ನಗರದ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರು ಮನೋವೈದ್ಯಕೀಯ ಕ್ಷೇತ್ರದ ಮೂಲಕ ಸಲ್ಲಿಸಿದ ಅಪ್ರತಿಮ ಸಮುದಾಯ ಸೇವೆ ಪರಿಗಣಿಸಿ ಹಿರಿಯ ಮನೋವಿಜ್ಞಾನಿ ಡಾ. ಸಿ.ಆರ್. ಚಂದ್ರಶೇಖರ್ ಅವರ ಸಮಾಧಾನ ಕೇಂದ್ರ ವತಿಯಿಂದ ಡಾ. ಡಿ.ಎಸ್. ರಾಜೇಶ್ವರಿ ಚಂದ್ರಶೇಖರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಗಲಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಭಾರತೀಯ ಮನೋವೈದ್ಯರ ಸಂಘದ 33ನೇ ರಾಜ್ಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು.
ಡಾ. ಆನಂದ ಪಾಂಡುರಂಗಿ ಅವರು 3 ದಶಕಕ್ಕೂ ಹೆಚ್ಚು ಕಾಲ ಮನೋವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೌಡ್ಯಮುಕ್ತ ಸಮಾಜ, ವ್ಯಕ್ತಿತ್ವವಿಕಸನ, ವ್ಯಸನಮುಕ್ತ ಸಮಾಜ ನಿರ್ಮಾಣ ಸೇರಿ ಹಲವು ಪರಿಣಾಮಕಾರಿ ಕಾರ್ಯಕ್ರಮ, ಉಪನ್ಯಾಸಗಳ ಮೂಲಕ ಮನೆಮಾತಾಗಿದ್ದಾರೆ. ಅವರ ಅನುಪಮ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಯಿತು. ಡಾ. ರಂಗನಾಥ ಕುಲಕರ್ಣಿ ಅವರಿಗೆ ಡಾ. ರಘುರಾಮ ಯಂಗ್ ಟೀಚರ್ ಅವಾರ್ಡ್ ಮತ್ತು ಸರಸ್ವತಿ ತೆನಗಿ ಅವರಿಗೆ ಡಾ. ಎಸ್.ಎಚ್. ಜಯರಾಮ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ನೀಡಲಾಯಿತು.
ಮಾಜಿ ಶಾಸಕ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರಣ್ಣ ಚರಂತಿಮಠ, ನಿಮ್ಹಾನ್ಸ್ ನಿರ್ದೇಶಕಿ ಪ್ರತಿಮಾಮೂರ್ತಿ, ಕರ್ನಾಟಕ ಮನೋವೈದ್ಯರ ಸಂಘದ ಅಧ್ಯಕ್ಷ ಡಾ. ಎನ್.ಎಂ. ಪಾಟೀಲ, ಇಸ್ರೋ ಮಾಜಿ ಅಧ್ಯಕ್ಷ ಡಾ. ಕಿರಣಕುಮಾರ, ಇತರರಿದ್ದರು.