COVID-19 Resources for Mental Health Coaches... Learn More

0836-2773878

ಯುದ್ಧದ ಭೀಕರತೆ ಊಹೆಗೂ ಮೀರಿದ ಮಾನಸಿಕ ಯಾತನೆ.

ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಸಾವು-ನೋವು, ಹಿಂಸೆಯಿಂದಾಗುವ ನಷ್ಟ ಅಪಾರ. ಅದು ಮಾನಸಿಕವಾಗಿರಬಹುದು ಇಲ್ಲವೇ ಭೌತಿಕವಾಗಿರಬಹುದು. ಅದರ ಭೀಕರತೆ ಊಹೆಗೂ ಮೀರಿದ್ದರ ಬಗ್ಗೆ ಇಂದಿನ‌ ವಿಜಯವಾಣಿಯ ಹಲೋ ಡಾಕ್ಟರ್ ಅಂಕಣದಲ್ಲಿ ನನ್ನ ಲೇಖನ…..

ಯುದ್ಧದ ಭೀಕರತೆ ಊಹೆಗೂ ಮೀರಿದ ಮಾನಸಿಕ ಯಾತನೆ
ನಿನ್ನೆ ಬೆಳಗ್ಗೆ ನನ್ನ ಮೊಮ್ಮಗಳು ನನ್ನ ಹತ್ತಿರ ಬಂದು, ‘ಅಜ್ಜಾ ಯುದ್ಧ ಮುಗೀತಂತೆ ಹೌದಾ? ಇನ್ನು ಮಿಸೈಲ್, ಬಂದೂಕಿನ ಸದ್ದು ಕೇಳಿಸುವುದಿಲ್ಲವೇ? ಜನ ಸಾಯುವುದಿಲ್ಲವೇ? ಎಲ್ಲವೂ ಸರಿ ಹೋಯಿತಾ’ ಎಂದು ಕೇಳಿದಳು. ಆಕೆ ಇನ್ನೂ 3ನೇ ಕ್ಲಾಸ್. ಆದರೆ ಟಿವಿಯಲ್ಲಿ ಯುದ್ಧದ ಸುದ್ದಿ ಹಾಗೂ ದೃಶ್ಯಾವಳಿ ಆಕೆಗೆ ಅದರ ಭೀಕರತೆಯ ಅರಿವು ಮೂಡಿಸಿವೆ. ಮಕ್ಕಳು ಮರಿ ಸಾವನ್ನಪ್ಪಿದ ಸಂಗತಿ ಆಕೆಗೆ ತಿಳಿದಿದೆ. ಇದು ಆಗಬಾರದು. ಇದು ತಪ್ಪು ಎನ್ನುವ ತಿಳಿವಳಿಕೆ ಆಕೆಯಲ್ಲಿದೆ. ಹೌದು ಪುಟ್ಟಾ ಎಂದು ನಾನು ಹೇಳಿದೊಡನೆ ಆಕೆಯ ಕಂಗಳಲ್ಲಿ ಏನೋ ಒಂದು ಸಮಾಧಾನ, ನೆಮ್ಮದಿಯ ನಿಟ್ಟುಸಿರು. ಯುದ್ಧ ನಡೆದದ್ದು ನಮ್ಮಲ್ಲಲ್ಲ. ಆದರೆ ಆ ಹಿಂಸೆ ಆಕೆಗೆ ಇಷ್ಟವಿರಲಿಲ್ಲ. ಅಯ್ಯೋ ಪಾಪ ಎನ್ನುವ ಕಳಕಳಿ ಆಕೆಯಲ್ಲಿ ನಾ ಕಂಡೆ. ಇದು ಕೂಡ ಯುದ್ಧದ ಮಾನಸಿಕ ಪರಿಣಾಮವೇ. ಅದರ ಪರಿಕಲ್ಪನೆ ಇಲ್ಲದ ಆ ಮಗುವಿಗೇ ಸಾವು ನೋವಿನ ಕರಾಳತೆ ಅರ್ಥವಾಗಬೇಕಾದರೆ ಇನ್ನು ಯುದ್ಧದಲ್ಲಿ ಸಂತ್ರಸ್ತರ ಮಾನಸಿಕ ಸ್ಥಿತಿ ನಾವು ಊಹಿಸಬಹುದಾಗಿದೆ.
ಅಮೆರಿಕ ಮತ್ತು ಇರಾನ್ ಮಧ್ಯದ ಯುದ್ಧ ಸದ್ಯಕ್ಕೆ ಮುಗಿದಿದೆ. ಅಪಾರ ಸಾವು ನೋವಿಗೆ ಸಾಕ್ಷಿಯಾದ ಈ ಯುದ್ಧ ಮಾಡಿದ ನಷ್ಟ ನೆನೆದರೆ ತುಂಬಾ ಕಷ್ಟ, ಯುದ್ಧವು ಮಾನವ ಮನಸ್ಸಿನ ಮೇಲೆ ವಿನಾಶಕಾರಿ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಇದು ಸೈನಿಕರು ಹಾಗೂ ನಾಗರಿಕರನ್ನು ತೀವ್ರ ಆಘಾತಕ್ಕೆ ಗುರಿ ಮಾಡುತ್ತದೆ. ಇದು ಕೇವಲ ಯುದ್ಧಭೂಮಿಗೆ ಸೀಮಿತವಾಗಿರದೆ,
ವ್ಯಕ್ತಿಗಳ ದೈನಂದಿನ ಜೀವನ ಮತ್ತು ಭಾವನಾತ್ಮಕ ಸ್ಥಿತಿಯನ್ನು ತೀವ್ರವಾಗಿ ಹದಗೆಡಿಸುತ್ತದೆ. ಅದರಲ್ಲೂ ವಿಶೇಷವಾಗಿ ಏನೂ ಅರಿಯದ ಕಂದಮ್ಮಗಳು, ಜೀವನದ ಸಂಧ್ಯಾ ಕಾಲದಲ್ಲಿರುವ ಹಿರಿಯ ಜೀವಿಗಳು ಯುದ್ಧದ ಸದ್ದಿಗೆ ಬೆಚ್ಚಿ ಬೀಳುತ್ತಾರೆ. ಅದರ ಭೀಕರತೆ, ಹಿಂಸಾಚಾರ ಮತ್ತು ಪ್ರೀತಿಪಾತ್ರರ ಸಾವುಗಳು ಮನಸ್ಸಿನಲ್ಲಿ ಅಳಿಸಲಾಗದ ಗುರುತುಗಳನ್ನು ಬಿಡುತ್ತವೆ. ಇದು ಯುದ್ಧದ ನಂತರವೂ ಭಯ, ನಿದ್ರಾಹೀನತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ನಿರಂತರ ಭಯ ಮತ್ತು ಅನಿಶ್ಚಿತತೆಯ ವಾತಾವರಣವು ಜನರಲ್ಲಿ ತೀವ್ರ ಖಿನ್ನತೆಗೆ ಕಾರಣವಾಗುತ್ತದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇಂತಹ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಾರೆ. ಬಲವಂತವಾಗಿ ತಮ್ಮ.
ಮನೆಗಳನ್ನು ತೊರೆದು ನಿರಾಶ್ರಿತರಾಗುವ ಜನರು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಪರದಾಡುತ್ತಾರೆ ಮತ್ತು ಇದು ಮಾನಸಿಕ ಅಸ್ವಸ್ಥತೆಗಳನ್ನು ಹೆಚ್ಚಿಸುತ್ತದೆ.
“ಯುದ್ಧ ಮತ್ತು ಅದರ ಪರಿಣಾಮಗಳು ದೈಹಿಕ ಗಾಯಗಳು ಮತ್ತು ಸಾವು, ಭೌತಿಕ ಮತ್ತು ಆರ್ಥಿಕ ಸಂಕಷ್ಟ, ಆಳವಾದ ಮಾನಸಿಕ ಯಾತನೆ, ಘನತೆ ಮತ್ತು ಸ್ವಾತಂತ್ರ್ಯದ ನಷ್ಟ ಮತ್ತು ಮಾನವ ಹಕ್ಕುಗಳ ಇತರ ಉಲ್ಲಂಘನೆಗಳ ವಿಷಯದಲ್ಲಿ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ ಎಂದು ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ 2022ರಲ್ಲೇ ತನ್ನ ವರದಿಯಲ್ಲಿ ಹೇಳಿದೆ.
ಸಂಘರ್ಷವು ಮಾನವನ ಮನಸ್ಸಿಗೆ ಏನು ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ವಿಷಯ ಸೈನಿಕರು
ಅಥವಾ ಬದುಕುಳಿದವರಿಗೆ ಮಾತ್ರ ಸಂಬಂಧಿಸಿಲ್ಲ. ಯುದ್ಧದ ಹಿಂಸಾಚಾರವನ್ನು ವಾಸದ ಕೋಣೆಗಳಿಗೆ ತರುವುದರಿಂದ, ಯುದ್ಧದ ಮಾನಸಿಕ ತೂಕದ ಭಾರ ಅಪಾರ. ಯುದ್ಧದ ಮಾನಸಿಕ ಪರಿಣಾಮಗಳಲ್ಲಿ ಭಿನ್ನತೆ ಮತ್ತು ದುಃಖ ಬಹುಶಃ ಹೆಚ್ಚು. ಯುದ್ಧದಿಂದ ಹಿಂದಿರುಗಿದ ಅನುಭವಿಗಳಿಂದ ಹಿಡಿದು ಆಕ್ರಮಣ ಅಥವಾ ಸಾಮೂಹಿಕ ಹಿಂಸಾಚಾರದಿಂದ ಬದುಕುಳಿದ ನಾಗರಿಕರವರೆಗೆ, ಸಂಘರ್ಷಗಳು, ಸಂಸ್ಕೃತಿಗಳು ಇನ್ನೂ ಹಸಿರಾಗಿರುತ್ತವೆ. ಸಂತ್ರಸ್ತೆಯರ ಮನದಲ್ಲಿ ಬಲವಾದ ಪರಿಣಾಮ ಬೀರುತ್ತದೆ. ಆಘಾತಕಾರಿ ಅನುಭವದ ತುಣುಕುಗಳು, ಫ್ಲ್ಯಾಷ್ ಬ್ಯಾಕ್ಗಳು, ದುಃಸ್ವಪ್ನಗಳು ಅಥವಾ ಹಠಾತ್ ಸಂವೇದನಾ ಪ್ರಚೋದಕಗಳ ಮೂಲಕ ವ್ಯಕ್ತಿಯನ್ನು ಹಿಂದಿನದಕ್ಕೆ ಕರೆದೊಯ್ದು ನಿದ್ರಾಹೀನತೆ, ಭಯ ಪಡುವುದು ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಭಾವನಾತ್ಮಕ ಜೀವಿಗಳಿದ್ದರಂತೂ ಅದರ ಪರಿಣಾಮವೇ ಬೇರೆ. ಇದೊಂದು ದೀರ್ಘಕಾಲೀನ ಸಮಸ್ಯೆಯಾಗಿ ಹೊರಹೊಮ್ಮುತ್ತದೆ. ಅದರಲ್ಲೂ ಮಕ್ಕಳಲ್ಲಿ ಬೆಳೆಯುತ್ತಿರುವ ಮಿದುಳು ದೀರ್ಘಕಾಲದ ಒತ್ತಡ ಸೃಷ್ಟಿಸುತ್ತದೆ. ಈ ವೇಳೆ ಸಮಾಜದ ನೈತಿಕ ಬೆಂಬಲ ಅಗತ್ಯ. ಯುದ್ಧದಲ್ಲಿ ಗೆದ್ದಿದ್ದು ಯಾರು? ಯಾರೊಬ್ಬರೂ ಇಲ್ಲ. ಗೆದ್ದು ಬೀಗಬೇಕಿದ್ದೂ ಯಾರೂ ಇಲ್ಲ. ಆದರೆ ಆದ ಅಪಾಯಕಾರಿ ಆಘಾತ ಅಪಾರ. ಯಾರದೋ ಸ್ವಪ್ರತಿಷ್ಠೆ, ದ್ವೇಷ, ದುರಾಸೆಗೆ ನಡೆದ ಈ ಯುದ್ಧ ಭೌತಿಕ ನಷ್ಟಕ್ಕಿಂತ ನೀಡಿದ ಮಾನಸಿಕ ಕಷ್ಟ ಅಪಾರ.

About Author: