COVID-19 Resources for Mental Health Coaches... Learn More

0836-2773878

“ಸಮತೋಲಿತ ಮನಸ್ಸಿಗೆ ಸಾರ್ವಕಾಲಿಕ ಮಾದರಿ”

ಮೊನ್ನೆ ಮೊನ್ನೆಯಷ್ಟೇ ಇಡೀ ದೇಶವೇ ಆಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಂಭ್ರಮಿಸಿತು. ಇದೊಂದು ಸಮಷ್ಟಿ ಹಿತದ ಸಂಭ್ರಮ. ಅಮೃತ ಘಳಿಗೆ ಆಗಿತ್ತು ಕೂಡ. 16 ಸದ್ಗುಣಗಳ ಸಂಗಮ ಪ್ರಭು ಶ್ರೀರಾಮಚಂದ್ರ, ಇಡೀ ಮನುಕುಲಕ್ಕೆ ಆತನ ಆದರ್ಶ ದಾರಿದೀಪ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಾಗಿದ್ದರೆ ಆತನಲ್ಲಿ ಈ ಶಕ್ತಿ, ಸಹನೆ, ಆದರ್ಶ ಬರಲು ಕಾರಣವೇನು ಎಂಬುದರ ಬಗ್ಗೆ ಚಿಂತನೆ ಮಾಡಲು ಇದು ಸಕಾಲ. ಒಂದು ವೇಳೆ ಯಾರಾದರೂ ಆ ನಿಟ್ಟಿನಲ್ಲಿ ಯೋಚಿಸಿದ್ದೇ ಆದರೆ ಕಂಡು ಬರುವ ವಾಸ್ತವಾಂಶ ಅಂದರೆ ಶ್ರೀರಾಮಚಂದ್ರನಿಗೆ ಮನಸ್ಸಿನ ಮೇಲೆ ಇರುವ ಸಮತೋಲಿತ ಹತೋಟಿ, ಆತನಿಗೆ ಪ್ರತಿ ಹಂತ ಹಂತದಲ್ಲೂ ಎದುರಾದ ಸಂಕಷ್ಟಗಳು ನೋಡಿದರೆ ಆತನೂ ನಮ್ಮಂತೆ ಧೃತಿಗೆಡಬಹುದಾಗಿತ್ತು. ಆದರೆ ರಾಮ ಹಾಗೆ ಧೃತಿಗೆಡಲಿಲ್ಲ. ಪರಿಣಾಮ ಎಲ್ಲ ಸಮಸ್ಯೆಗಳು ಬೆಣ್ಣೆ ಕರಗಿದಂತೆ ಕರಗಿದವು. ಅಲ್ಲದೇ ಈ ಸಮಸ್ಯೆ ಕರಗಿಸಿದ ಪರಿ ಸಾರ್ವಕಾಲಿಕ ಮಾದರಿ, ಪ್ರಸ್ತುತ ಸಮಾಜದಲ್ಲೂ ನಮ್ಮ ನಿಮ್ಮೆಲ್ಲರ ಪರಿಸ್ಥಿತಿ ಹಾಗೂ ಮನಸ್ಥಿತಿ ಇಂತಹ ಸಮಸ್ಯೆಗಳ ಸರಮಾಲೆಯ ಕಪಿಮುಷ್ಟಿಗೆ ಸಿಲುಕಿ ನರಳುವಂತಾಗಿದೆ. ಮನಸ್ಸು ಸಣ್ಣ ಸಣ್ಣ ಕಾರಣಗಳಿಗೆ ಉದ್ರೇಕಗೊಳ್ಳುತ್ತಿದೆ. ಹತಾಶೆ ಆವರಿಸುತ್ತದೆ. ಮನೆ ಮಂದಿ ಜತೆ ಜಗಳಕ್ಕೆ ಇಳಿಯುತ್ತೇವೆ. ಒದರಾಟ, ಚೀರಾಟ ಮಾಡುವ ಮೂಲಕ ಇಡೀ ಕುಟುಂಬದ, ಮನೆಯ ನೆಮ್ಮದಿಯನ್ನು ಕಳೆಯುತ್ತಿದ್ದೇವೆ. ಅಂದುಕೊಂಡದ್ದು ಸಮತೋಲಿತ ಮನಸ್ಸಿಗೆ ಸಾರ್ವಕಾಲಿಕ ಮಾದರಿ + ಹಲೋ ಡಾಕ್ಟರ್ ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು (0836) 2773878, drpandurangi@yahoo.com ಅಂದುಕೊಂಡಂತೆ ಮೇಲಾಗಿ ಕೂಡಲೇ ಆಗದಿದ್ದಾಗ ರೌದ್ರಾವತಾರ ತಾಳುತ್ತೇವೆ. ಸಹನೆ ಕಳೆದುಕೊಳ್ಳುತ್ತೇವೆ. ಎಲ್ಲವೂ ಸುಲಭವಾಗಿ, ಶೀಘ್ರವಾಗಿ ಸಿಗಬೇಕು ಎನ್ನುವ ನಿರೀಕ್ಷೆಯ ಭಾರದಿಂದ ವ್ಯಕ್ತಿಯ ಬದುಕು ಖಿನ್ನತೆ ಎಂಬ ಕಾಯಿಲೆಗೆ ತುತ್ತಾಗಿದೆ. ರಾಮಾಯಣದ ಪ್ರತಿ ಸನ್ನಿವೇಶಗಳನ್ನು ನೋಡುತ್ತಾ ಬಂದಲ್ಲಿ ಬಂದ ಸಂಕಷ್ಟಗಳನ್ನು ಶ್ರೀರಾಮ ಎದುರಿಸಿದ ದಾರಿ ಎಂದರೆ ತಾಳ್ಮೆ ಎಂಬ ಅಸ್ತ್ರದಿಂದ ಹೊರತು ಶಸ್ತ್ರಗಳಿಂದಲ್ಲ ಎನ್ನುವುದು ಸ್ಪಷ್ಟ, ಶಸ್ತ್ರಗಳನ್ನು ಬಳಸಲೇ ಇಲ್ಲ ಎಂದಲ್ಲ. ಯಾವ ಯಾವ ಕಾಲ ಮತ್ತು ಸಂದರ್ಭಕ್ಕೆ ಏನು ಬಳಸಬೇಕೋ ಅದನ್ನು ರಾಮ ಬಳಸಿದ. ಅದು ಫಲಪ್ರದವೂ ಆಯಿತು. ಆದರೆ ಆತನ ಬತ್ತಳಿಕೆಯಲ್ಲಿದ್ದ ಪ್ರಮುಖ ಅಸ್ತ್ರಗಳು ಎಂದರೆ ಶಾಂತಿ, ಸಹನೆ, ಸಮಾಧಾನ ಮತ್ತು ಸತ್ ಚಿಂತನೆ. ದುಷ್ಟ ಶಕ್ತಿಗಳ ಸಂಹಾರಕ್ಕೆ ಪಾಶುಪತಾಸ್ತ್ರ, ಬ್ರಹ್ಮಾಸ್ತ್ರ. ಆದರೆ ದುಷ್ಟ ಅಥವಾ ವಿಕೃತ ಮನಶ್ಯಕ್ತಿಗಳ ದಮನಕ್ಕೆ ಬಳಸಿದ ಅಸ್ತ್ರವೆಂದರೆ ಈ ನಾಲ್ಕು ಸರಳ ಸದ್ಗುಣಗಳು, ಈ ಸದ್ಗುಣಗಳು ಸರಳ ಎನಿಸಿದರೂ ಅವುಗಳನ್ನು ಅಳವಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಇಲ್ಲಿ ಗಮನಿಸಬೇಕಾದ ಮತ್ತೊಂದು ಸೂಕ್ಷ್ಮ ಸಂಗತಿ ಎಂದರೆ ಶ್ರೀರಾಮಚಂದ್ರ ಮತ್ತು ರಾಮನೆಂದರೆ ಲಕ್ಷ್ಮಣ, ಭರತ ಆದಿಯಾಗಿ ಅದೆಷ್ಟು ಭಯ, ಭಕ್ತಿ, ಅದುವೇ ಇಂದಿನ ದಿನಗಳಲ್ಲಿನ ಸಹೋದರರನ್ನು ನೋಡಿದರೆ ಅಜಗಜಾಂತರ, ನಶ್ವರ ಅಸ್ತಿಯ ವ್ಯಾಮೋಹದ ಸುಳಿಗೆ ಸಿಲುಕಿ ಎಲ್ಲೆಲ್ಲೂ ದಾಯಾದಿ ಕಲಹಗಳನ್ನು ನಾವು ನೋಡುತ್ತೇವೆ. ದಿನ ಬೆಳಗಾದರೆ ಹೊಡೆದಾಟ, ಕೊಲೆಮಟ್ಟಕ್ಕೆ ಈ ಸಂಬಂಧದ ಮಧ್ಯೆ ಕಲಹ ಬಂದು ನಿಂತಿದೆ. ಹೀಗಾಗಲು ಕಾರಣ ಎಲ್ಲರಲ್ಲೂ ರಾಮನಲ್ಲಿರುವ ಗುಣಗಳ ಕೊರತೆ. ಪೂರ್ಣವಲ್ಲದಿದ್ದರೂ ಸಾಸಿವೆಯಪ್ಪಾದರೂ ಆತನ ಗುಣ ಅಳವಡಿಸಿಕೊಂಡಲ್ಲಿ ಅದೆಷ್ಟೋ ಕಲಹಗಳು ಇನ್ನಿಲ್ಲದಂತಾಗುತ್ತವೆ. ಇಡೀ ರಾಜ್ಯವನ್ನಾಳುವ ಅವಕಾಶವನ್ನೇ ತಿರಸ್ಕರಿಸಿ ಪಿತೃವಾಕ್ಯ ಪರಿಪಾಲನೆಗೆ ವನವಾಸ ಹೊರಟ ರಾಮನಲ್ಲಿ, ಕ್ಷುಲ್ಲಕ ವಿಚಾರಕ್ಕೆ ಬಡಿದಾಡುವ ಸಿಟ್ಟಿಗೇಳುವ, ಮನೆ ತೊರೆಯುವ ಇಂದಿನ ಸಮಾಜದ ಸಹೋದರರೆಲ್ಲಿ? ನಾವು ಮುಖ್ಯವಾಗಿ ಅಪೇಕ್ಷಿಸುವ ದುಃಖ, ಅಜ್ಞಾನ, ದೋಷ ಹಾಗೂ ಇವುಗಳನ್ನೊಳಗೊಂಡ ಸಂಸಾರಬಂಧನವನ್ನು ಅಷ್ಟು ಸಲೀಸಾಗಿ ತೊರೆಯುವುದು ಅಸಾಧ್ಯದ ಮಾತು. ಅದು ಸಾಧುವೂ ಅಲ್ಲ. ಅದರ ಬದಲಾಗಿ ಸನ್ಮಾರ್ಗದಲ್ಲಿ ಸತ್‌ ಚಿಂತನೆಗಳೊಂದಿಗೆ ಸ್ವಸ್ಥ ಮನಸ್ಸಿನ ಮೂಲಕ ಕರ್ಮಗಳನ್ನು ಮಾಡಿದರೆ ಬದುಕು ಹೂವಿನಂತೆ ಅರಳುತ್ತದೆ. ಹೀಗಾಗಲು ಮಾಡಬೇಕಿರುವುದು ದೃಢಸಂಕಲ್ಪ ಅಷ್ಟೇ. ಆರಂಭದಲ್ಲಿ ಮನೋನಿಗ್ರಹ ಕಷ್ಟ ಎನಿಸಿದರೂ ಕಾಲಕ್ರಮೇಣ ಅದು ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾದಾಗ ಹತ್ತು ಹಲವು ಸಂಕಷ್ಟಗಳಿಗೆ ಮುಕ್ತಿ ಖಚಿತ. ಹೀಗೆ ಶ್ರೀರಾಮನ ಗುಣಗಳ ಅವಲೋಕನದ ಜತೆಗೆ ನಮ್ಮ ಇಂದಿನ ಜೀವನಕ್ರಮಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬ ಚಿಂತನೆ ಮಾಡಿದಲ್ಲಿ ಹಲವಾರು ಅನುಕರಣೀಯ ಅಂಶಗಳು ಸಿಗುತ್ತವೆ. ಅವುಗಳ ಪಾಲನೆ ಮಾಡಿದಲ್ಲಿ ಸಾಧನೆಯೂ ಆಗುತ್ತದೆ. ಮನಸ್ಸಿನ ವೇದನೆಯೂ ಕಡಿಮೆಯಾಗುತ್ತದೆ.

About Author:

Leave Your Comments

Your email address will not be published. Required fields are marked *