COVID-19 Resources for Mental Health Coaches... Learn More
“ಹೆತ್ತವರ ಅತಿಯಾದ ಪ್ರೀತಿ, ಕಕ್ಕುಲಾತಿ ತಂದೀತು ಫಜೀತಿ”


ಆಕೆ 30 ರ ಯುವತಿ. ಸುಂದರಿ, ಸ್ನಾತಕೋತ್ತರ ಪದವೀಧರೆ. ತಂದೆ ಇಲ್ಲ. ತಾಯಿ ಜತೆಗೆ ವಾಸ, ಒಳ್ಳೆಯ ಉದ್ಯೋಗ, ಕೈ ತುಂಬಾ ಸಂಬಳ, ತಾಯಿಯೂ ಅಷ್ಟೇ, ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈ ಯುವತಿ ಪಾಲಕರಿಗೆ ಏಕೈಕ ಪುತ್ರಿ. ಅತಿಯಾದ ಪ್ರೀತಿಯಿಂದ ಬೆಳೆಸಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ ಕೂಡ. ಇಷ್ಟೆಲ್ಲಾ ಇದ್ದ ಮೇಲೆ ಇನ್ನೇನು ಸಮಸ್ಯೆ ಅಂತೀರಾ, ಇಲ್ಲೇ ಇರೋದು ಸಮಸ್ಯೆ, ಅತಿಯಾದ ಪ್ರೀತಿಯೇ ಇದೀಗ ಈ ಯುವತಿಯ ಭವಿಷ್ಯಕ್ಕೆ ಫಜೀತಿಯಾಗಿದೆ.
ಈ ಯುವತಿಯ ತಾಯಿಗೆ ಅಭದ್ರತೆ ಕಾಡಲಾರಂಭಿಸಿದೆ. ಇರುವ ಒಬ್ಬ ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳಿಸಿದರೆ ನನ್ನನ್ನು ನೋಡಿಕೊಳ್ಳುವವರು ಯಾರು? ನನಗೇನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ? ಅದಕ್ಕೆ ಈ ತಾಯಿ ಇದೀಗ ಮಗಳ ಮದುವೆಗೆ ನೂರೆಂಟು ತಕರಾರು, ನೆಪವೊಡ್ಡಲು ಶುರು ಮಾಡಿದ್ದಾರೆ. ಮಗಳಿಗೆ ಒಂದಕ್ಕಿಂತ ಒಂದು ಉತ್ತಮ ಸಂಬಂಧಗಳು ಅರಸಿ ಬಂದರೂ ಇಲ್ಲಸಲ್ಲದ ನೆಪವೊಡ್ಡಿ ಅದನ್ನು ತಪ್ಪಿಸುತ್ತಿದ್ದಾರೆ. ಈ ಕಾರಣಕ್ಕೇ ತಾಯಿ ಮಗಳ ನಡುವೆ ಮನಸ್ತಾಪ, ಮನೆಯಲ್ಲಿ ನಿತ್ಯ ಜಗಳ, ವಾಗ್ವಾದ ನಡೆದಿದೆ. ಮಗಳು ಕೂಡ ತನ್ನ ಹಾಗೆ ಸಂಸಾರ ಮಾಡಿಕೊಂಡು ಬಾಳಲಿ ಎನ್ನುವ ಮಾತು ತಾಯಿಯಿಂದ ಬರುತ್ತಿಲ್ಲ. ಆಕೆಗೆ ತನ್ನದಷ್ಟೇ ಚಿಂತೆ. ತನ್ನ ಸ್ವಾರ್ಥಗೋಸ್ಕರ ಮಗಳ ಭವಿಷ್ಯಕ್ಕೆ ಕಲ್ಲು ಹಾಕುವ ಈ ಮನೋಭಾವ, ಕೊನೆಗೆ ಇದಕ್ಕೆ ಮನೋವೈದ್ಯರ ಬಳಿ ಆಪ್ತಸಮಾಲೋಚನೆಯೇ ಮದ್ದು ಎಂದು ಯಾರೋ ಕಳಿಸಿದ ಕಾರಣ ಅವರು ನನ್ನ ಬಳಿ ಬಂದರು.
ಬಂದವರೇ ತಾಯಿ ಮಗಳು ಪರಸ್ಪರ ಆರೋಪ -ಪ್ರತ್ಯಾರೋಪ ಆರಂಭಿಸಿದರು. ಕೊನೆಗೆ ನಾನು ಅವರನ್ನು ನಿಮ್ಮ ಈ ಜಗಳಕ್ಕೆ ಕಾರಣವಾದರೂ ಏನು? ಎಂದಾಗ “ನೋಡಿ ಸಾರ್, ನನ್ನ ಮಗಳು ಪಿಜಿ ಓದಿದ್ದಾಳೆ. ಒಳ್ಳೆಯ ಉದ್ಯೋಗವೂ ಇದೆ. ಕೈ ತುಂಬಾ ಸಂಬಳ ಇದೆ. ನಾನು ಸೇವಾನಿವೃತ್ತಿಯಾಗಿರುವೆ. ನನ್ನ ಬಳಿಯೂ ಸಾಕಷ್ಟು ಹಣವಿದೆ. ಯಾವುದಕ್ಕೂ ಕೊರತೆಯಿಲ್ಲ. ಮೊದಲಿನಿಂದಲೂ ಇಲ್ಲ. ಆ ರೀತಿ ಬೆಳೆಸಿರುವೆ. ಚೆನ್ನಾಗಿ ಓದಿಸಿರುವೆ. ನನ್ನ ಪತಿ ತೀರಿದ ನಂತರ ನನ್ನದು ಏಕಾಂಗಿ ಬದುಕು. ಈ ಸಮಯದಲ್ಲಿ ಮಗಳು ನನ್ನ ಜತೆ ಇರಲಿ ಎಂಬುದು ನನ್ನ ಆಸೆ, ಇದು ತಪ್ಪಾ?’ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಗಳು, “ನನಗೆ ಚೆನ್ನಾಗಿ ಓದಿಸಿದ್ದಾರೆ. ಉದ್ಯೋಗವನ್ನೂ ಕೊಡಿಸಿದ್ದಾರೆ. ಎಲ್ಲವೂ ಸರಿ. ಹಾಗಂತ ನನಗೂ ಆಸೆ ಇರುವುದಿಲ್ಲವೇ? ನಾನು
ಮದುವೆ ಮಾಡಿಕೊಂಡು ಸಂಸಾರ ಮಾಡಬಾರದೇ? ಮದುವೆಯಾದರೇನಾಯಿತು ನಾನು ಅವರ ಕಾಳಜಿ ಮಾಡೇ ಮಾಡುವೆ. ಅವರಿಗ್ಯಾಕೆ ಈ ಅಭದ್ರತೆ? ಈಗ ಒಂದು ಉತ್ತಮ ಸಂಬಂಧ ಬಂದಿದೆ. ಹುಡುಗ ಚೆನ್ನಾಗಿದ್ದಾರೆ. ಪರಸ್ಪರ ಮನಸ್ಸಿಗೂ ಬಂದಿದೆ. ಈ ಸಂಬಂಧಕ್ಕೆ ನನ್ನ ತಾಯಿ ಆತ ಬರೀ ಡಿಗ್ರಿ ಓದಿದ್ದಾನೆ. ನೀನು ಪಿಜಿ ಓದಿದ್ದೀಯಾ, ನಿನಗಿಂತ ಅವನ ವ್ಯಾಸಂಗ ಕಡಿಮೆ. ಇದರಿಂದ ನಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ. ಈ ಸಂಬಂಧ ಬೇಡ. ಎಂಬ ಹೊಸ ರಾಗ ತೆಗೆಯುತ್ತಿದ್ದಾರೆ. ಅವರಿಗೆ ಇದು ನೆಪ ಮಾತ್ರ. ನೀವು ಯಾವುದೇ ಉತ್ತಮ ಸಂಬಂಧ ತಂದರೂ ಒಂದಲ್ಲಾ ಒಂದು ಕಾರಣ ಹೇಳಿ ತಪ್ಪಿಸುತ್ತಾರೆ. ಅವರಿಗೆ ನಾನು ಸದಾ ಅವರ ಜತೆಗೆ ಇರಬೇಕು ಅಷ್ಟೇ. ಸ್ವಾರ್ಥದ ಪರಮಾವಧಿ’ ಎಂದು ಇರುವ ವಿಷಯ ಸ್ಪಷ್ಟಪಡಿಸಿದಳು.
ಇದು ಒಂದು ತರಹದ ಮಾನಸಿಕ ಕಾಯಿಲೆ, ಪತಿ ತೀರಿದ ನಂತರ ಅಭದ್ರತೆ ಸಹಜ. ಹಾಗಂತ ಅದಕ್ಕೆ ನೂರೆಂಟು ಪರಿಹಾರದ ದಾರಿಗಳಿವೆ. ಮಗಳ ಮೇಲಿನ ಅತಿಪ್ರೀತಿ ಆಕೆಯ ಭವಿಷ್ಯಕ್ಕೆ ಮುಳ್ಳಾಗಬಾರದಲ್ಲವೇ? ಆಕೆಗೂ ಹಲವು ಕನಸುಗಳಿವೆ. ಆಸೆಗಳಿವೆ. ಆರ್ಥಿಕ ಸ್ಥಿತಿಗತಿಯೂ ಚೆನ್ನಾಗಿದೆ. ಅದನ್ನು ಅನುಭವಿಸಲು ಸಂಗಾತಿ ಬೇಕು ಎನ್ನುವ ಅರಿವು ತಾಯಿಗೆ ಬಂದರೆ ಹೀಗಾಗುತ್ತಿರಲಿಲ್ಲ. ಅತಿಯಾಗಿ ಮುದ್ದು ಮಾಡಿ ಬೆಳೆಸಿದ ಮಗಳು ಎಲ್ಲಿ ನನ್ನಿಂದ ದೂರವಾಗುತ್ತಾಳೋ?ಎಂಬ ಸ್ವಾರ್ಥ ಬೆರೆತ ಆತಂಕ ತಾಯಿಯದು. ಆದರೆ ವಿವೇಚನೆ ಬಳಕೆಯೊಂದೇ ಇದಕ್ಕಿರುವ ಮಾರ್ಗ, ಅಳಿಯ ಮಗನಂತೆ ತನ್ನನ್ನು ನೋಡಿಕೊಳ್ಳಬೇಕು ಎನ್ನುವ ಅಪೇಕ್ಷೆ ಅಥವಾ ಒಂದು ಕರಾರಿನೊಂದಿಗೆ ಮಗಳನ್ನು ಧಾರೆ ಎರೆದು ಕೊಟ್ಟು ಆಕೆಯೂ ಸುಖವಾಗಿರುವಂತೆ ಮಾಡಿದರೆ ಮಗಳ ಭವಿಷ್ಯವು ಉಜ್ವಲ, ತಾಯಿಯೂ ಸೇಫ್.
ಸಾಮಾನ್ಯವಾಗಿ ಒಬ್ಬಳೇ ಮಗ ಅಥವಾ ಮಗಳು ಇರುವ ಮನೆ ಯಲ್ಲಿ ಈ ತರಹದ ಪ್ರಸಂಗಗಳು ಎದುರಾಗುವುದು ಸಾಮಾನ್ಯ. ಮಗ ಅಥವಾ ಮಗಳು ಕಣ್ಣೆದುರೇ ಇರಬೇಕು, ನಾನು ಹೇಳಿದ ಹಾಗೆ ಕೇಳಬೇಕು ಎನ್ನುವ ಆಸೆ ತಾಯಂದಿರದ್ದಾಗಿರುತ್ತದೆ. ಇದು ಬಲವಾದಾಗ ಮನೆಯಲ್ಲಿ ಈ ತರಹದ ಸಂಘರ್ಷ, ಮನಸ್ತಾಪ ಹೆಚಾಗುತ್ತದೆ. ಅರಿತು ಬಾಳುವುದೇ ಇದಕ್ಕಿರುವ ಏಕೈಕ ಮದ್ದು,
