COVID-19 Resources for Mental Health Coaches... Learn More

0836-2773878

“ಸಕಾಲಿಕ ಚಿಕಿತ್ಸೆ ಪಡೆಯುವುದರಿಂದ ಸಮಸ್ಯೆಗೆ ಮುಕ್ತಿ”

ಬದುಕಿನಲ್ಲಿ ಸಕಾಲಿಕ ನಿರ್ಧಾರಗಳು ಹೇಗೆ ಪರಿಣಾಮಕಾರಿ ಯಾಗಿರುತ್ತವೆಯೋ ಹಾಗೆಯೇ ದೈಹಿಕ ಮತ್ತು ಮಾನಸಿಕ ಆರೋಗ್ಯದ ವಿಚಾರದಲ್ಲೂ ಸಕಾಲಿಕ ಚಿಕಿತ್ಸೆ ಕೂಡ ಅಷ್ಟೇ ನಿರ್ಣಾಯಕವಾಗಿರುತ್ತವೆ. ಕಾಲ ಮಿಂಚಿದ ಮೇಲೆ ತೆಗೆದುಕೊಳ್ಳುವ ಒಂದು ಒಳ್ಳೆಯ ನಿರ್ಧಾರವೂ ವ್ಯರ್ಥವಾಗುತ್ತದೆ. ಅದಕ್ಕೆ ಟೈಮಿ ಡಿಸಿಸನ್ ತುಂಬಾನೇ ಮಹತ್ವದ್ದು.

ಇದಕ್ಕೆ ಒಂದು ನಿದರ್ಶನ ಇಲ್ಲಿದೆ. ಆಕೆ 25ರ ಯುವತಿ. ಪದವಿ ಓದಿದ್ದಾಳೆ. ಲೌಕಿಕ ಜ್ಞಾನ ಚೆನ್ನಾಗಿದೆ. ವಯಸ್ಸಹಜವಾಗಿ ಮನೆಯಲ್ಲಿ ಆಕೆಗೆ ಒಂದು ಗಂಡು ಹುಡುಕಿ ಮದುವೆ ನಿಶ್ಚಯಿಸಿದರು. ಅದರಂತೆ ಮದುವೆಗೆ ಎಲ್ಲ ಅದ್ದೂರಿ ಸಿದ್ಧತೆಗಳೂ ನಡೆದವು. ದಿನವೂ ಫಿಕ್ಸ್ ಆಯಿತು. ಬೀಗರು ಬಂಧುಗಳು ಸೇರಿದರು. ಮನೆಯಲ್ಲಿ ಸಂತಸದ ವಾತಾವರಣ. ಈ ಭರಾಟೆ ಮಧ್ಯೆ ವಧುವಿನಲ್ಲಿನ ಬದಲಾವಣೆ ಯಾರ ಗಮನಕ್ಕೂ ಬಂದಿಲ್ಲ. ಅದಕ್ಕೆ ಅವರು ತೆತ್ತ ಬೆಲೆ ಆಘಾತಕಾರಿ, ಹೌದು, ವಧು ಕಳೆದ ಒಂದು ತಿಂಗಳಿನಿಂದ ಮೌನಕ್ಕೆ ಶರಣಾಗಿದ್ದಳು. ಎಂದಿನ ಉತ್ಸಾಹ, ಲವಲವಿಕೆ ಇರಲಿಲ್ಲ. ಏಕಾಂತವನ್ನೇ ಹೆಚ್ಚು ಬಯಸುತ್ತಿದ್ದಳು. ಆದರೆ ಇದನ್ನು ಯಾರೂ ಊಹಿಸಿರಲಿಲ್ಲ ಮತ್ತು ಗಮನಿಸಿರಲಿಲ್ಲ. ಇನ್ನೇನು ಮದುವೆ ಮುಹೂರ್ತ ಬಂತು. ವರ ತಾಳಿ ಕಟ್ಟಬೇಕು ಎನ್ನುವ ತುಸು ಹೊತ್ತು ಮುನ್ನ ವರನ ಕಡೆಯವರಿಗೆ ವಧುವನ್ನು ನೋಡಿ ಸ್ವಲ್ಪ ಸಂಶಯ ಬಂದಿದೆ. ವಧು ಯಾಕೋ ಮೌನವಾಗಿದ್ದಾಳೆ. ಮುಖದಲ್ಲಿ ಮಂದಹಾಸವಿಲ್ಲ, ಚೈತನ್ಯವಿಲ್ಲ, ಏನೋ ಕಾಯಿಲೆ ಅಥವಾ ಬೇರೆ ಬಲವಾದ ಕಾರಣದಿಂದಾಗಿ ಹೀಗಾಗಿದೆ, ಅದಕ್ಕೇ ವಧು ಹೀಗೆ ಆಡುತ್ತಿದ್ದಾಳೆ. ಇಂತಹ ಹುಡುಗಿ ನಮ್ಮ ಮನೆ ಸೊಸೆಯಾಗಿ ಬರುವುದು ಬೇಡ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇ ತಡ. ಮದುವೆ ನಿಲ್ಲಿಸಿಯೇ ಬಿಟ್ಟರು.

ಸಂಭ್ರಮ, ಸಡಗರ ಕಳೆಗಟ್ಟಿದ್ದ ಕಲ್ಯಾಣಮಂಟಪದಲ್ಲಿ ದಿಢೀರ್ ನೆ ಸೂತಕದ ಛಾಯೆ ಆವರಿಸಿತು. ಹೆಣ್ಣಿನವರಿಗೆ ಅನಿರೀಕ್ಷಿತ ಆಘಾತ ಎದುರಾಯಿತು. ಮಗಳ ಭವಿಷ್ಯದ ಕಥೆ ಏನು? ಮರ್ಯಾದೆ ಪ್ರಶ್ನೆ. ಊರಲ್ಲಿ ತಲೆ ಎತ್ತಿ ಅಡ್ಡಾಡುವುದು ಹೇಗೆ? ಬದುಕೇ ಸ್ತಬ್ಧವಾದ ಅನುಭವ. ಯಾಕೆ ಹೀಗಾಯ್ತು? ನಾವು ಎಡವಿದ್ದೆಲ್ಲಿ? ಎಂಬೆಲ್ಲ ಆಲೋಚನೆಗಳು ಶುರುವಾದವು. ಕೊನೆಗೆ ಮಗಳನ್ನು ಕರೆದು ವಿಚಾರಿಸಿದಾಗ ಆಕೆಗೂ ತನ್ನ ನಡವಳಿಕೆ ಬಗ್ಗೆ ಅಥವಾ ಈ ಬದಲಾವಣೆ ಬಗ್ಗೆ ಅರಿವಿಲ್ಲ. ಖಿನ್ನತೆಯೂ ಅಲ್ಲ. ಆದರೆ ಚಿತ್ತ ಚಂಚಲವಾಗಿತ್ತು. ಕೊನೆಗೆ ಯಾರೋ ಪರಿಚಯದವರು ಒಬ್ಬರು ಮನೋವೈದ್ಯರನ್ನು ಭೇಟಿಯಾಗಿ ಎಂದು ಹೇಳಿದ ಮಾತು ಆ ಹುಡುಗಿಯನ್ನು ನನ್ನ ಬಳಿ ತಂದು ನಿಲ್ಲಿಸಿತ್ತು. ಜತೆಗೆ ಬಂದ ಪಾಲಕರು ಆದ ಘಟನೆಯ ಎಲ್ಲ ವೃತ್ತಾಂತವನ್ನು ಸವಿವರವಾಗಿ ವಿವರಿಸಿದರು. ತಮ್ಮ ಅಳಲು ತೋಡಿಕೊಂಡರು.

ಈ ತರಹದ ಸಮಸ್ಯೆಗೆ ಮನೋವೈದ್ಯಕೀಯ ಪರಿಭಾಷೆಯಲ್ಲಿ ಸಂಕ್ಷಿಪ್ತ ಚಿತ್ತವೈಕಲ್ಯ (Brief psychotic episode)) ಎಂದು ಕರೆಯುತ್ತಾರೆ. ಸಂಶಯ ವ್ಯಕ್ತಪಡಿಸುವುದು, ಯಾರೇ ಮಾತನಾಡುತ್ತಿರುವವರನ್ನು ನೋಡಿದರೆ ಅವರು ನನ್ನ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದಾರೆ ಅಂದುಕೊಳ್ಳುವುದು, ಹೆದರುವುದು. ಕಿವಿಯಲ್ಲಿ ಯಾರೋ ಬಂದು ಏನೋ ಹೇಳಿದಂತಾಗುವುದು ಈ ಮನೋಕಾಯಿಲೆಯ ಕೆಲ ಲಕ್ಷಣ. ಬೇಗನೇ ಚಿಕಿತ್ಸೆ ನೀಡುವದರಿಂದ ಒಂದು ವಾರದಲ್ಲಿ ಸಾಕಷ್ಟು ಗುಣಮುಖವಾಗುತ್ತಾರೆ. ಕನಿಷ್ಠ 3-4 ತಿಂಗಳು ಚಿಕಿತ್ಸೆ ನೀಡಬೇಕಾಗುತ್ತದೆ. ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಸಹಜವಾಗಿ ಬಾಳಬಹುದು. ಈ ಸಮಸ್ಯೆ ಇದ್ದ ಕೆಲ ಜನರಲ್ಲಿ ಒತ್ತಡದ ಸನ್ನಿವೇಶದಲ್ಲಿ ಕಾಯಿಲೆ ಪುನರಾವರ್ತನೆ ಆಗುವ ಸಾಧ್ಯತೆ ಇರುತ್ತದೆ. ಕೂಡಲೇ ಮನೋವೈದ್ಯರ ಭೇಟಿಯಾದರೆ ಅಲ್ಲಿಯೇ ಆ ಸಮಸ್ಯೆ ಪರಿಹಾರ ಕಾಣುತ್ತದೆ. ಸಕಾಲಿಕ ಚಿಕಿತ್ಸೆ ಇಲ್ಲಿ ಬಲು ಮುಖ್ಯ. ಅದರಂತೆ ಈ ಹುಡುಗಿಯನ್ನು ಅವರು ಸಕಾಲಕ್ಕೆ ಕರೆದುಕೊಂಡು ಬಂದರು. ಅದಕ್ಕೆ ಅಗತ್ಯ ವೈಜ್ಞಾನಿಕ ಚಿಕಿತ್ಸೆ ನೀಡಿದೆ. ಚಿಕಿತ್ಸೆ ಆರಂಭವಾದ 15 ದಿನದಲ್ಲಿ ಆಕೆ ಸಹಜ ಸ್ಥಿತಿಗೆ ಬಂದಳು. ಮುಖದಲ್ಲಿ ಲವಲವಿಕೆ, ಎಂದಿನ ಉತ್ಸಾಹ ಮರಳಿತ್ತು. ಈ ವಿಷಯವನ್ನು ಗಂಡಿನವರಿಗೆ ತಿಳಿಸಿ ನೋಡೋಣ ಎಂದು ಹುಡುಗಿಯ ಪಾಲಕರು ಕಾರ್ಯಪ್ರವೃತ್ತರಾದರು. ಅದೇನು ಆಶ್ಚರ್ಯವೋ ಗೊತ್ತಿಲ್ಲ. ಹುಡುಗಿಯನ್ನು ನೋಡಿ ಅವರು ನಮ್ಮಕಡೆ ಬಂದು ನಮ್ಮಿಂದ ಎಲ್ಲ ವಿಷಯವನ್ನು ತಿಳಿದುಕೊಂಡು ಸಂತೋಷಪಟ್ಟರು. ನಮಗೆ ಈ ಹುಡುಗಿ ಇಷ್ಟವಿತ್ತು, ಆದರೆ ಸನ್ನಿವೇಶ ಹಾಗೆ ಮಾಡಿಸಿತ್ತು, ಖಂಡಿತವಾಗಿಯೂ ಮುಂದುವರಿಯೋಣ ಎಂದು ಮತ್ತೆ ಮದುವೆಗೆ ಒಪ್ಪಿಕೊಂಡರು, ತೀರಾ ಇತ್ತೀಚೆಗಷ್ಟೇ ಆ ಹುಡುಗಿ ಬಂದು ಸ್ವೀಟ್ಸ್ ನೀಡಿ ‘ನನ್ನ ಸಂಸಾರ ಆನಂದಸಾಗರ’ ಎಂದು ಹೇಳಿ ಹೋದಳು. ಇದರ ಹಿಂದಿನ ಶಕ್ತಿ ಎಂದರೆ ಸಕಾಲಿಕ ಚಿಕಿತ್ಸೆಗೆ ಮುಂದಾದದ್ದು. ಹಾಗೆ ಎಲ್ಲರೂ ಸಮಯೋಚಿತ ಕ್ರಮ ಕೈಗೊಂಡಲ್ಲಿ ಜೀವನದಲ್ಲಿ ಅದೆಷ್ಟೋ ಸಮಸ್ಯೆಗಳು ಸಲೀಸಾಗಿ ಬಗೆಹರಿಯುತ್ತವೆ.

About Author:

Leave Your Comments

Your email address will not be published. Required fields are marked *