವರ ಎದುರು ಹೇಳುತ್ತಾ ಸಾಗುತ್ತಾರೆ. ಆದರೆ ತನ್ನ ಸಾಮರ್ಥ್ಯ ಮತ್ತು ಗುರಿ ಏನು ಎಂಬುದರ ಬಗ್ಗೆ ಮಾತೇ ಅಡುವುದಿಲ್ಲ. ಇಂಥವರು ಎಂದೆಂದಿಗೂ ಜೀವನದಲ್ಲಿ ಯಶಸ್ಸು ಕಾಣುವುದಿಲ್ಲ. ಕೊನೆಗೆ ನಾನು ಆ ವ್ಯಕ್ತಿಗೆ ಹೇಳಿದೆ. ನೋಡಿ ಸ್ವಾಮಿ, ನೀವು ಈ ಹೀಗೆ ಎಲ್ಲದಕ್ಕೂ ಬೇರೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಹೋದರೆ ಏನೂ ಆಗದು. ನಿಮ್ಮ ಕೆಲಸ ನೀವೇ ಮಾಡಿಕೊಳ್ಳಬೇಕು. ಒಳ್ಳೆಯದಾದರೆ ಕ್ರೆಡಿಟ್ ಪಡೆಯುವ ನೀವು ತಪ್ಪು ಅಥವಾ ಕೆಟ್ಟದಾದಾಗ ಬೇರೊಬ್ಬರ ಮೇಲೆ ಹೊರಿಸುವಿರಿ. ನಿಮ್ಮ ವೈಫಲ್ಯವನ್ನು ಮರೆಮಾಚುತ್ತಾ ಇನ್ನೊಬ್ಬರನ್ನು ದೂಷಿಸುತ್ತ ಹೋದರೆ ಇನ್ನಷ್ಟು ಪ್ರಪಾತಕ್ಕೆ ಬೀಳುವಿರಿ. ಕೊನೆಗೆ ಹೆತ್ತವರ ದೃಷ್ಟಿಯಲ್ಲೂ ಕೀಳಾಗುವಿರಿ. ಇದು ತಪ್ಪು, ಸಾಧಕರ ಯಶೋಗಾಥೆ ಓದಿರಿ, ಎಂಥೆಂಥ ಕಷ್ಟಗಳನ್ನು ಎದುರಿಸಿ ಇಂದು ಅನೇಕರಿಗೆ ಮಾದರಿಯಾದವರು ನಮ್ಮ ಮಧ್ಯೆ ಇದ್ದಾರೆ. ಒಮ್ಮೆ ಅವರ ಬಗ್ಗೆ ಅರಿಯುವ ಪ್ರಯತ್ನ ಮಾಡಿ. ಆಗದು ಎಂದು ಕೈ ಕಟ್ಟಿ ಕುಳಿತರೆ ಇಲ್ಲವೇ ಎಲ್ಲದಕ್ಕೂ ಹಣೆಬರೆಹ ಎಂದು ದೂರಿದರೆ ಎನೂ ಆಗದು.

ಯಾರಿಗೆ ಗೊತ್ತು ಯತ್ನಿಸಿದರೆ ಆ ಹಣೆಬರೆಹವೂ ಬದಲಾಗಬಹುದೇನೋ..! ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ಆ ಫಲದ ಪ್ರಮಾಣ ಯತ್ನದ ಮೇಲಿರುತ್ತದೆ. ಮನಸ್ಸಿಟ್ಟು ಮಾಡಿದರೆ ಯಾವುದೂ ವ್ಯರ್ಥವಲ್ಲ ಮತ್ತು ಹುಸಿಯಾಗುವುದಿಲ್ಲ. ನಿಮ್ಮ ಸಮಸ್ಯೆಗೆ ಔಷಧವಿಲ್ಲ. ಏನಿದ್ದರೂ ನಿಮ್ಮ ಯತ್ನವೇ ಪರಿಹಾರ ಹೊರತು ಎಲ್ಲಿ ತೋರಿಸಿದರೂ ಅಷ್ಟೇ ಎಂದು ಹೇಳಿದೆ. ಆಗ ಆ ವ್ಯಕ್ತಿಗೂ ಎಲ್ಲೋ ಒಂದು ಕಡೆ ಮುಜುಗರ ಎನಿಸಿದರೂ ನಿಜ ಎನಿಸಿತು. ‘ಹೌದು ಸರ್’ ಎಂದು ಒಪ್ಪಿಕೊಂಡ. ‘ಸರ್ ನಿಮ್ಮ ಆಪ್ತ ಸಲಹೆಗೆ ನಾನು ಋಣಿ. ನಾನು ಯಾರನ್ನೂ ಅವಲಂಬಿಸದೆ ಸ್ವಂತ ಸಾಮರ್ಥ್ಯ ದಿಂದ ಸಾಧನೆ ಮಾಡಿ ಅಮೇಲೆ ನಿಮ್ಮನ್ನು ಭೇಟಿಯಾಗುವೆ’ ಎಂದು ಹೇಳಿ ಹೋದ.

About Author:

Leave Your Comments

Your email address will not be published. Required fields are marked *