COVID-19 Resources for Mental Health Coaches... Learn More

0836-2773878

“ಲಿವಿಂಗ್ ಟುಗೆದರ್ ಮುಕ್ತ ಬದುಕಿನ ಕಥನ ನೈತಿಕ ಅಧಃಪತನ”

‘ಏನು ಅಂತಾ ಹೇಳಲಿ ಡಾಕ್ಟರೇ, ನಾವಿದನ್ನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ನಮ್ಮ ಮಾನ ಮರ್ಯಾದೆ, ಪ್ರತಿಷ್ಠೆ ಎಲ್ಲದಕ್ಕೂ ಧಕ್ಕೆ ಆಯಿತು. ಸಮಾಜದಲ್ಲಿ ಎಲ್ಲೂ ತಲೆ ಎತ್ತಿ ಓಡಾಡದ ಹಾಗಾಗಿದೆ ನಮ್ಮ ಸ್ಥಿತಿ, ಮನಸ್ಸು ಬಿಚ್ಚಿ ಅಳಲು ತೋಡಿಕೊಳ್ಳುವಂತಿಲ್ಲ. ಅತ್ತ ಅನುಭವಿಸಲೂ ಆಗದು. ಹೀಗಾಗಿದೆ ಸರ್…’ – ಇದು ಮಧ್ಯಮವರ್ಗದ ಕುಟುಂಬವೊಂದರ ಸದಸ್ಯರು ಬಂದು ನನ್ನ ಬಳಿ ತಾವು ಎದುರಿಸುತ್ತಿರುವ ಯಾತನೆಯನ್ನು ವಿವರಿಸಿದ ರೀತಿ. ಹಾಗಂತ ಇದು ಜೀವ ಹೋಗುವಂಥ ದೊಡ್ಡ ವಿಷಯವೇನಲ್ಲ. ಆದರೆ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿರುವ ನೈತಿಕ ಮೌಲ್ಯಗಳನ್ನು ಗೌರವಿಸುವ ಮತ್ತು ಪಾಲಿಸುವ ಪ್ರತಿಯೊಂದು ಕುಟುಂಬಕ್ಕೆ ಅನಿರೀಕ್ಷಿತವಾಗಿ ಎದುರಾಗುವ ಅವಮಾನ, ಸಂಕಟ, ಸೂಕ್ಷ್ಮ ಸಂವೇದನೆ ಇದ್ದವರಿಗಂತೂ ಆಕಾಶವೇ ಕಳಚಿ ಬಿದ್ದ ಅನುಭವ. ಈ ಕುಟುಂಬದ ವಿಚಾರದಲ್ಲೂ ಆಗಿದ್ದು ಇದೇ. ಇವರದು ಮಧ್ಯಮ ವರ್ಗದ ಸಣ್ಣ ಕುಟುಂಬ, ಒಬ್ಬಳೇ ಮಗಳು, ತಂದೆ ಸರ್ಕಾರಿ ಉದ್ಯೋಗದಲ್ಲಿದ್ದು ನಿವೃತ್ತಿಯಾದವರು. ಉತ್ತಮ ಪಿಂಚಣಿ ಬರುತ್ತದೆ. ಇರಲೊಂದು ಸ್ವಂತ ಮನೆಯೂ ಇದೆ. ತುಂಬಾ ಸಿರಿವಂತಿಕೆ ಇಲ್ಲದಿದ್ದರೂ ಕೊರತೆಯಾಗದಂತೆ ಜೀವನ ಸಾಗಿಸುತ್ತಿದ್ದ ಕುಟುಂಬ. ಮಗಳು ಓದಿನಲ್ಲಿ ಬಲು ಜಾಣೆ. ಶಾಲೆ ಆರಂಭದ ದಿನಗಳಿಂದಲೇ ಫಸ್ಟ್ ಯಾಂಕ್ ಎಂದಿಗೂ ಬಿಟ್ಟುಕೊಟ್ಟವಳಲ್ಲ. ಮುಂದೆ ಪಿಯುಸಿ ನಂತರ ಆಕೆ ಇಂಜಿನಿಯರಿಂಗ್ ಮುಗಿಸಿ ಅಲ್ಲೂ ಉತ್ತಮ ಫಲಿತಾಂಶ ಪಡೆದು ಸಾಪ್ಟವೇರ್ ಕಂಪನಿಯಲ್ಲಿ ಗರಿಷ್ಠ ವೇತನದ ಉದ್ಯೋಗವನ್ನೂ ಪಡೆಯುತ್ತಾಳೆ. ಕೈ ತುಂಬ ಸಂಬಳ, ಹೈದರಾಬಾದ್‌ನಲ್ಲಿ ಕೆಲಸ. ಕಾಲಕ್ಕೆ ತಕ್ಕಂತೆ ಆಕೆಯೂ ಸ್ವಲ್ಪ ಆಧುನಿಕತೆಗೆ ತನ್ನನ್ನು ಒಡ್ಡಿಕೊಳ್ಳಲಾರಂಭಿಸಿದಳು. ಸೋಷಿಯಲ್ ಎಂಬ ಪದ ಹಾಸುಹೊಕ್ಕಾಗತೊಡಗಿತು. ಅದಕ್ಕೆ ಪೂರಕ ಸ್ನೇಹಿತರೂ ಜತೆಯಾದರು. ವೀಕೆಂಡ್‌ಗೆ ಪಾರ್ಟಿ, ಪಬ್, ಬಾರು ಕ್ರಮೇಣ ಶುರುವಾದವು. ಈ ಮಧ್ಯೆ ಸಹೋದ್ಯೋಗಿಯೊಬ್ಬನ ಜತೆ ತುಸು ಜಾಸ್ತಿನೇ ಸ್ನೇಹ, ಸಲುಗೆ ಶುರುವಾಯಿತು. ಮುಂದೆ ಇಬ್ಬರೂ ಪ್ರೇಮ ಬಂಧಕ್ಕೆ ಸಿಲುಕಿದರು. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ‘ಕೂಡಿ ಇರೋಣ ಓಕೆ. ಮದುವೆ ಎಲ್ಲಾ ಯಾಕೆ?’ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಇಲ್ಲೇ ಆದದ್ದು ಎಡವಟ್ಟು. ಆಕೆ ಆತನನ್ನು ಬಿಟ್ಟಿರಲಾರದಷ್ಟರ ಮಟ್ಟಿಗೆ ಪಾಶದಲ್ಲಿ ಸಿಕ್ಕಿ ಬಿದ್ದಿದ್ದಳು. ಆದರೆ ಆ ಯುವಕನಿಗೆ ಆಕೆಯ ದೇಹಸಿರಿ ಮತ್ತು ಆಕೆಯ ದುಡಿಮೆ ಮೇಲಷ್ಟೇ ಪ್ರೀತಿ. ದಿನಗಳುರುಳಿದಂತೆ ಆತನ ಬಯಕೆ ಈಡೇರಿತು. ಆದರೆ ಯುವತಿಗೆ ಎಲ್ಲೋ ಒಂದು ಕಡೆ ಇದು ತಪ್ಪು ಎನಿಸಿತು. ಹಲೋ ಡಾಕರ್ ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು : (0836) 2773878, drpandurangi@yahoo.com ಬೆಳೆದ ಪರಿಸರ, ಮನೆಯವರು ಹೇಳಿಕೊಟ್ಟ ಮೌಲ್ಯಗಳು ಆಕೆಯಲ್ಲಿ ಪಾಪಪ್ರಜ್ಞೆ ಮೂಡಿಸಿದವು. ಆಕೆ ಅದೆಷ್ಟೋ ಬಾರಿ ದೈಹಿಕ ಸಂಪರ್ಕವನ್ನು ವಿರೋಧಿಸಿದರೂ ಆತನ ಮೋಡಿಗೆ ಕರಗುತ್ತಿದ್ದಳು. ಚಂದ್ರಲೋಕದಲ್ಲೇ ವಾಸಿಸುವ ದಿನಗಳು ದೂರವಿರದ ಇಂದಿನ ದಿನಗಳಲ್ಲಿ ನಮ್ಮಿಬ್ಬರ ಈ ಸುಖೀಜೀವನಕ್ಕೆ ಮದುವೆ ಎಂಬ ಮೂರು ಗಂಟಿನ ನಂಟು ಬೇಕೆ? ನಾನಿರುವೆನು ನಿನ್ನ ಜತೆಯಾಗಿ ಎಂದೆಲ್ಲಾ ಹೇಳಿದ ಆತ ಆಕೆಯ ಸರ್ವಸ್ವವನ್ನೂ ಕೊಳ್ಳಿ ಹೊಡೆದು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದ. ಆಕೆಗೆ ಇದು ದೊಡ್ಡ ಆಘಾತವನ್ನೇ ನೀಡಿತು. ತನು-ಮನ-ಧನ ಎಲ್ಲವೂ ಆತನ ಪಾಲಾಯಿತು. ಮನೆಯವರಿಗೆ ವಿಷಯ ಗೊತ್ತಿಲ್ಲ. ಹೇಳುವಂತಿಲ್ಲ. ಬಿಡುವಂತಿಲ್ಲ. ಇತ್ತ ಮನೆಯವರು ಮದುವೆಗೆಂದು ವರನ ಹುಡುಕಾಟ ಆರಂಭಿಸಿದ್ದರು. ಈಕೆ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗೊಮ್ಮೆ ಮುಂದೂಡುತ್ತಲೇ ಬಂದಿದ್ದಳು. ಕೊನೆಗೆ ಒಂದು ದಿನ ತಾಯಿ ಎದುರು ಎಲ್ಲ ವಿಷಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಳು. *** ಇದು ಒಂದು ಪ್ರಕರಣದ ವಿವರವಷ್ಟೇ ಎನಿಸಿದರೂ ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆ ಈ ತರಹದ ಸಂಬಂಧಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ಅಶಿಸ್ತಿನ ಸಂಸಾರ, ಬೇಕೆಂದಾಗ ಸೇರುವುದು ಬೇಡವಾದಾಗ ದೂರಾಗುವುದು ನಮ್ಮ ಸಂಸ್ಕೃತಿಯೇ ಅಲ್ಲ. ಆದರೆ ಲಿವಿಂಗ್ ಟು ಗೆದರ್ ಪರಿಕಲ್ಪನೆ ಇತ್ತೀಚೆಗೆ ನಮ್ಮಲ್ಲೂ ಬಲವಾಗಿ ಕಾಲೂರುತ್ತಿದೆ. ಬಹುತೇಕ ಪ್ರಕರಣಗಳು ವಂಚನೆಯಲ್ಲೇ ಅಂತ್ಯ ಕಾಣುತ್ತಿವೆ. ಆರಂಭದಲ್ಲಿ ಮಧುರಾನುಭವ ನೀಡುವ ಇಂತಹ ಸಂಬಂಧಗಳ ಆಯುಷ್ಯ ಅತ್ಯಲ್ಪ. ಇದಕ್ಕೆ ಕಾನೂನಿನ ಮಾನ್ಯತೆಯೂ ಇಲ್ಲ. ನೈತಿಕ ಮೌಲ್ಯಗಳ ಅಧಃಪತನಕ್ಕೆ ಇದೊಂದು ಉತ್ತಮ ನಿದರ್ಶನ. ಅದಕ್ಕೆ ಯಾರೇ ಆಗಲಿ ಈ ಮಾದರಿಯ ದುಸ್ಸಾಹಸಕ್ಕೆ ಕೈ ಹಾಕದಿರುವುದು ಒಳಿತು. ಏಕೆಂದರೆ ಇದು ಹೆತ್ತವರ ಹಾಗೂ ಎಲ್ಲರ ಮನೋನೆಮ್ಮದಿ ಕಸಿಯುತ್ತದೆ.

About Author:

Leave Your Comments

Your email address will not be published. Required fields are marked *