COVID-19 Resources for Mental Health Coaches... Learn More
“ಭ್ರಷ್ಟಮಾರ್ಗದ ಬದಲಿಗೆ ಬೆಳಕಿನ ದಾರಿ: ಡಾ. ಆದಿತ್ಯ ಪಾಂಡುರಂಗಿಯ ದೀಪಶಿಖೆ”

ಯುವಕರು ಭವಿಷ್ಯದ ಆಧಾರ ಸ್ತಂಭಗಳು. ಪ್ರತಿ ದೇಶದ ಪ್ರಗತಿಯ ರೂವಾರಿಗಳು. ರಾಷ್ಟ್ರ ನಿರ್ಮಾತೃರು ಎಂದೆಲ್ಲಾ ಸಂಬೋಧಿ ಸಲಾಗುತ್ತದೆ. ಇದು ನಿಜವೂ ಹೌದು. ಸ್ವಾಮಿ ವಿವೇಕಾನಂದರು ಸಹ ಯುವಶಕ್ತಿಯ ಬಗ್ಗೆ ಸಾಕಷ್ಟು ಹೇಳಿದ್ದಾರೆ. ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಈ ಯುವಶಕ್ತಿ ಎಲ್ಲೋ ಒಂದು ಕಡೆ ಎಡವುತ್ತಿದೆ. ತನ್ನಲ್ಲಿರುವ ಅಗಾಧ ಶಕ್ತಿಯ ಅರಿವಿನ ಕೊರತೆ ಮತ್ತು ಬದಲಾದ ಜೀವನಶೈಲಿಯಿಂದಾಗಿ ದಾರಿ ತಪ್ಪುತ್ತಿದೆ ಎನ್ನಲು ನಮ್ಮ ಸುತ್ತ ಮುತ್ತ ಹಲವು ಉದಾಹರಣೆಗಳಿವೆ.
ಇತ್ತೀಚಿನ ವರ್ಷಗಳಲ್ಲಿ ಯುವ ಸಮುದಾಯದಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಅದರಲ್ಲೂ ಹೆಚ್ಚಾಗಿ ಖಿನ್ನತೆಯ ಕಾರ್ಮೋಡ ಆವರಿಸಿರುವುದು ಆತಂಕಕಾರಿ ಬೆಳವಣಿಗೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ 20 ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸುಮಾರು ಶೇ.13 ರಷ್ಟು ಯುವಕ ಯುವತಿಯರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಅದರಲ್ಲಿ ತಂಬಾಕು, ಸಾರಾಯಿ ಮತ್ತು ಗಾಂಜಾ ಅತೀ ಹೆಚ್ಚು ಬಳಕೆಯಾಗುತ್ತವೆ. ದೊಡ್ಡವರು, ಸಣ್ಣವರು, ಗಂಡು, ಹೆಣ್ಣು ಶಹರದವರು ಮತ್ತು ಚಿಕ್ಕ ಪುಟ್ಟ ಹಳ್ಳಿಯವರು ಎಲ್ಲರಲ್ಲಿಯೂ ಈ ಸಮಸ್ಯೆ ಕಂಡುಬರುತ್ತಿರುವುದು ವಿಪರ್ಯಾ ಸದ ಸಂಗತಿ.
ಮಾದಕ ವಸ್ತುಗಳ ಸೇವನೆ ಇಂದು ವ್ಯಾಪಕ ಪಿಡುಗಾಗಿ ಪರಿಣಮಿಸಿದೆ. ಸರಕಾರದ ಹಲವು ಕಟ್ಟುನಿಟ್ಟಿನ ಕ್ರಮಗಳ ಮಧ್ಯೆಯೂ ಯುವ ಸಮೂಹ ದಾರಿ ತಪ್ಪುತ್ತಿದೆ. ಮಾದಕ ವಸ್ತುಗಳ ಹಲವಾರು ಅಂಶಗಳು ಹದಿಹರೆಯದವರ ಮನಸ್ಸು ಮತ್ತು ದೇಹದ ಮೇಲೆ ಪ್ರಭಾವ ಬೀರುತ್ತಿವೆ. ಇದು ವ್ಯಕ್ತಿಯ ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿ ಖಿನ್ನತೆ ಅಥವಾ ಆತಂಕದಂತಹ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ಈ ಸಮಸ್ಯೆಯ ಕಾರಣ ಹುಡುಕುತ್ತಾ ಹೊರಟರೆ ಕಂಡು ಬರುವ ಪ್ರಮುಖ ಅಂಶಗಳು ಹಲವು. ಅವುಗಳಲ್ಲಿ ಪ್ರಮುಖವಾಗಿ ಕೌಟುಂಬಿಕ ಸಮಸ್ಯೆ. ಯಾಂತ್ರಿಕ ಜೀವನದ ಒತ್ತಡದ ಬದುಕು, ಬದಲಾದ ಆಹಾರ ಮತ್ತು ಜೀವನಶೈಲಿ. ನಿಸರ್ಗ ವಿರುದ್ಧದ ಜೀವನಕ್ರಮ, ಪ್ರೇಮ ವೈಫಲ್ಯ ಮತ್ತು ಮಿತಿಮೀರಿದ ಇಂಟರನೆಟ್ ಬಳಕೆ ಮತ್ತು ಗೇಮ್ ಗಳ ದಾಸರಾಗಿರುವುದು.
ಶಿಕ್ಷಣ, ವೃತ್ತಿ ಬದುಕಿನ ಜತೆಗೆ ಪ್ರೇಮ ವೈಫಲ್ಯ, ಭಾವನಾತ್ಮಕ ವಿಷಯಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಯುವ ಸಮುದಾಯ ಸೋಲುತ್ತಿದೆ. ಇದು ಯುವಕರ ಚಿಂತೆ ಮತ್ತು ವ್ಯಥೆಯೂ ಹೌದು. ಕಷ್ಟ ನಷ್ಟವನ್ನು ಎದುರಿಸುವ ತಾಳೆ ಮರೆಯಾಗುತ್ತಿದೆ. ಹವ್ಯಾಸಕ್ಕೆ ಶುರುಮಾಡಿದ ಒಂದು ದಿವಸದ ದುಶ್ಚಟ ಕಣ್ಣು ಮುಚ್ಚಿ ತೆರೆಯುವುದರಲ್ಲಿ ಎಡಿಕ್ಷನ್‌ನ ದೊಡ್ಡ ಮಟ್ಟಕ್ಕೆ ತಲುಪಿ ಬಿಡುತ್ತದೆ. ಜಡತ್ ಮತ್ತು ನಿಷ್ಕ್ರಿಯತೆ ಯುವಕರನ್ನು ಆವರಿಸಿದ ಪರಿಣಾಮ ಮಾನಸಿಕ ಸ್ವಾಸ್ಥ್ಯ ಸೊರಗಿದೆ.
ಆತ್ಮಾವಲೋಕನ ಅಗತ್ಯ
21ನೇ ಶತಮಾನದ ಹುಮ್ಮಸ್ಸಿನಲ್ಲಿ ಆಧುನಿಕತೆಯ ನಾಗಾಲೋಟದಲ್ಲಿ ಸಾಗುತ್ತಿರುವ ಯುವ ಸಮುದಾಯ ಎತ್ತ ಸಾಗಿದೆ? ಅವರ 700 ಏನು? ಅವರ ಜೀವನಶೈಲಿ, ಕಾರ್ಯವೈಖರಿ ಮತ್ತು ಬದುಕು ಸರಿಯಾದ ಮಾರ್ಗದಲ್ಲಿ ಸಾಗಿದೆಯೇ? ಎಂಬುದರ ಬಗ್ಗೆ ಲಕ್ಷ್ಯ ಕೊಡುವುದು ಇಂದಿನ ತುರ್ತು ಅತ್ಯಗತ್ಯವಾಗಿದೆ. ಯುವಕರಲ್ಲಿ ಆಧುನಿಕತೆ ಹೆಸರಲ್ಲಿ ಸ್ಟೇಚ್ಚಾಚಾರ, ಹಿರಿಯರ ಕಡೆಗಣನೆ ಮಾಡುವ ಮನೋಭಾವ ಹಾಗೂ ಜೀವನಶೈಲಿ ಬದಲಾಗುತ್ತಿರುವುದನ್ನು ನಾವು ಗಮನಿಸಬಹುದು. ನಾವೆಲ್ಲ 21ನೇ ಶತಮಾನದಲ್ಲಿದ್ದೇವೆ ಎಂಬ ವೇಗದಲ್ಲಿ
ಮಾದಕ ವ್ಯಸನ ಬದುಕು ಅವಸಾನ
ನಮ್ಮತನ ಕಣ್ಮರೆಯಾಗುತ್ತಿದೆ. ಜೀವನಚಕ್ರ ಕೂಡ ಫಾಸ್ಟ್ ಫುಡ್ ಮಾದರಿಯಲ್ಲಿ ಫಾಸ್ಟ್ ಆಗಿ ಸಾಗುತ್ತಿದೆ. ಸೃಜನಶೀಲ ಚಟುವಟಿಕೆಗಳು ಕ್ಷೀಣಿಸುತ್ತಿವೆ. ಮೆದುಳಿಗೆ ವ್ಯಾಯಾಮ ಮರೀಚಿಕೆಯಾಗುತ್ತಿದೆ. ಕೃತಕ ಬುದ್ದಿ ಮತ್ತೆ ಎಲ್ಲೆಡೆ ಆವರಿಸಿದ ಪರಿಣಾಮ ಮೆದುಳು ನಿಷ್ಕ್ರಿಯವಾಗುತ್ತಿದೆ. ಮನಸ್ಸು ಮತ್ತು ಇಂದ್ರಿಯ ನಿಗ್ರಹ ಸಾಧ್ಯವಾಗುತ್ತಿಲ್ಲ. ಕ್ರಿಯಾಶೀಲತೆ ಕಮರುತ್ತಿದೆ. ಕೆಲಸಕ್ಕೆ ಬಾರದ ಚಿಂತನೆ ಗಳನ್ನು ಹಚ್ಚಿ ಮನಸ್ಸುಗಳು ಘಾಸಿಯಾಗುತ್ತಿವೆ. ಮನಸ್ಸಿನ ಮೇಲೆ ಹತೋಟಿಯೇ ಇಲ್ಲದಂತಾಗಿದೆ. ಯೋಚನಾ ಲಹರಿ ದಿನೇ ದಿನೆ ಬದಲಾಗುತ್ತಿದೆ. ಸಹವಾಸ ದೋಷವೋ ಅಥವಾ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯೋ ಗೊತ್ತಿಲ್ಲ ದುಶ್ಚಚಟಗಳು ಯುವಕರನ್ನು ಆವರಿಸುತ್ತಿವೆ. ಪರಿಣಾಮ ಯುವ ಸಮುದಾಯದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕುಸಿಯುತ್ತಿದೆ. ಸಾಧನೆಯ ಹಂಬಲ ತುಡಿತ ಮೂಲೆಗುಂಪಾಗುತ್ತಿದೆ.
ತಪ್ಪದ ಗೀಳು
ಡ್ರಗ್ಸ್, ಡ್ರಿಂಕ್ಸ್ ಸ್ಟೋಕಿಂಗ್ ದಿನೇ ದಿನೇ ಏರುತ್ತಿದೆ. ಮಾನಸಿಕ ಗುಣ, ವ್ಯಕ್ತಿತ್ವ ಮತ್ತು ಸಾಮಾಜಿಕ ಜಾಲತಾಣ ಬಳಕೆ ಕುರಿತು ನಡೆದ ಈ ಸಂಶೋಧನೆ ಅನ್ವಯ ಮೂಡ್ ಸ್ಟಿಂಗ್, ತಾಳ್ಮೆ ಮತ್ತು ಅಡಿಕ್ಟಿವ್ ನಡವಳಿಕೆಯನ್ನು ಬಚ್ಚಿಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ. ಆಧುನಿಕ ಜೀವನಶೈಲಿಯಿಂದ ಇಂದು ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ.
ಪರಿಹಾರವೂ ಇದೆ
ಇಂದಿನ ಮಕ್ಕಳು ನಾಳೆಯ ಪ್ರಜೆಗಳು ದೇಶದ ಭವಿಷ್ಯ ರೂಪಿಸುವವರು ಎಂದೆಲ್ಲಾ ಸಂಬೋಧಿಸಲಾಗುತ್ತದೆ. ಇವರಿಗೆ ಮನೆಯಲ್ಲಿ ಪಾಲಕರ, ಹಿರಿಯರ, ಶಾಲೆ ಕಾಲೇಜ್ ನಲ್ಲಿ ಶಿಕ್ಷಕರ ಹಾಗೂ ಸಮಾಜದ ಚಿಂತಕರಿಂದ, ಬುದ್ದಿಜೀವಿಗಳಿಂದ ಕಾಲಕಾಲಕ್ಕೆ ಸೂಕ್ತ ಮಾರ್ಗದರ್ಶನ ಅತ್ಯಗತ್ಯವಾಗಿದೆ. ನಮ್ಮ ಯುವಪೀಳಿಗೆ ಇಂದು ಹತ್ತು ಹಲವು ಮೋಡಿಗೆ ಒಳಗಾಗಿದೆ.ಆಧುನಿಕತೆಯ ಕರಾಳತೆಗೆ ಸಿಕ್ಕು ನಲಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಗೆ ಅವಶ್ಯ ಎಂಬುದು ಎಲ್ಲರೂ ಒಪ್ಪಲೇಬೇಕಾದ ಮಾತು. ಈ ತಂತ್ರಜ್ಞಾನ ಸಮಾಜದ ಹಿತದೃಷ್ಟಿಯಿಂದ ಸದ್ಬಳಕೆಯಾಗಬೇಕು ಮತ್ತು ವ್ಯಕ್ತಿಯ ವಿಕಸನಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿ ಅಲ್ಲ ವ್ಯಸನಮುಕ್ತ ಸಮಾಜದ ಕಲ್ಪನೆಯಲ್ಲಿ ಅನೇಕ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು, ಅನೇಕ ಧಾರ್ಮಿಕ ಮುಖಂಡರು ಮಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಳಕಲ್ ಪರಮಪೂಜ್ಯ ವಿಜಯಮಹಾಂತೇಶ ಸ್ವಾಮಿಗಳು ಮಹಾಂತ ಜೋಳಿಗೆ ಪಾದಯಾತ್ರೆ ಮೂಲಕ ಜನರ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಲು ಪ್ರೇರೆಪಿಸಿದರು. ಅದೇ ರೀತಿ ಸೋಂದೆಯ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ವ್ಯಸನಮುಕ್ತ ಅಭಿಯಾನ ಅತ್ಯಂತ ಜನಪ್ರಿಯ ಸಮಾಜಮುಖಿ ಚಿಂತನೆಗಳು. ಬದಲಾವಣೆಗಳು ಸಾಧ್ಯವಾಗಲು ಮೊದಲ ಹೆಜ್ಜೆ ನಮ್ಮಿಂದ ಬರಬೇಕು ಅಂದಾಗ ಮಾತ್ರ ವ್ಯಸನಮುಕ್ತ ಸಮಾಜ ಕಟ್ಟಲು ಸಾಧ್ಯ.
–ಡಾ. ಆದಿತ್ಯ ಪಾಂಡುರಂಗಿ
ಮನೋವೈದ್ಯರು, ಧಾರವಾಡ.