COVID-19 Resources for Mental Health Coaches... Learn More

0836-2773878

ಮನೋರೋಗ ಕಳೆವ ಧನ್ವಂತರಿ ಡಾ. ಆನಂದ ಪಾಂಡುರಂಗಿ

ಇತ್ತೀಚಿಗೆ ನನ್ನ ಭೇಟಿಯಾದ ಅಭಿಮಾನಿ ಚನ್ನಬಸಪ್ಪ ಚೌಗುಲಾ ನನ್ನ ಕಾರ್ಯವೈಖರಿ ಗಮನಿಸಿ ಅದಕ್ಕೆ ಅಕ್ಷರರೂಪ ನೀಡಿ ಸಲ್ಲಿಸಿದ ಅಕ್ಷರ ನೈವೇದ್ಯದ ಲೇಖನ ಇಲ್ಲಿದೆ. ಎಲ್ಲವನ್ನೂ ಗಮನಿಸಿಕೊಂಡು ಊರಿಗೆ ಹೋದ ನಂತರ ಬರೆದು ಪ್ರಕಟವಾದ ಮೇಲೆಯೇ ಈ ಲೇಖನ ಬಗ್ಗೆ ನನಗೂ ಗೊತ್ತಾಗಿದ್ದು. ಆತನ ಅಭಿಮಾನ ಇನ್ನಷ್ಟು ಕೆಲಸ ಮಾಡುವ, ಜನಸೇವೆಯ ಹುಮ್ಮಸ್ಸು ತುಂಬಿದೆ.ಧನ್ಯವಾದಗಳು ಚೌಗುಲಾ ಅವರೇ…

ಮನೋರೋಗ ಕಳೆವ ಧನ್ವಂತರಿ ಡಾ. ಆನಂದ ಪಾಂಡುರಂಗಿ
ನಗರವಾಣಿ ರಾ ಅಂಕಣ
ಲೇಖಕರು: ಚನ್ನಬಸಪ್ಪ ಚೌಗಲಾ
ನಾನು ಧಾರವಾಡಕ್ಕೆ ಹೋಗಬೇಕಾಗಿ ಬಂತು. ಅಂದರೆ ಈ ಹಿಂದೇ ನಾನೆಂದೂ ಧಾರವಾಡಕ್ಕೆ ಹೋಗಿಲ್ಲ ಎಂದರ್ಥವಲ್ಲ, ಬದಲಾಗಿ ಒಬ್ಬ ವಿಶೇಷ ವ್ಯಕ್ತಿಯ ದರ್ಶನ ಮಾಡುವ ಅವಕಾಶ ದೊರೆಯಿತು.ಹಾಗಾಗೀ ಈ ಸಲ ಧಾರವಾಡಕ್ಕೆ ಹೋಗಿ ಬಂದುದರ ಕುರಿತಾಗಿ ಒಂದು ಅಪ್ಯಾಯಮಾನವಾದ ಪ್ರೀತಿ ಅಷ್ಟೆ, ಧಾರವಾಡ ಈ ಜಗಕ್ಕೆಲ್ಲ ಪ್ರಸಿದ್ಧ!. ಧಾರವಾಡದ ಹೆಸರು ಕೇಳದವರಾರು ಇಲ್ಲ.
ಅಂತಹ ಧಾರವಾಡ ಬೇರೆ ಬೇರೆ ಸಾಧನೆ.ಕೀರ್ತಿಗೂ ಪಾತ್ರವಾಗಿದೆ.
ಹಿಂದೊಂದು ಕಾಲವಿತ್ತು ಧಾರವಾಡ ಅಂದರೆ ಸಾಕು “ಮಂಟಲ್ ಹಾಸ್ಪಿಟಲ್” ನೆನಪಿಗೆ ಬರ್ತಿತ್ತು!. ಧಾರವಾಡ ಅಂದ್ರೇ ಪೇಡಾ-ಪೇಡಾ ಅಂದ್ರೆ ಧಾರವಾಡ ಅನ್ನುವಷ್ಟರ ಮಟ್ಟಿಗೆ ಹೆಸರಾದದ್ದು ಇದೇ ಧಾರವಾಡ.
ಈ ಧಾರವಾಡ ಬೇಂದ್ರೆಯವರನ್ನು ಮೊದಲು ಮಾಡಿಕೊಂಡು ಅನೇಕ ಸಾಹಿತ್ಯ ದಿಗ್ಗಜರನ್ನು ಕವಿ,ಕಲಾವಿದರನ್ನು, ಹೋರಾಟಗಾರರನ್ನು, ಚಿಂತಕರನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಪರಿಚಯಿಸಿದ ಧಾರವಾಡಕ್ಕೆ ಸಲ್ಲುತ್ತದೆ.ನಮ್ಮ ಧಾರವಾಡ ಸಾಂಸ್ಕೃತಿಕ ನಗರಿ. ಅದು ವಿದ್ಯಾಕಾಶಿಯೂ ಹೌದು ಸಸ್ಯಕಾಶಿಯೂ ಹೌದು. ಧಾರವಾಡದ ಬಗೆಗೆ ಬರೆಯುತ್ತ ಹೋದರೆ ಅದು ಮುಗಿಯದ ಕಥನ…! ಯಾಕೆಂದರೆ, ಧಾರವಾಡಕ್ಕೆ ಅದರದ್ದೇ ಆದ ಇತಿಹಾಸ,ಘನಪರಂಪರೆ ಇದೆ.
ನಾನು ಧಾರವಾಡಕ್ಕೆ ಹೋಗಿದ್ದರ ಕುರಿತಾಗಿ ತಮಗೀಗ ಹೇಳಬೇಕಿದೆ.
ಕೇವಲ ಧಾರವಾಡದ ಅಂದರೆ,ತಪ್ಪಾದೀತು! ಹಾಗಾಗಿ ಅವರನ್ನು ಕರ್ನಾಟಕದ ಪ್ರಸಿದ್ದ ಮನೋರೋಗ ತಜ್ಞರೆಂದೆ ಸಂಬೋದಿಸುವುದು ಸೂಕ್ತ. ಅಂತಹ ಮೇರು ವ್ಯಕ್ತಿತ್ವಕ್ಕೆ,ಸರಳ ಸಜ್ಜನಿಕೆಗೆ ಪಾತ್ರರಾದ ಡಾ॥ ಆನಂದ ಪಾಂಡುರಂಗಿ ಸಾಹೇಬರನ್ನು ಆಕಸ್ಮಿಕವಾಗಿ ಭೇಟಿಯಾಗುವ, ಅವರೊಂದಿಗೆ ನಾಲ್ಕು ತೊದಲು ಮಾತು ಹಂಚಿಕೊಳ್ಳುವ ಸುಯೋಗ ನನಗೊದಗಿ ಬಂತು. ಇದು ಕೇವಲ ಅವಕಾಶ ಎಂದು ನಾನು
ಭಾವಿಸಲಾರೆ. ಇದು ನನ್ನ ಪಾಲಿನ ಯೋಗಾಯೋಗ,ಸುದೈವವು ಹೌದು.
ಬೆಳ್ಳಂ ಬೆಳಿಗ್ಗೆ 9.30 ಸುಮಾರಿಗೆ “ಶಾಂತಿಧಾಮ” ದ ಎದುರು ನೂರಾರು ಜನ ಸಾಲುಗಟ್ಟಿ ನಿಂತ ದೃಶ ನನ್ನ ಕಣ್ಣೆದುರಿಗೆ ಬಿತ್ತು. ಅದು ನನಗೆ ಥೇಟ್ ದೇವರ ದರುಶನಕ್ಕೆ ಸಾಲುಗಟ್ಟಿ ನಿಂತ ಭಕ್ತ ಸಮೂಹದಂತೆಯೇ ಭಾಸವಾಯಿತು. ಆ ಆಸ್ಪತ್ರೆ ಹೆಸರಿಗೆ ತಕ್ಕಂತೆ ನಿಜಕ್ಕೂ ಶಾಂತಿಧಾಮ.ಅಲ್ಲಿ ಆನಂದವು ಇದೇ ಸಾಕ್ಷಾತ್ ಪಾಂಡುರಂಗ ನೆಲೆ ನಿಂತು ನೋವು,ದು:ಖ,ದುಮಾನ, ಹತಾಸೆ, ಕೋಪ-ತಾಪ ಎಂದು ಬಳಲಿ ಬಂದವರನ್ನು ಕರೆದು ಸಂತೈಸುತ್ತಿದ್ದಾನೆನೋ ಎನ್ನುವಂತೆ..
