COVID-19 Resources for Mental Health Coaches... Learn More

0836-2773878

“ಸಮೂಹಸನ್ನಿಯೆಂಬ ಮಾನಸಿಕ ತುಮುಲಕ್ಕೆ ವಿವೇಚನೆಯೇ ಮದ್ದು!”


ಮೊನ್ನೆ ಒಬ್ಬ ನನ್ನ ಹತ್ತಿರ ಬಂದಿದ್ದ. ಆತನಿಗೆ 35 ವರ್ಷ. ಆತನಿಗೆ ಮೊದಲಿನಿಂದಲೂ ಈ ಜಾತ್ರೆ, ಸಮಾವೇಶ, ಜನಸೇರುವ ಕಾರ್ಯಕ್ರಮಗಳು ಎಂದರೆ ಭಾರಿ ಉನ್ಮಾದ. ಹುಚ್ಚೆದ್ದು ಕುಣಿಯುತ್ತಾನೆ. ಮೈಮರೆತು ಭಾಗಿಯಾಗುತ್ತಾನೆ. ಅದರ ಸಾಧಕ ಬಾಧಕ ಅಥವಾ ಪರಿಣಾಮದ ಬಗ್ಗೆ ಎಳ್ಳಷ್ಟೂ ಆತನಿಗೆ ಆಲೋಚನೆಯಿಲ್ಲ. ಹೀಗೆ ಉನ್ಮಾದದಿಂದ ಭಾಗಿಯಾಗಿ ದೈಹಿಕ ನ್ಯೂನತೆಗೆ ಒಳಗಾದ ನಂತರ ಇದೀಗ ಭಯಭೀತನಾಗಿದ್ದಾನೆ. ವಿಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಇದೊಂದು ರೀತಿ ಮಾನಸಿಕ ತುಮುಲ. ಅದು ಶಾರೀರಿಕ ರೂಪದಲ್ಲಿ ವ್ಯಕ್ತವಾಗುತ್ತದೆ. ಇದು ಸಮೂಹಸನ್ನಿಯ ಪರಿಣಾಮ ಮತ್ತು ಒಂದು ಪ್ರಕಾರ. ಇದನ್ನು ಮನೋವಿಜ್ಞಾನದಲ್ಲಿ ಮಾನ್ ಹಿಸ್ಟೀರಿಯಾ ಎನ್ನಲಾಗುತ್ತದೆ. ಸಮಾಜದಲ್ಲಿ ನಡೆಯುವ ಘಟನೆಗಳು, ಆಚರಣೆಗಳಲ್ಲಿ ಬೇರೊಬ್ಬರನ್ನು ಅನುಸರಿಸುವುದು ಇದರ ಲಕ್ಷಣ. ಇದಕ್ಕೆ ಉದಾಹರಣೆ ಕೊಡಬಹುದಾದ ಘಟನೆಗಳು ನಮ್ಮ ಮಧ್ಯೆ ಅನೇಕ ಸಂಭವಿಸಿವೆ. ಸಂಭವಿಸುತ್ತಲೇ ಇವೆ. ನಾವು -ನೀವು ಮೂಕ ಸಾಕ್ಷಿಯಾಗುತ್ತಿದ್ದೇವೆ.
ಈ ಕಾಯಿಲೆ ಇರುವ ವ್ಯತಿಯಲ್ಲಿ ತಾನು ಸಾಮೂಹಿಕ ಆಚರಣೆ ಅಥವಾ ಘಟನೆಯಲ್ಲಿ ಪಾಲ್ಗೊಂಡರೆ ಸಮಸ್ಯೆಯಿಂದ ಹೊರಬರುತ್ತೇನೆ ಎಂಬ ಭಾವನೆ ಬಲವಾಗಿ ಬೇರೂರಿರುತ್ತದೆ. ಅದ್ದರಿಂದ ಉನ್ಮಾದದಿಂದ ಪಾಲ್ಗೊಳ್ಳುವುದು ಆತನ ಸಹಜ ಹವ್ಯಾಸವಾಗಿಬಿಡುತ್ತದೆ. ಜರ್ಮನಿಯಲ್ಲಿ ಹಿಟ್ಲರ್ ಕಾಲದಲ್ಲಿ ಸಮೂಹ ಸನ್ನಿ ಇತ್ತು. ಇದರ ಪರಿಣಾಮ ಸುಮಾರು 70 ಲಕ್ಷ ಮಂದಿಯ ಹತ್ಯೆ ನಡೆಯಿತು. ಈಗ ಮೊನ್ನೆ ನನ್ನ ಬಳಿ ಬಂದ ವ್ಯಕ್ತಿಯೂ ಊರಿನಲ್ಲಿ ನಡೆಯುವ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಬಹಳ ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮವದು. ಆಗ ಸಂಭವಿಸಿದ ನೂಕುನುಗ್ಗಲಿನಲ್ಲಿ ಈತ ದೈಹಿಕವಾಗಿ ಗಾಯಗೊಂಡ ಗಾಯ ಆದ ಕ್ಷಣ ಈತನಿಗೆ ಮೈ ಮೇಲೆ ಯಾವುದೇ ಅರಿವಿಲ್ಲ. ಅದರ ನೋವಿನ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಅಷ್ಟರ ಮಟ್ಟಿಗೆ ಉನ್ಮಾದ ಅವನಲ್ಲಿತ್ತು. ಏನಾಗಿದೆ ತನಗೆ ಮತ್ತು ಏನು ನಡೆಯುತ್ತಿದೆ. ಇಲ್ಲಿ ಬರಬಾರದಿತ್ತು ಎನ್ನುವ ಕನಿಷ್ಠ ಪ್ರಜ್ಞೆಯೂ ಆತನಿಗಿರಲಿಲ್ಲ. ಇದಾದ ಮೇಲೆ ಆತನನ್ನು ಅವರ ಪಾಲಕರು ಕರೆದುಕೊಂಡು ಬಂದರು. ಆತನ ಹಿನ್ನೆಲೆ ವಿಚಾರಿಸಿದಾಗ ಕಂಡು ಬಂದ ಸಂಗತಿ ಎಂದರೆ ಇದು ಸಮೂಹಸನ್ನಿಯ ಎಫೆಕ್ಟ್ ಎಂಬುದು.
ಅಸಾಮಾನ್ಯ ವರ್ತನೆ ಅಥವಾ ಅಲೌಕಿಕ ಮಾತುಗಳು ಸಮೂಹಸನ್ನಿ ಅಥವಾ ಭ್ರಮಾಲೋಕದಲ್ಲಿ ಇರುವವರ ಪ್ರಮುಖ ಗುಣಲಕ್ಷಣಗಳು. ಇಂಥವರು ಬಲು ಎಚ್ಚರದಿಂದಿರಬೇಕು. ಕಾಲಕಾಲಕ್ಕೆ ಮನೋವೈದ್ಯರ ಬಳಿ ತೋರಿಸುತ್ತಿರಬೇಕು. ಕೌನ್ಸೆಲಿಂಗ್ ಮೂಲಕವೂ ಇವರ ಮನಸ್ಥಿತಿ ಅರಿತು ಅದನ್ನು ಸರಿದಾರಿಗೆ ತರುವ ಯತ್ನ ಮಾಡಬೇಕು. ಅವರು ಸೂಚಿಸುವ ಮಾತ್ರೆಗಳನ್ನು ತಪ್ಪದೇ ಬಳಸಬೇಕು, ಭಾವನೆಗಳ ಏರುಪೇರು ಆಗದಂತೆ ಎಚ್ಚರ ವಹಿಸಬೇಕು. ಅದರ ಬದಲು ಯಾವುದೋ ಮೌಡ್ಯದ ಕೂಪಕ್ಕೆ ಅವರನ್ನು ತಳ್ಳಬಾರದು. ಈ ರೋಗಕ್ಕೆ ತುತ್ತಾಗುವ ವ್ಯಕ್ತಿಗೆ ಸ್ವಂತ ವಿವೇಚನ ಶಕ್ತಿ ಇದ್ದರೂ ಆಲೋಚಿಸುವಷ್ಟು ವ್ಯವಧಾನ ಇರುವುದಿಲ್ಲ. ಇಡೀ ಸಮಾಜದ ಜನ ಅಲ್ಲಿ ಸೇರುತ್ತಾರೆ. ಅವರಿಗೆ ಆಗದ್ದು ನನಗಷ್ಟೇ ಆಗುತ್ತದೆಯೇ ಎಂಬ ವಿತಂಡವಾದ. ತರ್ಕಬದ್ಧವಾಗಿ ಪರಿಸ್ಥಿತಿಯನ್ನು ಅವಲೋಕಿಸುವ ಗುಣ ಆ ವ್ಯಕ್ತಿಯಲ್ಲಿ ಇರುವುದಿಲ್ಲ. ಮತ್ತೊಬ್ಬರು ಮಾಡುತ್ತಾರೆ ತಾನೂ ಮಾಡಬೇಕು ಅಷ್ಟೇ. ಇದು ಆ ವ್ಯಕ್ತಿಯ ವೃತ್ತಿ ಜೀವನ ಮತ್ತು ಕೌಟುಂಬಿಕ ವಲಯದಲ್ಲೂ ಪರಿಣಾಮ ಬೀರುತ್ತದೆ. ಏಕೆಂದರೆ ಮನಸ್ಥಿತಿಗೂ ದೇಹದ ಆರೋಗ್ಯಕ್ಕೂ ನೇರ ಸಂಬಂಧ. ವ್ಯಕ್ತಿ ತನಗೆ ಯಾವುದೋ ಕಾಯಿಲೆ ಅಂಟಿಕೊಂಡಿದೆ ಎಂಬ ಭ್ರಮೆಗೆ ಒಳಗಾದನೆಂದರೆ ಅದು ಹೈಪೋಕಾಂಡ್ರಿಯಾ ಅಥವಾ ರೋಗಭ್ರಮೆಯಾಗಿ ಹೊರಹೊಮ್ಮುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಆತ ಪಡುವ ಕಷ್ಟ ಅಷ್ಟಿಷ್ಟಲ್ಲ. ಇದು ಆತನ ಪಾಲಕ ಪೋಷಕರಿಗೂ ವೈಯಕ್ತಿಕವಾಗಿ ಆತನಿಗೂ ತೊಂದರೆ. ಯುವಕನಾಗಿದ್ದರೆ ಈ ತರಹದ ಲಕ್ಷಣಗಳಿದ್ದವನನ್ನು ಯಾರು ತಾನೆ ಮದುವೆಯಾಗುತ್ತಾರೆ ಹೇಳಿ? ಹೀಗಾದಾಗ ಕೌಟುಂಬಿಕ ವಲಯದಲ್ಲೂ ಆ ವ್ಯಕ್ತಿ ಹಿನ್ನಡೆ ಅನುಭವಿಸುವಂತಾಗುತ್ತದೆ. ಅದು ಇನ್ನೊಂದು ಮಾನಸಿಕ ಭಿನ್ನತೆಗೆ ಎಡೆ ಮಾಡಿಕೊಡುತ್ತದೆ. ಸಂಭ್ರಮದ ವಿಷಯ ಬಂದಾಗ ಮನುಷ್ಯ ಭಾವೋದ್ವೇಗಕ್ಕೆ ಒಳಗಾಗುವುದು ಸಹಜ. ಆ ಕ್ಷಣದಲ್ಲಿ ಆತನ ಉನ್ಮಾದ ಆತನಿಗೆ ಗೊತ್ತಿಲ್ಲದೇ ಕೈ ಮೀರುತ್ತದೆ.
ಇದಕ್ಕೆ ಪರಿಹಾರ ಎಂದರೆ ತರ್ಕಬದ್ಧ ವಿಚಾರಣಾ ಶಕ್ತಿ ಬೆಳೆಸಿಕೊಳ್ಳುವುದು ಮತ್ತು ಮೌಡ್ಯಗಳನ್ನು ಬಿಡುವುದು. ನಾವಿಂದು 21ನೇ ಶತಮಾನದ ಡಿಜಿಟಲ್ ಯುಗದಲ್ಲಿದ್ದೇವೆ. ಎಐನಂತಹ ಅದ್ಭುತ ತಂತ್ರಜ್ಞಾನದ ಪರ್ವಯುಗದ ನಾಗಾಲೋಟದಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ಇಂಥದರಲ್ಲಿ ಉದ್ದೇಗ, ಉನ್ನಾದದಂತಹ ಮನಸ್ಥಿತಿಯಿಂದ ಹೊರಬಂದು ವಾಸ್ತವಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಬೇಕು. ತಾನು ಮಾಡುತ್ತಿರುವ ಚಟುವಟಿಕೆಯ ಪರಿಣಾಮದ ಬಗ್ಗೆ ಒಂದಿಷ್ಟು ಕನಿಷ್ಠ ಪ್ರಜ್ಞೆಯಾದರೂ ಬೇಕು. ಮನಸ್ಸು ಮೊದಲೇ ಚಂಚಲ. ಅದನ್ನು ಹಿಡಿತದಲ್ಲಿಟ್ಟುಕೊಂಡು ಸಾಗಿದರೆ ವಿಲವಿಲ ಒದ್ದಾಡುವುದು ತಪ್ಪುತ್ತದೆ. ಸ್ವಂತ ಬುದ್ದಿ ಶಕ್ತಿಯ ಬಳಕೆ ಮತ್ತು ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಿರ್ಧರಿಸುವಲ್ಲಿ ವ್ಯಕ್ತಿ ಯಶಸ್ವಿಯಾದನೆಂದರೆ ಯಾವ ಸಮೂಹಸನ್ನಿಯ ಅಪಾಯವೂ ಇಲ್ಲ. ಆ ವಿವೇಚನಾಶಕ್ತಿ ಜಾಗೃತ ಇರಬೇಕಷ್ಟೇ.

About Author:

Leave Your Comments

Your email address will not be published. Required fields are marked *