COVID-19 Resources for Mental Health Coaches... Learn More

0836-2773878

“ವಿದ್ಯಾಕಾಶಿ, ಸಂಗೀತದ ತವರೂರಲ್ಲಿ ಹೆಚ್ಚಿದ ಆತಂಕ ಸರಣಿ ಕೊಲೆಗೆ ಬೆಚ್ಚಿದ ಧಾರವಾಡ”

ಸನ್ನಿವೇಶಕ್ಕೆ ಅನುಗುಣವಾಗಿ ಸ್ಥಿಮಿತ ಕಳೆದುಕೊಂಡರೆ ಇಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಮುಖ್ಯವಾಗಿದೆ. ಹಿಂದಿನ ದಿನಗಳಲ್ಲಿ ಅವಿಭಕ್ತ ಕುಟುಂಬದಲ್ಲಿದ್ದ ಮೌಲ್ಯಗಳು ಇಂದಿನ ಕುಟುಂಬಗಳಲ್ಲಿ ಇಲ್ಲವಾಗಿದೆ. ಕುಟುಂಬದಲ್ಲಿ ಸಾಮರಸ್ಯ ಅತ್ಯಂತ ಮುಖ್ಯವಾಗಿದೆ. ಏನೇ ಸಮಸ್ಯೆಗಳಿದ್ದರೂ ಶಾಂತಿಯುತವಾಗಿ ಬಗೆಹರಿಸಿಕೊಂಡಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗಬಹುದು. | ಡಾ. ಆನಂದ ಪಾಂಡುರಂಗಿ.

ವಿದ್ಯಾಕಾಶಿ, ಸಾಹಿತ್ಯ, ಸಂಗೀತದ ತವರೂರು ಹೀಗೆ ಧಾರವಾಡಕ್ಕೆ ಹತ್ತು ಹಲವು ಹೆಸರಿವೆ. ಆದರೆ, ಇತ್ತೀಚಿನ ಒಂದು ವಾರದಲ್ಲಿ ನಡೆದ ಸರಣಿ ಕೊಲೆಗಳಿಂದ ಇಡೀ ಧಾರವಾಡದ ಜನ ಬೆಚ್ಚಿಬಿದ್ದಿದ್ದಾರೆ. ಕೊಲೆಗಳು ಕ್ಷುಲ್ಲಕ ಕಾರಣ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡ ಸಮಯದಲ್ಲಿ ನಡೆದಿವೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಇದರಿಂದ ಜನರು ಭಯದಲ್ಲೇ ಓಡಾಡುವ ಸ್ಥಿತಿ ಎದುರಾಗಿದೆ. ಫೆ. 3ರಂದು ಹಳೇ ದ್ವೇಷದ ಕಾರಣಕ್ಕೆ ಒಂದು ಕೊಲೆ ನಡೆದಿದ್ದರೆ, ಫೆ. 4ರಂದು ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಕೊಲೆ ನಡೆದಿತ್ತು. ಮರುದಿನವೇ ಆಸ್ತಿ ವಿಚಾರವಾಗಿ ವೃದ್ಧೆಯನ್ನು ನಡು ರಸ್ತೆಯಲ್ಲೇ ಕೊಲೆ ಮಾಡಲಾಗಿದೆ. ಇದಾದ ಮರುದಿನ ಎಗ್‌ ರೈಸ್ ಅಂಗಡಿಯಲ್ಲಿ ಅಡುಗೆ ಮಾಡುವವನ ಕೊಲೆ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಕರುಣೆ ಇಲ್ಲದ ತಾಯಿ ಸ್ವಂತ ಮಗುವಿನ ಕತ್ತು ಸೀಳಿ ಜೀವನವನ್ನೇ ಮುಗಿಸಿದ ದಾರುಣ ಘಟನೆಯಿಂದ ಜನ ಮಮ್ಮಲು ಮರಗುವಂತಾಗಿದೆ. ಇದನ್ನೆಲ್ಲ ಗಮನಿಸಿದರೆ, ವಿದ್ಯಾಕಾಶಿ ಧಾರವಾಡ ಎತ್ತ ಸಾಗುತ್ತಿದೆ ಎಂಬ ಚಿಂತೆ ಒಂದೆಡೆಯಾದರೆ, ಯುವಕರ ಮುಂದಿನ ಭವಿಷ್ಯ ಹೇಗೆ? ಎಂಬ ಚಿಂತೆ ಪ್ರಜ್ಞಾವಂತರನ್ನು ಕಾಡುತ್ತಿದೆ.

ಫೆ. 3ರಂದು ಯಾಲಕ್ಕಿ ಶೆಟ್ಟ‌ರ್ ಕಾಲನಿಯಲ್ಲಿ ಹಳೇ ದ್ವೇಷದ ಕಾರಣಕ್ಕೆ ಸಚಿನ್ ಎಂಬ ಯುವಕನಿಗೆ ಚಾಕು ಇರಿತವಾಗಿತ್ತು. ಇದಕ್ಕೆ ಹಳೇ ದ್ವೇಷವೇ ಕಾರಣ ಎಂದು ಹೇಳಲಾಗಿದ್ದು, ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ,

ಫೆ. 6ರಂದು ಆಸ್ತಿ ವಿಚಾರವಾಗಿ ವೃದ್ಧೆಯನ್ನು ಕೊಲೆ ಮಾಡಿದ ಘಟನೆ ನವಲೂರಿನ ದೇವಸ್ಥಾನ ಬಳಿ ನಡೆದಿದೆ. ಕರೆವ್ವ ಇರಬಗೇರಿ ಕೊಲೆಯಾದ ನತದೃಷ್ಟೆ, ಕರೆವ್ವ ಕೆಲ ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದಳು. ಇದ್ದ ಇಬ್ಬರು ಮಕ್ಕಳೂ ಮೃತಪಟ್ಟ ಕಾರಣಕ್ಕೆ ತನ್ನ ಸಹೋದರಿ ಮನೆಯಲ್ಲಿ ವಾಸವಿದ್ದರು. ಪತಿಯ ಜಮೀನು ಈಕೆ ಹೆಸರಿಗೆ ವರ್ಗಾವಣೆ ಆಗಿತ್ತು. ಆಸ್ತಿ ವಿಷಯವಾಗಿ ಪತಿಯ ಸಹೋದರರು ಹಾಗೂ ಅವರ ಮಕ್ಕಳು ಹಲವು ಬಾರಿ ಜಗಳ ನಡೆಸಿದ್ದರು. ಇದೇ ವಿಷಯವಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಳ್ಳಾವರ ತಾಲೂಕಿನ ಅರವಟಗಿಯ ಕಲ್ಲನಗೌಡ ಪಾಟೀಲ, ತಡಸಿನಕೊಪ್ಪದ ಸುನೀಲ ಜಕ್ಕಣ್ಣನವರ ಜತೆಗೆ ರಾತ್ರಿ ರಸ್ತೆ ಪಕ್ಕ ನಿಂತಾಗ ನಡೆದ ಗಲಾಟೆಯಲ್ಲಿ ಕಲ್ಲನಗೌಡ ತಲೆಗೆ ತೀವ್ರ ಪೆಟ್ಟಾಗಿ ಅಸುನೀಗಿದ್ದರೆ, ಸುನೀಲ ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದ್ದಾನೆ. ರಸ್ತೆ ಪಕ್ಕ ಬೈಕ್ ಹಚ್ಚಿ ಕಲ್ಲನಗೌಡ ನಿಂತಿದ್ದ. ಆಗ ಕಾರಿನಲ್ಲಿ ಬಂದ ಗುಂಪು ಬೈಕ್ ಸರಿಸುವಂತೆ ಹೇಳಿದ್ದಾರೆ. ಆದರೆ, ಕಲ್ಲನಗೌಡ ನಿಮ್ಮ ವಾಹನ ದಾಟುತ್ತದೆ ಎಂದಿದ್ದೇ ಜಗಳಕ್ಕೆ ಕಾರಣ. ಪರಸ್ಪರ ಮಾತಿನ ಚಕಮಕಿ ನಡೆದಾಗ ಕಾರಿನಲ್ಲಿದ್ದವರು ಮತ್ತಷ್ಟು ಜನರನ್ನು ಕರೆಯಿಸಿ ಹಲ್ಲೆ ನಡೆಸಿದ್ದಾರೆ. ಆಗ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಕಲ್ಲನಗೌಡ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಫೆ.8ರ ಕೊಲೆ ಇಡೀ ನಗರದ ಜನರ ಕರುಳು ಚುರ್ ಎನ್ನುವಂತೆ ಮಾಡಿದೆ. ಸಮಾಜದಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ, ಎಂದಿಗೂ ಮಕ್ಕಳಿಗೆ ಕೇಡು ಬಗೆಯುವ ತಾಯಿ ಇರುವುದಿಲ್ಲ ಎಂಬ ಮಾತಿದೆ. ಆದರೆ, ಈ ಪ್ರಕರಣದಲ್ಲಿ ತಾಯಿಯೇ 5 ವರ್ಷದ ಮಗಳ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಕಮಲಾಪುರ ಹೂಗಾರ ಓಣಿಯ ಜ್ಯೋತಿ ಹಿರೇಮಠ ಕೊಲೆ ಮಾಡಿದ ತಾಯಿ. ಜ್ಯೋತಿ ಒಂದೂವರೆ ತಿಂಗಳ ಹಿಂದೆಯೇ ಸವದತ್ತಿಯ ಕಲ್ಲಯ್ಯ ಎಂಬಾತನಿಂದ ವಿಚ್ಛೇದನ ಪಡೆದು, ಕಮಲಾಪುರದ ತವರು ಮನೆಯಲ್ಲಿದ್ದಳು. ಆದರೆ, ಗಂಡನ ಜತೆಗಿದ್ದಾಗಲೇ ಜ್ಯೋತಿಗೆ ರಾಹುಲ್ ತೇರದಾಳ ಎಂಬಾತನೊಂದಿಗೆ ಅನೈತಿಕ ಸಂಬಂಧ ಬೆಳೆದಿತ್ತು. ವಿಚ್ಛೇದನ ಸಿಗುತ್ತಿದ್ದಂತೆ ರಾಹುಲ್ ಜತೆಗೆ ಮದುವೆಗೆ ಮುಂದಾಗಿದ್ದಳು. ಆದರೆ ಮಗು ಅಡ್ಡಿಯಾಗುತ್ತದೆ ಎಂದು ಕೊಲೆ ಮಾಡಿದ್ದಾಳೆ. ಧಾರವಾಡದಲ್ಲಿ ನಡೆದ ಈ ಸರಣಿ ಕೊಲೆಗಳು ಜನರ ಆತಂಕಕ್ಕೆ ಕಾರಣವಾಗಿವೆ. ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲವೇ? ಎಂಬಂತಾಗಿದೆ. ಸಣ್ಣಪುಟ್ಟ ಜಗಳಗಳೂ ಕೊಲೆಯಲ್ಲಿ ಅಂತ್ಯವಾಗುತ್ತಿದ್ದು, ಪೊಲೀಸ್ ಬೀಟ್ ವ್ಯವಸ್ಥೆ ಏನಾಗಿದೆ ಎಂಬ ಪ್ರಶ್ನೆ ಮೂಡಿದೆ. 5 ಕೊಲೆಗಳ ಪೈಕಿ ಮೂರು ಕೊಲೆಗಳು ಬೀದಿಯಲ್ಲೇ ನಡೆದಿವೆ. ಅದರಲ್ಲೂ ಬೀದಿ ರಂಪಾಟ, ಜಗಳಗಳ ಬಳಿಕವೇ ಕೊಲೆಯಾಗಿವೆ.

About Author:

Leave Your Comments

Your email address will not be published. Required fields are marked *