COVID-19 Resources for Mental Health Coaches... Learn More

0836-2773878

“ಯೌವನದ ಉನ್ಮಾದ ಸೃಷ್ಟಿಸದಿರಲಿ ಅಧ್ವಾನ”

ಪ್ರೀತಿ ನಿರಾಕರಣೆ, ಯುವಕನಿಂದ ಯುವತಿ ಕೊಲೆ, ಭಗ್ನಪ್ರೇಮಿಯಿಂದ ಚಾಕು ಇರಿತ… ಇವು ಇತ್ತೀಚೆಗೆ ಆಗಾಗ ಕೇಳಿ ಬರುತ್ತಿರುವ ಆಘಾತಕಾರಿ ಸುದ್ದಿಗಳು. ಹೆತ್ತವರ ಆತಂಕ ಹೆಚ್ಚಿಸುವ ಇಂತಹ ವಿದ್ಯಮಾನಗಳು ನಿಜಕ್ಕೂ ಅಪಾಯಕಾರಿ. ಹಾಗಿದ್ದರೆ ಏನಾಗಿದೆ ನಮ್ಮ ಯುವಪೀಳಿಗೆಗೆ?

ಯಾಕೆ ಈ ರೀತಿ ವಿಕೃತ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ? ಇಂತಹ ದುಡುಕಿನ ನಿರ್ಧಾರಗಳಿಂದಾಗುವ ಪರಿಣಾಮದ ಅರಿವು ದೂ: ಇಲ್ಲವೇ? ಮೊದಲಾದ ಪ್ರಶ್ನೆಗಳನ್ನು ಬೆನ್ನತ್ತಿ ಹೊರಟರೆ ಸಿಗುವ ಉತ್ತರ ಮನೋವಿಕೃತಿ. ಹೌದು, ಯುವಾವಸ್ಥೆ ತಲುಪಿದಾಗ ಯುವಜನರ ಮನಸ್ಸು ಬಲು ಚಂಚಲ. ಹಲವು ಆಕರ್ಷಣೆಗಳ ಸೆಳೆತಕ್ಕೆ ಸಿಲುಕಿ ದಾರಿ ತಪ್ಪುವುದು ಸಹಜ. ಈ ಪ್ರೌಢಾವಸ್ಥೆಯಲ್ಲಿ ಮನಸ್ಸು ಯಾವುದು ಬೇಡವೋ ಅದನ್ನು ಬೇಡುತ್ತಿರುತ್ತದೆ. ಬಯಸಿದ್ದು ಸಿಗದಿದ್ದಾಗ ಕೆರಳುವ ಮನಸ್ಸಿನ ಕೈಗೆ ಬುದ್ದಿ ಕೊಟ್ಟು ಕುಕೃತ್ಯಕ್ಕೆ ಮುಂದಾಗುವ ಯುವಪೀಳಿಗೆಯ ಈ ದುಡುಕು ಇಡೀ ಸಮಾಜಕ್ಕೆ ಕೆಡುಕು ತರುವುದು ಖಚಿತ. ಆ ಒಂದು ಕ್ಷಣ ತಾಳ್ಮೆಯ ಮಂತ್ರ ಜಪಿಸಿದರೆ ಜೀವನವಿಡೀ ಸನ್ಮಾರ್ಗದಲ್ಲಿ ಇರಬಹುದು. ಯಶಸ್ಸಿನ ರುಚಿ ಕಾಣಬಹುದು, ಸಾಧನೆಯ ಶಿಖರ ಏರಬಹುದು. ಪ್ರೀತಿ, ಪ್ರೇಮ ಇವು ಯೌವ್ವನದಲ್ಲಿ ಎದುರಾಗುವ ಒಂದು ಹಂತಗಳಷ್ಟೇ. ಇವುಗಳೇ ಸರ್ವಸ್ವವಲ್ಲ. ಯಾವ ವಯಸ್ಸಿಗೆ ಏನಾಗಬೇಕೋ ಅದು ಆಗೇ ಆಗುತ್ತದೆ. ನಮ್ಮ ಗುರಿ ತಲುಪುವುದರತ್ತ ನಮ್ಮ ಹೆಜ್ಜೆ ಇರಬೇಕು. ಸಾಧನೆಯ ಹಾದಿಯಲ್ಲಿ ಪ್ರೀತಿ, ಪ್ರೇಮದ ಸಂಗತಿಗಳು ವಿಘ್ನಗಳಾಗಬಾರದು. ಓದುವ ಹಂತ ಮಗಿದ ಮೇಲೆ ದುಡಿಮೆ ಶುರುವಾದ ಮೇಲೆ ವಯೋಸಹಜ ಕಾಮನೆಗಳು ಈಡೇರುವ ಸಂದರ್ಭ ಬಂದೇ ಬರುತ್ತದೆ. ಅದಕ್ಕಾಗಿ ಹಾತೊರೆಯುವ ಭರದಲ್ಲಿ ಬದುಕು ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಒಮ್ಮೆ ಕಾಲ ಹೆತ್ತವರು ಕಷ್ಟಪಟ್ಟು ಓದಲು ಶಾಲೆ, ಕಾಲೇಜುಗಳಿಗೆ ಕಳಿಸಿರುತ್ತಾರೆ. ಶುಲ್ಕ ಕಟ್ಟಿರುತ್ತಾರೆ. ಅದರ ಹಿಂದೆ ಅನೇಕ ನೋವಿನ, ಬೆವರಿನ ಶ್ರಮ ಇರುತ್ತದೆ. ಆದರೆ ಅವರು ಇದರ ಮಾಹಿತಿಯನ್ನು ಮಕ್ಕಳಿಗೆ ತಿಳಿಸದೇ ಅವರ ಏಳೆಗಾಗಿ ಎಲ್ಲವನ್ನೂ ಧಾರೆ ಎರೆದಿರುತ್ತಾರೆ. ಸಾಲ ಸೋಲ ಮಾಡಿ ಶಿಕ್ಷಣಕ್ಕೆ ಸಕಲ ವ್ಯವಸ್ಥೆ ಮಾಡುತ್ತಾರೆ. ಅದರ ಹಿಂದಿನ ಶ್ರಮ, ನೋವು ಅವರಿಗಷ್ಟೇ ಗೊತ್ತು. ಇದಕ್ಕೆ ಮಕ್ಕಳಾದವರು ಧಕ್ಕೆ ತಂದರೆ ಅವರಿಗಾಗುವ ಆಘಾತ ಅಷ್ಟಿಷ್ಟಲ್ಲ. ತಮ್ಮ ಕರುಳಕುಡಿಗಳ ಬಗ್ಗೆ ಅವರು ಕಟ್ಟಿಕೊಂಡ ಕನಸುಗಳು ನುಚ್ಚು ನೂರಾಗುತ್ತವೆ. ಆಕಾಶವೇ ಮೈ ಮೇಲೆ ಕಳಚಿ ಬಿದ್ದ ಅನುಭವ ಅವರದ್ದಾಗುತ್ತದೆ. ಒಂದರ್ಥದಲ್ಲಿ ಹೆತ್ತವರ ಕಣ್ಣೀರಿನ ಕರಾಳ ಪರಿಣಾಮ ಮಕ್ಕಳ ಭವಿಷ್ಯದ ಮೇಲೆ ಖಚಿತ ಎಂಬುದು ಆ ಸೂರ್ಯ ಚಂದಿರರಷ್ಟೇ ಸತ್ಯ. ಪ್ರೀತಿ, ಪ್ರೇಮದ ಪಾಶಕ್ಕೆ ಸಿಲುಕಿ ಮನೆಯವರಿಂದ ಕದ್ದು ಮುಚ್ಚಿ ಪ್ರಣಯ ಪಕ್ಷಿಗಳಂತೆ ಓಡಾಡುವವರಿಗೆ ಕ್ಷಣದ ಸುಖ ಅಥವಾ ಆಕರ್ಷಣೆಯ ಅಲೆಯಲ್ಲಿ ತೇಲುವುದೊಂದೇ ಮುಖ್ಯ ಎನಿಸುತ್ತದೆ. ಪಾಲಕರು ತೀವ್ರ ಪ್ರತಿರೋಧ ಒಡ್ಡಿದೊಡನೆ ಅವರನ್ನು ಬಿಟ್ಟು ಮನೆ ತೊರೆಯುವ ಪ್ರಕರಣಗಳೂ ಹಲವು ನಮ್ಮ ಮುಂದಿವೆ. ಈ ವೇಳೆ ಜೀವ ತೆತ್ತ ಉದಾಹರಣೆಗಳೂ ನೂರೆಂಟಿವೆ. ಬದಲಾದ ಸನ್ನಿವೇಶದಲ್ಲಿ ಇಂದಿನ ಯುವಕ ಯುವತಿಯರಿಗೆ ಎಲ್ಲವೂ ತಾವಂದುಕೊಂಡಂತೆ ಅಂದುಕೊಂಡಾಗ ಈಡೇರಲೇಬೇಕು. ಎಲ್ಲವೂ ಇನ್‌ಸ್ಟಂಟ್. ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಅಸಡ್ಡೆ ಭಾವನೆ ಹೆಚ್ಚಾಗುತ್ತಿದೆ. ಪಾಶ್ಚಾತ್ಯ ಅವಘಡಗಳು ಸಂಭವಿಸುತ್ತವೆ. ಇವು ಹೆತ್ತವರನ್ನು ಧರ್ಮಸಂಕಷ್ಟಕ್ಕೆ ಸಿಲುಕಿಸಿವೆ. ಅವರು ಮರ್ಯಾದೆಗೆ ಅಂಜಿ ಪ್ರಾಣವನ್ನೇ ಕೊಟ್ಟ ವಿದ್ಯಮಾನಗಳೂ ಅನೇಕ ನಡೆದಿವೆ, ನಡೆಯುತ್ತಿವೆ. ಇದು ಸ್ವಸ್ಥ ಸಮಾಜದ ಆಶಯಕ್ಕೆ ವಿರುದ್ಧವಾದ ವಿದ್ಯಮಾನ. ಇದನ್ನರಿತು ನಡೆಯಬೇಕಿರುವ ಮಹತ್ತರ ಜವಾಬ್ದಾರಿ ಯುವಜನಾಂಗದ ಮೇಲಿದೆ. ಏನಿದಕ್ಕೆ ಪರಿಹಾರ?: ಚಂಚಲ ಮನಸ್ಸಿನ ನಿಗ್ರಹ ಹೇಳಿದಷ್ಟು ಸುಲಭವಲ್ಲ, ಹಾಗಂತ ಅಸಾಧ್ಯವೇನಲ್ಲ. ಜೀವನದಲ್ಲಿ ಸ್ಪಷ್ಟವಾದ ಗುರಿ ಇರಬೇಕು. ಸಾಧಕರ ಯಶೋಗಾಥೆಗಳ ಅರಿವಿರಬೇಕು. ಸಾಧನೆಯ ಛಲ ಮತ್ತು ತುಡಿತವೂ ಇರಬೇಕು. ಇದಕ್ಕೆ ಹೆತ್ತವರ ಆಶೀರ್ವಾದವೂ ಬೇಕು. ಅವರ ಮನ ನೋಯಿಸಿ ಮಾಡುವ ಸಾಧನೆ ಇಲ್ಲ, ಇದ್ದರೂ ಅದು ಸಾಧನೆ ಎನಿಸಿಕೊಳ್ಳುವುದಿಲ್ಲ. ಸಾಧನೆ ಹೆತ್ತವರ ವೇದನೆಯನ್ನು ಅಡಗಿಸುವಂತಿರಬೇಕು. ಆ ಸಂತಸದ ಮನಸ್ಥಿತಿಯಿಂದ ಅವರು ಮಾಡುವ ಆಶೀರ್ವಾದ, ಹಾರೈಕೆ ಸಾರ್ವಕಾಲಿಕ ರಕ್ಷಾಕವಚವಿದ್ದಂತೆ. ಮನಸ್ಸು ಕೆರಳುವ ಬದಲು ಅರಳಬೇಕು. ಸಮಾಜಮುಖಿ ಹಾಗೂ ಜನಪರ ಚಿಂತನೆಗಳು ನಮ್ಮಲ್ಲಿ ಜಾಗೃತವಾಗಬೇಕು. ಹರ್ಷದ ಅನ್ನಕ್ಕಾಗಿ ವರ್ಷದ ಅನ್ನ ಕಳೆದುಕೊಳ್ಳುವಂತಾಗಬಾರದು.

About Author:

Leave Your Comments

Your email address will not be published. Required fields are marked *