COVID-19 Resources for Mental Health Coaches... Learn More
ಮಾತು ಹಂಗೂ ಇರಬಾರದು, ಹಿಂಗೂ ಇರಬಾರದು…

ಮಾತು ಆಡಿದರೆ ಮುತ್ತಿನಂತಿರಬೇಕು ಮಾತು ಮೃತ್ಯುವಾಗ ಬಾರದು. ಮಾತೇ ಮಾಣಿಕ್ಯ. ಇವು ಮಾತಿನ ಬಗ್ಗೆ ಪ್ರಚಲಿತ ನಾಣ್ಣುಡಿಗಳು. ಹೌದು ಇದು ನಿಜ. ನಾವಾಡುವ ಮಾತು ಹೇಗಿರಬೇಕು ಎಂಬುದನ್ನು ನನ್ನ ಸ್ನೇಹಿತರಲ್ಲೊಬ್ಬರಾಗಿದ್ದ ದಿವಂಗತ ಎಂ.ಬಿ.ದಿಲಶಾದ್ ಅವರು ಅಷ್ಟೇ ಸೊಗಸಾಗಿ ಹೇಳುತ್ತಿದ್ದರು: ಮಾತು ಹೆಂಗಿರಬೇಕು ಎಂದರೆ ಮಾತು ಹಂಗೂ ಇರಬಾರದು. ಹಿಂಗೂ ಇರಬಾರದು, ಯಾರ ಹಂಗೂ ಇರಬಾರದು.
ಕೇಳಲು ಇದು ಹಾಸ್ಯವೆನಿಸಿದರೂ ಇದರ ಹಿಂದಿರುವ ಸತ್ಯ ಮಾತ್ರ ಶಾಶ್ವತ ಮತ್ತು ವಾಸ್ತವ. ಇಷ್ಟೆಲ್ಲಾ ಅರಿವು ಇದ್ದರೂ ಮನುಷ್ಯ ಒಮ್ಮೊಮ್ಮೆ ಸಂದರ್ಭವೋ, ಆವೇಶವೋ ಇಲ್ಲವೋ ಕೋಪದ ಭರದಲ್ಲಿ ಏನೇನೋ ಮಾತಾಡಿ ಬಿಡುತ್ತಾನೆ. ಒಂದು ಕ್ಷಣದ ಆ ಮಾತು ಮಾಡುವ ಅನಾಹುತದ ಅರಿವು ಕ್ರಮೇಣ ಅರ್ಥವಾಗುತ್ತ ಹೋಗುತ್ತದೆ. ಈಗ ನಾನು ಹೇಳಲು ಹೊರಟಿರುವುದು ಅಂಥದ್ದೇ ಒಂದು ಅನಾಹುತದ ಸಂಗತಿ.
ಅವರು ಸುಮಾರು 55ರಿಂದ 60 ವರ್ಷದ ಯಜಮಾನರು. ಪೂರ್ವಜರಿಂದಲೂ ಸಿರಿವಂತರು. ಮನೆಯಲ್ಲಿ ಕೆಲಸಕ್ಕೆ ಆಳು ಕಾಳು ಇದ್ದವರು. ಒಂದರ್ಥದಲ್ಲಿ ಜಮೀನ್ದಾರರು. ಊರಲ್ಲಿ ಯಜಮಾನರು ಎಂದೇ ಸಂಬೋಧಿಸಲ್ಪಡುವವರು. ಬಹಳಷ್ಟು ವರ್ಷಗಳಿಂದ ಒಬ್ಬ ಇವರ ಜಮೀನಿನ ಉಸ್ತುವಾರಿ ಮಾಡುತ್ತಾ ಬಂದಿದ್ದ. ಹೀಗಾಗಿ ಇವರು ನಿಶ್ಚಿಂತೆಯಿಂದ ಆತನ ಮೇಲೆ ಬಿಟ್ಟು ಹಾಯಾಗಿದ್ದರು. ಆತನನ್ನೂ ಚೆನ್ನಾಗಿಯೇ ನೋಡಿಕೊಂಡಿದ್ದರು. ಇದು ಸುಮಾರು 35 ವರ್ಷಗಳಿಂದ ನಡೆದು ಬಂದಿತ್ತು. ಒಂದೊಮ್ಮೆ ಅದೇನೋ ಪ್ರಸಂಗ ಬಂದಿತೋ ಗೊತ್ತಿಲ್ಲ ಇವರು ಆತನನ್ನು ಕರೆದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಹಲೋ ಡಾಕ್ಟರ್
ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು
drpandurangi@yahoo.com
ವಾಸ್ತವದ ಅರಿವಿಲ್ಲದೇ ಆತನ ಮೇಲೆ ಆರೋಪದ ಸುರಿಮಳೆಗೈದರು. ಆದರೆ ಆತ ಮಾತ್ರ ಇವರ ಆರೋಪ ಅಥವಾ ಮಾತಿಗೆ ಪ್ರತ್ಯುತ್ತರ ನೀಡಲಿಲ್ಲ. ಇವರು ಆತನನ್ನು ಕೆಲಸದಿಂದಲೇ ಕಿತ್ತೆಸೆದು ಕಳಿಸಿದರು. ಹೀಗೆ ಸ್ವಲ್ಪ ದಿನಗಳು ಉರುಳಿದವು. ಅವನ ಜಾಗಕ್ಕೆ ಬೇರೊಬ್ಬರನ್ನು ನೇಮಿಸಿದರು. ಆಗ ದಿನದಿಂದ ದಿನಕ್ಕೆ ದೂರುಗಳು ಬರಲಾರಂಭಿಸಿದವು. ಇದು ಈ ಜಮೀನ್ದಾರರ ಟೆನ್ನನ್ ಹೆಚ್ಚಿಸತೊಡಗಿತು. ಇಷ್ಟು ದಿನ ಸಂಪೂರ್ಣ ಜವಾಬ್ದಾರಿ ಆತನ ಮೇಲೆ ಬಿಟ್ಟು ನಿರಮ್ಮಳವಾಗಿದ್ದ ಜಮೀನ್ದಾರರಿಗೆ ಎಲ್ಲೋ ಎಡವಟ್ಟು ಆಯಿತು ಎನಿಸತೊಡಗಿತು. ಇಷ್ಟು ದಿನ ನನ್ನ ಬಳಿ ಕೃಷಿಗೆ ಸಂಬಂಧಿಸಿದಂತೆ ಒಂದೇ ಒಂದು ದೂರು ಬಂದಿರಲಿಲ್ಲ. ಮೊದಲಿದ್ದ ವ್ಯಕ್ತಿ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಿದ್ದ. ನಾನೇ ಯಾರದೋ ಮಾತು ಕೇಳಿ ಇಲ್ಲವೇ ವಾಸ್ತವ ಅರಿತುಕೊಳ್ಳದೇ ಕೋಪದ ಭರದಲ್ಲಿ ಇಲ್ಲಸಲ್ಲದ ಮಾತುಗಳನ್ನಾಡಿ ಕಳಿಸಿಬಿಟ್ಟೆ. ನನ್ನಿಂದ ತಪ್ಪಾಗಿದೆ. ನಾನು ಹಾಗೆ ಮಾತನಾಡಬಾರದಿತ್ತು ಎಂಬ ಆಲೋಚನೆ ಬಂದಿತು. ಆದರೆ ಏನು ಪ್ರಯೋಜನ ಅಷ್ಟೊತ್ತಿ ಗಾಗಲೇ ಆ ವ್ಯಕ್ತಿ ಇವರನ್ನು ತೊರೆದಿದ್ದ. ಸಂಪರ್ಕವೂ ಇರಲಿಲ್ಲ.
ಪ್ರಾಯಶ್ಚಿತದ ಮಾತು: ಜಮೀನ್ದಾರರಿಗೆ ಈಗ ತಾವು ಆಡಿದ ಮಾತಿನ ತಪ್ಪಿನ ಅರಿವಾಗಿದೆ. ಏನು ಮಾತನಾಡಬಾರದಿತ್ತು
ಎಂಬ ಸ್ಪಷ್ಟತೆ ಸಿಕ್ಕಿದೆ. ಆದರೆ ಕಾಲಮಿಂಚಿಯಾಗಿದೆ. ಅತಿಯಾದ ದುಃಖ ಆತ್ಮವಿಶ್ವಾಸದ ಕೊರತೆ ಶುರುವಾಯಿತು. ಇತ್ತ ಆತನ ಕೆಲಸವೂ ನಿಂತಿತು, ಹಣದ ಕೊರತೆಯೂ ಆಯಿತು. ದಿನದಿಂದ ದಿನಕ್ಕೆ ಮನಸ್ಸಿನ ತಾಳ್ಮೆ ಹೋಗಿ ದುಃಖ ಆವರಿಸಿ ಎಲ್ಲಾ ಕೆಲಸಗಳೂ ನಿಂತು ಹೋದವು. ವ್ಯಕ್ತಿಯೂ ಇಲ್ಲ. ಸಮರ್ಪಕ ಕೆಲಸವೂ ಇಲ್ಲ. ಮಾತನಾಡುವಾಗ ಇದರ ಅರಿವು ಅವರಿಗಿರಲಿಲ್ಲ. ತನ್ನ ಮಾತುಗಳಿಂದ ಆತ ಕೆಲಸವನ್ನೇ ಬಿಟ್ಟು ಹೋಗುತ್ತಾನೆ ಎಂದು ಊಹೆ ಮಾಡಿರಲಿಲ್ಲ. ಆದರೆ ಆತನನ್ನು ಕಳೆದುಕೊಂಡ ಮೇಲೆ ಆತನ ಮಹತ್ವದ ಅರಿವಾಗಿದೆ. ಸದಾ ಪಾಪಪ್ರಜ್ಞೆಯಲ್ಲಿ ಇರುವ ಅವರು ಮನಸ್ಸು ವಿಚಲಿತಗೊಂಡಿದೆ. ಕುಳಿತರೂ ನಿಂತರೂ ಸಮಾಧಾನವಿಲ್ಲ. ಆತನನ್ನು ಎಲ್ಲಿ ಎಂದು ಹುಡುಕುವುದು ಎಂಬ ಚಿಂತೆ ಕಾಡುತ್ತಿದೆ. ಮನೆ ಮಂದಿಗೆಲ್ಲ ರೇಗುವುದು, ಸಿಟ್ಟಿಗೇಳುವುದು ಮಾಡಲಾರಂಭಿಸಿದ್ದರು. ಸಿಕ್ಕಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುವ ಹಂತಕ್ಕೆ ಅವರ ಮನಸ್ಥಿತಿ ಬಂದು ನಿಂತಿತು. ಮನಸ್ಸಿಗೆ ನೆಮ್ಮದಿ ಎನ್ನುವುದು ಮರೀಚಿಕೆಯಾಗಿ ನನ್ನ ಬಳಿ ಚಿಕಿತ್ಸೆಗೆ ಬಂದರು. ಆಪ್ತ ಸಲಹೆ ಜತೆಗೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ಹೇಳಿ ಕಳಿಸಿದೆನಾದರೂ ಇಲ್ಲಿ ನಾವು ಅರಿಯಬೇಕಾದ ಸಂಗತಿ ಎಂದರೆ ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ఎంబ ಗಾದೆ. ಅವರು ತಮ್ಮಿಂದಾದ ತಪ್ಪಿನ ಅರಿವಿನಿಂದ ಹೇಳಿದ್ದು ಒಂದೇ ಮಾತು: ಸಾರ್, ಇನ್ನೆಂದೂ ಈ ತರಹ ಮಾತನಾಡುವುದಿಲ್ಲ. ಮಾತು ಎರಡೇ ಆದರೂ ಅದು ಮಾಡಿದ ಅನಾಹುತ ಅಗಾಧ ಎಂಬ ಅರಿವು ಬಂದಿತಲ್ಲ ಅಷ್ಟು ಸಾಕು. ಇದು ಒಂದು ಉದಾಹರಣೆ. ಆದರೆ ಇದು ಸಾರುವ ಸಂದೇಶ ಅಪಾರ.