COVID-19 Resources for Mental Health Coaches... Learn More
“ಬಂದದ್ದೆಲ್ಲಾ ಬರಲಿ ಸತತ ಪರಿಶ್ರಮವಿರಲಿ”
“ನಮ್ಮ ಮಗನಿಗೆ ತುಂಬಾ ಅನ್ಯಾಯವಾಗಿದೆ ಡಾಕ್ಟರ್, ಮನಸ್ಸಿಗೆ ತುಂಬಾ ಬೇಸರ ಮಾಡಿಕೊಂಡು ಬಿಟ್ಟಿದ್ದಾನೆ. ಯಾಕೋ ಇತ್ತೀಚಿಗೆ ನಮ್ಮ ಹತ್ತಿರ ಸರಿಯಾಗಿ ಮಾತು ಕೂಡ ಆಡುತ್ತಿಲ್ಲ. ಮುಂದೇನು? ಎನ್ನುವ ಚಿಂತೆ ಕಾಡತೊಡಗಿದೆ. ಎನು ಸರ್ ಇದಕ್ಕೆ ಉಪಾಯ?’ ಹೀಗೆ ಒಂದು ವಾರದಲ್ಲಿ ನನಗೆ ಏನಿಲ್ಲ ಎಂದರೂ ಕನಿಷ್ಠ 8ರಿಂದ 10 ಜನ ಕರೆ ಮಾಡಿ ತಮ್ಮ ಈ ಸಮಸ್ಯೆ ತೋಡಿಕೊಂಡಿದ್ದಾರೆ. ಆಕಾಶವೇ ಕಳಚಿ ಬಿದ್ದ ಹಾಗೆ ಅಸಹಾಯಕತೆ, ದಾರುಣತೆ ವ್ಯಕ್ತಪಡಿಸಿದ್ದಾರೆ.
ಆದರೆ ಅವರು ಅಂದುಕೊಂಡಂತೆ ಅವರ ಸಮಸ್ಯೆ ನನ್ನ ಪ್ರಕಾರ ಸಮಸ್ಯೆಯೇ ಅಲ್ಲ. ಅವರು ಅದನ್ನು ಸಮಸ್ಯೆ ಎಂದು ತಪ್ಪಾಗಿ ಭಾವಿಸಿಕೊಂಡಿದ್ದಾರೆ. ಇಷ್ಟಾಗಿಯೂ ಅವರ ಸಮಸ್ಯೆಯಾದರೂ ಏನು? ಅಂಥದ್ದೇನಿಲ್ಲ, ಅವರ ಮಕ್ಕಳ ಪಿಯುಸಿ ಮತ್ತು ಕೆಸಿಇಟಿ, ಜೆಇಇ ಮತ್ತು ನೀಟ್ ಪರೀಕ್ಷೆಗಳ ఫలికాం అనే ಹೌದು, ಈ ಪಾಲಕರು ಭಾರಿ ನಿರೀಕ್ಷೆಯ ಭಾರವನ್ನು ಮಕ್ಕಳ ಮೇಲೆ ಹೊರಿಸಿರುತ್ತಾರೆ. ಬೇರೆಯವರ ಮಕ್ಕಳ ಜತೆ ಹೋಲಿಕೆ ಮಾಡಿ ತಮ್ಮ ಮಕ್ಕಳೂ ಹಾಗೆ ಆಗಬೇಕು. ಇಂತಿಷ್ಟೇ ಸ್ಕೋರ್ ಮಾಡಬೇಕು ಎನ್ನುವ ಮಹಾತ್ವಾಕಾಂಕ್ಷೆ ಹೊಂದಿರುತ್ತಾರೆ. ಇದಕ್ಕೆ ತಕ್ಕನಾದ ಸಾಮರ್ಥ್ಯ, ಯೋಗ್ಯತೆ ತಮ್ಮ ಮಕ್ಕಳಲ್ಲಿ ಇದೆಯೋ ಇಲ್ಲವೋ ಎಂದು ಚಿಂತಿಸುವ ವ್ಯವಧಾನವೂ ಇವರಿಗಿರುವುದಿಲ್ಲ. ಇದಲ್ಲದೇ ನನ್ನ ಮಗನ ಗುರಿ ಏನು? ಆತನ ಆಸಕ್ತಿದಾಯಕ ಕ್ಷೇತ್ರ ಯಾವುದು? ಆತ ಮುಂದೆ ಎನು ಮಾಡಬೇಕು ಅಥವಾ ಅಗಬೇಕು ಅಂದುಕೊಂಡಿದ್ದಾನೆ ಎಂಬುದರ ಪರಿವೆಯೇ ಅವರಿಗಿಲ್ಲ. ಅವರಿಗೆ ತಮ್ಮ ಮಗ ಅಥವಾ ಮಗಳು ತಾವಂದುಕೊಂಡದ್ದೇ ಆಗಬೇಕು, ಸಾಧಿಸಬೇಕು. ಆ ಮೂಲಕ ಇವರ ಪ್ರತಿಷ್ಠೆ ಪ್ರಜ್ವಲಿಸಬೇಕು ಅಷ್ಟೇ. ಇದು ಒಂದು ತರಹದ ಒತ್ತಡ ತಂತ್ರ, ಶೋಷಣೆ, ತನಗೇನು ಬೇಕೋ ಅದನ್ನು ಕಲಿಯುವ ಸ್ವಾತಂತ್ರ್ಯ ಆತನಿಗಿಲ್ಲ ಎಂದರೆ ಆತನ ಮನಸ್ಸು ಓದಿನಲ್ಲಿ ಕೇಂದ್ರೀಕೃತವಾಗುವುದಾದರೂ ಹೇಗೆ? ಆತನ ಬೇಕು ಬೇಡಗಳನ್ನು ವಿಚಾರಿಸುವವರೇ ಇಲ್ಲದಾದಾಗ ಆತ ಕೂಡ ಯಾಂತ್ರಿಕವಾಗಿ ಓದಿದ ಹಾಗೆ ನಟಿಸುತ್ತಾನೆ. ಒಲ್ಲದ ಮನಸ್ಸಿನಿಂದ ಓದುವುದರ ಪರಿಣಾಮ ಫಲಿತಾಂಶದಲ್ಲಿ ನಿರಾಸೆ ಪಕ್ಕಾ. ಆಗ ಮಗ ಅಥವಾ ಮಗಳಾದರೂ ಏನು ಮಾಡಿಯಾಳು? ಆಗ ಪಾಲಕರು ಮತ್ತೆ ವ್ಯವಸ್ಥೆ ಅಥವಾ ಹಣೆಬರಹದ ಮೇಲೆ ಗೂಬೆ ಕೂರಿಸುವುದು ನಮ್ಮಲ್ಲಿ ಹೆಚ್ಚು ಕಂಡು ಬರುತ್ತಿದೆ. ಇದು ತಪ್ಪು. ನಮ್ಮ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರಬಾರದು. ಅವರ ಸಾಮರ್ಥ್ಯ ಅರಿಯಿರಿ. ಅವರ ಆಸಕ್ತಿಯನ್ನು ಶಾಂತಚಿತ್ತದಿಂದ ಆಲಿಸಿರಿ, ಅವರ ಗುರಿ ಏನು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ನಿಮ್ಮ ಸಲಹೆ, ಸೂಚನೆ ಕೊಡಿ. ಆದರೆ ನೀವು ಬಯಸಿದ್ದನ್ನೇ ಅವರು ಕಲಿಯಲೇಬೇಕು ಎನ್ನುವ ಹಠಮಾರಿ ಧೋರಣೆ ಸಲ್ಲದು, ಅವರವರ ಬದುಕಿನ ನಿರ್ಧಾರ ಅವರೇ ಮಾಡಬೇಕು. ಅವರ ಕಲಿಕೆ ಅವರ ಸ್ವಂತಿಕೆಯಿಂದ ಕೂಡಿರಬೇಕು. ಸಾಧ್ಯಾಸಾಧ್ಯತೆಗಳನ್ನು ನೀವು ಸೂಚಿಸಬಹುದು ಅಷ್ಟೇ. ಪ್ರತಿ ವ್ಯಕ್ತಿಗೂ ತನ್ನದೇ ಆದ ಇತಿ ಮಿತಿಗಳಿರುತ್ತವೆ. ಆಸಕ್ತಿ, ಅಸೆಗಳಿರುತ್ತವೆ. ಅದನ್ನು ಹಿರಿಯರಾದವರು ಗೌರವಿಸಬೇಕು, ಪ್ರೋತ್ಸಾಹಿಸಬೇಕು. ಪಾಲಕರ ಪ್ರತಿಷ್ಠೆ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಬಯಸಿದ್ದೆಲ್ಲಾ ಸಿಗುವುದಾದರೆ ಪ್ರಯತ್ನ ಮತ್ತು ಬದುಕಿನ ಹೋರಾಟಕ್ಕೆ ಮಹತ್ವವೇ ಇರುವುದಿಲ್ಲ. ನಿರ್ದಿಷ್ಟ ಗುರಿ ಇರಬೇಕು. ಜತೆಗೆ ಸತತ ಪರಿಶ್ರಮವೂ ಬೇಕು. ಇಷ್ಟಾಗಿಯೂ ನಾವಂದುಕೊಂಡಂತೆ ಆಗದಿದ್ದರೆ ನಿರಾಶರಾಗಬಾರದು. ಸೋಲೇ ಗೆಲುವಿನ ಸೋಪಾನ ಎಂದುಕೊಂಡು ಮರಳಿ ಯತ್ನವ ಮಾಡಬೇಕು. ಕ್ರಮ ಹಾಕದೇ ವಿಧಿ ಅಥವಾ ವ್ಯವಸ್ಥೆ ಮೇಲೆ ಗೂಬೆ ಕೂರಿಸುವುದು ಸಲ್ಲದು. ಇದು ಇಲ್ಲ ಎಂದರೆ ಇನ್ನೊಂದು ಅದು ಇಲ್ಲ ಎಂದರೆ ಮತ್ತೊಂದು ಜಗತ್ತು ವಿಶಾಲವಾಗಿದೆ. ಹೊಸತನ್ನು ಕಲಿಯಬೇಕು. ಹೊಸತನ್ನು ಹುಡುಕಬೇಕು. ಹೊಸತನ್ನು ಸೃಷ್ಟಿಸಬೇಕು. ಅಂದಾಗ ಯಶಸ್ಸಿನ ರುಚಿ ಸವಿಯಲು ಸಾಧ್ಯ. ಇದು ಇಂದಿನ ಯುವ ಪೀಳಿಗೆಗೆ ಮತ್ತು ಅವರ ಪಾಲಕರಿಗೆ ಅರ್ಥವಾದರೆ ಸಾಕು ವಿದ್ಯಾರ್ಥಿ ಜೀವನದ ಬಹುತೇಕ ಸಮಸ್ಯೆಗಳು ತನ್ನಿಂದ ತಾನೇ ಪರಿಹಾರ ಅಗುತ್ತವೆ. ಅದಕ್ಕೆ ನಮ್ಮ ಹಿರಿಯರು ಹೇಳಿದ್ದು ಇರುವ ಭಾಗ್ಯವ ನೆನೆದು ಬಾರದೆಂಬುದನ್ನು ಬಿಡು ಇದುವೇ ಹರುಷಕ್ಕೆ ದಾರಿ ಎಂದು ದುಃಖಕ್ಕೆ ಒಳಗಾಗುವ ಬದಲು ಏನು ಸಿಗುತ್ತದೋ ಅಥವಾ ಏನು ಸಾಧ್ಯವೋ ಅದನ್ನು ಸಮರ್ಥವಾಗಿ ನಿರ್ವಹಿಸಿ ಸಾಗಿದರೆ ಎಲ್ಲವೂ ಸುಸೂತ್ರ ಮತ್ತು ಸರಳ.