COVID-19 Resources for Mental Health Coaches... Learn More
“ಕಳಚಲಿ ಮೌಢದ ಜಾಡ್ಯ”
ಕಳಚಲಿ ಮೌಢದ ಜಾಡ್ಯ.
ನಾವಿಂದು 21 ನೇ ಶತಮಾನದಲ್ಲಿದ್ದೇವೆ. ಆಧುನಿಕತೆ ಒಳಗೊಂಡ ವೈಜ್ಞಾನಿಕ ಮನೋಭಾವ ಮೈಗೂಡಿಸಿಕೊಂಡು ತಂತ್ರಜ್ಞಾನದ ಜತೆಗೆ ದಾಪುಗಾಲು ಇಡುತ್ತಿದ್ದೇವೆ. ಆದರೂ ಶ್ರದ್ಧೆಯ ಜೊತೆಗೆ ಅಂಧ ಶ್ರದ್ಧೆಯನ್ನು ಎಲ್ಲೆಲೂ ನೋಡುತ್ತಿದ್ದೇವೆ, ಈ ಪೀರಿಕೆ ಯಾಕೆ ಎಂದರೆ ಎರಡು ದಿನಗಳ ಹಿಂದೆ ಪಕ್ಕದ ಗಡಿ ಜಿಲ್ಲೆಯಿಂದ ಕೃಷಿಕ ದಂಪತಿಗಳು ಮಗಳನ್ನು ಕರೆದುಕೊಂಡು ನಮ್ಮಲ್ಲಿಗೆ ಬಂದಿದ್ದರು. ಅವರು ಸಣ್ಣ ರೈತರು, ಹೊಲದಲ್ಲಿ ಕೃಷಿ ಕೆಲಸವೇ ಜೀವನೋಪಾಯಕ್ಕೆ ಆಧಾರ, ಅವಪುತ್ರಿಗೆ 16 ವಯಸ್ಸು. 10ನೇ ತರಗತಿ ಪರೀಕ್ಷೆ ಬರೆದಿದ್ದಾಳೆ. ಈ ಮಧ್ಯೆ ಆಕೆಯ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಂಡು ಬಂದಿದೆ. ಆಗ ಅವರ ತಲೆಗೆ ಹೊಳೆದಿದ್ದು ಮೌಡ್ಯದ ವಿಚಾರ, ತಮ್ಮ ದಾಯಾದಿಗಳ ಜತೆಗೆ ವ್ಯವಹಾರದ ಹೊಂದಾಣಿಕೆ ಇರದ ಕಾರಣ ತಮ್ಮ ಒಳ್ಳೆಯದನ್ನು ಸಹಿಸದ ದಾಯಾದಿಗಳ ನಂಬಿಕೆ, ತಕ್ಕಣ ಮಾಟ ಮಾಡಿಸಿರಬೇಕೆಂಬ ಬಿಡಿಸುವವರ ಬಳಿ ಹೋಗಿದ್ದಾರೆ. ಪಾಪ ಆ ಹುಡುಗಿ ವಯೋಸಹಜ ಬದಲಾವಣಿಯಿಂದಾಗಿ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದಳೇ ಹೊರತು ಯಾವ ಗಾಳಿಯೂ ಇಲ್ಲ.
ಏನೂ ಇಲ್ಲ. ಆದರೆ ಶಿಕ್ಷಣದ ಕೊರತೆಯಿಂದ ವೈಜ್ಞಾನಿಕ ಮನೋಭಾವದ ಅರಿವು ಇಲ್ಲದ ಕಾರಣ ಅವರು ಹೋಗಿದ್ದು ಗಾಳಿ ಬಿಡಿಸುವವರ ಕಡೆಗೆ, ಅಲ್ಲಿ ಆ ಮಾಂತ್ರಿಕ ಮಾಡಿದ್ದೇನು, ಅಂದರೆ ಈಕೆಯ ಕೈಯೊಳಗಿಂದ ಏನೋ ಗಾಳಿ ನುಸುಳಿದೆ. ಕೈ ಮೂಲಕ ಏನೋ ಮಾಡಲಾಗಿದೆ ಎಂದುಕೊಂಡು ಉದಿನಕಡ್ಡಿಯಿಂದ ಆ ಹುಡುಗಿಯ ಕೈ ತುಂಬ ಸುಟ್ಟು ಗಾಯ ಮಾಡಿದ್ದಾರೆ. ಪಾಪ ಆ ಹುಡುಗಿ ಅದೆಷ್ಟು ಯಾತನೆ, ಹಿಂಸೆ ಅನುಭವಿಸಿದಳೋ ! ಇನ್ನೇನು ಆಕೆ ಸರಿ ಹೋಗುತ್ತಾಳೆ. ಕೈಗೆ ಗಾಯ ಮಾಡಿ ಎಲ್ಲವನ್ನೂ ಹೊರಹಾಕಲಾಗಿದೆ ಎಂದುಕೊಂಡು ಮರಳಿದ್ದಾರೆ. ಇದಾದ ನಂತರವೂ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡಿಲ್ಲ. ಹೀಗೆ ಕಂಡಕಂಡವರಿಗೆ ಮಗಳ ಸ್ಥಿತಿ – ಹೇಳುತ್ತಾ ಹೊರಟಿದ್ದಾರೆ. ಕೊನೆಗೆ ಯಾರೋ ಒಬ್ಬ ಪುಣ್ಯಾತ್ಮ ಇವರ ಸ್ಥಿತಿ ನೋಡಿ ಬುದ್ಧಿವಾದ ಹೇಳಿದ್ದಾನೆ. ಅದೆಂಥಾ ಪಾಲಕರು ನೀವು ಖಿನ್ನತೆಗೆ ಕೈಗೆಲ್ಲಾ ಗಾಯ ಮಾಡಿದರೆ ಆ ಹುಡುಗಿ ಹೇಗೆ ಸಹಿಸಿಕೊಳ್ಳಬೇಕು? ಮೌಧ್ಯದ ಪರಮಾವಧಿ ಇದು ಎಂದು ಬೈದು ಮನೋವೈದ್ಯರ ಬಳಿ ಕೂಡಲೇ ಕರೆದೊಯ್ಯಲು ಸೂಚಿಸಿದ್ದಾನೆ.
ಒಳಗೆ ಬರುತ್ತಿದ್ದಂತೆ ಮಗಳ ತೋರಿಸಿದರು. ಏನೆಂದು ಎಂದು ಪ್ರಶ್ನಿಸಿದಾಗ ‘ನಮ್ಮ ಮಗಳಿಗೆ ಮಾಟ ಮಾಡಿಸಿದ್ದರು.
ಅದನ್ನು ತೆಗೆಸಲು ಹೋಗಿ ಹೀಗಾಯಿತು’ ಎಂದರು. ಒಂದು ಕ್ಷಣ ತುಸು ಕಳಕಳಿಯುಕ್ತ ಕೋಪದಲ್ಲಿ ಪಾಲಕರನ್ನು ಗದರಿಸಿದೆ. ತಡವಾಗಿಯಾದರೂ ಮನೋವೈದ್ಯರ ಬಳಿ ಬಂದಿರಿ ಒಳತಾಯಿತು ಎಂದುಕೊಂಡು ಆ ಹುಡುಗಿಗೆ ವೈಯಕ್ತಿಕ ಆಪ್ತಸಮಾಲೋಚನೆ ಮಾಡಿಸಿದೆ. ಆಕೆಯ ಸಮಸ್ಯೆ ತಿಳಿಯಿತು. ಮುಂದೆ ಅದಕ್ಕೆ ವೈಜ್ಞಾನಿಕ ಚಿಕಿತ್ಸೆ ನೀಡಿದೆ. ಆಕೆ ಈಗ ಗುಣಮುಖಳಾಗಿ ಸಂತೋಷದಿಂದ ಇದ್ದಾಳೆ. ಆದರೆ ನಾವಿಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮನೋವೈದ್ಯರ ಬಳಿ ಹೋಗದೇ ಅದೇ ಹಳೆ ನಂಬಿಕ ಅಪನಂಬಿಕೆಗೆ ಜೋತುಬಿದ್ದು ಮಕ್ಕಳ ಭವಿಷ್ಯ ಹಾಳು ಮಾಡುವುದು ಎಷ್ಟು ಸರಿ? ಕಂದಮ್ಮಗಳ ಕನಸು ಕಮರಿದರೆ ಅದಕ್ಕೆ ಯಾರು ಹೊಣಿ? ವಾಸ್ತವದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಮಾಜ, ಸಮಾಜದಲ್ಲಿರುವ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಜನರೂ ಈ ಆಚರಣೆಗಳಿಂದ ಆಗುವ ಅಪಾಯಗಳನ್ನು ಅರಿಯಬೇಕು. ಸಮಸ್ಯೆಗೆ ಮನೋವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ವಿಚಾರವಿಲ್ಲದ ಮತ್ತು ಬೇರೆಯವರ ಮಾತಿಗೆ ಕಿವಿಗೊಟ್ಟು ಮುಗ್ಧ ಜನರು ಮರುಳಾಗುವದು ಬೇಡ. ವೈಜ್ಞಾನಿಕ ಚಿಂತನೆ, ಸಲಹೆ ಸೂಚನೆಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇಂದು ಸಾಕಷ್ಟು ಬದಲಾವಣೆ ಆಗಿದೆ. ಪ್ರತಿ ಕಾಯಿಲೆಗೂ ಅಗತ್ಯ ಔಷಧಿಗಳು ಲಭ್ಯವಿದೆ. ಅದೊಂದು ಕಾಲವಿತ್ತು. ಮಾನಸಿಕ ಸಮಸ್ಯೆಗಳಿಗೆ ವೈಜ್ಞಾನಿಕ ಚಿಕಿತ್ಸೆ ಇದೆ ಎಂಬುದೇ ಗೊತ್ತಿರಲಿಲ್ಲ. ಗೊತ್ತಿರಲಿಲ್ಲ ಎನ್ನುವುದಕ್ಕಿಂತ ಪ್ರಚಲಿತವಾಗಿರಲಿಲ್ಲ. ಆಗ ಜನರು ತಮ್ಮ ಮನೋ ನೆಮ್ಮದಿಗೆ ಧಕ್ಕೆಯಾದಾಗ ತಮ್ಮ ತಮ್ಮ ನಂಬಿಕೆಗೆ ಮೊರೆ ಹೋಗುತ್ತಿದ್ದರು. ಅದು ಸಮಾಧಾನಕ್ಕೆ ಅಷ್ಟೆ, ಅದು ಪೂರ್ಣ ಪರಿಹಾರವಲ್ಲ. ಇದು ಜನರಿಗೆ ಕ್ರಮೇಣ ಅರ್ಥವಾಗುತ್ತಿದೆ. ಇತ್ತೀಚೆಗೆ ಮನೋವೈದ್ಯರ ಬಳಿ ಬರುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ, ನಂಬಿಕೆ ಜತೆಗೆ ವೈಜ್ಞಾನಿಕ ಚಿಕಿತ್ಸೆಯೂ ಸೇರಿದರೆ ಯಾವುದೇ ಮನೋವ್ಯಾಧಿ ಬರದು.