COVID-19 Resources for Mental Health Coaches... Learn More
“ಸಂಬಂಧಗಳ ನಿರ್ವಹಣೆ ಸವಾಲಾದರೂ ಎಲ್ಲರ ಹೊಣೆ”


ಸಂಬಂಧಗಳ ನಿರ್ವಹಣೆ ಒಂದು ಕಲೆ ಎನ್ನಬಹುದು. ಇದು ಸುಗಮ ಸಂಸಾರ ಅಥವಾ ಜೀವನಕ್ಕೆ ಅತ್ಯಗತ್ಯ. ಇಲ್ಲದೇ ಹೋದರೆ ಕೌಟುಂಬಿಕವಾಗಲೀ ಸ್ನೇಹದ ಸಂಬಂಧಗಳಲ್ಲಾಗಲಿ ಬಿರುಕು ನೂರಕ್ಕೆ ನೂರರಷ್ಟು ಸತ್ಯ, ಆ ಮೇಲೆ ಭಿನ್ನತೆ, ಏಕಾಂಗಿತನ, ಜುಗುಪ್ಪೆಗೆ ಕಾರಣವಾಗುತ್ತದೆ. ಮನಸ್ಸಿಗೆ ಮಂಕು ಅವರಿಸುತ್ತದೆ. ವೃತ್ತಿಯಲ್ಲಿ ಹಿನ್ನಡೆ ಸಂಭವಿಸುತ್ತದೆ. ಬದುಕು ದುರ್ಭರವಾಗುತ್ತದೆ. ಇಂತಹದೇ ಒಂದು ಸಮಸ್ಯೆ ಹೊತ್ತು ಮೊನ್ನೆ ಪದವೀಧರ ಯುವಕನೊಬ್ಬ ನನ್ನ ಬಳಿ ಬಂದಿದ್ದ. ಆತ ಕೆಎಎಸ್ ಪ್ರಿಲಮ್ಸ್ ಕೂಡ ಮುಗಿಸಿದ್ದಾನೆ. ಮೇನ್ಸ್ ಬರೆಯುವ ನಿಟ್ಟಿನಲ್ಲಿ ತಯಾರಿ ಕೂಡ ನಡೆಸಿದ್ದ. ಮನೆಯವರು ದೂರದ ಊರಿನಲ್ಲಿದ್ದಾರೆ.
ತಿಂಗಳು, ತಿಂಗಳು ಖರ್ಚಿಗೆ ದುಡ್ಡು ಕಳಿಸುತ್ತಾರೆ. ಮಗ ಓದಿ ದೊಡ್ಡ ಆಫೀಸರ್ ಆಗುತ್ತಾನೆ ಎನ್ನುವ ಕಾರಣಕ್ಕೆ ಕಷ್ಟವಾದರೂ ಪರವಾಗಿಲ್ಲ ಎಂದು ಬೆಂಬಲಿಸುತ್ತಿದ್ದಾರೆ. ಅದರಂತೆ ಈತನೂ ಓದು ಮುಂದುವರಿಸಿದ್ದಾನೆ. ಆದರೆ ಕೆಲ ದಿನಗಳಿಂದ ಅದೇಕೋ ಮೊದಲಿದ್ದ ಏಕಾಗ್ರತೆ, ಉತ್ಸಾಹ ಇಲ್ಲ. ಏನೋ ಕಳವಳ, ಓದು ಸಾಗುತ್ತಿಲ್ಲ. ಮನಸ್ಸಿಗೆ ನೆಮ್ಮದಿ ಇಲ್ಲವೇ ಇಲ್ಲ. ಮುಂದೇನು? ಎನ್ನುವ ಚಿಂತೆ ಕಾಡಲಾರಂಭಿಸಿದೆ. ಲಕ್ಷ್ಯಗೊಟ್ಟು ಓದದೇ ಹೋದರೆ ಇಷ್ಟು ದಿನ ಮಾಡಿದ ಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ. ಈ ಮಧ್ಯೆ ಈತ ಮನೆಯವರೊಂದಿಗೆ ಎಲ್ಲಿ ತನ್ನ ಸಂಬಂಧ ಹಳಸಿ ಹೋಗುವುದೋ ಎನ್ನುವ ಆತಂಕಕ್ಕೆ ಸಿಲುಕಿದ್ದಾನೆ. ಅಂದುಕೊಂಡತೆ ಓದಲಾಗದೇ ಹೋದರೆ ಅವರು= ಎಲ್ಲಿ ತನ್ನನ್ನು ದೂರವಿಡುವರೋ ಎಂಬ ಗುಮಾನಿ ಕಾಡುತ್ತಿದೆ. ಊರಲ್ಲಿ ಜನರೆದುರು ತಲೆ ಎತ್ತಿ ತಿರುಗದಂತೆ ಆಗುವ ಸ್ಥಿತಿ ಕಂಡು ಬೆಚ್ಚಿಬೀಳುತ್ತಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಯುವಕನೊಬ್ಬ ಪ್ರೀತಿ, ಪ್ರೇಮ ಮತ್ತು ಕಾಮ ಎಂದುಕೊಂಡು ಆಧುನಿಕತೆಯ ಮಾಯಾಜಾಲಕ್ಕೆ ಸಿಲುಕಿ ಅದರಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾನೆ. ಆರ್ಥಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಹೀಗೆ ಮೂರು ದೃಷ್ಟಿಕೋನದಿಂದ ಈತ ತುಂಬಾನೇ ಬಸವಳಿದಿದ್ದಾನೆ. ಆಧುನಿಕ ಜೀವನಶೈಲಿಯ ಮೋಹಕ್ಕೆ ಸಿಲುಕಿ ತನ್ನವರನ್ನು ಕಳೆದುಕೊಂಡು ಅತ್ತ ಊರಿಗೂ ಹೋಗಲಾರದೆ ಇತ್ತ ಇಲ್ಲೂ ಇರಲಾರದೆ ದಿನ ಬೆಳಗಾದರೆ ಸಂಕಷ್ಟ ಎದುರಿಸುವಂತಾಗಿದೆ.
ಮಾನಸಿಕ ಕ್ಲೋಭೆಯಿಂದಾಗಿ ವೃತ್ತಿಯಲ್ಲೂ ಪ್ರಗತಿ ಕಾಣಲಾಗುತ್ತಿಲ್ಲ. ಡೇಟಿಂಗ್ ಅಪ್ಲಿಕೇಶನ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಸನ್ನಿವೇಶಗಳು ಯುವಜನರನ್ನು ಒಂದಲ್ಲ ಒಂದು ಕೂಪದಲ್ಲಿ ಸಿಲುಕಿಸುತ್ತಿವೆ. ಸಂಬಂಧಗಳ ನಿರ್ವಹಣೆ ಒಂದು ಸವಾಲಾಗಿ ಪರಿಣಮಿಸುತ್ತಿದೆ. ಅದರಲ್ಲೂ ಆರೋಗ್ಯಕರ ಸಂಬಂಧಗಳನ್ನು ನಿರ್ವಹಿಸುವುದು ಸುಲಭದ ಮಾತಲ್ಲ. ಇಂದಿನ ಯುವಸಮೂಹ ವಿಶಿಷ್ಟ ಸಮಸ್ಯೆ ಎದುರಿಸುತ್ತಿದೆ. ನಗರ ಪ್ರದೇಶಗಳಲ್ಲಿ ಪೋಷಕರು ಇಬ್ಬರೂ ಕೆಲಸ ಮಾಡುತ್ತಿರುವ ನಡುವೆ, ಡಿಜಿಟಲ್ ಪೇರೆಂಟಿಂಗ್ ಹೆಚ್ಚುತ್ತಿರುವಾಗ, ಸ್ವಾತಂತ್ರ್ಯವನ್ನು ತಪ್ಪಾಗಿ ಅರ್ಥೈಸಿಕೊಂಡ ಪರಿಣಾಮ ಹಲವು ಅನಾಹುತಗಳು ಸೃಷ್ಟಿಯಾಗುತ್ತಿವೆ. ಸ್ವಾತಂತ್ರ್ಯ ಬಯಸುವ ಯುವಕರು ಅದರ ಗಡಿಗಳು ಎಲ್ಲಿವೆ ಎಂದು ತಿಳಿದಿಲ್ಲ. ಈ ಸ್ಪಷ್ಟತೆಯ ಕೊರತೆಯು ಹೆಚ್ಚಾಗಿ ಒತ್ತಡ ಮತ್ತು ಸಂಬಂಧ ಕುಸಿತಕ್ಕೆ ಕಾರಣವಾಗುತ್ತಿದೆ. ಬದಲಾದ ಸನ್ನಿವೇಶದಲ್ಲಿ ಇಂದು ಭಾವನಾತ್ಮಕ ಸಂಬಂಧಗಳಿಗಿಂತ ಉತ್ಸಾಹದ ಆಧಾರದ ಮೇಲೆ ಸಂಬಂಧಗಳು ಹೆಚ್ಚು ನಿರ್ಭರವಾಗುತ್ತಿವೆ. ಅದರಲ್ಲೂ ಲವ್ ಕೇಸ್‌ಗಳು ಹಿಂಸಾತ್ಮಕ ಅಂತ್ಯ ಕಾಣುತ್ತಿರುವುದು ಕಳವಳಕಾರಿ. ಪತಿ ಹತ್ಯೆಗೆ ಪ್ರಿಯಕರನ ಜತೆ ಸೇರಿ ಸುಪಾರಿ ಕೊಡುವುದು, ಬರ್ಭರವಾಗಿ ತಾನೇ ಸಂಗಾತಿಯನ್ನು ಹತ್ಯೆ ಮಾಡುವುದು ಹೀಗೆ ತಾನು ಎಸಗುವ ಕೃತ್ಯಗಳ ಅರಿವಿಲ್ಲದೇ ಸಾಗುತ್ತಿರುವುದು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ದಿಲ್ಲಿ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗ “ನೆಗೋಷಿಯೇಟಿಂಗ್ ಇಂಟಿಮೇಟ್ರಿ ಲೇಶನ್‌ಶಿಪ್ಸ್’ ಎಂಬ ಹೊಸ ಆಯ್ಕೆ ಕೋರ್ಸ್ ಪರಿಚಯಿಸಿದೆ. ಪ್ರೀತಿ, ಸ್ನೇಹದ ಅರ್ಥೈಸಿಕೊಳ್ಳುವಿಕೆ ಹಾಗೂ ಸಂಬಂಧಗಳ ಆರೋಗ್ಯಕರ ನಿರ್ವಹಣೆ ಬಗೆಯ ಬಗ್ಗೆ ಈ ಕೋರ್ಸ್ ಕಲಿಸಿಕೊಡುತ್ತದೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವ ಕೋರ್ಸ್ ಇದಾಗಿದೆ. ಕೋರ್ಸ್ ಪ್ರೇಮ ಜೀವನ ನಿರ್ವಹಣೆಗೆ ಸೀಮಿತವಾಗಿಲ್ಲ. ಭಾವನಾತ್ಮಕ ಬುದ್ಧಿವಂತಿಕೆ ಅಭಿವೃದ್ಧಿ ಸೇರಿದಂತೆ ಜೀವನ ಕೌಶಲ ಸುಧಾರಿಸುವ ಬಗ್ಗೆ ಎಲ್ಲ ಅಂಶಗಳನ್ನೂ ಒಳಗೊಂಡಿದೆ ಎಂದು ವಿವಿ ತಿಳಿಸಿದೆ. ఇದು ಕಲಿಕೇಯ ಕುರಿತು ವಿಚಾರವಾಯ್ತು. ಆದರಲ್ಲಿ ಈ ವಿಧಾನ ಆರ್ಬಾಧೆಗೊಳಗಾದವರು ಮನೋವೈದ್ಯರ ಬಳಿ ಬಂದಾಗ ಕೌನ್ಸೆಲಿಂಗ್ (ಅಪ್ತ ಸಮಾಲೋಚನೆ) ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ವಿವಿಯಲ್ಲೂ ಈ ತರಹದ ಅಧ್ಯಯನಕ್ಕೆ ಅವಕಾಶ ಸಿಕ್ಕಿರುವುದು ಮನಸ್ಸಿಗೆ ಸಂಬಂಧಿತ ವಿಚಾರಗಳ ತೀವ್ರತೆ ಮತ್ತು ಗಂಭೀರತೆಯನ್ನು ಸಾರುತ್ತದೆ. ಮನೋರೋಗ ಅಥವಾ ವ್ಯಾಧಿ ಈಗ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯಕ್ಕೆ ಒಳಗಾದವರ ಸಂಖ್ಯೆ ಹೆಚ್ಚುತ್ತಿದೆ. ಇದೆಲ್ಲದಕ್ಕೂ ಪರಿಹಾರವೆಂದರೆ ಸುವಿಚಾರ, ಧನಾತ್ಮಕ ಚಿಂತನೆ, ಜೀವನಶೈಲಿಯ ಬದಲಾವಣೆ, ನೈಜ ಜೀವನದ ಅರಿವು. ಸರಿಯಾದ ಸಮಯದಲ್ಲಿ ಅಪ್ತಸಲಹೆ ಹಾಗೂ ಮಾರ್ಗದರ್ಶನ. ಅದು ಆರೋಗ್ಯಕರ ಬದುಕಿಗೆ ಪೂರಕ.
