COVID-19 Resources for Mental Health Coaches... Learn More

0836-2773878

“ವಿದ್ಯೆಯೊಂದಿಗೆ ವಿನಯ, ವಿಧೇಯತೆ ಇದ್ದರೆ ಬದುಕು ಸುಂದರ”


ಜೀವನದಲ್ಲಿ ಗುರು ಮತ್ತು ಗುರಿ ಇರಬೇಕು. ವಿದ್ಯೆಯಿದ್ದರೆ ಎಂತಹ ಬಡತನವನ್ನೂ ಮೆಟ್ಟಿ ನಿಲ್ಲಬಹುದು. ಆದರೆ ವಿದ್ಯೆಯ ಮಹತ್ವಕ್ಕಿಂತ ಇವೆಲ್ಲವೂ ಇದ್ದಾಗ ವಿನಯ ಅತೀ ಮುಖ್ಯ. ಹಲವು ಬಾರಿ ಮೊದಲಿನ ಮೂರು ಸಿಕ್ಕಾಗ ವಿನಯಕ್ಕೆ ಸ್ಥಾನ ಸಿಗೋದು ಅಪರೂಪ. ಏಕೆಂದರೆ ಮನುಷ್ಯ ಒಂದು ಹಂತ ತಲುಪಿದ ಮೇಲೆ ಆತನಿಗೆ ಅರಿವಿಲ್ಲದಂತೆ ಅಹಂ ಅವರಿಸಿಕೊಂಡು ಬಿಡುತ್ತದೆ. ನಾನು ಎಂಬ ಎರಡಕ್ಷರದ ಕಬಂಧ ಬಾಹುವಿನಲ್ಲಿ ಬಂಧಿಯಾಗುವ ಪರಿಣಾಮ ಸಾಧನೆಯ ಪಿತ್ತ ನೆತ್ತಿಗೇರುತ್ತದೆ. ಆದರೆ ಇದು ಬಲು ಅಪಾಯಕಾರಿ ಬದಲಾದ ಸನ್ನಿವೇಶದಲ್ಲಿ ಇಂದು ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಉದ್ಯೋಗವನ್ನೂ ಪಡೆಯುತ್ತಿದ್ದಾರೆ. ಆದರೆ ಅದೇಕೋ ವಿನಯ ಎಂಬ ಭೂಷಣವನ್ನು ಕಳಚಿಕೊಳ್ಳುತ್ತಿದ್ದಾರೆ. ದರ್ಪದ ಮಾತು. ಸ್ಪಂದಿಸದೇ ಇರುವ ಮನೋಭಾವ ಹೆಚ್ಚುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವಿನಯತೆ ಮತ್ತು ವಿಧೇಯತೆ ಎರಡೂ ಮಾಯವಾಗುತ್ತಿದೆ. ತಮ್ಮ ಶಿಕ್ಷಣಕ್ಕೆ ಹೆತ್ತವರು ಪಡುವ ಕಷ್ಟದ ಅರಿವಿನ ಕೊರತೆ ಅವರಿಗಿದೆ. ಗುರು ಎಂದರೆ ದೇವರಿಗಿಂತ ದೊಡ್ಡವನು ಎಂದು ನಂಬಿ ನಡೆಯುತ್ತಿರುವ ನಮ್ಮ ಸಮಾಜದಲ್ಲಿ ವಿದ್ಯಾರ್ಥಿಗಳು ಇಂದು ಗುರುವಿಗೆ ಅಸಡ್ಡೆತನ ತೋರಿಸುತ್ತಿದ್ದಾರೆ. ಮೌಲ್ಯಗಳು ಮರೆಯಾಗುತ್ತಿವೆ. ಅಲ್ಲದೆ, ಈಗಿನ ವಿದ್ಯಾರ್ಥಿಗಳಲ್ಲಿ ಓದಿನ ಶಿಸ್ತು ಕ್ಷೀಣಿಸುವುದರ ಜತೆಗೆ ಗುರುಹಿರಿಯರ ಬಗ್ಗೆ ಅನಾದರ ಎದ್ದು ಕಾಣುತ್ತಿದೆ. ಮೊನ್ನೆ ಒಬ್ಬ ವಿದ್ಯಾರ್ಥಿ ತನ್ನ ತಂದೆಯನ್ನು ಚಿಕಿತ್ಸೆಗೆಂದು ನನ್ನ ಬಳಿ ಕರೆದುಕೊಂಡು ಬಂದಿದ್ದ. ತಂದೆಗೆ ಭಿನ್ನತೆ ಮತ್ತು ಮರೆವಿನ ಕಾಯಿಲೆ ಇತ್ತು. ಎನಾಗಿದೆ ನಿಮಗೆ ಎಂದು ಕೇಳಿದಾಕ್ಷಣ ತಂದೆ ಉತ್ತರಿಸುವಲ್ಲಿ ಸ್ವಲ್ಪ ತಡವಾಯಿತು. ಆತ ಉತ್ತರಿಸಲು ತಡವರಿಸಿದ. ಇದರಿಂದ ಕೂಡಲೇ ಸಿಟ್ಟಿಗೆದ್ದ ಮಗ ‘ನಿನಗೆ ಏನಾಗಿದೆ ಹೇಳು?’ ಎಂದು ಅಪ್ಪನ ಮೇಲೆ ರೇಗಿದೆ. ಅದಕ್ಕೂ ಆತ ನಿರುತ್ತರನಾದ ಕೂಡಲೇ ರೊಚ್ಚಿಗೆದ್ದು ಬೈಯ್ಯಲಾರಂಭಿಸಿದ. ಆತ ತನ್ನ ಹೆತ್ತ ತಂದೆ. ಮನೋಕಾಯಿಲೆಯಿಂದ ಈಗ ಹೀಗಾಗಿದ್ದಾನೆ ಎನ್ನುವ ಕನಿಷ್ಠ ಸೌಜನ್ಯವೂ ಆತನಿಗಿರಲಿಲ್ಲ. “ಏನಾಗಿಲ್ಲ ಸರ್, ಸುಮ್ ಸುಮ್ಮನೆ ಹೀಗೆ ಮಾಡ್ತಾನೆ. ಮನೆಗೆ ಬಂದ ಸ್ನೇಹಿತರೆದುರು ನನ್ನ ಮರ್ಯಾದೆ ಕಳೀತಾನೆ’ ಎಂದ ಮಗ. ಆಗ ನಾನು ಆತನ ತಂದೆಗಿಂತ ಮುಂಚೆ ಆತನ ಮಗನಿಗೆ ಬುದ್ದಿ ಹೇಳಿದೆ. ‘ನಿನ್ನ ಈ ವರ್ತನೆ ನಿನ್ನ ತಂದೆಯ ಸ್ಥಿತಿಗೆ ಕಾರಣ. ಈ ಸಿಡಿಮಿಡಿ ಬಿಟ್ಟು ಪ್ರೀತಿಯಿಂದ ಮಾತನಾಡಿಸಿ ನೋಡು. ನೀನು ಇಲ್ಲಿಯವರೆಗೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ’ ಎಂದು ಹೇಳಿದೆ. ‘ನಿನಗಾಗಿ ನಿನ್ನ ತಂದೆ ಪಟ್ಟ ಕಷ್ಟದ ಅರಿವು ನಿನಗಿದೆಯೇ? ನಿನಗೇನು ಕೊರತೆ ಮಾಡಿದ್ದಾರೆ ಅವರು? ಜೀವನಪೂರ್ತಿ ಮಾಡಿದ ದುಡಿಮೆ ನಿನಗೋಸ್ಕರವೇ ಹೊರತು ನಿನ್ನ ಸ್ನೇಹಿತರಿಗಲ್ಲ. ಹಿಂದಿನ ತಲೆಮಾರು ಕಾಲಕ್ಕೆ ತಕ್ಕಂತೆ ಅಪಡೇಟ್ ಆಗಿಲ್ಲ ಎನ್ನುವ ಕಾರಣಕ್ಕೆ ಅವರನ್ನು ತುಚ್ಚವಾಗಿ ಕಾಣಬಾರದು. ಹೆತ್ತವರು ದೇವರು ಸಮಾನರು, ಕಣ್ಣಿಗೆ ಕಾಣುವ ದೇವರು ಎಂದರೆ ಅವರೇ, ಅವರೇ ಇಲ್ಲದಿದ್ದರೆ ನೀನಿಂದು ಇರುತ್ತಿದ್ದೆಯೇ? ಒಮ್ಮೆ ಚಿಂತಿಸಿ ನೋಡು’ ಎಂದು ತಿಳಿ ಹೇಳಿದಾಗ ಆತನಿಗೆ ತನ್ನ ತಪ್ಪಿನ ಅರಿವು ಆಯಿತು. ‘ಅಷ್ಟೇ ಅಲ್ಲ ನಾಳೆ ನೀನು ಶಿಕ್ಷಣ ಪೂರೈಸಿ ದೊಡ್ಡ ಹುದ್ದೆಗೆ ಹೋದರೂ ಇವರೇ ನಿನ್ನ ತಂದೆ ಮತ್ತು ನಿನ್ನನ್ನು ರೂಪಿಸಿದ ಶಿಲ್ಪ ಎಂಬ ಸತ್ಯ ಮರೆಯಬೇಡ’ ಎಂದಾಗ ಆತ ‘ತಪ್ಪಾಯಿತು ಕ್ಷಮಿಸಿ ಸರ್. ನನ್ನ ವರ್ತನೆ ನನಗೆ ನಾಚಿಕೆ ತರಿಸುತ್ತಿದೆ’ ಎಂದ. ಒಬ್ಬ ಮನೋವೈದ್ಯನಾಗಿ ನಾನು ಎಲ್ಲರಿಗೂ ಹೇಳಬಯಸುವುದೆಂದರೆ, ಮನಸ್ಸು ಮರ್ಕಟ, ಚಂಚಲ ಎಲ್ಲವೂ ಸರಿ. ಆದರೆ ಈ ಮನಸ್ಸಿಗೆ ಇರುವ ಶಕ್ತಿ ಅಗಾಧ. ಅದನ್ನು ನಾವು ಯಾವ ರೀತಿ ಮತ್ತು ಯಾವ ಕೆಲಸಕ್ಕೆ ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ನಿರ್ಣಾಯಕವಾಗಿರುತ್ತದೆ. ಕೆಲವೊಮ್ಮೆ ಈ ಮನಸ್ಸು ನಮ್ಮನ್ನು ವಂಚಿಸುತ್ತದೆ. ವಂಚನೆ ಎಂದರೆ ಮೋಸವೆಂದರ್ಥವಲ್ಲ. ಅದು ತಪ್ಪು ಎಂದು ಗೊತ್ತಿದ್ದರೂ ಯಾವುದೋ ಅನಿವಾರ್ಯತೆ ಅಥವಾ ಮೋಹದ ಪಾಶಕ್ಕೆ ಸಿಲುಕಿ ದುಡುಕಿನ ನಿರ್ಧಾರಕ್ಕೆ ಪ್ರೇರೇಪಿಸುತ್ತದೆ. ಮುಂದೆ ಅದರಿಂದಾಗುವ ಪರಿಣಾಮ ಎದುರಿಸುವ ಸಂದರ್ಭ ಬಂದಾಗ ಪಶ್ಚಾತ್ತಾಪ ಪ್ರಜ್ಞೆ ಜಾಗೃತವಾಗುತ್ತದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಈ ಸಂಭವನೀಯ ಅನಾಹುತದ ಅರಿವು ಇದ್ದರೆ ಮನುಷ್ಯ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಇದೇ ಮನಸ್ಸಿನಿಂದ ಸತ್ಕಾರ್ಯಗಳನ್ನು ಮಾಡಬಹುದು. ನಾಲ್ಕು ಜನರಿಗೆ ನೆರವಿನ ಹಸ್ತ ಚಾಚಿ ಸಮಾಜದಲ್ಲಿನ ಅಶಕ್ತರಿಗೆ ಶಿಕ್ಷಣ ಕೊಡಿಸಬಹುದು. ಹೀಗೆ ಸತ್ಕಾರ್ಯಗಳ ದೊಡ್ಡ ಪಟ್ಟಿಯೇ ನಮ್ಮೆದುರು ಇದೆ. ಇದರಲ್ಲಿ ನಮಗೆ ಯಾವುದು ಸಾಧ್ಯವೋ ಅದನ್ನು ಮಾಡಿದಾಗ ಮಾನವನಾಗಿ ಹುಟ್ಟಿದ್ದಕ್ಕೂ ಸಾರ್ಥಕ. ಇಲ್ಲದಿದ್ದರೆ ಈ ಬದುಕು ನಿರರ್ಥಕ.

About Author:

Leave Your Comments

Your email address will not be published. Required fields are marked *