COVID-19 Resources for Mental Health Coaches... Learn More

0836-2773878

“ಬೇಡ ಆಧುನಿಕತೆ ಖಯಾಲಿ ಇರಲಿ ಸಾತ್ವಿಕ ಜೀವನಶೈಲಿ”

ಬೇಡ ಆಧುನಿಕತೆ ಖಯಾಲಿ ಇರಲಿ ಸಾತ್ವಿಕ ಜೀವನಶೈಲಿ
‘ನನಗೇಕೋ ತುಂಬಾ ಭಯವಾಗುತ್ತಿದೆ. ನನಗೆ ಒಂದಿಷ್ಟು ಸಮಾಧಾನ ಹೇಳಿ, ಪರಿಹಾರೋಪಾಯವನ್ನೂ ತಿಳಿಸಿ’ ಎಂದು ಸುಮಾರು 30 ವರ್ಷದ ಯುವಕ ನನ್ನ ಬೆನ್ನತ್ತಿದ್ದ. ‘ಆಯಿತು ಬಾರಪ್ಪಾ’ ಎಂದು ಕ್ಲಿನಿಕ್ ಒಳಗೆ ಕರೆದು, ಯಾಕಿಷ್ಟು ಆತುರ ಮತ್ತು ಟೆನ್ನನ್ ಎಂದು ಕೇಳಿದೆ. ಅದಕ್ಕೆ ಅವನು ‘ಸರ್ ಹೃದಯಾಘಾತ ನನಗೂ ಆಗುತ್ತಾ? ಅದರಿಂದ ನಾನೂ ಸಾಯಬಹುದಲ್ಲವೆ?’ ಎಂದು ಬೆವರುತ್ತಾ, ತಡವರಿಸುತ್ತ ಉತ್ತರಿಸಿದ. ಇದು ಇತ್ತೀಚೆಗೆ ಹೆಚ್ಚುತ್ತಿರುವ ಹೃದಯಾಘಾತ ಮತ್ತು ಅದರಿಂದಾಗುವ ಅಕಾಲಿಕ ಸಾವಿನ ಪ್ರಕರಣಗಳ ಎಫೆಕ್ಟ್, ಆತ ಇನ್ನೂ 30ರ ಹರೆಯದ ಯುವಕ. ಆತನನ್ನು ನೋಡಿದರೆ ದೈಹಿಕ ಶ್ರಮದ ಕೊರತೆ ಸ್ಪಷ್ಟ ಸ್ಫೂಲಕಾಯ ಬೇರೆ. ಇದೀಗ ಮಾಧ್ಯಮಗಳಲ್ಲಿ ಹೃದಯಾಘಾತಕ್ಕೆ ಕಾರಣಗಳನ್ನು ನೋಡಿ ಭಯ ಮತ್ತು ಆತಂಕದಿಂದ ಬಂದಿದ್ದಾನೆ. ಇದು ಈಗಿನ ಸ್ಥಿತಿಯಲ್ಲಿ ಸಹಜವೇ. ಇದು ಒಬ್ಬನ ಉದಾಹರಣೆಯಷ್ಟೇ. ಇಂದು ಈ ವಯಸ್ಸಿನ ಅನೇಕರಲ್ಲಿ ಈ ತರಹದ ಮಾನಸಿಕ ಶೋಭೆ ಶುರುವಾಗಿದೆ. ಜೀವನಶೈಲಿಯಲ್ಲಿ ಶಿಸ್ತು ಮಾಯವಾದ ಕಾರಣ ಈ ತರಹದ ಸ್ಥಿತಿ ಎದುರಿಸುವ ಅನಿವಾರ್ಯತೆ ಎದುರಾಗಿರುವುದು ನಗ್ನ ಸತ್ಯ.
ಇದಾದ ಮರುದಿನ ಇನ್ನೊಬ್ಬ ಯುವಕನೂ ಇದೇ ಸಮಸ್ಯೆ ಹೊತ್ತು ತಂದ, “ಅಲ್ಲ ಸಾರ್, ನಾನಿನ್ನೂ ಉನ್ನತ ವ್ಯಾಸಂಗ ಮಾಡಬೇಕು. ಮದುವೆಯಾಗಬೇಕು. ವಿದೇಶ ಸುತ್ತಬೇಕು. ಮನೆ ಕಟ್ಟಬೇಕು, ಕಾರು ಖರೀದಿಸಬೇಕು’ ಎಂದು ನೂರೆಂಟು ಆಸೆಗಳ ಪಟ್ಟಿಯನ್ನೇ ತೆರೆದಿಟ್ಟ. ಆದರೆ ಹೃದಯಾಘಾತ ವಿದ್ಯಮಾನದಿಂದ ಕಂಗೆಟ್ಟಿದ್ದ ಆತನಲ್ಲಿ ಆತಂಕ ಬಲವಾಗಿ ಬೇರೂರಿತ್ತು. ನನ್ನ ಪಾಲಕರಿಗೆ ನಾನೊಬ್ಬನೇ ಮಗ. ನನಗೇನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಹೀಗೆ ನೂರೆಂಟು ಪ್ರಶ್ನೆಗಳ ಸುರಿಮಳೆಗೈದ.
ಈ ಯುವಕರನ್ನು ನೋಡಿದಾಗ ನಾವು ವಹಿಸಬೇಕಾದ ಎಚ್ಚರಿಕೆ ಎಂದರೆ ಸುಸ್ಥಿರ ಮತ್ತು ಶಿಸ್ತುಬದ್ಧ ಜೀವನಶೈಲಿ ಎನ್ನುವುದು ಸ್ಪಷ್ಟವಾಗುತ್ತದೆ. ಬದಲಾದ ಜೀವನ ಮತ್ತು ಆಹಾರಶೈಲಿ ಇಂದಿನ ಈ ಎಲ್ಲ ಅವಾಂತರಕ್ಕೆ ಮೂಲ ಕಾರಣವಾಗಿದೆ. ಶ್ರಮ ಮರೆಯಾಗಿದೆ. ಮಕ್ಕಳಾದಿಯಾಗಿ ಎಲ್ಲರ ಕೈಯಲ್ಲಿ ಮೊಬೈಲ್ ರಾರಾಜಿಸುತ್ತಿದೆ. ಒಂದೇ ಕಡೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಮಿತಿಮೀರಿದೆ. ಜಂಕಪುಡ್ ಸೇವನೆಯಿಂದ ಶರೀರ ಜಿಡ್ಡುಗಟ್ಟಿದೆ. ಸತ್ವಯುತ ಆಹಾರ ಮರೀಚಿಕೆಯಾಗಿದೆ. ಕೆಲಸದ ಒತ್ತಡದಿಂದ ಮದ್ಯಪಾನ, ಧೂಮಪಾನ ಅನಿವಾರ್ಯ ಎನ್ನುವ ಸ್ಥಿತಿಗೆ ಹಲವರು ಬಂದು ನಿಂತಿದ್ದಾರೆ. ವೀಕೆಂಡ್ ರಜೆ ಎಂದರೆ ಮೋಜು ಮಸ್ತಿ ಎನ್ನುವಂತಾಗಿದೆ. ನಿದ್ರಾಹೀನತೆಯೂ ಒಂದು ಕಾರಣವಾಗಿದೆ. ನಿಸರ್ಗದ ಜೀವಚಕ್ರಕ್ಕೆ ತದ್ದಿರುದ್ಧವಾಗಿ ಜೀವನ ಸಾಗಿಸು ತ್ತಿರುವ ಪರಿಣಾಮ ದೇಹದಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ದೈನಂದಿನ ಜೀವನಶೈಲಿಗೆ ಒಂದು ಚೌಕಟ್ಟು ಇಲ್ಲದಾಗಿದೆ. ಯಾವಾ ಗಲೋ ತಿಂಡಿ, ಯಾವಾಗಲೋ ಊಟ. ಅದೂ ಹೋಟೆಲ್‌ನಲ್ಲಿ ಹೀಗಾಗಿ ಎಲ್ಲವೂ ಏರುಪೇರು, ಇದೆಲ್ಲದರ ಪರಿಣಾಮದಿಂದ ದೇಹ ತನ್ನ ಇತಿಮಿತಿ ಮೀರಿ ಕೊನೆಗೊಂದು ದಿನ ಸ್ತಬ್ಧಗೊಳ್ಳುವ ಹಂತ ತಲುಪುತ್ತಿದೆ. ಈ ತರಹದ ಬೆಳವಣಿಗೆಯಿಂದ ಮನುಷ್ಯ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾನೆ. ಆತಂಕ, ಖಿನ್ನತೆ ಅವರಿಸುತ್ತದೆ. ಭಯ, ಕೆಲಸ ಮಾಡಲು ಹಿಂದೇಟು, ಹೊರಗೆ ಹೋಗಲು ಮನಸ್ಸು ಒಪ್ಪುವುದಿಲ್ಲ ಹೀಗೆ ನಾನಾ ಸಮಸ್ಯೆಗಳ ಸುಳಿಗೆ ಸಿಲುಕುತ್ತಾನೆ.
ಪರಿಹಾರವೇನು?: ಭಯ ಪಟ್ಟುಕೊಂಡು ಎಲ್ಲ ಮುಗಿದೇ ಹೋಯಿತು ಎನ್ನುವ ನಿರ್ಧಾರಕ್ಕೆ ಬರದೇ ಸಮಸ್ಯೆಯ ಮೂಲ ಪತ್ತೆ ಹಚ್ಚಬೇಕು. ಅದಕ್ಕೆ ಪೂರಕವಾಗಿ ನಮ್ಮ ಜೀವನಶೈಲಿ ಬದಲಾಯಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಹಿರಿಯರನ್ನು ನೋಡಿ, ಅವರೇನು ನಮ್ಮಷ್ಟು ಕಲಿತಿರಲಿಲ್ಲ. ಆದರೆ ಮನೆ ನಂದನವನವಾಗಿತ್ತು. ಕೃಷಿಯಲ್ಲೇ ಖುಶಿ ಕಾಣುತ್ತಿದ್ದರು. ಇಲ್ಲವೇ ವ್ಯಾಪಾರ, ವ್ಯವಹಾರ ಮಾಡುತ್ತಿದ್ದರು. ಎಲ್ಲದಕ್ಕೂ ವೇಳಾಪಟ್ಟಿ ಹಾಕಿಕೊಂಡಿದ್ದರು. ಜನರೊಡನೆ ಬೆರೆಯುತ್ತಿದ್ದರು. ಮೊಬೈಲ್ ಅಂತೂ ಇಲ್ಲವೇ ಇಲ್ಲ. ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರಿ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದರು. ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ದುಶ್ಚಟಗಳ ಸುಳಿವಿರಲಿಲ್ಲ. ಹಿರಿಯರ ಬಗ್ಗೆ ಗೌರವಯುಕ್ತ ಭಯವಿರುತ್ತಿತ್ತು, ಆಹಾರಕ್ರಮದಲ್ಲೂ ಶಿಸ್ತು ಇರುತ್ತಿತ್ತು. ಇದೆಲ್ಲದರ ಪರಿಣಾಮ ಕಾಯಿಲೆ ಅಪರೂಪವಾಗಿತ್ತು.
ಈ ಎಲ್ಲ ವಿಷಯಗಳನ್ನು ನನ್ನ ಬಳಿ ಆತಂಕಗೊಂಡು ಬಂದ ಯುವಕರಿಗೆ ತಿಳಿ ಹೇಳಿದಾಗ ಅವರಿಗೂ ಅದು ನಿಜವೆನಿಸಿತು. ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಹಾಗೂ ಸಮರ್ಪಕ ಜೀವನಶೈಲಿ ಪಾಲಿಸಿ, ಶಾಂತಿ, ಸಮಾಧಾನ ನಿಮ್ಮ ಗುಣಗಳಾಗಲಿ, ಉದ್ರೇಕ, ಉನ್ಮಾದ, ಆಕ್ರೋಶದ ಗೊಡವೆ ಬೇಡ. ಆತುರದ ನಿರ್ಧಾರವಂತೂ ಬೇಡವೇ ಬೇಡ ಎಂದು ತಿಳಿ ಹೇಳಿದೆ. ಆಗ ಅವರೂ ಇದಕ್ಕೆ ಹೌದೆಂದರು. ಇನ್ನೂ ಕಾಲ ಮಿಂಚಿಲ್ಲ. ಭಯ ಬಿಟ್ಟು ಇಂದಿನಿಂದಲೇ ಈ ಕ್ಷಣದಿಂದಲೇ ಬದಲಾಗಿ ಎಂದು ಹೇಳಿ ಕಳಿಸಿದೆ. ಇದು ಇವರಿಬ್ಬರು ಮಾತ್ರ ಪಾಲಿಸಬೇಕಾದ ಜೀವನಶೈಲಿಯಲ್ಲ. ಸಮಾಜದ ಪ್ರತಿಯೊಬ್ಬರೂ ಪಾಲಿಸಲೇಬೇಕಾದ ಅನಿವಾರ್ಯತೆ ಹಾಗೂ ತುರ್ತು ಅಗತ್ಯ.

About Author:

Leave Your Comments

Your email address will not be published. Required fields are marked *