COVID-19 Resources for Mental Health Coaches... Learn More
ಪಾಲಕರ ಅತಿಯಾದ ನಿರೀಕ್ಷೆ ಮಕ್ಕಳ ಬದುಕಿಗೆ ಶಿಕ್ಷೆ!

ಪಾಲಕರ ಅತಿಯಾದ ನಿರೀಕ್ಷೆ ಮಕ್ಕಳ ಬದುಕಿಗೆ ಶಿಕ್ಷೆ!
‘ಸರ್, ನನ್ನ ತಲೆಯಲ್ಲಿ ಇರೋದೇ ಬೇರೇರಿ. ನಾನು ಮಾಡಬೇಕು ಅಂಡ್ಕೊಂಡಿದ್ದೇ ಬೇರೆ. ಆದರೆ ನನ್ನ ಮಾತು ಕೇಳುವವರು ಯಾರೂ ಇಲ್ಲಿ. ಮನಸ್ಸಿಲ್ಲದಿದ್ದರೂ ಮುಂದುವರಿಯುವ ಅನಿವಾರ್ಯತೆ ನೋಡ್ರಿ. ನನಗೇನೂ ಆಗಿಲ್ಲ. ನನ್ನ ಮಾನಸಿಕ ಸ್ಥಿತಿ ಸರಿಯೇ ಇದೆ. ಆದರೆ ನನ್ನ ಪಾಲಕರು ಹೇಳಿದ್ದನ್ನು ಒಪ್ಪಲು ನನ್ನ ಮನಸ್ಸು ಅದೇಕೋ ಒಪ್ಪುತ್ತಿಲ್ಲ. ಇದು ಬಿಟ್ಟರೆ ನನಗೇನೂ ಆಗಿಲ್ಲ. ಈ ಕಾರಣಕ್ಕೆ ನಾನು ಗೊಂದಲದಲ್ಲಿ ಸಿಲುಕಿ ಸೋತು ಸುಣ್ಣವಾಗಿರುವೆ. ಮನಸ್ಸಿನಲ್ಲಿ ಮೌನ ಆವರಿಸಿದೆ.ಊಟ. ಉಪಾಹಾರ ಏನೂ ರುಚಿಸದು. ಭವಿಷ್ಯದ್ದೇ ಚಿಂತೆ. ಕನಿಷ್ಠ ಪಕ್ಷ ನನ್ನ ಭವಿಷ್ಯದ ಆಯ್ಕೆಯೂ ನನಗೆ ಬೇಡವೇ? ನೀವೇ ನನ್ನ ಪಾಲಕರಿಗೆ ತಿಳಿಸಿ ಹೇಳಿ ಸಾರ್…’
-ಇವು ಮೊನ್ನೆ ನನ್ನ ಬಳಿ ಪಾಲಕರೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಯ ನೋವಿನ ಮಾತು. ಆತ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ. ತನ್ನ ಸಾಧನೆ ಬಗ್ಗೆ ಆತನಿಗೆ ಹೆಮ್ಮೆಯೂ ಇದೆ.ಅದಕ್ಕೆ ತಕ್ಕಂತೆ ಆತನ ಆಲೋಚನೆ ಮತ್ತು ಯೋಚನೆ ಬೇರೆಯೇ ಇದೆ. ಆ ಯೋಜನೆ ಆತನ ಪಾಲಕರಿಗೆ ಹಿಡಿಸದು. ಅವರಿಗೆ ಮಗ ಡಾಕ್ಟರ್ ಆಗಬೇಕು ಎನ್ನುವ ಮಹದಾಸೆ. ಆದರೆ ಆತ ವಿಜ್ಞಾನಿಯಾಗುವ ಕನಸು ಕಂಡಿದ್ದಾನೆ. ಈ ವಿಷಯಕ್ಕೆ ಪಾಲಕರು ಮತ್ತು ಈತನ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ. ಕೊನೆಗೆ ಬೇಸತ್ತ ಮಗ ಪಾಲಕರಿಗೆ ಮರುಉತ್ತರಿಸಲಾಗದೇ
ಮೌನಕ್ಕೆ ಶರಣಾಗಿದ್ದಾನೆ. ಯಾರು ಮಾತನಾಡಿಸಿದರೂ ಮಾತು ಅಷ್ಟಕ್ಕಷ್ಟೇ, ಯಾರೊಂದಿಗೂ ಬೆರೆಯುತ್ತಿಲ್ಲ. ಹೆತ್ತವರ ಮಾತು ಮೀರಲಾಗದ ಕಾರಣ ಒಳಗೊಳಗೆ ನೊಂದುಕೊಂಡು ಒಂಟಿತನ ಅನುಭವಿಸುತ್ತಿದ್ದಾನೆ. ಈತನ ಈ ವರ್ತನೆ ನೋಡಿ ಚಿಂತೆಗೊಳಗಾದ ಪಾಲಕರು ಯಾರದೋ ಸಲಹೆ ಮೇರೆಗೆ ನನ್ನ ಬಳಿ ಕರೆದುಕೊಂಡು ಬಂದಿದ್ದರು.
ಈ ವಿದ್ಯಾರ್ಥಿಯ ಪ್ರಕರಣ ಒಂದು ಉದಾಹರಣೆಯಷ್ಟೇ. ಇಂತಹ ಅನೇಕ ಪ್ರಕರಣಗಳು ನಮ್ಮ ಮಧ್ಯೆ ನಡೆದಿರುತ್ತವೆ. ಆದರೆ ಬೆಳಕಿಗೆ ಬರುವುದು ಕೆಲವಷ್ಟೇ. ಇದು ತುಂಬಾ ತಲೆ ಕೆಡಿಸಿಕೊಳ್ಳುವ ವಿಷಯವಲ್ಲ ಎಂದು ಉಪೇಕ್ಷೆ ಮಾಡುವಂತಿಲ್ಲ. ಇದು ಹಲವರ ಭವಿಷ್ಯದ ಪ್ರಶ್ನೆ ಮಕ್ಕಳು ಅವರವರ ಆಸಕ್ತಿಗೆ ತಕ್ಕಂತೆ ಓದಲು ಅನುಕೂಲ ಮಾಡಿಕೊಡುವುದು ಉತ್ತಮ ಮತ್ತು ಸೂಕ್ತ. ಅದಕ್ಕಿಂತ ಮುಂಚೆ ನಾವು ಮೊದಲು ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಅರಿಯಬೇಕು. ಅವರ ಇತಿಮಿತಿಗಳ ಬಗ್ಗೆ ಮಾಹಿತಿ ಹೊಂದಿರಬೇಕು.ಎಲ್ಲವೂ ನಮ್ಮ ಮೂಗಿನ ನೇರಕ್ಕೆ ಅಥವಾ ನಾವು ಹೇಳಿದ ಹಾಗೆಯೇ ಆಗಬೇಕು ಎನ್ನುವ ಮನೋಭಾವ ನಡೆಯದು. ಅದರಲ್ಲೂ ಶಿಕ್ಷಣದ ವಿಚಾರದಲ್ಲಿ ಇದು ಸುತಾರಾಂ ಸಲ್ಲದು. ನಮ್ಮ ಕನಸುಗಳು ಸಾಕಾರವಾಗಬೇಕು ಎಂದುಕೊಂಡು ಅದರ ಭಾರವನ್ನು ಮಕ್ಕಳ ಮೇಲೆ ಹಾಕಿದಾಗ ಅದು
ನನಸಾಗದೇ ಹುಸಿಯಾಗುತ್ತದೆ. ಅತ್ತ ಮಕ್ಕಳಿಗೂ ಯಾತನೆ ಇತ್ತ ಹೆತ್ತವರಿಗೂ ನಿರಾಸೆ. ಈ ವಿಚಾರದ ಬಗ್ಗೆ ಈ ಹಿಂದೆಯೂ ಸಾಕಷ್ಟು ಬಾರಿ ಪ್ರಸ್ತಾಪ ಮಾಡಲಾಗಿದೆ. ಆದರೂ ಇಂದಿಗೂ ಈ ಸಮಸ್ಯೆ ಸಂಪೂರ್ಣ ಪರಿಹಾರ ಕಂಡಿಲ್ಲ. ಪಾಲಕರ ಒಣಪ್ರತಿಷ್ಠೆಯಿಂದ ಮಕ್ಕಳು ನಲುಗುವಂತಾಗಿದೆ. ಅವರ ಬೇಕು ಬೇಡಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅವರ ಮಾತು ಮೀರಲಾಗದೇ ಕಲಿಯುವ ಕೋರ್ಸ್ ನೀಗದಂತಾಗಿ ಅದೆಷ್ಟೋ ಮಕ್ಕಳು ಉನ್ನತ ಶಿಕ್ಷಣದಿಂದಲೇ ದೂರ ಸರಿಯುವಂತಾದ ಉದಾಹರಣೆಗಳು ನಮ್ಮೆದುರು ಹಲವಿವೆ.
ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆನೇ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಕೆಯೊಂದಿಗೆ ಉತ್ತೀರ್ಣರಾಗುವುದು
ಜೀವನದ ಗುರಿಯಲ್ಲ. ಅಥವಾ ಬುದ್ದಿವಂತಿಕೆಯ ಮಾನದಂಡವಲ್ಲ. ಅನುತ್ತೀರ್ಣರಾದರೆ ಕೊರಗು ಬೇಡ. ಜೀವನದ ವ್ಯಾಖ್ಯಾನ ಬೇರೆಯೇ ಇದೆ. ಅದೆಷ್ಟೋ ಸಾಧಕರು ಅನುತ್ತೀರ್ಣ ಎಂಬ ಹಂತ ದಾಟಿಯೇ ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ಸಕಾಲಿಕವಾಗಿ ಅವರು ಮಾಡಿಕೊಂಡ ಅಗತ್ಯ ಮಾರ್ಪಾಡು ಅವರನ್ನು ಗೆಲುವಿನ ದಡ ಸೇರಿಸಿದೆ. ಪಾಲಕರು ಕೂಡ ಸಕಾಲಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಹೆತ್ತವರು ಮಕ್ಕಳ ಭಾವನೆಗಳಿಗೆ ಬೆಲೆ ಕೊಡಬೇಕು, ಗೌರವಿಸಬೇಕು. ಏಕೆಂದರೆ ಮುಂದೆ ಬಾಳಬೇಕಾದವರು ಅವರು, ನಾವಲ್ಲ, ನಾವು ಮುಂದೆ ಇರುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಭವಿಷ್ಯ ಮಂಕಾಗಬಾರದು. ಭವ್ಯ ಭಾರತದ ಪ್ರಜೆಗಳಾದ ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಹೊತ್ತ ಪಾಲಕರು ಅತಿಯಾದ ನಿರೀಕ್ಷೆ ಮತ್ತು ಒತ್ತಡದ ಭಾರ ಹಾಕದೇ ಪರಸ್ಪರ ಸಮಾಲೋಚನೆ ನಡೆಸಿ ಸೂಕ್ತ ಆಯ್ಕೆಗೆ ದಾರಿ ಮಾಡಿಕೊಡಬೇಕು. ಇನ್ನು ಮಕ್ಕಳೂ ಅಷ್ಟೇ, ತಾನು ಹೇಳಿದ್ದೇ ಸರಿ ಎನ್ನುವ ಬದಲು ಸಾಧ್ಯಾಸಾಧ್ಯತೆ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಹಾಗೂ ಸರ್ವಸಮ್ಮತದ ಆಯ್ಕೆ ಮಾಡಿದ್ದಲ್ಲಿ ಈ ತರಹದ ಸಂಘರ್ಷ, ಮನಸ್ತಾಪ, ಹಿಂಜರಿಕೆ, ಕೀಳರಿಮೆ ಉದ್ಭವಿಸದು. ಇದು ಹೆತ್ತವರು ಮತ್ತು ಮಕ್ಕಳು ಇಬ್ಬರಿಗೂ ಕಿವಿಮಾತು ಅಷ್ಟೇ.