COVID-19 Resources for Mental Health Coaches... Learn More
ಗಳಿಕೆ ಕ್ಷಣಿಕ… ಹೆತ್ತವರ ಆಶೀರ್ವಾದ ಇಲ್ಲದ ಬದುಕು ನರಕ.

ಗಳಿಕೆ ಕ್ಷಣಿಕ… ಹೆತ್ತವರ ಆಶೀರ್ವಾದ ಇಲ್ಲದ ಬದುಕು ನರಕ: ಮಾನವ ಮೂಳೆ ಮಾಂಸಗಳ ತಡಿಕೆ ಎಂಬ ಹಾಡಿನ ಸಾಲುಗಳನ್ನು ನಾವು ನೀವು ಎಲ್ಲರೂ ಕೇಳಿದ್ದೇವೆ. ಜತೆಗೆ ಬದುಕು ನಶ್ವರ. ಇದ್ದಷ್ಟು ದಿನ ಸುಖವಾಗಿರಬೇಕು. ಹೆತ್ತವರ ಸೇವೆ ಮಾಡಬೇಕು. ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ ತಾಯಿ ಎಂದೆಲ್ಲ ಹೇಳುವುದನ್ನು ಬರೆದಿದ್ದನ್ನು ಗಮನಿಸಿರುವ ನಾವು ಮಕ್ಕಳ ವಿಚಾರಕ್ಕೆ ಬಂದಾಗ ಅದೇಕೋ ವಿವೇಕಶೂನ್ಯರಾಗುತ್ತಿದ್ದೇವೆ. ಆರ್ಥಿಕ ಯಶಸ್ಸಿನ ಬೆನ್ನು ಬಿದ್ದು ಮೆಟ್ರೋ ಸಿಟಿ, ವಿದೇಶದಲ್ಲೇ ಉದ್ಯೋಗಕ್ಕೆ ಸೇರಬೇಕು ಎನ್ನುವ ದುರಾಸೆಗೆ ಬಿದ್ದಿದ್ದೇವೆ. ಪರಿಣಾಮ ಜೀವನದ ಸಂಧ್ಯಾಕಾಲದಲ್ಲಿ ಮತ್ತದೇ ಒಂಟಿತನ, ನಿರ್ಭಾವುಕತನ ಮತ್ತು ಎಲ್ಲವೂ ಇದ್ದೂ ಏನೂ ಇಲ್ಲ ಎನ್ನುವ ಸ್ಥಿತಿ, ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಿದ್ದೇವೆ. ಮನಶ್ಯಾಂತಿ ಎಂಬುದು ಮರೀಚಿಕೆಯಾಗಿದೆ. ದೈಹಿಕ ಕಾಯಿಲೆಗೆ ಮದ್ದು ಇದೆ. ಆದರೆ ಒಳಗೊಳಗೇ ಅಶಾಂತಿಯ ಕುಲುಮೆಯಲ್ಲಿ ಬೇಯುವ ಮನಸ್ಸಿಗೆ ಮದ್ದು ಇಲ್ಲ ಎಂದಲ್ಲ. ಇದೆ. ಆದರೆ ಅದೆಷ್ಟೋ ಬಾರಿ ಅದು ವ್ಯಕ್ತವಾಗುವುದೇ ಇಲ್ಲ. ಅಥವಾ ಅರಿವಿಗೇ ಬರುವುದಿಲ್ಲ. ಇಷ್ಟೆಲ್ಲಾ ವಿಷಯದ ಪ್ರಸ್ತಾಪಕ್ಕೆ ಕಾರಣ, ಮೊನ್ನೆ ಚಿಕ್ಕಮಗಳೂರು ಜಿಲ್ಲೆಯ ಒಂದು ಊರಿನಲ್ಲಿ ನಡೆದ ಒಂದು ಘಟನೆ. ಅದೊಂದು ಚಿಕ್ಕ ಚೊಕ್ಕ ಬಡ ಕುಟುಂಬ. ಇಂತಹದರಲ್ಲೇ ಇಬ್ಬರು ಮಕ್ಕಳಿಗೆ ಕಷ್ಟ ಪಟ್ಟು ವಿದ್ಯಾಭ್ಯಾನ ಕೊಡಿಸಿದ ಮನೆಯ ಯಜಮಾನ ಕೊನೆಗೂ ಮಕ್ಕಳನ್ನು ದಾರಿಗೆ ಹತ್ತಿಸಿದ. ಮಗ ಬೆಂಗಳೂರು ಸೇರಿದರೆ ಮಗಳು ವಿದೇಶಕ್ಕೆ ಹಾರಿದಳು. ಆ ವ್ಯಕ್ತಿಗೆ ಈಗ 77 ವಯಸ್ಸು, ಪತ್ನಿ ಮಾನಸಿಕ ಅಸ್ವಸ್ಥೆ, ತನ್ನ 70ನೇ ವಯಸ್ಸಿನವರೆಗೂ ದುಡಿಮೆ ಬಿಡದ ಈ ವ್ಯಕ್ತಿ ಕೆಲ ದಿನಗಳಿಂದ ಹಾಸಿಗೆ ಹಿಡಿದಿದ್ದರು. ಮಗ ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದ. ಇತ್ತೀಚೆಗೆ ಚಿಕಿತ್ಸೆ ಕೂಡ ಕೊಡಿಸಿ ಹೋಗಿದ್ದ. ಆದರೂ ಚಿಕಿತ್ಸೆ ಫಲಿಸಲಿಲ್ಲ. ಕೊನೆಗೆ ತಂದೆ ಕೊನೆಯುಸಿರೆಳೆದ. ತಾಯಿ ಮಾನಸಿಕ ಅಸ್ವಸ್ಥೆಯಾಗಿರುವ ಕಾರಣ ತನ್ನ ಪತಿ ಮರಣ ಹೊಂದಿರುವ ವಿಚಾರವೂ ಆಕೆಗೆ ತಿಳಿಯಲಾಗಲಿಲ್ಲ. 10 ದಿನ ಹೆಣದ ಜತೆ ಜೀವ ಸವೆಸಿದ ತಾಯಿಯ ಸ್ಥಿತಿ ನಿಜಕ್ಕೂ ಕರುಣಾಜನಕ. ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸುತ್ತಿದ್ದ ಮಗನ ಗಮ ನಕ್ಕೂ ಈ ವಿಷಯ ಬರಲಿಲ್ಲ. ಕೊನೆಗೆ ಸಂಶಯಗೊಂಡ ಮಗ ಸ್ನೇಹಿತ ನನ್ನು ಮನೆಗೆ ಕಳುಹಿಸಿದಾಗ ತಂದೆ ಇನ್ನಿಲ್ಲದಿರುವ ವಿಚಾರ ಬೆಳಕಿಗೆ ಬಂದಿದೆ. ಸಾವು ಖಚಿತ, ಇಂದಲ್ಲ ನಾಳೆ ಎಲ್ಲರೂ ಸಾಯಲೇಬೇಕು ನಿಜ. ಆದರೆ ಸಾವಿನ ಸ್ವರೂಪ ಸುಖಕರವಾಗಿರಬೇಕು. ಜೀವನದ ಕೊನೆಯ ದಿನಗಳಲ್ಲಿ ಮಕ್ಕಳು ಹತ್ತಿರ ಇರಬೇಕು. ಯಾವುದೇ ಒಬ್ಬ ಮಗ ಅಥವಾ ಮಗಳು ಇಂದು ಏನಾದರೂ ಒಂದು ದೊಡ್ಡ ಹುದ್ದೆ ಅಥವಾ ಉತ್ತಮ ಹಂತಕ್ಕೆ ತಲುಪಿದ್ದಾನೆ ಎಂದರೆ ಅದರ ಹಿಂದೆ ಹೆತ್ತವರ ತ್ಯಾಗ ದೊಡ್ಡದಿರುತ್ತದೆ. ಹಣವನ್ನು ಇಂದಲ್ಲ ನಾಳೆ ಗಳಿಸಬಹುದು. ಆದರೆ ಹೆತ್ತವರು ಬಾ ಎಂದರೆ ಬರುವರೇ? ಹಣ ಕೊಟ್ಟು ಮರಳಿ ತರಬಹುದೇ? ಇಲ್ಲ ತಾನೇ? ಹಾಗಿದ್ದ ಮೇಲೆ ಹೆತ್ತವರ ಮೇಲೆ ಯಾಕಿಷ್ಟು ಅನಾದರ? ತಾತ್ಸಾರ? ತಾನೇ ಇಷ್ಟೆಲ್ಲಾ ಅಂತಸ್ತು, ಐಶ್ವರ್ಯ ಮತ್ತು ಹುದ್ದೆ? ಅವರ ಒಂದು ಉಸಿರು ನಮ್ಮ ಇಡೀ ಸಾಧನೆಯನ್ನೇ ಹೊಸಕಿ ಹಾಕಿ ಬಿಡುತ್ತದೆ. ಅದೇ ಅವರ ಒಂದು ಆಶೀರ್ವಾದ ಇದ್ದರೆ ಇಡೀ ಜಗತ್ತೇ ನಮ್ಮ ಕಾಲಡಿ ಇರುತ್ತದೆ. ಈ ತರಹದ ವಿದ್ಯಮಾನಗಳು, ಘಟನೆಗಳು ಸಂಭವಿಸಿದಾಗ ಅನಿಸುವುದೊಂದೇ- ಅದೇನೆಂದರೆ ಪ್ರೀತಿ, ಅಂತಃಕರಣ ಅತ್ಯಗತ್ಯ, ಹೆತ್ತವರು ಕೂಡ ಆಲೋಚನೆಯ ದಾಟಿ ಬದಲಾಯಿಸಿಕೊಳ್ಳಬೇಕು. ಐದಂಕಿ ಸಂಬಳ, ಕಾರು, ಮನೆ, ವಿದೇಶ ಪ್ರಯಾಣ ಮಕ್ಕಳ ಸಾಧನೆಯ ಮಾನದಂಡವಾಗಬಾರದು. ಜೀವನವಿಡೀ ಅವರಿಗಾಗಿ ಗಂಧದ ಕೊರಡಿನಂತೆ ಬದುಕು ಸವೆಸಿದ ವ್ಯಕ್ತಿಯ ಸೇವೆ ಮಾಡಲಾರದ ಮಕ್ಕಳು ಇದ್ದರೇನು? ಹೋದರೇನು? ಅದರಲ್ಲೂ ಮನೆಯಲ್ಲಿ ಮಾನಸಿಕ ಅಸ್ವಸ್ಥ ತಾಯಿ ಇರುವಾಗ ಮಗನಿಗೆ ಉದ್ಯೋಗವೇ ಮುಖ್ಯವಾದದ್ದು ವಿಪರ್ಯಾಸ. ಮಕ್ಕಳು ಹತ್ತಿರವಿದ್ದುಕೊಂಡು ಇಲ್ಲವೇ ಮಕ್ಕಳ ಹತ್ತಿರವೇ ಇವರು ಹೋಗಿ ಇದ್ದರೆ ಇಬ್ಬರಿಗೂ ಅನುಕೂಲ. ಬದಲಾದ ಸನ್ನಿವೇಶದಲ್ಲಿ ಇಂದು ಉದ್ಯೋಗ ನಿಮಿತ್ತ ಪರ ಊರುಗಳಿಗೆ ವಲಸೆ ಅನಿವಾರ್ಯ. ಎಷ್ಟೇ ಕಷ್ಟ ಎನಿಸಿದರೂ ಅನುಕೂಲ ಮಾಡಿಕೊಂಡು ಹೆತ್ತವರನ್ನು ಜತೆಗಿಟ್ಟುಕೊಳ್ಳಿ. ಆಳುಗಳನ್ನು ಇಟ್ಟು ಚಾಕರಿ ಮಾಡಿಸುವ ಪದ್ಧತಿ ಸರಿಯಲ್ಲ. ಅವರಿಗೆ ಬೇಕಿರುವುದು ನಿಮ್ಮ ಒಡನಾಟವೇ ಹೊರತು ನಿಮ್ಮ ಹಣವಲ್ಲ. ಜನರೇಷನ್ ಗ್ಯಾಪ್‌ನಿಂದಾಗಿ ಮನೆಗೆ ಬಂದ ಸೊಸೆ ಅಥವಾ ಅಳಿಯನ ಜತೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜ ಅದನ್ನೇ ದೊಡ್ಡ ವಿಚಾರ ಮಾಡಿ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎನ್ನುವ ಮನೋಭಾವ ಸಲ್ಲದು. ನಂಬಿಕೆ ಮತ್ತು ಹೊಂದಾಣಿಕೆ ಈ ಎರಡು ಅಂಶಗಳಿದ್ದಲ್ಲಿ ಎಲ್ಲವೂ ಸುಲಭ ಮತ್ತು ಸುಲಲಿತ. ಇಲ್ಲದಿದ್ದರೆ ತಪ್ಪುತ್ತದೆ ಬದುಕಿನ ಗಣಿತ. ಇನ್ನು ಮಕ್ಕಳೂ ಅಷ್ಟೇ, ಏನೇ ಆಗಲಿ ಜೀವನದ ಸಂಧ್ಯಾಕಾಲದಲ್ಲಿ ಇರುವವರನ್ನು ಸದಾ ಹತ್ತಿರ ಇಟ್ಟುಕೊಳ್ಳುವುದು ಉತ್ತಮ. ಅವರು ಬಯಸುವುದು ನೀವು ಕೊಡಿಸುವ ಊಟ-ಬಟ್ಟೆಯನ್ನಲ್ಲ. ನಿಮ್ಮ ಸಾಮೀಪ್ಯವನ್ನು, ಪ್ರೀತಿಯ ಮಾತುಗಳನ್ನು ಮತ್ತು ಮೇಲಾಗಿ ನಿಮ್ಮ ಮುಖದಲ್ಲಿನ ಸಂತಸವನ್ನು ಆನಂದಿಸುವುದೇ ಅವರ ದೊಡ್ಡ ಆಸೆ. ಅಷ್ಟು ಮಾಡಲಾಗದವರು ಮನುಷ್ಯರೇ? ಗಳಿಕೆ ಮುಂದೆ ಜನ್ಮದಾತರ ಆಸೆ ಕಮರುವುದು ಸರಿಯಲ್ಲ. ಇದು ಮನುಷ್ಯತ್ವಕ್ಕೆ ಶೋಭೆಯಲ್ಲ. ನಮ್ಮ ಭಾರತೀಯ ಸಂಸ್ಕೃತಿ ಅಂತೂ ಅಲ್ಲವೇ ಅಲ್ಲ.