COVID-19 Resources for Mental Health Coaches... Learn More
“ಡಿಜಿಟಲ್ ಕಲಿಕೆಯ ಕರಾಳ ಮುಖ”


ಡಿಜಿಟಲ್ ಕಲಿಕೆಯ ಕರಾಳ ಮುಖ
ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಆನ್‌ಲೈನ್ ಅಧ್ಯಯನ ಸಂಸ್ಕೃತಿಯು ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಆದರೆ ಇದು ಮಾನಸಿಕ ಮತ್ತು ದೈಹಿಕ ಬಳಲಿಕೆಯ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತಿದೆ ಎಂದು ಬಿಎಂಸಿ ಸಾರ್ವಜನಿಕ ಆರೋಗ್ಯ ವರದಿಯಲ್ಲಿ ತಿಳಿಸಿದೆ.
ಇತ್ತೀಚೆಗೆ ಪ್ರಕಟವಾದ ಬಿಎಂಸಿ 2025ರ ವರದಿ ಪ್ರಕಾರ, 2017ರಲ್ಲಿ ಕೇವಲ ಶೇ.7.4ರಷ್ಟು ಪ್ರಮಾಣದಲ್ಲಿದ್ದ ಈ ಸಮಸ್ಯೆಯು 2023ರಲ್ಲಿ ಸುಮಾರು ಶೇ.60ರಷ್ಟು ಏರಿಕೆಯಾಗಿದೆ. ಅಂದರೆ ಪ್ರತಿ 10 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದೆ. ಹೈಬ್ರಿಡ್ ತರಗತಿಗಳು, ಆನ್‌ಲೈನ್ ಪರೀಕ್ಷೆಗಳು ಮತ್ತು 24/7 ಕೌಶಲವನ್ನು ಹೆಚ್ಚಿಸುವ ಒತ್ತಡದೊಂದಿಗೆ, ತರಗತಿಗಳು ಮುಗಿದಾಗ ಶಾಲಾ ಚಟುವಟಿಕೆಗಳು ಮುಗಿಯಿತು ಎಂದು ವಿದ್ಯಾರ್ಥಿಗಳು ಭಾವಿಸುವುದಿಲ್ಲ ಎಂದು ವರದಿ ಹೇಳಿದೆ.
ಡಿಜಿಟಲ್ ಬರ್ನ್‌ಔಟ್ ಎಂದರೇನು ?: ಬರ್ನ್‌ಔಟ್ಎಂದರೆ ದೀರ್ಘಕಾಲದ ಒತ್ತಡ ಮತ್ತು ಆಯಾಸದಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ಬಳಲಿಕೆ, ಇದು ಕೇವಲ ದೈಹಿಕ ಆಯಾಸವಲ್ಲ, ಬದಲಾಗಿ ಶೈಕ್ಷಣಿಕ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು, ಯಾವುದೇ ಕೆಲಸ ಮಾಡಲು ಪ್ರೇರಣೆ ಇಲ್ಲದಿರುವುದು ಮತ್ತು ಭಾವನಾತ್ಮಕವಾಗಿ ಸಂಪರ್ಕ ಕಳೆದುಕೊಂಡಂತೆ ಅನಿಸುವುದು ಆಗಿವೆ.
ಸಮಸ್ಯೆಗೆ ಕಾರಣ : ಡಿಜಿಟಲ್ ಕಲಿಕೆಯಲ್ಲಿ ವಿದ್ಯಾರ್ಥಿಗಳು ಯಾವಾಗಲೂ ತಮ್ಮ ಲ್ಯಾಪ್‌ಟಾಪ್‌ಗಳಿಗೆ ಅಥವಾ ಫೋನ್‌ಗಳಿಗೆ ಅಂಟಿಕೊಂಡಿರುತ್ತಾರೆ. ಆನ್‌ಲೈನ್ ತರಗತಿಗಳು, ಆನ್ ಲೈನ್ ಪರೀಕ್ಷೆಗಳು, ಯುಟ್ಯೂಬ್ ಟ್ಯುಟೋರಿಯಲ್ಸ್, ಕೋಡಿಂಗ್ ತರಬೇತಿಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇದರಿಂದಾಗಿ ಕಲಿಕೆ ಮತ್ತು ಜೀವನದ ನಡುವಿನ ಅಂತರ ಮಾಯವಾಗುತ್ತಿದೆ. ಹೊಸ ಕೌಶಲ ಕಲಿಯುವುದು, ಪ್ರಮಾಣಪತ್ರಗಳನ್ನು ಗಳಿಸುವುದು, ಇಂಟರ್ನ್ ಶಿಪ್‌ನಲ್ಲಿ ಭಾಗವಹಿಸುವುದು ಹೀಗೆ ಡಿಜಿಟಲ್ ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಏನಾದರೂ ಮಾಡುತ್ತಲೇ ಇರಬೇಕು ಎಂಬ ಒತ್ತಡ ಕಾಡುತ್ತಿರುತ್ತದೆ. ಇದು ಆತಂಕ, ಖಿನ್ನತೆ, ನಿದ್ರಾ ಭಂಗ, ಕಲಿಕೆಯಲ್ಲಿ ಆಸಕ್ತಿ ಇಲ್ಲದಿರುವುದು, ಏಕಾಗ್ರತೆ ಕೊರತೆ ಮತ್ತು ಸಾಮಾಜಿಕವಾಗಿ ಬೆರೆಯಲು ಆಗದಿರುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕೋವಿಡ್ ಸಮಯದಲ್ಲಿ ಅನಿವಾರ್ಯವಾದ ಆನ್‌ಲೈನ್ ಕಲಿಕಾ ಪದ್ಧತಿ ಈಗ ವಿದ್ಯಾರ್ಥಿಗಳನ್ನು ಅದರಿಂದ ಹೊರಗೆ ಬಾರದಷ್ಟು ಅವಲಂಬಿತರನ್ನಾಗಿ ಮಾಡಿದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದ್ದು, ಪ್ರಾಥಮಿಕ ಹಂತದಲ್ಲೇ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಶಿಕ್ಷಣ ಸಂಸ್ಥೆಗಳು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಆಟ, ಊಟ, ಪಾಠ ಈ ಮೂರು ಸಮಪ್ರಮಾಣದಲ್ಲಿದ್ದರೆ ಅದೆಷ್ಟೋ ದೂರವಿರಿಸಬಹುದು.
-ಡಾ.ಆನಂದ ಪಾಂಡುರಂಗಿ
ಮಾನಸಿಕ ಆರೋಗ್ಯ ತಜ್ಞರು,ಧಾರವಾಡ
ಪರಿಹಾರ : ಈ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಡಿಜಿಟಲ್ ಕಲಿಕೆಯನ್ನು ನಿಲ್ಲಿಸಬೇಕಾಗಿಲ್ಲ. ಬದಲಾಗಿ, ಅದನ್ನು & ಸಮತೋಲನದಲ್ಲಿ ಬಳಸಲು ಕಲಿಯಬೇಕು. ಡಿಜಿಟಲ್ ಸಾಧನಗಳಿಂದ ದೂರವಿರಲು ಒಂದಷ್ಟು ಸಮಯವನ್ನು ನಿಗದಿಪಡಿಸಬೇಕು. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳ ಈ ಬಗ್ಗೆ ಗಮನ ಹರಿಸಬೇಕು. ವೇಗಕ್ಕಿಂತ ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ವಿರಾಮ ತೆಗೆದುಕೊಳ್ಳುವ ಸಮಯದಲ್ಲಿ, ಉಳಿದವರಿಗಿಂತ ಹಿಂದೆ ಬೀಳುತ್ತಿದ್ದೇನೆ ಎಂಬ ಭಾವನೆ ತಂದುಕೊಳ್ಳಬಾರದು.