COVID-19 Resources for Mental Health Coaches... Learn More

0836-2773878

ಕೂಡಿ ಬಾಳಿದರೆ ಸಂಸಾರ ಆನಂದಸಾಗರ ಮರೆತರೆ ಭಾರ

ನಿಮ್ಮ ಆ ಒಂದು ಮಾತು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು ಸರ್. ಇಷ್ಟು ದಿನ ನಾನಂದುಕೊಂಡಿದ್ದ ಸಂತಸ, ಸುಖ ಬರೀ ಭ್ರಮೆ, ನೀವು ಹೇಳಿದ ಹಾಗೆ ಮಾಡಿದ ನಂತರ ನಮ್ಮ ಸಂಸಾರವೀಗ ಆನಂದಸಾಗರ. ವಜ್ರಕ್ಕಿಂತಲೂ ಅತ್ಯಮೂಲ್ಯವಾದ ಈ ಸಂಗತಿಯನ್ನು ನಾನು ಅರಿಯದೇ ಹುಚ್ಚನಾಗಿದ್ದೆ. ನೀವು ನನಗೆ ಮತ್ತು ನನ್ನ ಕುಟುಂಬಕ್ಕೆ ಹೊಸ ವರ್ಷಕ್ಕೆ ನೀಡಿದ ಈ ಕೊಡುಗೆ ಎಂದೆಂದೂ ಮರೆಯಲಾರೆ. ಇದಕ್ಕಿಂತ ದೊಡ್ಡ ಗಿಫ್ಟ್ ಬೇರೇನೂ ಇಲ್ಲ ಸಾರ್’ ಮಗನ ಭವಿಷ್ಯಕ್ಕೆ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ಪಡೆಯಲು ಪ್ರತಿ ವರ್ಷ ನನ್ನ ಬಳಿ ಬರುತ್ತಿದ್ದ ಕುಟುಂಬವೊಂದರ ಯಜಮಾನರು ಆಡಿದ ಮಾತುಗಳಿವು.

ಅವರದು ಮಧ್ಯಮ ವರ್ಗದ ಅನುಕೂಲಸ್ಥ ಕುಟುಂಬ. ಇಬ್ಬರು ಮಕ್ಕಳು. ಒಳ್ಳೆಯ ಉದ್ಯೋಗ, ಹೆಂಡತಿ ಗೃಹಿಣಿ. ಯಾವುದಕ್ಕೂ ಕೊರತೆಯಿಲ್ಲ. ಉದ್ಯೋಗದ ಒತ್ತಡವೋ ಅಥವಾ ಸ್ನೇಹಿತರ ಸಹವಾಸದ ಫಲವೋ ಗೊತ್ತಿಲ್ಲ. ಮನೆ ಯಜಮಾನರಿಗೆ ಪ್ರತಿ ವರ್ಷ ಹೊಸ ವರ್ಷಾಚರಣೆಗೆ ಸ್ನೇಹಿತರು, ಸಹೋದ್ಯೋಗಿಗಳೊಡನೆ ಹೋಗುವ ಅಭ್ಯಾಸವಿತ್ತು. ಇದರ ಪರಿಣಾಮ ಮನೆಯಲ್ಲಿ ಉಳಿದ ಸದಸ್ಯರು ಹಾಗೆ ಇರುವ ಸ್ಥಿತಿ ಎದುರಾಗಿತ್ತು. ಈ ವರ್ಷ ಕ್ರಿಸಮಸ್ ರಜೆ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಬಂದಿದ್ದರು. ಆಗ ಮಕ್ಕಳಿಗೆ ಕೆಲ ಸಲಹೆ ಸೂಚನೆ ಜತೆಗೆ ಹೀಗೆ ಎಲ್ಲರೂ ಒಟ್ಟಾಗಿ ಇದ್ದರೆ ಅದಕ್ಕಿಂತ ನೆಮ್ಮದಿ ಇನ್ನೇನಿದೆ

ಜೀವನದಲ್ಲಿ ಎಂದು ಹೇಳಿದ್ದೆ. ಅದರನ್ವಯ ಆ ಕುಟುಂಬ ಈ ಬಾರಿ ಹೊಸ ವರ್ಷವನ್ನು ಮನೆಯಲ್ಲೇ ಎಲ್ಲರೂ ಜತೆಜತೆಯಾಗಿ ಆಚರಿಸಿದರು. ಇದರಿಂದ ಅನ್ನೋನ್ಯತೆ ಬೆಳೆಯಿತು. ಕುಟುಂಬದ ಸದಸ್ಯರಿಗೆ ಆಶ್ಚರ್ಯದ ಜತೆಗೆ ಹರುಷವೋ ಹರುಷ. ತಂದೆ ನಮ್ಮ ಜತೆ ಕಾಲ ಕಳೆಯುತ್ತಿದ್ದಾರೆ ಎನ್ನುವ ಹೆಮ್ಮೆ. ಮನೆಯಲ್ಲೇ ಹೊಸ ವರ್ಷಾಚರಣೆ ಮಾಡಿ ಒಷ್ಟೊಟ್ಟಿಗೆ ಕುಳಿತು ಊಟ ಮಾಡಿ ಹರಟೆ ಹೊಡೆಯುತ್ತ ಕಳೆದ ದಿನ ಅವರ ಜೀವನದ ಪಾಲಿನ ಸುದಿನ. ಮನೆ ಮಂದಿಗೆಲ್ಲಾ ಅಮೃತಪಾನ ಕುಡಿದಷ್ಟು ಸಮಾಧಾನ.

ಇಂತಹ ಸಣ್ಣ ಮತ್ತು ಪರಿಣಾಮಕಾರಿ ವಿಷಯವನ್ನು ನಮ್ಮ ಹಿರಿಯರು ಆಗ ಪಾಲಿಸುತ್ತಿದ್ದರು. ಇದರಿಂದ ಇಡೀ ಕುಟುಂಬ ನೆಮ್ಮದಿಯಿಂದಿರುತ್ತಿತ್ತು. ಕೂಡಿ ನಗುನಗುತಾ ಬಾಳಿದರೆ ಇರುವ ಸ್ಥಳವೇ ಸ್ವರ್ಗ. ಈ ಸ್ವರ್ಗದ ಸುಖ ಅರಸಿ ನಮ್ಮವರು ತಮ್ಮವರನ್ನು ಬಿಟ್ಟು ಬೇರೆಡೆ ಹೊರಟರೆ ಸಿಗುವುದು ಕ್ಷಣಿಕ ಸುಖ. ಇದು ಅನುಭವ ಜನ್ಯ ಮಾತು. ನಮ್ಮ ಹಿರಿಯರು ಇದನ್ನು ಪಾಲಿಸುತ್ತ ಬಂದಿದ್ದರಿಂದಲೇ ಅವಿಭಕ್ತ ಕುಟುಂಬಗಳು ನೆಮ್ಮದಿಯಲ್ಲಿ ತೇಲುತ್ತಿದ್ದವು. ಸುಖ ದುಖ ಎಲ್ಲವೂ ಒಟ್ಟೋಟ್ಟಿಗೆ ಇರುತ್ತಿದ್ದವು. ಸುಲಭವಾಗಿ ಎಲ್ಲ ಕಷ್ಟಗಳು ಕರಗಿ ಹೋಗುತ್ತಿದ್ದವು. ಮನೆ ನಂದನವನಾಗಿರುತ್ತಿತ್ತು.

ವಿದ್ಯಾರ್ಥಿ ಜೀವನ ಅಥವಾ ಮದುವೆ ಮುಂಚಿನ ಜೀವನವೇ ಬೇರೆ. ಮದುವೆಯಾದ ಮೇಲಿನ ಜೀವನವೇ ಬೇರೆ. ಇಲ್ಲಿ ಜವಾಬ್ದಾರಿ ಹೆಗಲೇರುತ್ತದೆ. ಕುಟುಂಬ ಸದಸ್ಯರ ಬೇಕು-ಬೇಡಗಳಿಗೆ ಸ್ಪಂದಿಸುವುದರ ಜತೆಗೆ ಅವರೊಡನೆ ಕಳೆಯುವ ಸುಮಧುರ ಕ್ಷಣಗಳು ಬದುಕನ್ನು ಸುಂದರವಾಗಿಸುತ್ತವೆ. ತನಗೂ ನೆಮ್ಮದಿ, ಅವಲಂಬಿತರಿಗೂ ಸಂತಸ. ಈ ತರಹದ ಆಚರಣೆ ಪದ್ಧತಿಗಳು ರೂಡಿಯಲ್ಲಿರಬೇಕು. ಅಂದಾಗ ಕುಟುಂಬದ ಮಹತ್ವದ ಅರಿವಾಗುತ್ತದೆ. ಹಿಂದೆಲ್ಲಾ ಒಂದೊಂದು ಮನೆಯಲ್ಲಿ ಹತ್ತಾರು ಕುಟುಂಬಗಳಿರುತ್ತಿದ್ದವು. ಉದ್ಯೋಗಕ್ಕೆ ಹೋಗುವವರು ಕಡಿಮೆ, ವ್ಯಾಪಾರ, ವಹಿವಾಟು ಇಲ್ಲವೇ ಕೃಷಿಯೇ ಉದ್ಯೋಗವಾಗಿತ್ತು. ಎಲ್ಲರೂ ಸಮನಾಗಿ ಒಂದೊಂದು ಕೆಲಸ ಹಂಚಿಕೊಂಡು ಮಾಡುತ್ತಿದ್ದರು. ಸಂಜೆ ಮನೆಯ ಕಟ್ಟೆಯೋ, ಜಗುಲಿ ಮೇಲೆಯೋ ಕುಳಿತು ಇಡೀ ದಿನದ ವಿದ್ಯಮಾನಗಳು, ಕೃಷಿಯ ಸಾಧ್ಯಾಸಾಧ್ಯತೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಹಬ್ಬ ಹರಿದಿನ, ಜಾತ್ರೆ ಬಂದಾಗ ಇಡೀ ಕುಟುಂಬವೇ ಸಮಗ್ರವಾಗಿ ಭಾಗಿಯಾಗುತ್ತಿತ್ತು.

ಹಿರಿಯರ ಅಮೃತಸಮಾನ ಅನುಭವದ ಮಾತುಗಳಿಗೆ ಅಲ್ಲಿ ಬೆಲೆ ಇರುತ್ತಿತ್ತು. ಎಲ್ಲರೂ ಸೇರಿ ಆಚರಿಸುವ ಪ್ರತಿ ಹಬ್ಬ, ಸಮಾರಂಭ ಇಡೀ ಕುಟುಂಬದ ನೆಮ್ಮದಿಯ ಪ್ರತೀಕವಾಗಿರುತ್ತಿತ್ತು. ಬದಲಾದ ಸನ್ನಿವೇಶ ಮತ್ತು ಕಾಲಘಟ್ಟಕ್ಕೆ ತಕ್ಕಂತೆ ಉದ್ಯೋಗ ಅರಸಿ ಯಾವಾಗ ಮನೆಯ ಸದಸ್ಯರು ಪರ ಊರಿಗೆ ಹೊರಡಲಾರಂಭಿಸಿದರೋ ಆಗಿನಿಂದ ಕುಟುಂಬಗಳು ವಿಭಕ್ತ ಆಗತೊಡಗಿದವು. ಉದ್ಯೋಗ ನಿಮಿತ್ತ ಅನ್ಯ ಊರುಗಳಲ್ಲಿ ವಾಸ ಶುರುವಾಯಿತು. ಇದು ಅನಿವಾರ್ಯವೂ ಹೌದು. ಆದರೆ ಹಿರಿಯರು ಹಾಕಿಕೊಟ್ಟ ಒಂದಾಗಿ ಬಾಳುವ ಪರಿಪಾಠ ಮರೆಯಾಗತೊಡಗಿತು. ವ್ಯಾವಹಾರಿಕವಾಗಿ ಮಾತನಾಡುವ ಹಂತಕ್ಕೆ ಕುಟುಂಬ ಸದಸ್ಯರ ಜೀವನಶೈಲಿ ಬಂದು ನಿಂತಿತು. ಇದು ಮನೆಯ ನೆಮ್ಮದಿಯನ್ನೇ ಕಸಿಯಲಾರಂಭಿಸಿತು. ಹೀಗೆ ನೆಮ್ಮದಿ ಕಳೆದುಕೊಂಡ ಕುಟುಂಬ ನನ್ನ ಆ ಒಂದು ಸಣ್ಣ ಸಲಹೆ ಕೇಳಿ ಮರಳಿ ಪಡೆದ ಸುಖ ಇಂದು ಅವರಿಗೆ ನೀಡಿದ ಸಂತಸದ ಬಗ್ಗೆ ನನಗೂ ಅಪಾರ ಖುಷಿಯಾಯಿತು. ಅದಕ್ಕೆ ಹೇಳೋದು ನಾನು, ನನ್ನವರು, ಕುಟುಂಬ ಸದಸ್ಯರು, ಮನೆಯ ಹಿರಿಯರೊಡನೆ ಕಳೆವ ಕ್ಷಣಗಳು ಬದುಕನ್ನು ಅವಿಸ್ಮರಣೀಯವಾಗಿಸುತ್ತವೆ. ಅದರಿಂದಮನೆನಂದನವಾಗುತ್ತದೆ. ಸಂಸಾರ ಆನಂದಸಾಗರವಾಗಿ ಪರಿಣಮಿಸುತ್ತದೆ.

About Author: