COVID-19 Resources for Mental Health Coaches... Learn More

0836-2773878

ಡಿಜಿಟಲ್ ಜ್ಞಾನವಿರಲಿ ಅದುವೇ ಧ್ಯಾನವಾಗದಿರಲಿ

ಮಾನವ ಎಷ್ಟೇ ಮುಂದುವರಿದರೂ ಪ್ರಕೃತಿ ಎದುರು ಆತ ತೃಣ ಸಮಾನನೇ. ಅದರ ವಿರುದ್ಧದ ನಡೆ ಸದಾ ಅಪಾಯಕಾರಿ. ಇದನ್ನು ಅರಿತು ಬಾಳಿದರೆ ಸುಖ, ಇಲ್ಲದೇ ಹೋದರೆ ಅನಾಹುತ. ಇದು ಪದೇ ಪದೆ ಸಾಬೀತಾಗುತ್ತಲೇ ಬರುತ್ತಿದೆ. ಆದರೆ ನಾವಿನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಮುಂದೊಂದು ದಿನ ನಾವು ನೀವೆಲ್ಲರೂ ಭಾರಿ ಬೆಲೆ ತೆರಬೇಕಾಗುತ್ತದೆ. ದೇಹಕ್ಕೆ ಹೇಗೆ ಡಿಟಾಕ್ಸ್ ಬೇಕೋ ಹಾಯೇ ಈ ಡಿಜಿಟಲ್ ಡಿಟಾಕ್ಸ್ ಕೂಡ ಇಂದಿನ ತುರ್ತು ಅತ್ಯಗತ್ಯ. ಇದಾಗದಿದ್ದರೆ ಹಲವು ಮಾದರಿಯ ಮನೋಭಿನ್ನತೆ ಬರುತ್ತದೆ.

ಅದೊಂದು ಕಾಲವಿತ್ತು. ಮೊಬೈಲ್ ಒತ್ತಟ್ಟಿಗಿರಲಿ, ಸ್ಥಿರ ದೂರವಾಣಿಯೇ ಇರಲಿಲ್ಲ. ಹಾಗಿದ್ದರೆ ಆಗ ಜಗತ್ತು ಇರಲಿಲ್ಲವೇ? ಎಲ್ಲ ಕೆಲಸಗಳು ನಡೆಯುತ್ತಿರಲಿಲ್ಲವೇ? ಎಲ್ಲವೂ ಇತ್ತು. ಎಲ್ಲವೂ ಈಗಿನಷ್ಟೇ ಸುಲಭವಾಗಿ ನಡೆಯುತ್ತಿತ್ತು. ಫೋನ್, ಮೊಬೈಲ್ ಇಲ್ಲದೇ ಇದ್ದಾಗಲೇ ಮಾನವೀಯ ಸಂಬಂಧಗಳು ಹೆಚ್ಚು ಹತ್ತಿರವಾಗಿದ್ದವು. ಪ್ರಕೃತಿ ಜತೆ ಒಡನಾಟವಿತ್ತು. ಕಾಡು ಮೇಡು ಸುತ್ತುವ ಪರಿಪಾಠವಿತ್ತು. ಈಗ ಅದೆಲ್ಲವನ್ನೂ ಮೊಬೈಲ್‌ನಲ್ಲೇ ನೋಡುವಂತಾಗಿದೆ. ಪತ್ರ ಬರೆಯುವ ಸೃಜನಶೀಲತೆ ಎಲ್ಲವೂ ಇತ್ತು. ವಿಷಯದ ಅರಿವಿನ ಕೊರತೆ ಆದಾಗ ಗುರುಗಳ ಇಲ್ಲವೇ ತಿಳಿದವರ ಬಳಿ ಹೋಗಿ ಕೇಳಿ ತಿಳಿಯುವ ಸಂಪ್ರದಾಯವಿತ್ತು. ಆದರೆ ಈಗ ಹಾಗಲ್ಲ. ಏನೇ ಬೇಕಿದ್ದರೂ ಗೂಗಲ್, ಈಗಂತೂ

ಎಐ. ಇದರಿಂದ ಮನುಷ್ಯನ ಯೋಚನಾ ಶಕ್ತಿಯೇ ಕುಂದುತ್ತಿದೆ. ಸಂಶೋಧನೆ, ಓದು ಎಲ್ಲದರ ಮೇಲೂ ಪರಿಣಾಮ ಬೀರುತ್ತಿದೆ. ಮೊನ್ನೆ ಒಂದು ಮಧ್ಯಮ ವರ್ಗದ ಕುಟುಂಬ ಮಗನನ್ನು ಕರೆದುಕೊಂಡು ಬಂದಿತ್ತು. ಆತನಿಗೆ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಕೊಡಿಸಿದ್ದಾರೆ. ಸ್ನೇಹಿತರ ಸಹವಾಸದ ಫಲವೋ ಆಧುನಿಕತೆಯ ಮೋಡಿಯೋ ಗೊತ್ತಿಲ್ಲ. ಆತನೀಗ ಡಿಜಿಟಲ್ ವ್ಯಸನಿ, ಅಂದರೆ ಸದಾ ಮೊಬೈಲ್‌ನಲ್ಲೇ ಬ್ಯುಸಿ. ಪಾಲಕರು ಆತನಿಗೆ ಮೊಬೈಲ್ ಕೊಡಿಸಿದ್ದು ಸಂಪರ್ಕಕ್ಕೆ ಇರಲಿ ಎಂದು. ಆದರೆ ಆತ ಬಳಸುತ್ತಿದ್ದುದು ಗೇಮ್ಸ್ ಮತ್ತು ರೀಲ್ಸ್ ನೋಡಲು. ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಟ್ಯಾಬ್‌ಗಳು ಅನಿವಾರ್ಯ. ಅದು ಶೈಕ್ಷಣಿಕ ಉದ್ದೇಶಕ್ಕಷ್ಟೇ ಬಳಕೆಯಾದರೆ ಸೂಕ್ತ. ಆದರೆ ಇಂದು ಅದು ಆಗುತ್ತಿಲ್ಲ. ಶಿಕ್ಷಣದ ಜತೆಜತೆಗೆ ಇತರ ವಿಷಯಗಳತ್ತ ಸೆಳೆತ ಇಲ್ಲಿ ಸ್ಪಷ್ಟ. ಪ್ರತಿ ಬಾರಿಯೂ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಾ ಕೂರಲು ಯಾರಿಗೂ ಆಗುವುದಿಲ್ಲ. 18ರ ವಯಸ್ಸಿನ ಈ ಹಂತದಲ್ಲಿ ಮನಸ್ಸು ಜಾರುವುದು ಪಕ್ಕಾ. ಈಗ ಈ ಹುಡುಗನ ವಿಷಯದಲ್ಲೂ ಆದದ್ದೂ ಇದುವೇ. ಸದಾ ಕೈಯಲ್ಲಿ ಮೊಬೈಲ್ ಇರಲೇಬೇಕು ಎನ್ನುವ ಸ್ಥಿತಿ. ಮನೆಗೆ ಸಂಬಂಧಿಕರು, ಸ್ನೇಹಿತರು ಯಾರೇ ಬಂದರೂ ಒಂದು

ಕ್ಷಣ ಹಾಯ್ ಹೇಳಿ ಮತ್ತೆ ಮೊಬೈಲ್‌ನಲ್ಲೇ ಮುಳುಗುತ್ತಾನೆ. ಪಾಲಕರ ಜತೆಗೂ ಪ್ರೀತಿಯಿಂದ ಕುಳಿತು ಮಾತನಾಡುವಷ್ಟು ಪುರಸೊತ್ತು ಇಲ್ಲ. ಪುರಸೊತ್ತು ಎನ್ನುವದಕ್ಕಿಂತ ಆತನ ಆದ್ಯತೆ ಏನಿದ್ದರೂ ಮೊಬೈಲ್. ಇದು ಅತಿಯಾದದ್ದನ್ನು ಗಮನಿಸಿದ ಪಾಲಕರು ಕರೆದು ತಿಳಿ ಹೇಳಿದರು. ಪರಿಸ್ಥಿತಿ ಕೈ ಮೀರಿದಾಗ ಮೊಬೈಲ್ ಕಸಿದರು. ಆಗ ಆತ ಹುಚ್ಚನಂತೆ ವರ್ತನೆ ಶುರು ಮಾಡಿದ. ಊಟ ಉಪಾಹಾರ ತ್ಯಜಿಸಲು ಆರಂಭಿಸಿದ. ಮೊಬೈಲ್ ಕೊಟ್ಟರೆ ಕಾಲೇಜು ಎನ್ನುವ ಮಟ್ಟಕ್ಕೆ ಬಂದ. ಗಾಬರಿಗೊಂಡ ಪಾಲಕರು ಮತ್ತೆ ಅವನ ಕೈಗೆ ಮೊಬೈಲ್ ಕೊಟ್ಟರು. ಮತ್ತೆ ಸುಧಾರಿಸಿದ. ಇದು ಮೊಬೈಲ್ ಮೇಲಿನ ಅತಿಯಾದ ಅವಲಂಬನೆ

ಕೊನೆಗೆ ಆಪ್ತ ಸಮಾಲೋಚನೆಗೆ ಎಂದು ಆತನನ್ನು ನನ್ನ ಬಳಿ ಕರೆದುಕೊಂಡು ಬಂದರು. ಮಾತನಾಡಿಸಿದೆ. ಹೊಸ ವಿಷಯಗಳ ಜ್ಞಾನ ಪಡೆಯುವುದರ ಜತೆಗೆ ಆತ ದಾಸನಾಗಿದ್ದು ರೀಲ್ಸ್ ಎಂಬ ಮಾಯಾಲೋಕದ ಮೋಹಕ್ಕೆ. ‘ನನಗೂ ಅದರಲ್ಲಿನ ಹಾಗೆ ಮಾಡಬೇಕು ಎನಿಸುತ್ತದೆ. ಅದಕ್ಕೆ ಅದನ್ನು ಬೆನ್ನು ಹತ್ತಿರುವೆ. ಅದು ಸಿಗದಿದ್ದಾಗ ಬೇಸರ ಆಗುತ್ತದೆ. ಓದು, ಬರಹ, ಊಟ ರುಚಿಸುವುದಿಲ್ಲ’ ಎಂದು ಹೇಳಿದ. ಆಗ ಆತನಿಗೆ ಈ ಅವಲಂಬನೆ ಅಥವಾ ಡಿಜಿಟಲ್ ಜ್ಞಾನ ಓದಿಗಷ್ಟೇ ಇದ್ದರೆ ಸೂಕ್ತ. ಭವಿಷ್ಯ ರೂಪಿಸಿಕೊಳ್ಳದ ಹೊರತು ನಿನ್ನ ಹೆತ್ತವರು ಮತ್ತು ನೀನು ಕಂಡ ಕನಸುಗಳ ನನಸಾಗಲಾರವು. ಮೊದಲು ಓದು. ವಾರಕ್ಕೊಮ್ಮೆ ಪ್ರಕೃತಿ ಮಧ್ಯೆ ಹೋಗಿ ಬಾ. ಅಲ್ಲಿನ ವಿಸ್ಮಯ, ಕೌತುಕಗಳನ್ನು ಅರಿ. ಹೊಸಲೋಕವನ್ನೇ ನೋಡುವೆ. ಬದುಕು ಬರೀ ಮೊಬೈಲ್ ಅಲ್ಲ. ಸೃಷ್ಟಿಯ ಮಹಿಮೆ ಅಪಾರ ಮತ್ತು ಅದುವೇ ಶಾಶ್ವತ ಎಂದು ತಿಳಿ ಹೇಳಿದ. ಆತನೂ ಹಂತ ಹಂತವಾಗಿ ಡಿಜಿಟಲ್ ವ್ಯಸನದಿಂದ ಹೊರಬಂದು ಇದೀಗ ಸಹಜ ಸ್ಥಿತಿಗೆ ಮರಳಿದ್ದಾನೆ.

ಈ ಪ್ರಕರಣದ ಮೂಲಕ ಎಲ್ಲರಿಗೂ ಹೇಳ ಬಯಸುವುದು ಇಷ್ಟೇ. ವಿಜ್ಞಾನ, ತಂತ್ರಜ್ಞಾನ, ಡಿಜಿಟಲ್ ಜ್ಞಾನ ಎಲ್ಲವೂ ಇಂದು ತುರ್ತು ಅಗತ್ಯಗಳು ಎಂಬುದು ಎಷ್ಟು ಸತ್ಯವೋ ಅಗತ್ಯಕ್ಕೆ ತಕ್ಕಂತೆ ಅದರ ಬಳಕೆಯೂ ಅಷ್ಟೇ ಅಗತ್ಯ

About Author: