COVID-19 Resources for Mental Health Coaches... Learn More
“ತಾರತಮ್ಯ ಅಳಿಯಲಿ ಪ್ರೋತ್ಸಾಹ ಬೆಳೆಯಲಿ”
ತಾರತಮ್ಯ ಅಳಿಯಲಿ ಪ್ರೋತ್ಸಾಹ ಬೆಳೆಯಲಿ.
ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಿಲ್ಲ ಒಂದು ಪ್ರತಿಭೆ, ಸಾಮರ್ಥ್ಯ ಇದ್ದೇ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ. ಇದಕ್ಕೆ ಮನೆಯಲ್ಲಿನ ಮಕ್ಕಳೂ ಹೊರತಾಗಿಲ್ಲ. ಎಲ್ಲರೂ ಒಂದೇ ಮಾದರಿ ಇರಲು ಸಾಧ್ಯವಿಲ್ಲ. ಹಾಗಂತ ಭೇದಭಾವ ಸಲ್ಲ. ಹಾಗೆ ಮಾಡಿದರೆ ಅದು ಮಕ್ಕಳ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆ ಮೇಲೆ ಆಗುವ ಅನಾಹುತಗಳಿಗೆ ಪಾಲಕರು ಹೊಣೆ ಹೊರಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ಇದರ ಪರಿಣಾಮ ವಿಕೋಪಕ್ಕೂ ಹೋಗಬಹುದು.
ಸಾಮಾನ್ಯವಾಗಿ ಮನೆಯಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಇಬ್ಬರ ವ್ಯಕ್ತಿತ್ವ, ಸಾಮರ್ಥ್ಯ ಭಿನ್ನ, ಇಬ್ಬರ ಆಸಕ್ತಿ, ಅಭಿರುಚಿ ಕೂಡ ಭಿನ್ನವಾಗಿರುತ್ತದೆ. ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲಾಗದು ಅಥವಾ ಅವರಿಬ್ಬರು ಒಂದೇ ರೀತಿ ಇರಬೇಕು ಎಂದು ನಿರೀಕ್ಷಿಸುವುದು ತಪ್ಪು. ಹಾಗೇನಾದರೂ ನಿರೀಕ್ಷೆ ಮಾಡಿದರೆ ಅವರಲ್ಲೇ ಒಡಕು ಮೂಡುತ್ತದೆ. ಉದಾಹರಣೆಗೆ ಹಿರಿಯ ಮಗಳು ಓದಿನಲ್ಲಿ ಒಳ್ಳೆಯ ಸಾಧನೆ ಮಾಡುತ್ತಿರುತ್ತಾಳೆ. ಅದೇ ಎರಡನೇ ಮಗ ಅಥವಾ ಮಗಳು ಓದಿನಲ್ಲಿ ಅಷ್ಟಕ್ಕಷ್ಟೇ. ಲೌಕಿಕ ವಿಷಯ ಅಥವಾ ವ್ಯವಹಾರ ಜ್ಞಾನದಲ್ಲಿ ಎತ್ತಿದ ಕೈ. ಅದರರ್ಥ ಎರಡನೆಯವಳು ವೇಸ್ಟ್ ಅಥವಾ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ ಎಂದುಕೊಂಡು ಅವಳನ್ನು ನಿರ್ಲಕ್ಷ್ಯ ಮಾಡಬಾರದು. ಅದು ಅವಳ ವಿಶೇಷಗುಣ ಎಂದು ಹೆಮ್ಮೆ ಪಡಬೇಕು.
ಹಿರಿಯ ಮಗಳು ವ್ಯವಹಾರ ಜ್ಞಾನದಲ್ಲಿ ಚುರುಕಾಗಿಲ್ಲ. ಆಕೆಗೇನಿದ್ದರೂ ಓದಿನತ್ತ ಚಿತ್ರ, ಉನ್ನತ ಸಾಧನೆಯೇ ಗುರಿ, ಇದು ಕೂಡ ಸರಿಯೇ. ವಾರ್ಷಿಕ ಪರೀಕ್ಷೆ ಫಲಿತಾಂಶ ಬಂದಾಗ ಈ ಮಕ್ಕಳಿಬ್ಬರ ಸಾಧನೆ ನೋಡಿ ಹೋಲಿಕೆ ಮಾಡುವುದಾಗಲಿ ಒಬ್ಬರನ್ನು ಹೊಗಳುವುದು ಇನ್ನೊಬ್ಬಳನ್ನು ತೆಗಳುವುದು ತಪ್ಪ ಅವರವರ ಹಾದಿ ಅವರಿಗೆ ಆಗ ಪಾಲಕರಾದವರು ಅವರ ಆಸಕ್ತಿ, ಅಭಿರುಚಿ ಗಮನಿಸಿ ನೀರೆರೆದು ಪೋತಾಹಿಸಬೇಕು. ಇಬ್ಬರ ಸಾಧನೆ ಏಕರೀತಿ ಇರಬೇಕು ಎಂದು ನಿರೀಕ್ಷೆ ಮಾಡಬಾರದು. ನಮ್ಮದು ವೈವಿಧ್ಯ ಇರುವ ಮಕ್ಕಳ ಕುಟುಂಬ ಎಂದುಕೊಂಡು ಸಾಗಬೇಕು. ಹಿರಿಯವಳ ಮುಂದೆ ಕಿರಿಯವಳನ್ನು ಹೀಯಾಳಿಸಿದರೆ ಇಲ್ಲವೇ ಕೀಳಾಗಿ ನೋಡಿದರೆ ಮನೆಗೆ ಬಂದವರ ಎದುರು ಆಡಿಕೊಂಡರೆ ಅದರ ಪರಿಣಾಮ ಪ್ರತಿಕೂಲವಾಗಿರುತ್ತದೆ. ಆಗ ಪೇಚಿಗೆ ಸಿಲುಕುವವರು ಮತ್ತೆ ಪಾಲಕರೇ.ಮೊನ್ನೆ ನನ್ನ ಬಳಿ ಒಂದು ಮಧ್ಯಮ ವರ್ಗದ ಕುಟುಂಬ ಬಂದಿತ್ತು. ಅವರಿಗೆ ಇಬ್ಬರು ಮಕ್ಕಳು. ಪಾಲಕರಿಬ್ಬರೂ ಉದ್ಯೋಗಿಗಳು. ಬೆಳಗ್ಗೆ ಹೋದರೆ ಸಂಜೆ ಬರುತ್ತಾರೆ. ದೊಡ್ಡವಳು ಪಿಯುಸಿ, ಚಿಕ್ಕವಳು ಈ ಬಾರಿ ಎಸ್‌ಎಸ್‌ಎಲ್‌ಸಿ ಇಬ್ಬರೂ ಶೈಕ್ಷಣಿಕ ಕ್ಷೇತ್ರದ ಪ್ರಮುಖ ಘಟ್ಟದಲ್ಲಿದ್ದಾರೆ. ದೊಡ್ಡವಳು ಓದಿನಲ್ಲಿ ಮುಂದೆ. ಚಿಕ್ಕವಳು ಪತ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಕ್ರಿಯಾಶೀಲ, ಇದನ್ನು ಗಮನಿಸಿದ ಪಾಲಕರು ಸಣ್ಣವಳಿಗೆ ಪದೇ ಪದೆ ಬೈಯ್ಯುತ್ತಿದ್ದರು. ನೋಡು ನಿನ್ನ ಅಕ್ಕ ಹೇಗೆ ಉತ್ಥಮ ಸಾಧನೆ ಮಾಡ್ತಾಳೆ,ನೀನೂ ಇದ್ದೀಯಾ, ಬರೀ ಮೊಬೈಲ್, ಟಿವಿ ಅಂತೆಲ್ಲಾ ಇತ್ತೀಯಾ, ನೀನೂ ಅವಳಂತೆ ಸಾಧನೆ ಮಾಡಿದರೆ ನಮ್ಮ ಕುಟುಂಬದ ಪ್ರತಿಷ್ಟೆ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ ಎಂದು ಬೈಯ್ಯುತ್ತಾರೆ. ಇದಕ್ಕೆ ಪ್ರತಿಯಾಗಿ ಚಿಕ್ಕ ಮಗಳು ನಾನು ಇರೋದೇ ಹೀಗೆ. ನನಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ. ನಾನು ನನಗೆ ತಿಳಿದಿದ್ದನ್ನು, ತಿಳಿದಷ್ಟು ಓದುವೆ ಎಂದು ಉತ್ತರಿಸುತ್ತಾಳೆ. ಪಾಲಕರ ಈ ಭೇದಭಾವ ಆಕೆಯಲ್ಲಿ ಮಾನಸಿಕ ಖಿನ್ನತೆ ಸೃಷ್ಟಿಸುತ್ತದೆ.
ಪರಿಣಾಮ ಕ್ರಿಯಾಶೀಲಳಾಗಿದ್ದವಳು ಮೌನಕ್ಕೆ ಶರಣಾಗುತ್ತಾಳೆ. ಇದನ್ನು ಗಮನಿಸಿದ ಪಾಲಕರು ನನ್ನ ಬಳಿ ಮಗಳನ್ನು ಕರೆದುಕೊಂಡು ಬಂದಿದ್ದರು. ಆಗ ಆ ಮಗುವನ್ನು ಮಾತನಾಡಿಸಿದಾಗ ಪಾಲಕರ ನಿರೀಕ್ಷೆ ಭಾರದಿಂದ ಆಕೆ ಹೀಗೆ ಆಗಿದ್ದಾಳೆ ಎನ್ನುವುದು ಸ್ಪಷ್ಟವಾಯಿತು. ಆಗ ಆ ಮಗು ಎದುರೇ ಪಾಲಕರಿಗೆ ಅವರು ಮಾಡುತ್ತಿರುವ ತಪ್ಪಿನ ಬಗ್ಗೆ ತಿಳಿಸಿದೆ. ಇನ್ನು ಮುಂದೆ ಹಾಗೆ ಮಾಡಬಾರದು ಎಂದು ಸಲಹೆ ನೀಡಿದೆ. ಅವರಿಗೂ ಅದರ ಮನವರಿಕೆ ಆಯಿತು. ಇದೀಗ ಇಬ್ಬರೂ ಮಕ್ಕಳನ್ನು ಸರಿಸಮನಾಗಿ ಪ್ರೀತಿಸುತ್ತ ನಡೆದಿದ್ದಾರೆ. ಅದರ ಪರಿಣಾಮವಾಗಿ ಕುಟುಂಬದಲ್ಲಿ ನೆಮ್ಮದಿ ಮನೆ ಮಾಡಿದೆ. ಪ್ರತಿಯೊಂದು ಮಗು ವಿಭಿನ್ನವಾಗಿದ್ದರೂ ತನ್ನದೇ ಆದ ಪ್ರತಿಭೆ ಇರುತ್ತದೆ. ಐದೂ ಬೆರಳು ಹೇಗೆ ಸಮನಾಗಿರಲು ಸಾಧ್ಯವಿಲ್ಲವೋ ಹಾಗೆ ಎಲ್ಲರನ್ನೂ ಸರಿದೂಗಿಸಿಕೊಂಡು ಸಾಗಿದರೆ ಎಲ್ಲವೂ ಸುಲಲಿತ ಅಷ್ಟೇ.