COVID-19 Resources for Mental Health Coaches... Learn More
“ಏಕಾಗ್ರತೆಗೆ ಬಲ ತುಂಬಲು ಯತ್ನಿಸಿದರೆ ಖಿನ್ನತೆ ಇರದು”

‘ನನ್ನ ವೃತ್ತಿ ಎಲ್ಲರಂಥಲ್ಲ ಸರ್. ಸ್ವಲ್ಪ ಯಾಮಾರಿದರೂ ಮುಗೀತು ಕಥೆ, ಬಾರದ ಲೋಕಕ್ಕೆ ಪಯಣ. ನನಗೆ ಅದು ಬಿಟ್ಟರೆ ಬೇರೆ ದುಡಿಮೆ ಗೊತ್ತಿಲ್ಲ. ಆದರೆ ಅದರತ್ತ ಲಕ್ಷ್ಯ ಕೊಡಲು ಆಗುತ್ತಿಲ್ಲ.’- ಹೀಗೆಂದು ಬಂದಿದ್ದ ಯುವಕನೊಬ್ಬನ ಮಾತುಗಳನ್ನು ಆಲಿಸಿದಾಗ ಎಲ್ಲರಿಗೂ ಅರ್ಥವಾಗಿರಬೇಕು ಆತನೊಬ್ಬ ಚಾಲಕ ಎಂದು. ಹೌದು, ಟ್ಯಾಕ್ಸಿ ಓಡಿಸಿ ಜೀವನ ನಿರ್ವಹಣೆ ನಡೆಸುವ ಆತನ ಮಾತುಗಳಲ್ಲಿ ಆತಂಕವಿತ್ತು. ಖಿನ್ನತೆಯ ಛಾಯೆಯಿತ್ತು. ಜುಗುಪ್ಪೆ ಮನೆ ಮಾಡಿತ್ತು. ಪರಿಣಾಮ ಆತ ಏಕಾಂತದಲ್ಲಿ ದಿನವಿಡೀ ಅಳುತ್ತಿದ್ದ. ಜೀವನವೇ ಸಾಕು ಎನ್ನುವ ನಿರ್ಧಾರಕ್ಕೆ ಬಂದಿದ್ದ. ಆತನನ್ನು ಯಾರೋ ಪರಿಚಿತರು ನನ್ನ ಬಳಿ ಕರೆ ತಂದಿದ್ದರು. ಈ ಜೀವನ ಒಂದು ರಂಗಭೂಮಿ ಇದ್ದಂತೆ. ಎಲ್ಲರಿಗೂ ಒಂದೊಂದು ಪಾತ್ರ ಇರುತ್ತದೆ. ಅದ್ಭುತ ಪ್ರದರ್ಶನ ನೀಡಬೇಕು ಎಂದು ಅಂದುಕೊಂಡರೂ ಎಲ್ಲರಿಗೂ ಅದು ಆಗದ ಮಾತು.
ಹಾಗಂತ ಅಭಿನಯ ಹಾಗೂ ವೇದಿಕೆಯನ್ನೇ ತೊರೆಯುವುದು ಹೇಡಿಯ ಕೆಲಸ.
ಅದನ್ನೇ ನಮ್ಮ ಹಿರಿಯರು ಹೇಳಿದ್ದು : ಈಸಬೇಕು ಇದ್ದು ಜಯಿಸಬೇಕು ಎಂದು ಸೋಲು-ಗೆಲುವು, ಸುಖ ದುಃಖ ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಇಲ್ಲಿ ಯಾವುದೂ ಶಾಶ್ವತವಲ್ಲ. ನಮ್ಮ ಗಟ್ಟಿ ನಿರ್ಧಾರ ಮಾತ್ರ ಎಲ್ಲವನ್ನೂ ಮೀರಿ ನಿಲ್ಲಿಸಬಹುದು. ಆ ಗಟ್ಟಿತನ ನಾವು ತಂದುಕೊಳ್ಳಬೇಕು. ಅನಿರೀಕ್ಷಿತ ಆಘಾತಗಳನ್ನು ಎದುರಿಸಲು ಸಜ್ಜಾಗಬೇಕು. ದೈಹಿಕಕ್ಕಿಂತಲೂ ಮಾನಸಿಕ ಗಟ್ಟಿತನ ಎಲ್ಲರಿಗೂ ಮುಖ್ಯ. ಇದಾಗದಿದ್ದರೆ ಈ ಡ್ರೈವರ್ ಎದುರಿಸುತ್ತಿರುವ ಸ್ಥಿತಿಯೇ ಎಲ್ಲರದಾಗುತ್ತದೆ. ನಾನು ಹೇಳುತ್ತಿರುವ ಚಾಲಕ ಮಧ್ಯವಯಸ್ಕ. ನೋಡಲು ಸುಂದರ. ಸದೃಢವಾಗಿದ್ದಾನೆ. 8 ತಿಂಗಳು ಹಿಂದೆಯಷ್ಟೇ ಆತನ ತಾಯಿ ಅಗಲಿದ್ದಾರೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ತಂದೆ ಮೊದಲೇ ತೀರಿಹೋಗಿದ್ದಾರೆ. ಏಕಾಂಗಿ ಬದುಕು. ತಾಯಿಯ ಅಕಾಲಿಕ ಅಗಲಿಕೆಯಿಂದ ಆತನಿಗೆ ಆಕಾಶವೇ ಮೈ ಮೇಲೆ ಕಳಚಿ ಬಿದ್ದಂತಾಗಿದೆ. ಹೆತ್ತ ಜೀವ ಕಳೆದುಕೊಂಡ ದುಖದಿಂದ ಆತ ಇನ್ನೂ ಹೊರಬಂದಿಲ್ಲ. ಬರೀ ಅಳುವುದೇ ಕಾಯಕ. ಎಷ್ಟೂ ಅಂತ ಮನೆಯಲ್ಲಿ ಕುಳಿತಿರಲು ಸಾಧ್ಯ?. ಹೊಟ್ಟೆ ತುಂಬಬೇಕಲ್ಲ, ಕೊನೆಗೆ ಎಂದಿನಂತೆ ಟ್ಯಾಕ್ಸಿ ಓಡಿಸುವ ಕೆಲಸಕ್ಕೆ ಹೊರಟ. ಆದರೆ ದುಃಖ ಆತನ ಬೆಂಬಿಡುತ್ತಿಲ್ಲ. ಪದೇ ಪದೆ ಅಳು ಆತನ ಏಕಾಗ್ರತೆಗೆ ಭಂಗ ತರುತ್ತಿತ್ತು. ಸ್ಟೇರಿಂಗ್ ಮೇಲೆ ಕೈ ಇರುತ್ತಿತ್ತಾದರೂ ಕೆಲವೊಮ್ಮೆ ಆತನಿಗೆ ಗೊತ್ತಿಲ್ಲದೇ ಲಕ್ಷ್ಯ ತಪ್ಪುತ್ತಿದ್ದ. ಯಾವುದೇ ಕೆಲಸಮಾಡುವಾಗ ಮನಸ್ಸು ದೇಹ ಒಂದಾದರೆ ಮಾತ್ರ ಆ ಕೆಲಸದಲ್ಲಿ ಪರಿಪೂರ್ಣತೆ ಕಾಣಬಹುದು, ಏಕಾಗ್ರತೆ ಇಲ್ಲದಿದ್ದರೆ ಅನಾಹುತ ಕಟ್ಟಿಟ್ಟಬುತ್ತಿ. ಎಷ್ಟೋ ಸಾರಿ ಅಕ್ಕ ಪಕ್ಕದ ವಾಹನದವರು ಬೈದದ್ದೂ ಉಂಟು. ಇದು ದಿನವೂ ಶುರುವಾದ ಮೇಲಂತೂ ಟ್ಯಾಕ್ಸಿಯಲ್ಲಿದ್ದ ಪ್ರಯಾಣಿಕರೂ. ಬೈಯ್ಯಲು ಆರಂಭಿಸಿದರು. ನಿನ್ನ ನಿರ್ಲಕ್ಷ್ಯಕ್ಕೆ ಮತ್ತೊಬ್ಬರ ಜೀವ ಯಾಕಪ್ಪಾ ತಗೊತೀಯಾ? ಎಂದು ಜನ ಕೇಳಲಾರಂಭಿಸಿದರು. ಇದರಿಂದ ಹೊಟ್ಟೆಪಾಡಿಗೆಂದು ಇದ್ದ ಏಕೈಕ ಮಾರ್ಗವೂ ಸ್ಥಗಿತವಾಗುವ ಹಂತಕ್ಕೆ ಬಂದು ನಿಂತಿತು. ಹೀಗೆ ಸಾಲು ಸಾಲು ಆಘಾತಗಳು ಬದುಕೇ ಸಾಕು ಎನ್ನುವ ಹಂತಕ್ಕೆ ಆತನನ್ನು ತಂದು ನಿಲ್ಲಿಸಿತ್ತು. ಆಗ ನಾನು ಅವನಿಗೆ ಹೇಳಿದ್ದು ಇಷ್ಟೇ. ‘ಈ ಜೀವನದಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ. ಒಂದಿಲ್ಲ ಒಂದು ದಿನ ಎಲ್ಲರೂ ಹೊರಡಲೇಬೇಕು. ಆದರೆ ಹೆತ್ತವರ ಅಥವಾ ಆಪ್ತರ ಅಗಲಿಕೆ ದುಖದ ಸಂಗತಿ ಹೌದಾದರೂ ಬದುಕು ನಿಲ್ಲಬಾರದು. ಅವರ ಆಶಯದಂತೆ ಸಾಧನೆಯತ್ತ ಗಮನಹರಿಸಬೇಕು. ಕಾಯಕ ಯೋಗಿಯಾಗಬೇಕು. ಅಂದಾಗ ದುಡಿಮೆಯೂ ಆಗುತ್ತದೆ. ಮುಂದೆ ಮದುವೆ, ಸಂಸಾರ ಎಲ್ಲವೂ ಸುಗಮವಾಗಿರುತ್ತದೆ. ಅದು ಬಿಟ್ಟು ತಲೆ ಮೇಲೆ ಕೈ ಹೊತ್ತು ಕೂರುವುದು ಸಲ್ಲ ಎಂದೆ.
ಮಾನಸಿಕ ಖಿನ್ನತೆ ನಿವಾರಣೆಗೆ ವೈದ್ಯಕೀಯ ವಿಜ್ಞಾನಕ್ಕನುಗುಣವಾಗಿ ಮಾತ್ರೆ ಕೊಡಬಹುದು. ಆದರೆ ಇಲ್ಲಿ ಮಾತ್ರೆಗಿಂತ ಗಟ್ಟಿ ಮನಸ್ಸು ಮುಖ್ಯ. ಮನಸ್ಸಿಗೆ ಏಕಾಗ್ರತೆಯ ಬಲ ತುಂಬಲು ಯತ್ನಿಸಿದ್ದೇ ಆದಲ್ಲಿ ಯಾವ ಖಿನ್ನತೆಯೂ ಇರುವುದಿಲ್ಲ. ಆತಂಕವೂ ಇರುವುದಿಲ್ಲ. ನೆಮ್ಮದಿಯ ನಿದ್ರೆ, ಸುಖೀ ಸಂಸಾರ, ಮಕ್ಕಳಿಂದ ಗೌರವ, ಎಲ್ಲರಿಂದ ಮರ್ಯಾದೆ ಮತ್ತು ಕೊನೆವರೆಗೆ ಆರೋಗ್ಯ ಇವಿಷ್ಟು ಯಶಸ್ವಿ ಬದುಕಿನ ಪ್ರಮುಖ ಅಂಶಗಳು. ಇವುಗಳತ್ತ ನಮ್ಮ ಚಿತ್ತ ಇರಬೇಕೇ ಹೊರತು ಭೌತಿಕ ಧನ ಸಂಪತ್ತಿನ ಕಡೆ ಅಲ್ಲ. ಸ್ವಸ್ಥ ಮನಸ್ಸು ಸ್ವಸ್ಥ ಸಮಾಜದ ಪ್ರತೀಕ, ಅದನ್ನರಿತು ಸಾಗಿದರೆ ಎಲ್ಲವೂ ಸ್ವಸ್ಥ. ಇಲ್ಲದಿದ್ದರೆ ಎಲ್ಲವೂ ಅಸ್ವಸ್ಥ.