COVID-19 Resources for Mental Health Coaches... Learn More

0836-2773878

“ವೃದ್ಧಾಪ್ಯದಲ್ಲಿ ಕಾಡುವ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ”


ಮನುಷ್ಯ ಜನ್ಮ ದುರ್ಲಭ ಎನ್ನುತ್ತಾರೆ. 84 ಲಕ್ಷ ಜೀವರಾಶಿ ಗಳಲ್ಲಿ ಮನುಷ್ಯನಾಗಿ ಹುಟ್ಟಬೇಕಾದರೆ ತುಂಬಾ ಪುಣ್ಯ ಮಾಡಿರಬೇಕು ಎಂದು ಧಾರ್ಮಿಕವಾಗಿಯೂ ಹೇಳಲ್ಪಟ್ಟಿದೆ. ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾವು ಖಚಿತ. ಆದರೆ ಆ ಸಾವು ತಾನಾಗಿಯೇ ಬರಬೇಕೇ ಹೊರತು ಅದನ್ನು ಅಪ್ಪಿಕೊಳ್ಳುವ ನಿರ್ಧಾರ ಯಾವತ್ತೂ ನಮ್ಮದಾಗಬಾರದು. ಹಾಗೆ ಮಾಡಿಕೊಂಡರೆ ಅದು ಅತ್ಮಹತ್ಯೆ ಎಂದು ಕರೆಯಲ್ಪಡುತ್ತದೆ. ಇದು ಮಹಾಪಾಪ, ಘನಘೋರ ಅನ್ಯಾಯವೂ ಹೌದು. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಆತ್ಮಹತ್ಯೆಯನ್ನು ತಪ್ಪು ಎಂದು ಹೇಳುತ್ತಲೇ ಬಂದಿದ್ದಾರೆ. ಅಂತಹ ನಿರ್ಧಾರ ಕೈಗೊಳ್ಳುವ ಮುನ್ನ ನೂರೆಂಟು ಬಾರಿ ಯೋಚಿಸಬೇಕು. ಎಂತಹ ಕಷ್ಟದ ಸನ್ನಿವೇಶ ಎದುರಾದರೂ ಸಾವು ಅದಕ್ಕೆ ಪರಿಹಾರವಲ್ಲ. ಈಸಬೇಕು ಇದ್ದ ಜಯಿಸಬೇಕು ಎಂದು ಹೇಳಿದ್ದು ಸುಮ್ಮನೇ ಅಲ್ಲ. ಸೂರ್ಯ ಚಂದಿರನನ್ನೇ ಬಿಡದ ಗ್ರಹಣಗಳು, ಕಷ್ಟಗಳು ನಮ್ಮ ನಿಮ್ಮಂಥ ಸಾಮಾನ್ಯರನ್ನು ಬಿಟ್ಟಾವೆಯೇ? ಇದಕ್ಕೆ ಧೃತಿಗೆಡುವು ದರಲ್ಲಿ ಅರ್ಥವಿಲ್ಲ. ಆದರೆ ಇದು ಹಲವರಿಗೆ ಅರ್ಥವಾಗುತ್ತಿಲ್ಲ. ಈ ವಿಷಯ ಏಕೆ ಬಂತೆಂದರೆ ಮೊನ್ನೆ ಮೊನ್ನೆ ನಮ್ಮ ಪರಿಚಯದವರ ಚಿಕ್ಕಮ್ಮ ಚಿಕ್ಕಪ್ಪ ಆತ್ಮಹತ್ಯೆಗೆ ಶರಣಾದರು. ಅವರಿಗೆ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆ ಇದ್ದೇ ಇತ್ತು. ಬಹುಶಃ ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಸಮಸ್ಯೆ ಇರಬಹುದು. ಆದರೆ ಅದು ಆತ್ಮಹತ್ಯೆ ಮಟ್ಟಿಗೆ ಹೋಗಿದ್ದು ವಿಪರ್ಯಾಸವೇ ಸರಿ. ಮನೆ ಸದಸ್ಯರೆಲ್ಲರೂ ಹೊರಗೆ ಹೋದಾಗ ಬಾಗಿಲು ಹಾಕಿಕೊಂಡು ಗಂಡ ಹೆಂಡತಿ ಇಬ್ಬರೂ ನೇಣಿಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆ ನನಗೂ ಬೇಸರವಾಯಿತು. ಇಂತಹ ಮನಸ್ಥಿತಿಗೆ ಕಾರಣವೇನು? ಎಂದು ನಾನು ಆಲೋಚಿಸಿದೆ. ಆಗ ನನಗೆ, ಇತ್ತೀಚೆಗೆ ವೃದ್ಧಾಪ್ಯದಲ್ಲಿ ಹಲವರು ಅತ್ಮಹತ್ಯೆಗೆ ತರಣಾಗುತ್ತಿದ್ದಾರೆ ಎಂಬ ಮಾಹಿತಿ ಅರಿವಿಗೆ ಬಂತು.
ಪ್ರಸ್ತುತ ಸಮಾಜದಲ್ಲಿ ವಯಸ್ಸಾದವರು ತಮ್ಮ ಜೀವನದ ಉದ್ದಕ್ಕೂ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂಥ ಸವಾಲುಗಳಲ್ಲಿ ವೃದ್ಧಾಪ್ಯದಲ್ಲಿ ಆತ್ಮಹತ್ಯಾ ನಡವಳಿಕೆಯೂ ಒಂದು. ವೃದ್ಧರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ, ಅವರು ಹೊಂದಿರುವ ಸಮಸ್ಯೆಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಸನ್ನಿವೇಶಗಳಲ್ಲಿ, ತಮ್ಮ ಜೀವನದ ಬಹುಪಾಲು ಸಮಯವನ್ನು ತಮ್ಮ ಅವಿಭಕ್ತ ಕುಟುಂಬಗಳೊಂದಿಗೆ ಕಳೆದಿರುವ ಹೆಚ್ಚಿನ ಹಿರಿಯ ನಾಗರಿಕರು ವೃದ್ಧಾಪ್ಯದಲ್ಲಿ ಒಂಟಿತನ, ಪರಕೀಯತೆ, ಹತಾಶೆ ಮತ್ತು ಖಿನ್ನತೆಯ ಅಂಚಿನಲ್ಲಿದ್ದಾರೆ. ಅವರಿಗೆ ಗರಿಷ್ಠ ಕುಟುಂಬ ಮತ್ತು ಸಾಮಾಜಿಕ ಬೆಂಬಲ ಬೇಕಾದಾಗ, ಅವರು ಒಂಟಿಯಾಗಿ ವಾಸಿಸುತ್ತಾರೆ ಮತ್ತು ನಿರ್ಲಕ್ಷ್ಯಕ್ಕೊಳಗಾಗುತ್ತಾರೆ. ಕೆಲವೊಮ್ಮೆ, ವೃದ್ಧರನ್ನು ಕುಟುಂಬ ಮತ್ತು ಸಮಾಜದಲ್ಲಿ ನಿಂದಿಸಲಾಗುತ್ತದೆ. ದೀರ್ಘಕಾಲದ ಕಾಯಿಲೆ, ಕೌಟುಂಬಿಕ ಸಮಸ್ಯೆ, ಒಂಟಿತನದ ಭಾವನೆ, ಆರ್ಥಿಕ ನಷ್ಟ, ಮಾನಸಿಕ ಅಸ್ವಸ್ಥತೆಗಳು ಇತ್ಯಾದಿ ಅಂಶಗಳು ಭಾರತದ ವೃದ್ಧರಲ್ಲಿ ಆತ್ಮಹತ್ಯೆಗೆ ಕಾರಣವಾಗಿವೆ.
ಆತ್ಮಹತ್ಯೆಯು ಕುಟುಂಬ ಮತ್ತು ಸಮುದಾಯದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ವಯಸ್ಸಾದವರಲ್ಲಿ ಆತ್ಮಹತ್ಯೆಯ ಅಪಾಯ, ಅವರ ನಡವಳಿಕೆಗಳ ಕುರಿತು ಗಮನಹರಿಸಬೇಕಿದೆ. ಆ ದಿಶೆಯಲ್ಲಿ ಅರಿವು ಮೂಡಿಸಬೇಕಾಗಿದೆ. ಜೀವನದಲ್ಲಿ ಅಡೆತಡೆಗಳು ಇದ್ದಿದ್ದೇ. ಸೋಲು, ಅಪಮಾನ ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ವೃದ್ಧಾಪ್ಯದಲ್ಲಿ ಈ ತರಹದ ಅಪಾಯಕಾರಿ ನಿರ್ಧಾರಗಳು ತಪ್ಪು. ಇವರ ಒಂದು ಕ್ಷಣದ ದುಡುಕಿಗೆ ಅವರ ಅವಲಂಬಿತರು ಭಾರಿ ಬೆಲೆ ತೆರಬೇಕಾಗುತ್ತದೆ. ಪರಿಹಾರವೇನು?: ಮನೆಯಲ್ಲಿ ಹಿರಿಯರನ್ನು ಉಳಿದವರು ಗೌರವದಿಂದ ಕಾಣಬೇಕು. ಅದರಲ್ಲೂ ಹೆತ್ತವರ ಮನಸ್ಸು ನೋಯಿಸಬಾರದು. ‘ನನ್ನ ಮಗ ನಮ್ಮನ್ನು ಕೊನೆವರೆಗೆ ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂಬ ನಿರೀಕ್ಷೆ ಅವರದ್ದಾಗಿರುತ್ತದೆ. ಅದನ್ನು ಹುಸಿಯಾಗಿಸಬಾರದು. ಈ ನಿರೀಕ್ಷೆಗೆ ಧಕ್ಕೆ ಬಂದಾಗ ಅವರು ಧೃತಿಗೆಡುತ್ತಾರೆ. ನಾವಿನ್ನು ಇದ್ದೂ ವ್ಯರ್ಥ ಎಂಬ ಕಠಿಣ ನಿರ್ಧಾರಕ್ಕೆ ಬರುತ್ತಾರೆ. ಅವರಿಗೆ ಜನರೇಷನ್ ಗ್ಯಾಪ್ ನ ಅರಿವು ಇರುವುದಿಲ್ಲ. ಅವರು ಬೆಳೆದು ಬಂದ ಪರಿಸರ ಬದಲಾಗಿರುವುದು ಅವರ ಗಮನದಲ್ಲಿ ಇರುವುದಿಲ್ಲ. ಆಗ ಅದನ್ನು ಅವರಿಗೆ ತಿಳಿಸಿಕೊಡಲು ಹೋಗದೇ ‘ಆಯಿತು, ಹೂಂ’ ಎಂದು ಸಂಭಾಳಿಸಬೇಕು. ಸಾಧ್ಯವಾದರೆ ಉದಾಹರಣೆಗಳ ಮೂಲಕ ತಿಳಿಸುವ ಯತ್ನ ಮಾಡಬೇಕು. ಅದು ಬಿಟ್ಟು ಅವರನ್ನು ನಿಂದಿಸುವುದಾಗಲೀ, ದೂರುವುದಾಗಲಿ ಸಲ್ಲ, ಇದು ಅವರಲ್ಲಿ ಅಭದ್ರತೆ ಮತ್ತು ದುರ್ಬಲರಾದೆವು ಎಂಬ ಭಾವನೆ ಮೂಡಿಸುತ್ತದೆ. ಹೀಗಾಗಿ ಅವರನ್ನು ಚಿಕ್ಕ ಮಕ್ಕಳ ಹಾಗೆ ನೋಡಿಕೊಳ್ಳಬೇಕು. ಇಂದಲ್ಲ ನಾಳೆ ಎಲ್ಲರೂ ವೃದ್ಧಾಪ್ಯದ ಹಂತಕ್ಕೆ ಬರಲೇಬೇಕು. ಆಗ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ನೋಡುವ ದೃಷ್ಟಿಕೋನವೂ ಬದಲಾಗಿರುತ್ತದೆ. ಅದನ್ನು ಸ್ವೀಕರಿಸುವ ಮನೋಭಾವ ಮುಖ್ಯ, ಅದು ಬಿಟ್ಟು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಅಕ್ಷಮ್ಯ.

About Author:

Leave Your Comments

Your email address will not be published. Required fields are marked *