COVID-19 Resources for Mental Health Coaches... Learn More

0836-2773878

“ಇರಲಿ ಹೊಸ ಆಲೋಚನೆ ಆಗ ಸುಲಭವಾಗಲಿ ಸಾಧನೆ”

ಏಪ್ರಿಲ್ ಮೇ, ಜೂನ್ ಈ ಮೂರು ತಿಂಗಳು ಬಂತೆಂದರೆ ಸಾಕು ವಿದ್ಯಾರ್ಥಿಗಳು ಮತ್ತು ಪಾಲಕರ ಪಾಲಿಗೆ ಅದೊಂದು ಥರಾ ಬ್ಯುಸಿ ಶೆಡ್ಯೂಲ್. ಮೊದಲು ಪರೀಕ್ಷೆ, ನಂತರ ಫಲಿತಾಂಶ ಆದಾದ ಮೇಲೆ ಮುಂದೇನು? ಎಂಬ ಆಯ್ಕೆಯ ಸವಾಲು. ಇಷ್ಟು ಮಾಡಿ ಮಗಿಸುವುದರಲ್ಲಿ ಎಲ್ಲರಿಗೂ ಒಂದು ತರಹದ ಮಾನಸಿಕ ತೊಳಲಾಟ, ಆಯ್ಕೆಯ ಗೊಂದಲ ಮನೆ ಮಾಡಿರುತ್ತದೆ. ಇದಕ್ಕೆ ಯಾರೊಬ್ಬರೂ ಹೊರತಾಗಿಲ್ಲ.
ಎಸ್ಎಸ್‌ಎಲ್‌ಸಿ, ಪಿಯುಸಿ ಮತ್ತು ಮುಂದಿನ ಹಂತ ಜೀವನದ ಪ್ರಮುಖ ಘಟ್ಟ ಭವಿಷ್ಯ ರೂಪಿಸುವ ಮತ್ತು ನಿರ್ಧರಿಸಬಲ್ಲ ನಿರ್ಣಾಯಕ ಘಟ್ಟವೇ ಸರಿ. ಈ ವೇಳೆ ವಿದ್ಯಾರ್ಥಿ ಹಾಗೂ ಪಾಲಕರಿಗೆ ಸ್ಪಷ್ಟ ಗುರಿ ಇರಲೇಬೇಕು. ಅದರನ್ವಯ ಯತ್ನಗಳು ಸಾಗಬೇಕು. ನಿರಂತರ ಪರಿಶ್ರಮವೂ ಬೇಕು. ಒಂದು ವೇಳೆ ಅಂದುಕೊಂಡಂತೆ ಆಗದಿದ್ದರೆ ನಿರಾಸೆ ಆಗಬಾರದು. ಜಗತ್ತು ವಿಶಾಲವಾಗಿದೆ. ಆಯ್ಕೆಗಳು ಹಲವಿವೆ. ಹೊಸ ಹೊಸ ” ವೃತ್ತಿಪರ ಕೋರ್ಸಗಳು ಬಂದಿವೆ. ನಮ್ಮ ಅಗತ್ಯ ಹಾಗೂ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳ ಆಯ್ಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಆದರೆ ಇಂದಿನ ಕೆಲವರು ಈ ಘಟ್ಟದಲ್ಲಿ ಎಡವುತ್ತಿದ್ದಾರೆ. ಈ ಹಿಂದಿನಿಂದ ನಡೆದು ಬಂದಂತೆ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೊಸ ವಿಚಾರವನ್ನೇ ಮಾಡುವುದಿಲ್ಲ. ಹೊಸತನದ ಬಗ್ಗೆ ತುಡಿತವೇ ಇಲ್ಲ. ಇದು ತಪ್ಪು ಎಂದಲ್ಲ. ಆದರೆ ಯಾವಾಗಲೂ ಹೊಸದರ
ಬಗ್ಗೆ ಕುತೂಹಲ ಇರಬೇಕು. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ತಯಾರಾಗಿರಬೇಕು, ರಿಸ್ಕ್ ತಗೊಂಡರೆ ಹೊಸ ಸಾಧನೆ ಮತ್ತು ಯಶಸ್ಸು ಸಾಧ್ಯ. ವ್ಯಕ್ತಿ ಭಿನ್ನವಾಗಿ ಬೆಳೆಯಬೇಕೆಂದರೆ ಜೀವನದಲ್ಲಿ ಇಂತಹ ಭಿನ್ನ ನಿರ್ಧಾರಗಳು ಅತ್ಯಗತ್ಯ.
ನನ್ನ ಸಂಬಂಧಿಯೊಬ್ಬರ ಪ್ರಕರಣವನ್ನೇ ತೆಗೆದುಕೊಳ್ಳೋಣ. ಆಕೆ ಪಿಯುಸಿ ವಿದ್ಯಾರ್ಥಿನಿ, ನಿರೀಕ್ಷಿತ ಫಲಿತಾಂಶ ಪಡೆಯಲು ಆಗಲಿಲ್ಲ. ಇದು ಮನೆ ಮಂದಿಯ ಚಿಂತೆ ಮತ್ತು ಆತಂಕ ಎರಡನ್ನೂ ಹೆಚ್ಚಿಸಿತ್ತು. ಅವಳ ಪಾಲಕರಿಗೆ ಮಗಳ ಭವಿಷ್ಯವೇನು? ಎಂಬ ಆತಂಕ ಎದುರಾಗಿತ್ತು. ಆಕೆಯ ಸ್ನೇಹಿತೆಯರು ಬೇರೆ ಬೇರೆ ಕೋರ್ಸ್ ಸೇರುವವರಿದ್ದರು. ಈಕೆಗೂ ಅದೇ ಆಸೆ. ಆದರೆ ಕಳಪೆ ಫಲಿತಾಂಶ ಎಲ್ಲದಕ್ಕೂ ಅಡ್ಡಿಯಾಗಿತ್ತು. ಕೊನೆಗೆ ಒಂದು ವರ್ಷ ಡ್ರಾಪ್ ಮಾಡಿ ಮತ್ತೆ ಓದುವ ನಿರ್ಧಾರಕ್ಕೆ
ಬಂದಿದ್ದಳು. ಈ ವಿಷಯ ತಿಳಿದದ್ದೇ ತಡ ನಾನು ಮಧ್ಯ ಪ್ರವೇಶಿಸಿ ಹೊಸ ಕೋರ್ಸ್‌ಗಳ ಬಗ್ಗೆ ಗಮನಸೆಳೆದೆ. ಅವಳನ್ನು ತೂರಿಸಿಕೊಂಡು ತಿಳಿಹೇಳಿದೆ. ಭಿನ್ನ ಆಲೋಚನೆ ಮಾಡು. ಹೊಸತನವನ್ನು ಆಯ್ಕೆ ಮಾಡಿಕೊ, ಸ್ನೇಹಿತರ ಜತೆ ಹೋಲಿಕೆ ಬೇಡ. ಉತ್ಸಾಹ ಕಳೆದುಕೊಳ್ಳಬೇಡ, ನಿನ್ನ ಆಯ್ಕೆಯ ಬಗ್ಗೆ ನಿನಗೆ ಹೆಮ್ಮೆ ಇರಲಿ. ಕೀಳರಿಮೆ ಬೇಡ ಎಂದು ಹೇಳದೆ. ಇದಕ್ಕೆ ಆಕೆಯ ಪಾಲಕರೂ ಸಾಕ್ಷಿಯಾದರು. ಒಂದು ವರ್ಷ ಕಳೆದುಕೊಳ್ಳುವುದು ಇದೆಯಲ್ಲ, ಅದು ಅಷ್ಟು ಸಲೀಸಲ್ಲ. ಮತ್ತೆ ಅಂದುಕೊಂಡದ್ದು ಆಗದೇ ಹೋದರೆ ಖಿನ್ನತೆ, ಬೇಸರ ಆವರಿಸಿ ಜೀವನೋತ್ಸಾಹವೇ ಕಳೆದುಹೋಗುವ ಸಾಧ್ಯತೆ ದಟ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಓದುವ ಗೋಜಿಗೆ ಹೋಗಬೇಡ
ಎಂದು ಹೇಳಿದೆ. ಅದು ಆಕೆ ಮತ್ತು ಆಕೆಯ ಪಾಲಕರಿಗೂ ಮನವರಿಕೆ ಆಯಿತು. ಅದರಂತೆ ಆಕೆ ಹೊಸ ಕೋರ್ಸ್ ಗೆ ಪ್ರವೇಶ ಪಡೆದಳು. ಎಲ್ಲರ ಮನಸ್ಸು ನಿರಾಳವಾಯಿತು.
ಈ ಪ್ರಕರಣದ ಮೂಲಕ ನಾನು ಹೇಳ ಬಯಸುವುದು ಇಷ್ಟೇ. ಲವಲವಿಕೆ ಎಲ್ಲದಕ್ಕೂ ಮುಖ್ಯ ಹಿನ್ನಡೆ ಆದ ತಕ್ಷಣ ಉತ್ಸಾಹ ಕಳೆದುಕೊಳ್ಳುವುದು ಬೇಡ. ಮಾನಸಿಕವಾಗಿ ಸಬಲರಾಗಬೇಕು. ಅಂದಾಗ ನದೃಢತೆ ಬರುತ್ತದೆ. ಇದಿಲ್ಲ ಇನ್ನೊಂದು ಎನ್ನುವ ಇರಾದೆ ಇದ್ದಲ್ಲಿ ಸಾಧನೆ ಸಾಧ್ಯ. ನಮ್ಮ ಮಧ್ಯೆ ಅನೇಕ ಸಾಧಕರಿದ್ದಾರೆ. ಅವರು ಸಾಗಿ ಬಂದ ಪಯಣದತ್ತ ಒಂದೊಮ್ಮೆ ಕಣ್ಣು ಹಾಯಿಸಿದರೆ ನಮಗೆ ಬದುಕಿನ ಸ್ಪಷ್ಟತೆ ಬಗ್ಗೆ ಅರಿವು ಮೂಡುತ್ತದೆ. ಇಲ್ಲದಿದ್ದರೆ ಮನಸ್ಸು ಗೊಂದಲಕ್ಕೆ ಸಿಲುಕುತ್ತದೆ. ಇದು ಎಲ್ಲ ಶಾಲಾ ಕಾಲೇಜುಗಳಲ್ಲಿ ಸಹಜ. ಇದು ಆಗದಂತೆ ಮತ್ತು ಇದರ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಕೂಡ ಮುಂದಾಗಿದೆ. ವಿದ್ಯಾರ್ಥಿಗಳ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ಕಲ್ಯಾಣ ನೀತಿಯ ಕರಡು ಪ್ರತಿಯನ್ನು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರು ಪ್ರಕಟಿಸುವವರಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ದಿಟ್ಟ ಕ್ರಮಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯಲು ಪೂರಕವಾಗುವಂತಹ ಸುರಕ್ಷಿತ ಮತ್ತು ಪ್ರೋತ್ಸಾಹದಾಯಕ ಕಲಿಕಾ ಪರಿಸರವನ್ನು ನಿರ್ಮಿಸುವ ಕುರಿತು ಮಹತ್ವದ ಕ್ರಮಕ್ಕೆ ಯೋಜನೆ ರೂಪಿಸಲು ಹೊರಟಿರುವುದು ವಿಶೇಷ.

About Author: