COVID-19 Resources for Mental Health Coaches... Learn More

0836-2773878

ಜೀವನ ಅಮೂಲ್ಯ, ಪರಾಮರ್ಶಿಸಿ ಹೆಜ್ಜೆ ಇಟ್ಟರೆ ಗೆಲುವು ನಿಮ್ಮದೇ.

ನಾನು ಓದಿದರೆ ಐಐಟಿನೇ ಓದುವವ. ಬೇರೇನೂ ಬೇಡ. ಆದರೆ ನನಗೆ ಅದು ಕಷ್ಟ ಸಾಧ್ಯ. ಏನು ಮಾಡೋದು. ಜೆಇಇ ಎಲ್ಲ ಟೈ ಮಾಡಿದೆ. ಆದರೆ ಯಾವುದೂ ಆಗಲಿಲ್ಲ. ಎರಡು ವರ್ಷ ಹೀಗೆ ಉರುಳಿ ಹೋದವು. ಇನ್ನೇನು ಮಾಡೋದು? ಊರು ತೊರೆಯುವುದೇ ಸೂಕ್ತ. ನನಗೇನೂ ತೋಚದು. ಹೊರಟಿದ್ದೇ ದಾರಿ…

  • ಇದು ಮೊನ್ನೆಮೊನ್ನೆಯಷ್ಟೇ ನನ್ನ ಬಳಿ ಬಂದಿದ್ದ ಯುವಕನ ಗೊಂದಲಭರಿತ ಮಾತುಗಳಿವು.
    ಆತ ಜಾಣನೇ. ಆದರೆ ಗುರಿ ಸ್ಪಷ್ಟತೆ ಇರಲಿಲ್ಲ. ತನಗೆ ಯಾವುದು ಆಗುತ್ತದೆ. ತನ್ನ ಸಾಮರ್ಥ್ಯವೇನು? ಎಂಬುದರ ಅರಿವು ಮತ್ತು ಅದರ ಮಹತ್ವ ತಿಳಿದಿರಬೇಕು. ಎಲ್ಲರೂ ಏನೋ ಓದುತ್ತಾರೆ ಎಂದು ತಾನೂ ಅದನ್ನೇ ಓದಲು ಹೋಗಬಾರದು. ಭವಿಷ್ಯದಲ್ಲಿ ನಾನೇನಾಗಬೇಕು. ನನ್ನ ಇತಿಮಿತಿಗಳೇನು? ಎಲ್ಲದರ ಸ್ಪಷ್ಟತೆ ಅತ್ಯಗತ್ಯ. ಕೈಲಾಗದ್ದು ಕೈಗೆತ್ತಿಕೊಂಡರೆ ಎಲ್ಲವೂ ವ್ಯರ್ಥ. ಈಗ ಈ ಯುವಕನ ವಿಚಾರದಲ್ಲಿ ಆದ ಎಡವಟ್ಟು ಕೂಡ ಅದುವೇ. ತನ್ನ ಸಹಪಾಠಿಗಳೆಲ್ಲರೂ ಸೈನ್ಸ್ ತೆಗೆದುಕೊಂಡರು ಎಂದು ಈತನೂ ಸೈನ್ಸ್ ಓದಿದ. ಪಿಯುಸಿಯಲ್ಲಿ ಶೇ.70 ರಷ್ಟು ಫಲಿತಾಂಶ ಬಂದಿತು. ಜೆಇಇ ಬರೆದ. ಅದಕ್ಕೋಸ್ಕರ ಎರಡು ವರ್ಷ ಯತ್ನಿಸಿದ. ಕೊನೆಗೆ ಅದು ಕೂಡ ಕೈಗೂಡಲಿಲ್ಲ. ಹತಾಶೆ ಅವರಿಸಿತು. ಜತೆಗೆ ಖಿನ್ನತೆಯೂ. ದಿಕ್ಕು ತೋಚದಂತಾದ ಮನೆಯಲ್ಲಿ ಪಾಲಕರು ಬೇಸತ್ತರು. ನೀನು ಏನು ಮಾಡಬೇಕು ಎಂದುಕೊಂಡಿದ್ದೀಯಾ ಅದನ್ನಾದರೂ ಹೇಳು. ಗೊತ್ತುಗುರಿ ಇಲ್ಲದೇ ಈ ತರಹ ದಿನದೂಡಿದರೆ ಹೇಗೆ? ಎಂದು ಅವರು ಕೂಡ ಬೈಯ್ಯತೊಡಗಿದರು. ಇದರಿಂದ ಅವನಿಗೆ ಒಂದು ತರಹ ಕಸಿವಿಸಿ ಆಯಿತು. ಏನು ಉತ್ತರ ಕೊಡುವುದು ಎಂಬ ಚಿಂತೆಯ ಜತೆ ಮುಂದೇನು? ಎಂಬ ಪ್ರಶ್ನೆಯೂ ಉದ್ಭವಿಸಿತು. ಅಂದುಕೊಂಡ ಶಿಕ್ಷಣ ಆಗುತ್ತಿಲ್ಲ. ಆಯ್ಕೆಯಲ್ಲಿ ಎಡವಿದ್ದರ ಅರಿವು ಈಗ ಆಗಿದೆ. ಕೊನೆಗೆ ಬೇಸತ್ತು ಮನೆ ತೊರೆಯಲು ಮುಂದಾದ. ಒಂದು ದಿನ
    ಹೊರಟೇ ಬಿಟ್ಟ. ಎಲ್ಲಿಗೆ ಏನು? ಯಾವುದೂ ಗೊತ್ತಿಲ್ಲ. ಆಗ ಯಾರೋ ಪರಿಚಯಸ್ಥರು ಇವನನ್ನು ನೋಡಿ ಮನೆಯವರಿಗೆ ವಿಷಯ ತಿಳಿಸಿದರು. ಅಮೇಲೆ ಕೂಡಲೇ ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬಂದರು. ಈ ವೇಳೆ ಆತ ಏನಾದರೂ ತಪ್ಪಿಸಿಕೊಂಡಿದ್ದರೆ ಏನಾಗುತ್ತಿತ್ತೋ ದೇವರೇ ພ໘. ಒಂದು ಕ್ಷಣದ ದುಡುಕಿನ ನಿರ್ಧಾರ ಇಡೀ ಬದುಕನ್ನೇ ನುಂಗಿದರೂ ಅಶ್ಚರ್ಯವಿರಲಿಲ್ಲ.
    ಇದು ಒಂದು ಉದಾಹರಣೆಯಷ್ಟೇ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಯುವಸಮುದಾಯಕ್ಕೆ ವಿದ್ಯಾರ್ಥಿಗಳಿಗೆ ನಾನು ಹೇಳಲು ಬಯಸುವುದೇನು ಎಂದರೆ, ಬದುಕು ದೊಡ್ಡದಿದೆ. ಜಗತ್ತು ವಿಶಾಲವಾಗಿದೆ. ಸೋಲು ಅಂತಿಮವಲ್ಲ. ಗೆಲುವು ಶಾಶ್ವತವಲ್ಲ. ಸಾಧನೆಯ
    ಗುರಿ ಮತ್ತು ಛಲವೊಂದಿರಬೇಕು. ತಡವಾಗಬಹುದು ಆದರೆ ಯತ್ನಕ್ಕೆ ಪ್ರತಿಫಲ ಇದ್ದೇ ಇರುತ್ತದೆ. ಮೊದಲೇ ಯೋಚನೆ ಮಾಡಿರಬೇಕು. ಇಲ್ಲವೇ ದುಡುಕದೇ ತಾಳ್ಮೆಯಿಂದ ಹೆಜ್ಜೆ ಇಟ್ಟರೆ ಒಂದಲ್ಲ ಒಂದು ದಾರಿ ಸಿಕ್ಕೇ ಸಿಗುತ್ತದೆ. ಸತತ ಪರಿಶ್ರಮ ಮತ್ತು ಬೆವರಿಗೆ ಬೆಲೆ ಇದ್ದೇ ಇರುತ್ತದೆ. ನ್ಯಾಯಯುತ ಮಾರ್ಗ ಮತ್ತು ಸದುದ್ದೇಶದಿಂದ ಮಾಡುವ ಯಾವುದೇ ಕೆಲಸವಿರಲಿ ಹುಸಿಯೇ ಇಲ್ಲ. ಅದು ಪರೀಕ್ಷೆಯೇ ಇರಲಿ, ಬದುಕಿನ ವಿಷಯವೇ ಇರಲಿ. ಅಂದುಕೊಂಡದ್ದು ಆಗಲೇಬೇಕು ಎನ್ನುವ ಹಠವೇಕೆ? ಇದಾಗದಿದ್ದರೆ ಇನ್ನೊಂದು ಅಷ್ಟೇ. ಪಲಾಯನವಾದ ಹೇಡಿಗಳ ಕೆಲಸ. ಇರಬೇಕು. ಇದ್ದು ಜಯಿಸಬೇಕು. ಸೋಲೇ ಗೆಲುವಿನ ಸೋಪಾನ. ಇಲ್ಲದಿದ್ದರೆ ಬದುಕೇ ಅವಸಾನ. ಹಾಗಾಗದಂತೆ ಇರುವುದೇ ಸಮಾಧಾನ.
    ಕೊನೆಗೆ ಆ ಯುವಕನನ್ನು ಆತನ ಪಾಲಕರು ನನ್ನ ಬಳಿ ಕರೆದುಕೊಂಡು ಬಂದರು. ಆಗ ಆತ ತಾನು ಐಐಟಿ ಓದುವ ಉತ್ಕಟ ಇಚ್ಛೆ ಹೊಂದಿರುವುದಾಗಿ ತಿಳಿಸಿದ. ಯಾಕೆ ಎಂದೆ? ದೊಡ್ಡ ಸಂಬಳದ ನೌಕರಿ ಸಿಗುತ್ತದೆ ಎಂದು ಉತ್ತರಿಸಿದ. ಅಯಿತು ಅದಕ್ಕೆ ಎಷ್ಟು ಕಷ್ಟ ಪಡಬೇಕು ಎನ್ನುವದರ ಅರಿವಿದೆಯಾ? ಎಂದೆ. ಹೌದು ಸರ್, ತುಂಬಾ. ಅದು ನನ್ನಿಂದ ಆಗದು ಎಂದು ಕೂಡ ಹೇಳಿದ. ಹಾಗಿದ್ದರೆ ಅದನ್ನೇ ಮಾಡಬೇಕು ಎನ್ನುವ ಮೊಂಡುತನ ಏಕೆ? ಬದುಕಲು ನೂರೆಂಟು ದಾರಿಗಳಿವೆ. ನಮಗೆ ಎಟಕುವ ಕೋರ್ಸ್ ಮಾಡಿ ಅದರಲ್ಲೇ ಯಶಸ್ಸು ಕಾಣಬೇಕು. ಆರ್ಥಿಕ ಯಶಸ್ಸು ಗೆಲುವಿನ ಮಾನದಂಡವಲ್ಲ. ತೃಪ್ತಿಕರ ಜೀವನ ಮುಖ್ಯ ಎಂದು ತಿಳಿ ಹೇಳಿ ಬೇರೆ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಂಡು ಶ್ರದ್ಧೆಯಿಂದ ಓದಲು ಸೂಚಿಸಿದೆ. ಆಗ ಆತನಿಗೂ ಅದು ಸರಿ ಎನಿಸಿತು. ಆದದ್ದನ್ನೆಲ್ಲಾ ಮರೆತು ಭವಿಷ್ಯದ ಚಿಂತನೆಯೊಂದೇ ಮಾಡು ಎಂದು ಹೇಳಿದಾಗ ಒಪ್ಪಿ ಹೊರಟ. ಇದು ಎಲ್ಲರಿಗೂ ಅನ್ವಯವಾಗುವ ಸಂಗತಿ. ಬದುಕು ಅತ್ಯಮೂಲ್ಯ. ಯೋಚಿಸಿ, ಪರಾಮರ್ಶಿಸಿ ಹೆಜ್ಜೆ ಇಡಿ. ಗೆಲುವು ನಿಮ್ಮದೇ.

About Author: