COVID-19 Resources for Mental Health Coaches... Learn More
“ಮಕ್ಕಳ ಮನಸ್ಸಿನ ಮೇಲೆ ಅನಗತ್ಯ ಒತ್ತಡ ಬೇಡ”

ಮಕ್ಕಳ ಸಾಮರ್ಥ್ಯವನ್ನು ಅರಿತು ಪಾಲಕರು ಮಕ್ಕಳ ಶಿಕ್ಷಣ ರೂಪಿಸಬೇಕೆ ವಿನಹ ಅವರಲ್ಲಿ ಅನಗತ್ಯ ಒತ್ತಡ ಹಾಕುವ ಕೆಲಸವನ್ನು ಮಾಡಬಾರದು ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಕಿವಿಮಾತು ಹೇಳಿದರು. ಬವಿವ ಸಂಘದ ಮೈದಾನದಲ್ಲಿ ಸೇವಾ ಭಾರತಿ ಟ್ರಸ್ಟ್‌ನ ರಜತ ಮಹೋತ್ಸವದ ಪ್ರಯುಕ್ತ ಕಿಶೋರಿ ವಿಕಾಸ ಪ್ರಕಲ್ಪದಿಂದ ಹಮ್ಮಿಕೊಂಡಿದ್ದ ಕಿಶೋರಿ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಅನಗತ್ಯ ಒತ್ತಡ ಹಾಕುವ ಕೆಲಸವಾಗಬಾರದು ಶೈಕ್ಷಣಿಕ ಜೀವನದಲ್ಲಿ ಮಕ್ಕಳು ದಾರಿ ತಪ್ಪಿದರೂ ಅದನ್ನು ಮರಳಿ ದಾರಿ ತರುವಂತೆ ಮಾಡಬಹುದು. ಆದರೆ ಬದುಕಿನ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇರುತ್ತದೆ. ಅಂಥ ಅಪಾಯದ ಬಗ್ಗೆ ಎಚ್ಚರವಹಿಸಿರಬೇಕೆಂದರು.
ಪಾಲಕರ ಮುಂದೆ ಸುಳ್ಳು ಹೇಳುವುದು. ಪಾಲಕರ ಕಣ್ಣಪ್ಪಿಸಿ ಕೆಲವನ್ನು ಮಾಡಬಹುದು ಅದು ವಯಸ್ಸಿನ ಸಹಜ ಬೆಳವಣಿಗೆ. ಆದರೆ ಅದನ್ನು ತಾವೇ ತಿದ್ದಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು. ತಮಗೆ ತಾವು ಸತ್ಯವಂತರಾಗಿರುವ ಗುಣವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಯಾವುದೇ ತಪ್ಪು ಮಾಡಿದಾಗಲೂ ಪಾಲಕರ ಮುಂದೆ ಹೇಳಿಕೊಂಡು ಮತ್ತೆ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವ . ಜವಾಬ್ದಾರಿಯನ್ನು ರೂಢಿಸಿಕೊಳ್ಳಬೇಕೆಂದರು. ಬವಿವ ಸಂಘದ ಕಾರ್ಯಾಧ್ಯಕ್ಷ, ರಜತ ಮಹೋತ್ಸವದ ಮಹಾಪೋಷಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಮೆಕಾಲೆ ಶಿಕ್ಷಣ ವ್ಯವಸ್ಥೆಯೇ ಭಾರತಕ್ಕೆ ಕಂಟಕವಾಗಿದೆ.
ಮಕ್ಕಳಿಗೆ ಸಂಸ್ಕಾರ ಶಿಕ್ಷಣವೇ ಇಲ್ಲದಂತೆ ಆಗಿದೆ. ನೈತಿಕ, ಸಂಸ್ಕಾರ, ಆಧ್ಯಾತ್ಮಿಕತೆಯನ್ನೂ ಒಳಗೊಂಡು ಶಿಕ್ಷಣ ನೀಡಿದಾಗ ಭಾರತ ಮತ್ತಷ್ಟು ಪ್ರಜ್ವಲಿಸಲಿದೆ. ಆ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಪ್ರಯತ್ನಗಳು ಮಾಡುತ್ತಿದೆ ಎಂದರು. ಆರ್‌ಎಸ್‌ಎಸ್ ಹಾಗೂ ಸೇವಾ ಭಾರತಿ ಟ್ರಸ್ಟ್‌ನಂಥ ಸಂಸ್ಥೆಗಳ ಸಾಮಾಜಿಕ ಕಾರ್ಯ ಅತ್ಯಂತ ದೊಡ್ಡದಾಗಿದೆ. ಭಾರತೀಯ ಸಮಾಜಕ್ಕೆ ಶಕ್ತಿಯಾಗಿ ನಿಂತಿವೆ ಎಂದು ಬಣ್ಣಿಸಿದರು.
ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ರಘು ಆಕಮಂಚಿ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ಸ್ವಾವಲಂಬನೆ, ಶಿಕ್ಷಣ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.
ರಾಜ್ಯದಲ್ಲಿ 360 ವಿದ್ಯಾವಿಕಾಸ ಪ್ರಕಲ್ಪಗಳು ನಡೆಯುತ್ತಿವೆ. ಅವುಗಳನ್ನು 500ಕ್ಕೆ ಹೆಚ್ಚಿಸುವ ಗುರಿ ಇದೆ. ಸೇವಾ ಬಸದಿಗಳಲ್ಲಿ ಶಿಕ್ಷಣ ನೀಡುವ ಉದ್ದೇಶವನ್ನು ಇವುಗಳು ಹೊಂದಿವೆ ಎಂದರು.
ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಬಸವರಾಜ ಡಂಬಳ, ಶಿಕ್ಷಣ ತಜ್ಞ ಮಹೇಶ ಮಾಶಾಳ, ಉದ್ಯಮಿ ಸತೀಶ ಹಜಾರೆ, ಬವಿವ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶ್ರೀವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷ ಶ್ರೀಲತಾ ಹೆರೆಂಜಲ್, ರಜತ ಮಹೋತ್ಸವದ
ಸಮಾರೋಪ ಸಮಿತಿ ಕಾರ್ಯದರ್ಶಿ ಪ್ರೊ. ಎಚ್.ಡಿ. ಪಾಟೀಲ, ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತೇಶ ಶೆಟ್ಟರ, ಕಾರ್ಯದರ್ಶಿ ಡಾ. ಗಂಗಾಧರ ಅಂಗಡಿ ಮತ್ತಿತರರು ವೇದಿಕೆಯಲ್ಲಿದ್ದರು.