COVID-19 Resources for Mental Health Coaches... Learn More

0836-2773878

“ಡಿಜಿಟಲ್ ವ್ಯಸನ ತರದಿರಲಿ ಬದುಕಿನ ಅವಸಾನ”

ದಿಢೀರ್ ದುಡ್ಡು ಗಳಿಕೆಗೆ ಇಲ್ಲಿ ಹೂಡಿಕೆ ಮಾಡಿ. ರಾತ್ರೋರಾತ್ರಿ ಶ್ರೀಮಂತರಾಗಿ, ನೀವು ಮನೆಯಲ್ಲೇ ಕುಳಿತು ಕೆಲಸ ಮಾಡ ಬಯಸುವಿರಾ? ತಿಂಗಳಿಗೆ 20ರಿಂದ 30 ಸಾವಿರ ಗಳಿಸಲು ಇಷ್ಟ ಪಡುವಿರಾ? ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ…

ಇವು ಸಾಮಾಜಿಕ ಜಾಲತಾಣದಲ್ಲಿ ಬರುವ ಗಳಿಕೆಯ ಮುಖವಾಡ ಹೊತ್ತ ಜಾಹೀರಾತು ಪೋಸ್ಟ್‌ಗಳು. ಇವುಗಳ ಆಕರ್ಷಣೆಗೆ ಒಳಗಾಗಿ ಮೊಬೈಲ್‌ನ ಪರದೆಯನ್ನು ಸ್ಮಾಲ್ ಮಾಡುತ್ತಾ ಹೋಗುವ ಅನೇಕರು ನಂತರ ತಮಗೆ ಅರಿವಿಲ್ಲದೇ ವಂಚನೆಗೊಳಗಾಗುತ್ತಿದ್ದಾರೆ. ಇದು ಡಿಜಿಟಲ್ ವ್ಯಸನವಲ್ಲದೇ ಮತ್ತೇನಲ್ಲ. ಮನುಷ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚು ಮೊಬೈಲ್ ವೀಕ್ಷಿಸುತ್ತಾನೆ. ಆರಂಭದಲ್ಲಿ ಇದು ಸುಲಭ ಹಾಗೂ ಸರಳ ಎನಿಸಿದರೂ ಅದರ ದಾಸ್ಯಕ್ಕೆ ಸಿಲುಕಿ ಹತ್ತು ಹಲವು ಅವಘಡಗಳನ್ನು ಎದುರಿಸುತ್ತಿದ್ದಾನೆ. ಇನ್ನು ಮಕ್ಕಳು ಗೇಮ್ಸ್ ನೆಪದಲ್ಲಿ ಸದಾ ಅದರ ಹಿಂದೆಯೇ ಬಿದ್ದಿರುತ್ತಾರೆ. ತೀರಾ ಚಿಕ್ಕ ಮಕ್ಕಳಂತೂ ಮೊಬೈಲ್ ಕೊಡದಿದ್ದರೆ ಊಟ ಕೂಡ ಮಾಡುವುದಿಲ್ಲ ಎನ್ನುವ ಹಂತಕ್ಕೆ ಬಂದು ನಿಂತಿದ್ದಾರೆ. ಪರಿಣಾಮ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಬಳಸುವಂತಾಗಿದೆ. ಮನೆಯ ಒಂದು ಹಾಲ್ ನಲ್ಲಿ ಒಬ್ಬೊಬ್ಬರು ಒಂದೊಂದು ಮೂಲೆಯಲ್ಲಿ ಮೊಬೈಲ್ ಸ್ಮಾಲ್ ಮಾಡುತ್ತಾ ಕುಳಿತರೆ ಮುಗೀತು. ಅವರದೇ ಲೋಕ.

ಇನ್ನೊಂದೆಡೆ ಇತ್ತೀಚೆಗೆ ಅಪರಿಚಿತ ನಂಬರ್‌ಗಳಿಂದ ವಿಡಿಯೊ ಕಾಲ್ ಬರುತ್ತಿವೆ. ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಬೆದರಿಸುವುದು. ‘ನಿಮ್ಮ ಮಗ ಮುಂಬೈನಲ್ಲಿ ಸಿಕ್ಕಿ ಬಿದ್ದಿದ್ದಾನೆ. ನಾವು ಕಸ್ಟಮ್ಸ್ ಇಲಾಖೆಯಿಂದ ಮಾತನಾಡೋದು. ಆತನ ಪಾಸಪೋರ್ಟ್ ಸೀಝ್ ಆಗಿದೆ. ಕೂಡಲೇ ನಿಮ್ಮ ಬ್ಯಾಂಕ್ ಖಾತೆಯಿಂದ ನಾವು ಸೂಚಿಸುವ ಖಾತೆಗೆ ಹಣ ವರ್ಗಾಯಿಸಿ. ಇಲ್ಲದಿದ್ದರೆ ನಿಮ್ಮ ಮಗನ ಕಥೆ ಅಷ್ಟೇ’ ಎಂದು ಹೆದರಿಸುತ್ತಾರೆ. ಇವರ ಟಾರ್ಗೆಟ್ ವೃದ್ಧರು. ಏಕೆಂದರೆ ಅವರಲ್ಲಿ ಬಹುತೇಕರು ಅಮಾಯಕರಾಗಿರುತ್ತಾರೆ. ಮಗ, ಮೊಮ್ಮಕ್ಕಳ ಮೇಲೆ ಅಕ್ಕರೆ ಇರುತ್ತದೆ. ಇವರ ಭಾವನಾತ್ಮಕತೆಯನ್ನು ಅವರು ಎನ್‌ಕ್ಯಾಶ್ ಮಾಡಿಕೊಂಡು ಮೋಸ ಮಾಡುತ್ತಾರೆ. ಇದು ಡಿಜಿಟಲ್ ಯುಗ. ಆದರೆ ಇದರ ಸದ್ಬಳಕೆಗಿಂತ ದುರ್ಬಳಕೆಯೇ ಹೆಚ್ಚಾಗುತ್ತಿದೆ. ಸೈಬರ್ ಕೈಂ ಪರಾಕಾಷ್ಠೆಗೆ ತಲುಪಿದೆ. ವಂಚಕರು ಡಿಜಿಟಲ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ನಿಮ್ಮ ಆಸಕ್ತಿ, ಅಭಿರುಚಿಗೆ ತಕ್ಕಂತೆ ಮೋಡಿ ಮಾಡುವ ಪೋಸ್ಟ್‌ಗಳ ಮೂಲಕ ನಿಮ್ಮನ್ನು ಸೆಳೆಯುತ್ತಾರೆ. ನೀವು ಅದರ ಮೇಲೆ ಒತ್ತುತ್ತಿದ್ದಂತೆ ಕ್ಷಣಾರ್ಧದಲ್ಲಿ ” ನಿಮ್ಮ ಬ್ಯಾಂಕ್ ಖಾತೆಯ ಹಣ ಮಂಗಮಾಯ. ಇದಲ್ಲದೇ ನಿಮ್ಮ ಫೋಟೋಗಳನ್ನು ಹ್ಯಾಕ್ ಮಾಡಿ ಅಶ್ಲೀಲವಾಗಿ ಕಾಣುವಂತೆ ಮಾಡಿ ಹರಿಬಿಡುವುದಾಗಿ ಬೆದರಿಸುತ್ತಾರೆ. ದಿನವೂ ಮಾಧ್ಯಮಗಳಲ್ಲಿ ಈ ತರಹದ ಸುದ್ದಿಗಳನ್ನು ನಾವು ಓದಿರುತ್ತೇವೆ, ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೂ ಮತ್ತೆ ಮೋಸ ಹೋಗುತ್ತೇವೆ.

ಇನ್ನು ಫೇಸ್‌ಬುಕ್ ನಲ್ಲಿ ಆಗುವ ಪರಿಚಯ ಮೊದಲು ಸ್ನೇಹ. ನಂತರ ಆ ಸ್ನೇಹ ಪ್ರೇಮರೂಪ ಪಡೆದು ಅನೇಕ ಸಂಸಾರಗಳು ಹಾಳಾದ ಉದಾಹರಣೆಗಳು ಕೂಡ ಇವೆ. ಚಾಟಿಂಗ್ ಮೂಲಕ ಶುರುವಾಗುವ ಈ ಸ್ನೇಹ ಒಂದಾಗುವ ಹಂತಕ್ಕೆ ಬಂದು ನಿಲ್ಲುತ್ತದೆ. ಕೊನೆಗೆ ಜತೆಗಿದ್ದವರನ್ನು ತೊರೆಯುವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಅದಾಗದಿದ್ದಾಗ ಫೇಸಬುಕ್ ಸ್ನೇಹಿತ ಅಥವಾ ಸ್ನೇಹಿತೆ ಜತೆಗೂಡಿ ಕೊಲೆಯಂತಹ ಅಪರಾಧ ಕೃತ್ಯ ಎಸಗುವ ಹಂತದವರೆಗೂ ತಂದು ನಿಲ್ಲಿಸುತ್ತದೆ. ಹೀಗೆ ಈ ಡಿಜಿಟಲ್ ವ್ಯಸನ ಅವಸಾನ ತರುವುದಂತೂ ಖಚಿತ. ಹಾಗಂತ ನಾವು ತಂತ್ರಜ್ಞಾನ ಬಳಸಬಾರದಂತಲ್ಲ. ಎಷ್ಟು ಬೇಕೋ ಅಷ್ಟು ಮತ್ತು ಅಗತ್ಯ ಕೆಲಸಗಳಿಗೆ ಸೀಮಿತಗೊಳಿಸಬೇಕು. ಎಲ್ಲದಕ್ಕೂ ಅದರ ಮೇಲೆ ಅವಲಂಬಿತನಾದರೆ ನಮ್ಮ ವೈಯಕ್ತಿಕ ಕಾರ್ಯಕ್ಷಮತೆ ದಿನದಿಂದ ಕುಸಿಯುತ್ತ ಸಾಗುತ್ತದೆ. ಅತಿಯಾದ ಸ್ಮಿನ್ ನೋಡುವುದರಿಂದ ಮಿದುಳಿನ ಮೇಲೂ ಪ್ರಭಾವವಾಗುತ್ತದೆ. ಇದನ್ನು ತಡೆದರೆ ಸಿಟ್ಟು ಬರುತ್ತದೆ. ಮನುಷ್ಯ ಕೆರಳುತ್ತಾನೆ. ಮುಂದೆ ನರಳುತ್ತಾನೆ ಅಷ್ಟೇ.

ಇದಕ್ಕೆಲ್ಲ ಪರಿಹಾರ ಎಂದರೆ ಎಲ್ಲದಕ್ಕೂ ಸ್ವಯಂ ಮಿತಿ ಹಾಕಿಕೊಳ್ಳುವುದು. ಡಿಜಿಟಲ್ ವ್ಯಸನಕ್ಕೆ ದಾಸರಾದೇ ಇರುವುದು ಇಂದಿನ ತುರ್ತು ಅಗತ್ಯ. ನಮ್ಮ ಮಧ್ಯೆ ಇದರ ಬಗ್ಗೆ ಜಾಗೃತಿಯ ಕೊರತೆ ಇದೆ. ಮೊನ್ನೆ ಮೊನ್ನೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸೈಬರ್ ಕ್ರೈಂ, ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರ ವಹಿಸುವ ಅನಿವಾರ್ಯತೆ ಬಗ್ಗೆ ಹೇಳಿದ್ದನ್ನು ನಾವಿಲ್ಲಿ ಗಮನಿಸಬಹುದು.

About Author:

Leave Your Comments

Your email address will not be published. Required fields are marked *