ಗೋಚರಿಸತೊಡಗಿತು!,
ಸಹಜ.ಸರಳ ಪ್ರಕೃತಿಯ ಮಡಿಲದು ಶಾಂತಿಧಾಮ.ನನಗ್ಯಾಕೋ ಅದು “ಆಸ್ಪತ್ರೆ” ಎನ್ನುವ ಭಾವ ಬರಲೇ ಇಲ್ಲ! ನಮಗ್ಯಾರೋ ಆತ್ಮೀಯರು, ನಾನವರ ಮನೆಗೆ ಬಂದಂತಹ ಅನುಭವ. ಅದು ಮನೆಯೋ ಅಥವಾ ಆಸ್ಪತ್ರೆಯೋ ಅನ್ನುವ ಅನುಮಾನ ಕಾಡಿದ್ದಂತು ಸತ್ಯ.
ನೆರೆದ ಜನಸ್ತೋಮದ ನಡುವೆ ದಾಟಿಕೊಂಡು ಹೋಗಿ ಶೃತಿ ಎಂಬ ಹೆಸರಿನ ಸಹೋದರಿಯೊಬ್ಬರನ್ನು ಡಾ. ಆನಂದ ಪಾಂಡುರಂಗಿ ಸಾಹೇಬರ ಇರುವಿಕೆಯ ಕುರಿತು ವಿಚಾರಿಸಿದೆ. ಜೊತೆಗೆ ಅಣ್ಣ ತಮ್ಮನ್ನು ಭೇಟಿಯಾಗಲು ಕಳುಹಿಸಿದ್ದಾನೆಂದು ತಿಳಿಸಿದೆ. ಬಹಳ ಸೌಜನ್ಯದಿಂದ ಸಾಹೇಬರು ಇದೀಗ ಬರತಾರೆ,ತಾವು ಒಳಗೆ ಬನ್ನಿ. ಕೂತ್ಕಳ್ಳಿ ಎಂದಾಗಲೂ ನನಗೆ ನಮ್ಮ ನೆಂಟರಿಷ್ಟರ ಮನೆಗೆ ಬಂದಿರುವೆನೆನ್ನುವ ಭಾವ. ಆದಾಗಲೇ ಸಾಹೇಬರ ವ್ಯಕ್ತಿತ್ವ, ಅವರ ಸರಳತೆ ಮತ್ತು ಸಹೃದಯತೆ ಅವರ ಸಿಬ್ಬಂದಿಯವರನ್ನು ಕಂಡಾಗಲೇ ನನಗೆ ಅರ್ಥವಾಗಿತ್ತು.
వపడి వునాకు మలింది ಮೆಟ್ಟಿಲಿಳಿದು ಕೆಳಗೆ ಬರುತ್ತಿದ್ದ. ಡಾ. ಆನಂದ ಪಾಂಡುರಂಗಿಯವರು, ಮನೋರೋಗಿಗಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದವರಿಗೆ ಸಾಕ್ಷಾತ್ ದೇವರಂತೆಯೆ ಕಾಣುತ್ತಿದ್ದರು.
ಸಾಹೇಬರು, ಮಂದಸ್ಮಿತ ನಗುವನ್ನು ಬೀರುತ್ತ ಎಲ್ಲರಿಗೂ ನಮಸ್ಕರಿಸುತ್ತ “ಬಾಗಿದ ತಲೆ ಮುಗಿದ ಕೈಯಾಗಿರಿಸು ಕೂಡಲ ಸಂಗಮದೇವ” ಅನ್ನುವ ಅಣ್ಣನ ವಾಣಿಯಂತೆ ಅವರನ್ನು ಕಾಣಲು ಬಂದವರಿಗೆ ಕೈ ಮುಗಿದುಕೊಂಡೆ
ಕೆಳಗಿಳಿಯುತ್ತಿದ್ದ ದೃಶ ನನ್ನ ಕಣ್ಣ ಕನ್ನಡಿಯಲ್ಲಿ ಎಂದಿಗೂ ಮಾಸಲಾರದು.
ನೆರೆದ ಎಲ್ಲರಿಗೂ ಕೈ ಮುಗಿದುಕೊಂಡೆ ತಾವು ಕೂಡುವ ಕೋಣೆಯೊಳಕ್ಕೆ ಹೋದರು. ಇತ್ತ ಅವರನ್ನು ಕಾಣಬಂದವರೆಲ್ಲರಿಗೂ ತವಕ. ಅವರತ್ತ ಚಿತ್ತ ನೆಟ್ಟಿದ್ದರು. ಸಹೋದರಿ ಶೃತಿಯವರು. ಇವರಾದ ನಂತರ ನೀವು ಭೇಟಿಯಾಗಿ ಎಂದು ಸಂಜ್ಞೆ ಮಾಡಿದರು. ಹೂಂ ಎಂದು ತಲೆಯಲ್ಲಾಡಿಸಿ ಸರಿದು ಕೂತೆ.
ಈಗ ನನ್ನ ಸರದಿ, ಖುಷಿಗೆ ಮಾತುಗಳಿಲ್ಲ! ಸವದತ್ತಿಗೆ ಅಣ್ಣನ ಮನೆಯ ಗೃಹ ಪ್ರವೇಶಕ್ಕೆ ಬಂದಾಗ ಭೇಟಿಯರಾಗಿ ಮಾತನಾಡಿದ ನೆನಪು ಭಾವನೆಗಳೆಲ್ಲ ಭಾರವಾಗಿ ನಾಲಿಗೆ ಮೌನವೃತ ಅನುಸರಿಸುವ ಹೊತ್ತಿಗೆ, ಅವರು ನನ್ನನ್ನು ಒಳಗೆ ಬರುವಂತೆ ತಿಳಿಸಿದರು.
ಬರ್ರಿ.. ಕೂಡರೀ.. ನೀವು..? ಹೌದು ಸರ್ ನಾನೇ.. ಅಣ್ಣ, ತಮಗೆ ಭೇಟಿ ಆಗ ಅಂತ ಹೇಳಿದ್ದಾನೆ ಅಂದೆ. ಓಹೋ ಹೌದಾ? ಈಗ ಪೋನ್ ಮಾಡಿದ್ರು, ನವಿಲುಗರಿ ಎಂದು ಮುಗುಲ್ನಗುತ್ತ ತಮ್ಮ ಕೈಯೊಳಗಿರುವ ಮೊಬೈಲ್ ಪೋನ ತೋರಿಸಿ. ಚನ್ನಬಸು ನೋಡ್ರಿಲ್ಲಿ ನಾನು “ನವಿಲುಗರಿ” ಅಂತಾನೇ ನಿಮ್ಮ ಅಣ್ಣನ ನಂಬರ ಸೇವ್ ಮಾಡ್ಕೊಂಡಿರುವೆ ಎಂದರು. ಅಣ್ಣನ ಒಡನಾಟ.ಅವನ ಕ್ರೀಯಾಶೀಲತೆ ಮತ್ತು ನಾನು ಭೇಟಿಯಾಗ ಬಂದ ಮುಖ್ಯ ಉದ್ದೇಶದ ಕುರಿತಂತೆ ಅರ್ಧಗಂಟೆ ಮಾತುಕತೆ ನಡೆಸಿದರು.ವೃತ್ತಿ – ಪ್ರವೃತ್ತಿಗೆ ಖುಷಿಯಿಂದ ಆಶೀರ್ವದಿಸಿದರು. ಸರ್ ತಾವೊಮ್ಮೆ ನಮ್ಮ ನೈಋತ್ಯ ರೇಲ್ವೆ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಯಮಾಡಿಸಬೇಕು ಎಂದಾಗ…ಓಹ್…ಎಸ್. ಖಂಡಿತ ಚನ್ನಬಸು
ಬರತೀನಿ ಎನ್ನುವ ಭರವಸೆಯ ಮಾತುಗಳನ್ನಾಡಿದರು.
ಬರೋವಾಗ “ನಾಗಸುಧೆ” ಮತ್ತು “ಮಕರಂದ” ಎರಡು ಕೃತಿಗಳನ್ನು ಅವರ ಕರಕಮಲದಲ್ಲಿಟ್ಟೆ. ಓಹೋ.. ನೀವು ಕವಿಗಳಾ? ಅಂದ್ರು… ಹಾಗೇನಿಲ್ಲ ಸರ್ ಸುಮ್ಮ ಹವ್ಯಾಸಕ್ಕೆ ಬರೀತಿನಿ ಅಂದಾಗ.. ಶ್ರೀಧರ ನೀವು ಇಬ್ರೂ ಪ್ರತಿಭಾವಂತರು ಖಂಡಿತ ಓದಿನಿ… ಎನ್ನುತ್ತಲೆ ಕೊಟ್ಟ ಎರಡು ಪುಸ್ತಕಗಳನ್ನು ಹಣೆಗೊತ್ತಿಕೊಂಡು ನಮಸ್ಕರಿಸಿ ತಮ್ಮ ಸಹಾಯಕಿಯನ್ನು ಕರೆದು ಕಪಾಟಿನಲ್ಲಿಡುವಂತೆ ತಿಳಿಸಿದಾಗ ನಾನು ಕೋಣೆಯಿಂದ ಹೊರನಡೆದೆ.
ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರು. ಎರಡು ದಿನದ ಹಿಂದೆಯೇ ನನಗೆ ಪೋನ್ ಮಾಡಿ, ಆರಾಮದಿರಾ ಡಾಕ್ಷೇ ಅಂತ ಕೇಳಿದ್ರು.ಅದಕ್ಕ ಅಪ್ಪವರ ನಿಮ್ಮ ಪುಸ್ತಕ್ಕಿಗೆ ಬೆನ್ನುಡಿ ಬರೆದಾರಲ್ಲ. ಭೇಷ ಎಂದು ಬೆನ್ನುತಟ್ಟಿದರು.ಹೋಗಿ ಬರ್ರಿ ದೇವರು ಒಳ್ಳೆದು ಮಾಡಲಿ… ನಿಮ್ಮ ಪುಸ್ತಕಾ ಓದಿನಪಾ ಅಂತ ಮತ್ತೆ ಮತ್ತೆ ಅವರ ಪುಸ್ತಕ ಪ್ರೀತಿಯನ್ನು ಅಭಿವ್ಯಕ್ತಗೊಳಿಸಿದರು. ನಿಮ್ಮ ಅಣ್ಣ ಶ್ರೀಧರ ಹೊಸಾ ಪುಸ್ತಕಾ ಮಾಡತಿದ್ದಾರಂತ, ನನಗೆ ನೀವೆ ಮುನ್ನುಡಿ ಬರಿಬೇಕಂತ ಪೋನ್ ಮಾಡಿ ಹೇಳಿದ್ದಾರೆಂದು ಹೇಳುತ್ತ “ನವಿಲುಗರಿ” ಪುಸ್ತಕ ಆದಷ್ಟು ಬೇಗ ಪ್ರಕಟಗೊಳ್ಳಲಿ ಎಂದು ಆಶೀರ್ವದಿಸಿ ಪ್ರೀತಿಯಿಂದಲೇ ಬಿಳ್ಕೊಟ್ಟರು.
ಪ್ರತಿ ದಿನ ನೂರಾರು ಜನ ಮನೋರೋಗಿಗಳು ಈ ವೈದ್ಯ ದೇವರನ್ನು ಕಾಣಲು ಬರುತ್ತಾರೆ. ಬಂದವರಿಗೆಲ್ಲರಿಗೂ ಅದೇ ಆಪ್ತ ಸಮಾಲೋಚನೆ ಮಾಡಿ,ಸೂಕ್ತ ಸಲಹೆ, ಮಾರ್ಗದರ್ಶನ ಮಾಡಿ ಮನದ ರೋಗ ಕಳೆವ ಧನ್ವಂತರಿಯಂತೆ ಸದ್ದುಗದ್ದಲವಿರದ ಸೇವೆಯಲ್ಲಿ ನಿರತರಾದ ಡಾ. ಆನಂದ ಪಾಂಡುರಂಗಿ ಸರ್ ಅವರೊಂದಿಗೆ ಕಳೆದ ಪ್ರತಿ ನಿಮಿಷಗಳು ನನಗೆ ಹೊಸ ಚೈತನ್ಯ ನೀಡಿದೆ. ಅವರ ದಿವ್ಯದೃಷ್ಟಿ, ಭವ್ಯವ್ಯಕ್ತಿತ್ವಕ್ಕೆ ಮಾರುಹೋದೆ. ಅವರು ಸರಳತೆ ಗೆ,ಸಹೃದಯತೆಗೆ, ಸೌಜನಕ್ಕೆ ನಿದರ್ಶನ. ಅವರ ಆಶೀರ್ವಾದ ಪಡೆದುಕೊಂಡ ನಾನು ನಿಜಕ್ಕೂ ಭಾಗ್ಯಶಾಲಿ. ‘ನಾ ಕೊಟ್ಟ ಪುಸ್ತಕಗಳೆರಡನ್ನು ಹಣೆಗೊತ್ತಿಕೊಂಡು, ನಮಸ್ಕರಿಸಿ ಪಡೆದುಕೊಂಡ ಆ ದೊಡ್ಡ ಗುಣ.ಘನವ್ಯಕ್ತಿತ್ವದಿಂದ ನಾವುಗಳೆಲ್ಲರು ಕಲಿಯುವುದು ಇನ್ನೂ ಬಹಳಿದೆ ಎನ್ನುವ ಅರಿವು ನನಗಾಯಿತು..!

About Author: