COVID-19 Resources for Mental Health Coaches... Learn More

0836-2773878

ನಾನು ಹೇಳುವುದನ್ನು ಕನಿಷ್ಠ ಹತ್ತು ಬಾರಿ ಪುನರುಚ್ಚರಿಸಿ!

ಅದೊಂದು ಸುಂದರ ಮಧ್ಯಮ ವರ್ಗದ ಕುಟುಂಬ. ಮನೆಯ ಯಜಮಾನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಪತ್ನಿ ಗೃಹಿಣಿ. ಮದುವೆಯಾದ 12 ವರ್ಷಗಳ ನಂತರ ಮಗನ ಜನನ. ಮಗನಿಗಾಗಿ ಮೊರೆಹೋಗದ ದೇವರಿಲ್ಲ, ಹೊರದ ಹರಕೆಯಿಲ್ಲ. ಕೊನೆಗೆ ಹರಕೆ, ಪ್ರಾರ್ಥನೆ ಫಲಿಸಿತು, ಮಗ ಜನಿಸಿದ. ಕಳೆದ ಒಂದು ದಶಕದಿಂದ ಮನದಲ್ಲಿ ಮನೆಮಾಡಿದ್ದ ಸಂಕಟ, ಬೇಗುದಿ ಅಂತ್ಯ ಕಂಡಿತು. ಸಂತಸದ ಹೊನಲು ಮನೆಯಲ್ಲಿ ಆವರಿಸಿತು. ಕುಟುಂಬದಲ್ಲಿ ಒಂದು ಹೊಸ ಕಳೆ ಬಂದಿತು. ಹೀಗೆ ದಿನಗಳು ಸಾಗುತ್ತಿದ್ದಂತೆ ಮಗ ದೊಡ್ಡವನಾಗುತ್ತ ಸಾಗಿದ. ಅವನಿಗೀಗ 12 ವರ್ಷ, ಎಲ್ಲವೂ ಸುಸೂತ್ರವಾಗಿಯೇ ಸಾಗಿತ್ತು. ಕಳೆದ ಒಂದು ವರ್ಷದಿಂದ ಮಗನ ನಡವಳಿಕೆಯಲ್ಲಿ ಒಂದು ವಿಚಿತ್ರ ಬದಲಾವಣೆ ಕಂಡಿತು. ಈ ಬದಲಾವಣೆ ಅನಿರೀಕ್ಷಿತ ಮತ್ತು ಅಚ್ಚರಿ ಮೂಡಿಸಿತ್ತು. ಹೆತ್ತವರಿಗೆ ಇದು ಒಂದು ತರಹದ ಚಿಂತೆ ಮೂಡಿಸುವುದರ ಜತೆಗೆ ಕೆಲವೊಮ್ಮೆ ಅಸಹನೆಗೂ ಕಾರಣವಾಯಿತು. ಆ ಬದಲಾವಣೆ ಎಂದರೆ ಆಗಾಗ ಮಗ ತಾನು ಹೇಳಿದ್ದನ್ನು ಎದುರಿರುವವರು 10 ಅಥವಾ 25 ಬಾರಿ ಹೇಳಬೇಕು ಎನ್ನುವುದು.

ಆರಂಭದಲ್ಲಿ ಇದು ಏನೋ ಹುಡುಗ ಬುದ್ದಿ, ಇಂದಲ್ಲ ನಾಳೆ ಸರಿ ಹೋಗಬಹುದು ಎಂದುಕೊಂಡು ಪಾಲಕರೂ ಸುಮ್ಮನಾದರು.

ಅವರಿಗೆ ಇದೊಂದು ಗೀಳು ಎನ್ನುವ ಪರಿಕಲ್ಪನೆ ಇರಲಿಲ್ಲ. ಹೀಗೆ ವರ್ಷವಾದರೂ ಮಗನ ಈ ವರ್ತನೆ ನಿಲ್ಲಲಿಲ್ಲ. ಅನಿವಾರ್ಯ ಎಂದುಕೊಂಡು ಸಾಗಿದರೂ ಕ್ರಮೇಣ ಇದು ಸಮಸ್ಯೆಯಾಗಿ ಪರಿಣಮಿಸಿತು. ಮನೆಯಲ್ಲಿ ಹೆತ್ತವರು ಸಹ ಸಹಿಸಿಕೊಳ್ಳದಾದರು. ಆದರೆ ಆತನ ಈ ನಡವಳಿಕೆ ಶಾಲೆಯಲ್ಲೂ ಮುಂದುವರಿದಾಗ ಅಲ್ಲಿಂದಲೂ ದೂರುಗಳು ಬರಲಾರಂಭಿ ಸಿದವು. ಇದು ಪಾಲಕರಿಗೆ ತಲೆ ಮೇಲೆ ಆಕಾಶವೇ ಕಳಚಿ ಬಿದ್ದ ಅನುಭವ ನೀಡಿತು. ಮುಂದೇನು? ಏನಿದಕ್ಕೆ ಪರಿಹಾರ? ಎಂಬ ಪ್ರಶ್ನೆಯ ಬೆನ್ನತ್ತಿ ಹಲವು ದೇವರ ಹರಕೆ ಹೊತ್ತರು. ಪ್ರಶ್ನೆ ಕೇಳಿದರು. ಎಲ್ಲವೂ ಮುಗಿಯಿತು. ಕೊನೆಗೆ ಯಾರೋ ಸಲಹೆ ನೀಡಿದಂತೆ ಬಂದದ್ದು ಮನೋವೈದ್ಯರ ಕಡೆ.

ಇದನ್ನು ಮನೋವಿಜ್ಞಾನದಲ್ಲಿ proxy obsession (ಪ್ರಾಕ್ಷಿ ಅಬ್ರೇಷನ್) ಎಂದು ಕರೆಯಲಾಗುತ್ತದೆ. ಅಂದರೆ ಇದೊಂದು ಮಾದರಿಯ ಗೀಳು ರೋಗ. ಈ ಮಗುವಿಗೆ ಇದ್ದದ್ದೂ ಅದುವೇ. ಈ ಮಗು ಪದೇ ಪದೆ ಒಂದೇ ಮಾತನ್ನು ಹೇಳುತ್ತಿದ್ದ. ಅದನ್ನು ಎದುರಿರುವವರೂ ಪುನರುಚ್ಚರಿಸಬೇಕು ಎಂಬುದು ಆತನ ಹಟ. ಅದು ಒಂದು ಬಾರಿಯಲ್ಲ, ಎರಡು ಬಾರಿಯಲ್ಲ ಕನಿಷ್ಠ 25 ಬಾರಿ ಹೇಳಬೇಕು.

+

ಹಲೋ ಡಾಕ್ಟರ್

ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು

drpandurangi@yahoo.com

ಇಲ್ಲದಿದ್ದರೆ ಆತನಿಗೆ ಒಂದು ತರಹ ಸಿಟ್ಟು, ಸೆಡವು ಬರುತ್ತದೆ. ಅಷ್ಟೇ ಅಲ್ಲದೆ ಆತನಿಗೆ ಸಾಕುಪ್ರಾಣಿಗಳೆಂದರೂ ತುಂಬಾ ಇಷ್ಟ. ಅವುಗಳನ್ನು ಮನಸಾರೆ ಪ್ರೀತಿಸುತ್ತಾನೆ. ಅವುಗಳ ಆರೈಕೆ ಮಾಡುತ್ತಾನೆ. ಪ್ರತಿಯಾಗಿ ಅವು ಕೂಡ ಈತನನ್ನು ಪ್ರೀತಿಸಬೇಕು. ಆಟವಾಡಬೇಕು. ಈತ ಕೆಲವೊಮ್ಮ ನೀಡುವ ಕಿರುಕುಳ ಹಿಂಸೆ ಎನಿಸಿದರೂ ಸಹಿಸಿಕೊಳ್ಳಬೇಕು. ಇಲ್ಲದಿದ್ದರೆ ಅವುಗಳಿಗೆ ತೊಂದರೆ ಕೊಡುತ್ತಾನೆ. ಮನದಲ್ಲಿನ ವಿಕೃತಿ ಜಾಗೃತವಾಗಿ ಅವುಗಳ ಮೇಲೆ ಇನ್ನಿಲ್ಲದ ದೈಹಿಕ ಹಿಂಸೆ ಕೊಡುತ್ತಾನೆ. ಪ್ರತಿಯಾಗಿ ಅವುಗಳಿಂದ ಉಗುರು ಪರಿಚಿಕೊಳ್ಳಬೇಕೆನ್ನೋ ಆಸೆ, ಅವು ಪರಚಿದಾಗ ಒಂದು ಥರಾ ವಿಕೃತ ಸಮಾಧಾನ. ಹೀಗಾಗಿ ಕೈ ತುಂಬಾ

ಗಾಯಗಳಾಗಿವೆ. ಇದೆಲ್ಲವೂ ಒಂದು ಸ್ವಲ್ಪ ಸಮಯ ಮಾತ್ರ. ಮತ್ತೆ ಯಥಾಸ್ಥಿತಿಗೆ ಬಂದ ತಕ್ಷಣ ಆತನಿಗೆ ತನ್ನ ತಪ್ಪಿನ ಅರಿವು ಆಗುತ್ತದೆ. ಅಮ್ಮ ನಾನು ಇನ್ಮುಂದೆ ಹೀಗೆ ಮಾಡುವುದಿಲ್ಲ’ ಎಂದು ಗೋಗರೆಯುತ್ತಾನೆ. ಆದರೆ ಅಷ್ಟೊತ್ತಿಗಾಗಲೇ ಎದುರಿರುವವರಿಗೆ ಆಗುವ ತೊಂದರೆ ಆಗಿಬಿಟ್ಟಿರುತ್ತದೆ. ಮನೆಯಲ್ಲಿ ಹೆತ್ತವರು ಹೇಗೋ ಸಹಿಸಿಕೊಂಡಾರು. ಆದರೆ ಶಾಲೆಯಲ್ಲಿ ಶಿಕ್ಷಕರಿಗೆ ಇದನ್ನು ಸಹಿಸಿಕೊಳ್ಳುವುದು ಎಂದರೆ ಆಗದ ಮಾತೇ ಸರಿ. ಎಲ್ಲ ಪ್ರಯತ್ನ ಮುಗಿದ ಮೇಲೆ ಸ್ನೇಹಿತರೊಬ್ಬರ ಸಲಹೆ ಮೇರೆಗೆ ನನ್ನ ಬಳಿ ಬಂದ ಇವರನ್ನು ಕರೆದು ಮಾತನಾಡಿಸಿದೆ. ಅವರ ಅಹವಾಲು ಆಲಿಸಿದೆ. ಕೊನೆಗೆ ವೈಜ್ಞಾನಿಕ ಚಿಕಿತ್ಸೆ ಸೂಚಿಸಿದೆ. ಅದಕ್ಕೆ ಅಗತ್ಯ ಮಾತ್ರೆಗಳನ್ನು ಬರೆದು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕ್ರಮೇಣ ಎಲ್ಲವೂ ಸರಿ ಹೋಗುತ್ತದೆ ಎಂದು ಧೈರ್ಯ ಹೇಳಿ ಕಳಿಸಿದೆ. ಇಂತಹ ಪ್ರಕರಣದಲ್ಲಿ ಮೂರು ಅಂಶಗಳು ಪ್ರಮುಖ. ಅವುಗಳೆಂದರೆ ಒಂದು ವೈಜ್ಞಾನಿಕ ಚಿಕಿತ್ಸೆ, ಎರಡನೇಯದು ಆಪ್ತ ಸಲಹೆ ಮತ್ತು ಕೊನೆಯದಾಗಿ ಪಾಲಕರು ಈ ಮನಸ್ಥಿತಿಯನ್ನು ಒಪ್ಪಿಕೊಂಡು ಸಾಗಬೇಕು ಎನ್ನುವುದು. ಜಗತ್ತಿನಲ್ಲಿ ಯಾವ ಸಮಸ್ಯೆಯೂ ಪರಿಹಾರ ಕಾಣದೇ ಇರಲು ಸಾಧ್ಯವಿಲ್ಲ. ಅದಕ್ಕೆ ಹೆತ್ತವರು ಸಮಾಧಾನದ ಜತೆಗೆ ವಾಸ್ತವ ಅರಿತು ತಾಳ್ಮೆಯಿಂದ ಸಾಗಬೇಕು ಮಾತ್ರವಲ್ಲ, ಇಂತಹ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಮನೋವೈದ್ಯರ ಬಳಿ ಕರೆದುಕೊಂಡು ಬರಬೇಕು.

About Author: