COVID-19 Resources for Mental Health Coaches... Learn More

0836-2773878

“ಮಾನವ ವಿಕಾಸದಲ್ಲಿ ಯೋಗದ ಪಾತ್ರ ಹಿರಿದು”

ಧಾರವಾಡ: ಯೋಗವು ಮಾನವನ ಸರ್ವತೋಮುಖ ವಿಕಾಸ ಮತ್ತು ಆಧ್ಯಾತ್ಮ ಪ್ರಜ್ಞೆ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಕವಿವಿ ತತ್ವಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ, ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಪ್ರೊ.ಎನ್.ಜಿ. ಮಹದೇವಪ್ಪ ಅಭಿಪ್ರಾಯಪಟ್ಟರು. ನಗರದ ಸಪ್ತಾಪೂರ ಹತ್ತಿರದ ಪವನ ನಗರಿಯಲ್ಲಿ ಬಸವ ಜಯಂತಿ ಪ್ರಯುಕ್ತ ನವದೆಹಲಿಯ ಅಪ್ಪಾ ಯೋಗ ಅಕಾಡೆಮಿಯ ಧಾರವಾಡ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಯೋಗಾಭ್ಯಾಸಿಯು ಯೋಗದ ಎಲ್ಲ ಅಂಗಗಳನ್ನು ಕ್ರಮೇಣ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯೋಗದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿ, ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಾತನಾಡಿ, ಚಂಚಲವಾದ ಮಾನವನ ಮನವನ್ನು ಪ್ರಸನ್ನವಾಗಿಸಲು ಮತ್ತು ಅನೇಕ ಮನೋ ದೈಹಿಕ ಕಾಯಿಲೆಗಳಿಗೆ ಯೋಗವು ಸಹ ಒಂದು ಚಿಕಿತ್ಸೆಯಾಗಿ ತುಂಬಾ ಸಹಕಾರಿಯಾಗಿದೆ. ನಿತ್ಯ ಯೋಗಾಭ್ಯಾಸವು ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಅವಶ್ಯಕ ಎಂದರು.

ಡಾ.ಎಸ್.ಆರ್.ಪಂಚಮುಖಿ ಮಾತನಾಡಿ, ಯೋಗ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಯೋಗ ವಿಜ್ಞಾನಿ ಡಾ.ಈಶ್ವರ ಬಸವರಡ್ಡಿ ಅವರ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಅಪ್ಪಾ ಯೋಗ ಅಕಾಡೆಮಿ ಸ್ಥಾಪಿತವಾಗುತ್ತಿರುವುದು ತುಂಬಾ ಪ್ರಸ್ತುತ ಮತ್ತು ಶ್ಲಾಘನೀಯ. ನಿತ್ಯ ಯೋಗಾಭ್ಯಾಸ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿ ಎಂದು ಹೇಳಿದರು. ಅಪ್ಪಾ ಯೋಗ ಅಕಾಡೆಮಿಯ ಸಂಸ್ಥಾಪಕ, ಮಾರ್ಗದರ್ಶಕ ಗುರುಗಳು ಡಾ.ಈಶ್ವರ ಬಸವರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗದ ಪಾರಂಪರಿಕ ಜ್ಞಾನ ಮತ್ತು ಆಧುನಿಕ ಅನ್ವೇಷಣೆಗಳ ಸಮನ್ವಯದ ಅವಶ್ಯಕತೆಗಳನ್ನು ಮತ್ತು ಈ ದಿಸೆಯಲ್ಲಿ ಆದ ಸಂಶೋಧನೆಗಳನ್ನು ವಿವರಿಸಿದರು. ಯೋಗದರ್ಶನದ ತಳಹದಿಯ ಮೇಲೆ ವೈಜ್ಞಾನಿಕ ಮತ್ತು ಸಂಶೋಧನೆಗಳಾಧಾರಿತ ಯೋಗ ಚಿಕಿತ್ಸಾ ಪದ್ಧತಿಗಳನ್ನು ಅಪ್ಪಾ ಯೋಗ ಅಕಾಡೆಮಿ ಪ್ರಸ್ತುತ ಪಡಿಸುತ್ತಿದ್ದು, ಆ ದಿಸೆಯಲ್ಲಿ ನುರಿತ ಯೋಗ ಶಿಕ್ಷಕ ಮತ್ತು ಚಿಕಿತ್ಸಕರನ್ನು ತರಬೇತಿಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಅಪ್ಪಾ ಯೋಗ ಅಕಾಡೆಮಿಯ ವತಿಯಿಂದ ಪ್ರತಿ ತಿಂಗಳು ನಾಲ್ಕನೇ ಶನಿವಾರ, ರವಿವಾರಗಳಂದು ಯೋಗ ಶಿಕ್ಷಕ ಮತ್ತು ಚಿಕಿತ್ಸಕರಿಗೆ ಉಚಿತ ಯೋಗ ಕಾರ್ಯಾಗಾರಗಳನ್ನು ಮತ್ತು ನಿತ್ಯ ಯೋಗ ತರಬೇತಿ ಮತ್ತು ಚಿಕಿತ್ಸಾ ವರ್ಗಗಳನ್ನು ನಡೆಸಲಾಗುವುದು. ವಂದನಾ ಕುಲಕರ್ಣಿ ಪ್ರಾರ್ಥಿಸಿದರು. ಡಾ.ಕುಸಮಾ ಬಸವರಡ್ಡಿ ಸ್ವಾಗತಿಸಿ ಪರಿಚಯಿಸಿದರು. ಬಸವರಡ್ಡಿ ಶಶಿಕಲಾ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕ ಪ್ರೊ.ನಂದಿಬೇವೂರ, ಡಾ.ವಿಶ್ವನಾಥ ವೈ. ಚಿಂತಾಮಣಿ, ಡಾ.ಎಂ.ಎನ್.ಚಲವಾದಿ, ಶಂಕರ ಬಸವರಡ್ಡಿ ಸೇರಿದಂತೆ ಅನೇಕ ಯೋಗ ಬಂಧುಗಳು, ಸಾಧಕರು, ಶಿಕ್ಷಕರು ಉಪಸ್ಥಿತರಿದ್ದರು.

About Author:

Leave Your Comments

Your email address will not be published. Required fields are marked *