COVID-19 Resources for Mental Health Coaches... Learn More

0836-2773878

“ಉಂಡ ನೆಲಕ್ಕೆ ದ್ರೋಹ ಬಗೆದರೆ ಮೆಚ್ಚನಾ ಪರಮಾತ್ಮನು!”

ಉಂಡ ನೆಲಕ್ಕೆ ದ್ರೋಹ ಬಗೆದರೆ ಮೆಚ್ಚನಾ ಪರಮಾತ್ಮನು! ಯಾವುದೇ ಒಂದು ದೇಶದ ಪ್ರಗತಿ ಮತ್ತು ಅಭ್ಯುದಯಕ್ಕೆ ಆಂತರಿಕ ಒಗ್ಗಟ್ಟು ಮತ್ತು ಸಮಗ್ರತೆ ಮುಖ್ಯ. ಇದರ ಕೊರತೆ ಎದು ರಾದಾಗ ಆಪತ್ತು ಎದುರಾಗುತ್ತದೆ. ಮತ್ತು ಇದು ಬಲು ಅಪಾಯಕಾರಿ ಕೂಡ. ಹೊರಗಿನ ಶತ್ರುಗಳಿಗಿಂತ ಮಗ್ಗುಲಲ್ಲೇ ಇರುವ ಶತ್ರುಗಳೇ ಹೆಚ್ಚು ಎಂದು ಹಲವರು ಹೇಳುವುದು ಈ ಕಾರಣದಿಂದಲೇ. ಯಾವುದೋ ದುರಾಸೆಯ ಬೆನ್ನತ್ತಿ ಉಂಡ ಮನೆ ಹಾಗೂ ನೆಲಜಲಕ್ಕೆ ದ್ರೋಹ ಬಗೆಯುವ ಇಂಥವರು ಕ್ಷಮೆಗೆ ಯೋಗ್ಯರಲ್ಲ. ಮೊನ್ನೆ ಯೂಟ್ಯೂಬರ್ ಒಬ್ಬಳು ನಮ್ಮ ದೇಶದ ಭದ್ರತಾ ಮತ್ತು ಅಂತರಿಕ ವಿಷಯಗಳನ್ನು ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಪೂರೈಸುತ್ತಿದ್ದಳು ಎನ್ನುವ ವಿಚಾರ ತಲೆ ತಗ್ಗಿಸುವಂಥದ್ದು. ಶಾಂತಿಪ್ರಿಯ ದೇಶ ಭಾರತದ ಮೇಲೆ ಹಲವರ ಕಣ್ಣಿದೆ. ಭಾರತ ಸಾಗುತ್ತಿರುವ ದಾರಿ ಹಲವರಿಗೆ ನಡುಕ ಹುಟ್ಟಿಸಿದೆ. ವಿಶ್ವದ 4ನೇ ಆರ್ಥಿಕ ಶಕ್ತಿಯಾಗಿರುವ ಭಾರತ ಇನ್ನು ಕೆಲವೇ ಕೆಲ ದಿನಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ ಎನ್ನುವ ಅಸೂಯೆ ಎಲ್ಲರಲ್ಲೂ ಮನೆ ಮಾಡಿದೆ. ಹೇಗಾದರೂ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎನ್ನುವ ಇರಾದೆ ಆ ದೇಶಗಳದ್ದು ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನದ್ದು. ಪಾಕಿಸ್ತಾನ ಪೋಷಿತ ಉಗ್ರರು ಮೊನ್ನೆ ಕಾಶ್ಮೀರಕ್ಕೆ ಹೋದ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ಮಳೆ ಸುರಿಸಿದ್ದನ್ನು ನಾವು ನೀವು ಇನ್ನೂ ಮರೆತಿಲ್ಲ. ಮರೆಯುವುದೂ ಇಲ್ಲ. ಇದಾದ ನಂತರ ನಮ್ಮ ದೇಶದಲ್ಲಿ ಕಂಡ ಒಂದು ಭಾರಿ ಬದಲಾವಣೆ ಎಂದರೆ ಅದು ಒಗ್ಗಟ್ಟು, ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ಇಡೀ ಭಾರತ ಒಂದಾಯಿತು. ಆ ಮೂಲಕ ಶತ್ರು ರಾಷ್ಟ್ರಕ್ಕೆ ಒಂದು ಸ್ಪಷ್ಟ ಸಂದೇಶ ಸಾರಿತು. ಅದೇನೆಂದರೆ ನಾವು ಶಾಂತಿಪ್ರಿಯರು. ಹಾಗಂತ ದಬ್ಬಾಳಿಕೆ, ದೌರ್ಜನ್ಯ ಮತ್ತು ಅಮಾಯಕರ ಮೇಲಿನ ಹಿಂಸೆ ಸಹಿಸುವುದಿಲ್ಲ ಎಂಬುದು. ಧರ್ಮದ ಕರ್ಮಠತನದ ಅಡಿಪಾಯದ ಮೇಲೆ ದೇಶ ಕಟ್ಟಲು ಹೊರಟ ಎಲ್ಲ ಕಡೆ ಇಂತಹ ಅನಾಹುತಗಳು ಖಚಿತ. ಇದಕ್ಕೆ ಪಾಪಿಸ್ತಾನವೇ ಉತ್ತಮ ನಿದರ್ಶನ. ಆದರೆ ಭಾರತ ಹಾಗಲ್ಲ, ಸಾವಿರಾರು ಜಾತಿ, ನೂರಾರು ಭಾಷೆ, ಜೀವ ವೈವಿಧ್ಯಮತ್ತು ಬಹುಸಂಸ್ಕೃತಿ ಇಲ್ಲಿನ ವಿಶೇಷತೆ. ಧರ್ಮ ನಮ್ಮಲ್ಲಿ ಆಚರಣೆಗೆ ಸೀಮಿತವಾಗಿದೆ ಹೊರತು ಆಕ್ರಮಣಕ್ಕಲ್ಲ. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಇಲ್ಲಿನ ಜನರಲ್ಲಿದೆ. ಪರೋಪಕಾರ ನಮ್ಮ ರಕ್ತದಲ್ಲಿದೆ. ಸೇವಾ ಮನೋಭಾವ ಎಲ್ಲರ ಭಾವನೆಯಾಗಿದೆ. ನಮ್ಮ ಪ್ರಧಾನಿ ಹೇಳಿದರು ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ ಎಂದು. ಅದನ್ನು ಮಾಡಿಯೂ ತೋರಿಸಿದರು. ನಮ್ಮ ಸೇನಾಪಡೆಯ ಪರಾಕ್ರಮಕ್ಕೆ ಪಾಕ್ ಪತರಗುಟ್ಟಿತು. ಇಂತಹ ಸಂದರ್ಭದಲ್ಲಿ ಭಾರತದ ನೆಲದಲ್ಲಿದ್ದು ಇಲ್ಲಿನ ಅನ್ನ ಉಂಡು ಗಾಳಿ ಸೇವಿಸಿ ಶತ್ರು ದೇಶಕ್ಕೆ ಇಲ್ಲಿನ ಗೌಪ್ಯ ಮಾಹಿತಿ ಹಂಚಿಕೊಳ್ಳುವವರ ಬಗ್ಗೆ ಏನಂತೀರಿ? ಇದಕ್ಕಿಂತ ಹೇಯ ಕೆಲಸ ಮತ್ತೊಂದಿಲ್ಲ. ಕೊಂದವರ ಸಿದ್ಧಾಂತವೇ ದೊಡ್ಡ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ರಣಕೇಕೆ ಕೂಗಿ ಮಾರಣಹೋಮ ಮಾಡಿದವರ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸದ ಸಂಗತಿ. ಇನ್ನು ಉಗ್ರರ ಇಂತಹ ದಾಳಿಗೆ ನಮ್ಮವರ ಪ್ರತ್ಯಕ್ಷ ಅಥವಾ ಪರೋಕ್ಷ ಬೆಂಬಲ ಇರುವುದೂ ಒಂದು ಕಾರಣ. ಜತೆಗಿದ್ದು ಬೆನ್ನಿಗೆ ಚೂರಿ ಹಾಕುವವರು ಇರುವವರೆಗೆ ಇಂತಹ ದಾಳಿ ತಪ್ಪಿದ್ದಲ್ಲ. ಉಪಕಾರ ಮಾಡಿದವರ, ದೇಶಕ್ಕಾಗಿ ಶ್ರಮಿಸುವವರ, ದೇಶದ ಎಳೆ ಬಯಸುವವರ ವಿರುದ್ಧ ಎಂಜಲು ಕಾಸಿಗೆ ಅಥವಾ ಜಾತಿಯ ವ್ಯಾಮೋಹಕ್ಕೆ ಬಿದ್ದು ದ್ರೋಹವೆಸಗುವವರು ನಮ್ಮ ಅಕ್ಕಪಕ್ಕದಲ್ಲಿಯೇ ಇದ್ದಿರುತ್ತಾರೆ. ದಿಲ್ಲಿಯ ಪೂರ್ವ ಜಿಲ್ಲೆಯಲ್ಲಿ ಅಕ್ರಮವಾಗಿ ವಾಸವಾಗಿದ್ದ ಬಾಂಗ್ಲಾ ಮೂಲದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವುದನ್ನು ನೋಡಿದರೆ ಇಲ್ಲಿಂದ ಪಾಕ್ ಗೆ ಮಾಹಿತಿ ರವಾನೆ ಇವರ ಕೆಲಸವಾಗಿತ್ತು. ಇಂತಹ ದ್ರೋಹಿಗಳೇ ನಮಗೆ ಇಲ್ಲಿಯವರೆಗೆ ಮುಳುವಾಗಿದ್ದು ಎಂಬುದು ಸ್ಪಷ್ಟ. 1990ರಲ್ಲಿ ನಡೆದ ಕಶ್ಮೀರಿ ಹಿಂದೂಗಳ ಮಾರಣ ಹೋಮವನ್ನು ಮರೆಯಲಾದೀತೇ? ಇಲ್ಲವೇ ಇಲ್ಲ. ಸ್ಥಳೀಯರ ಮಾತಿಗೆ ಬೆಲೆ ಕೊಡೋಣ ಅವರು ಸ್ವಾತಂತ್ರ್ಯ ಬೇಡುತ್ತಿದ್ದಾರೆ ಎಂದು ಸಮರ್ಥನೆಗೆ ಇಳಿಯುವವರಿಗೆ ಏನು ಹೇಳಬೇಕು, ನೀವೇ ಹೇಳಿ. ನೆಲ ಜಲ ಕಳೆದುಕೊಂಡು ವಲಸೆ ಹೋದ ಪಂಡಿತರ ಶಾಪ ತಟ್ಟದೇ ಇದ್ದೀತೇ? ಮತಾಂಧತೆಯ ಮೆರೆದಾಟ ನಡೆಸುತ್ತಿರುವ ಪಾಪಿಸ್ತಾನದ ರಕ್ತಪಿಪಾಸುಗಳಿಗೆ ಮೊನ್ನೆ ಮೊನ್ನೆವರೆಗೆ ನಮ್ಮ ದೇಶದವರಿಂದಲೇ ಬೆಂಬಲ, ಅನುಕಂಪ ಸಿಕ್ಕಿದ್ದು ಬಲು ದೊಡ್ಡ ದುರಂತ. ಇದೆಲ್ಲದರ ಮಧ್ಯೆ ನಮ್ಮ ಭಾರತೀಯರು ತೋರಿದ ಒಗ್ಗಟ್ಟು ಇಂದು ಪಾಕಿಸ್ತಾನವಷ್ಟೇ ಏಕೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತಮಾತೆಯ ಕುವರರ ಒಗ್ಗಟ್ಟಿನ ವಿರಾಟ ದರ್ಶನದಿಂದ ಮೆರಾ ಭಾರತ್ ಮಹಾನ್ ಎನ್ನುವುದು ದಿಟವಾಗಿದೆ. ಈ ಒಗ್ಗಟ್ಟು ಇದೆಯಲ್ಲಾ ಇದು ನಮ್ಮ ದೇಶದ ಹೆಗ್ಗಳಿಕೆ ಮತ್ತು ವಿಶೇಷತೆ.

About Author:

Leave Your Comments

Your email address will not be published. Required fields are marked *