COVID-19 Resources for Mental Health Coaches... Learn More

0836-2773878

“ಸಾಧನೆ ಬೆನ್ನತ್ತಿದವಳಿಗೆ ಜಾಗತಿಕ ಮನ್ನಣೆ”

ಕೆಲದಿನಗಳ ಹಿಂದಿನ ಮಾತು. ಶತಕೋಟಿ ಭಾರತೀಯರು ಕಂಡಿದ್ದ ಚಿನ್ನದ ಪದಕದ ಕನಸು ಭಗ್ನವಾಯಿತು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕುಸ್ತಿ 50 ಕೆಜಿ ಫ್ರೀ ಸೈಲ್ ಮಹಿಳಾ ವಿಭಾಗದಲ್ಲಿ ದಿಗ್ಗಜರನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದ ಭಾರತೀಯ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ತೂಕ ಹೆಚ್ಚಿದೆಯೆಂಬ ಕಾರಣವೊಡ್ಡಿ ಹೊರಹಾಕಲಾಯಿತು. ಒಲಿಂಪಿಕ್ಸ್ ಅಂಗಳದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುವ ಉತ್ಕಟ ಇಚ್ಛೆಯೊಂದಿಗೆ ಪ್ಯಾರಿಸ್‌ಗೆ ತೆರಳಿದ್ದ ವಿನೇಶ್ ಚೊಚ್ಚಲ ಚಿನ್ನದ ಪದಕ ತಂದೇ ತರುತ್ತಾಳೆ ಎನ್ನುವ ಬಲವಾದ ಆತ್ಮವಿಶ್ವಾಸ ಹೊಂದಿದ್ದ ಭಾರತೀಯರು ಆಘಾತ ಅನುಭವಿಸಿದರು. ಒಲಿಂಪಿಕ್ಸ್‌ನ ಕಟ್ಟುನಿಟ್ಟಾದ ನಿಯಮಗಳ ಅಬ್ಬರಕ್ಕೆ ವಿನೇಶ್‌ಳ ಆಸೆ ಕಮರಿತು. ಆದರೆ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಫೈನಲ್ ಪ್ರವೇಶಿಸಿದ ಆಕೆಗೆ ಭಾರತೀಯರು ಹೇಳಿದ, ‘ಚಿನ್ನದ ಪದಕ ಗೆಲ್ಲದಿದ್ದರೆ ಏನಾಯಿತು. ನೀನಿಂದು ಶತಕೋಟಿ ಭಾರತೀಯರ ಹೃದಯ ಗೆದ್ದೆ ಎಂಬ ಮಾತು ಎಷ್ಟು ಅರ್ಥಗರ್ಭಿತ ಮತ್ತು ಈ ಕ್ಷಣಕ್ಕೆ ಮಹತ್ತರ ಎನ್ನುವುದನ್ನು ಅರಿಯಬೇಕಿದೆ.

ಸತತ ಪರಿಶ್ರಮ, ಕಠಿಣ ಅಭ್ಯಾಸ ಮಾಡಿ ಮತ್ತೆ ಸ್ಪರ್ಧೆಗೆ ಸವಾಲೊಡ್ಡಬಹುದು. ಜೀವನದಲ್ಲಿ ಈ ತರಹದ ಹಿನ್ನಡೆಗಳು ಕ್ಷಣಿಕ. ಇಂತಹ ಅನೇಕ ಸೋಲುಗಳನ್ನೇ ಸವಾಲಾಗಿ ಸ್ವೀಕರಿಸಿದರೆ ಗೆಲವು ನಮ್ಮ ಪಾದದಡಿ ಬೀಳುತ್ತದೆ. ಸೋಲು ಅಂತಿಮವಲ್ಲ. ಗೆಲುವು ಶಾಶ್ವತವಲ್ಲ. ಸಮಯ ನಿಲ್ಲುವುದಿಲ್ಲ, ಸಾಧನೆ ನಿಲ್ಲಿಸಿದರೆ ಅದು ತರವಲ್ಲ. ಈ ಮಾತುಗಳು ನಮ್ಮಲ್ಲಿ ಅನುರಣಿಸಿದರೆ ಎಂತಹ ಸವಾಲನ್ನಾದರೂ ನಾವು ಎದುರಿಸಬಲ್ಲೆವು. ಇದಕ್ಕೆಲ್ಲ ಬೇಕು మనూటల జలిగి మక్కావక్తి ಅದರಲ್ಲೂ ಕ್ರೀಡಾಸ್ಫೂರ್ತಿಯನ್ನು ರಕ್ತಗತವಾಗಿಸಿಕೊಂಡ ವಿನೇಶ್‌ಗೆ ಛಲದ ಬಲ, ನೂರಾರು ಕೋಟಿ ಭಾರತೀಯರ ಹಾರೈಕೆಯ ಫಲದಿಂದ ಆಕೆ ಸಾಧನೆ ಮಾಡಿದಳು. ಇಲ್ಲಿ ಪೋಗಟ್‌ಗೆ ಆದ ಹಿನ್ನಡೆ ಮತ್ತು ಆ ಕ್ಷಣದಲ್ಲಿ ಭಾರತೀಯರು ಆಕೆಯ ಬೆನ್ನಿಗೆ ನಿಂತ ಪರಿ ಇಡೀ ದೇಶಕ್ಕೆ ಒಂದು ಸಂದೇಶವನ್ನು ಸಾರಿದೆ ಅದೇನೆಂದರೆ ಪ್ರಾಮಾಣಿಕ ಯತ್ನದ ಹೊರತಾಗಿಯೂ ಇನ್ನಾರದೋ ಪ್ರಮಾದದಿಂದ ಆದ ಹಿನ್ನಡೆ ಸೋಲಲ್ಲ, ಅದು ಗೆಲುವಿನ ಮೆಟ್ಟಿಲು ಎಂಬುದು ಇಲ್ಲಿ ಸ್ಪಷ್ಟ.

ವಿನೇಶ್ ಪೋಗಟ್ ಳಂತಹ ಅನೇಕ ಸಾಧಕರು ನಮ್ಮ ಮಧ್ಯೆ ಇದ್ದಾರೆ. ಪಾಲಕರ ಕನಸು ನನಸಾಗಿಸಲು ಕ್ರೀಡೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆಯ ಗುರಿ ಇಟ್ಟುಕೊಂಡು ಹಗಲಿರುಳು ಶ್ರಮಿಸುವವರಿದ್ದಾರೆ. ಸಾಧನೆಯ ತುಡಿತವೊಂದಿದ್ದರೆ ಸಾಕು ಎನನ್ನಾದರೂ ಸಾಧಿಸಬಹುದು ಎನ್ನಲು ಈ ವಿನೇಶ್‌ಳೇ ಉತ್ತಮ ನಿದರ್ಶನ, ತನ್ನ ಮಗಳು ಕುಸ್ತಿಪಟು ಆಗಬೇಕೆಂದು ಕನಸು ಕಂಡಿದ್ದ ವಿನೇಶಳ ತಂದೆಯ ಆಸೆಯೂ ಇಲ್ಲಿ ಗಮನಾರ್ಹ. 8ನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದೊಂಡರೂ ತಂದೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಚಿಕ್ಕಪ್ಪನ ನೆರವಿನಿಂದ ಕುಸ್ತಿಯಲ್ಲಿ ತರಬೇತಿ ಪಡೆದು ಮುಂದೆ ದೇಶಕ್ಕೆ ಕೀರ್ತಿ ತರುತ್ತಾಳೆ. ತಂದೆಯ ಕನಸು ನನಸು ಮಾಡುವ ದಾರಿಯಲ್ಲಿ ಆಕೆಗೆ ಮೊನ್ನೆ ಹಿನ್ನಡೆಯಾದರೂ ಆಕೆಯ ಶ್ರಮಕ್ಕೆ ಯತ್ನಕ್ಕೆ ಈ ಹಿನ್ನಡೆ ತಾತ್ಕಾಲಿಕ. 2016 ರಿಂದ ಹಿಡಿದು ಇಲ್ಲಿವರೆಗೆ ಒಲಿಂಪಿಕ್ಸ್ ನಲ್ಲಿ ಭಿನ್ನ ತೂಕದ ವಿಭಾಗದಲ್ಲಿ ಸಾಧನೆಯ ಹೆಜ್ಜೆಗುರುತುಗಳನ್ನು ಬಲವಾಗಿ ಊರುತ್ತಾ ಬಂದ ಈಕೆ ನಮ್ಮ ದೇಶದ ಹಿರಿಯ ಮಹಿಳಾ ಕುಸ್ತಿಪಟುವೂ ಹೌದು, ಸೌಲಭ್ಯಗಳು ಸಾಧನೆಗೆ ಪೂರಕ ಮತ್ತು ಆತ್ಯಗತ್ಯ ಎಂಬುದನ್ನು ಒಪ್ಪಿಕೊಂಡರೂ ಗುರಿಯತ್ತ ದಿಟ್ಟ ಹೆಜ್ಜೆ, ಮನಸ್ಸು ತುಂಬಾ ಅವಶ್ಯ. ಇದು ವಿನೇಶ್ ಫೋಗಟ್ಗೆ ಗೊತ್ತಿತ್ತು. ಆಕೆ ಅನುಸರಿಸಿದ್ದೂ ಅದನ್ನೇ, ಹೋರಾಟದ ಕಿಚ್ಚು ಸಾಧನೆಯ ತುಡಿತ ವಿನೇಶ್‌ಳನ್ನು ಗೆಲುವಿನ ಕೊನೆಹಂತಕ್ಕೆ ತಂದು ನಿಲ್ಲಿಸಿತು. ಕೇವಲ 100 ಗ್ರಾಂ ತೂಕ ಈಕೆಗೆ ಅನರ್ಹತೆ ಶಿಕ್ಷೆ ನೀಡಿತಾದರೂ ಆಕೆಯಲ್ಲಿನ ಕ್ರೀಡಾಸ್ಫೂರ್ತಿಯ ಕಕ್ಷೆಯನ್ನು ತಲುಪಲಾಗಲಿಲ್ಲ. ಈ ಮಧ್ಯೆ ಭಾರತೀಯರು ನೀಡಿದ ಬೆಂಬಲ, ತೋರಿದ ಪ್ರೀತಿ ಹಿನ್ನಡೆಯ ಕಹಿಯನ್ನು ಮರೆಸಿದೆ. ವಿನೇಶ್ ಫೋಗಟ್ ಪದಕ ಕಳೆದುಕೊಂಡರೂ, ಅವಳ ಈವರೆಗಿನ ಕೆಚ್ಚೆದೆಯ ಪ್ರದರ್ಶನ ಶತಕೋಟಿ ಭಾರತೀಯರ ಮನಗೆದ್ದಿದೆ. ಹಲವರಲ್ಲಿ ಸಾಧನೆಯ ಹಂಬಲ ಮೂಡಿಸಿದೆ. ಈಕೆಯ ಹಾದಿಯಲ್ಲೇ ಪ್ರತಿಯೊಬ್ಬ ಸಾಧಕ ನಾಧಕಿಯರು ಸಾಗಿದ್ದೇ ಆದಲ್ಲಿ ತಮ್ಮ ಗೆಲುವಿನ ರಹದಾರಿಯಲ್ಲಿ ವೇದನೆಯನ್ನೇ ಕಾಣುವುದಿಲ್ಲ. ಸಾಧನೆ ಸಾಧಕರ ಸ್ವತ್ತು, ಪ್ರಾಮಾಣಿಕ ಪ್ರಯತ್ನಕ್ಕೆ ಇದೆ ಅಷ್ಟೊಂದು ತಾಕತ್ತು. ಇದನ್ನರಿತು ಸಾಗಿದರೆ ನಮ್ಮ ನಿಮ್ಮೆಲ್ಲರ ಬದುಕು ಆಗುವುದು ಸಂತಸದ ಸಂಪತ್ತು.

About Author:

Leave Your Comments

Your email address will not be published. Required fields are marked *