COVID-19 Resources for Mental Health Coaches... Learn More
“ಇಬ್ಬರಲ್ಲೂ ಹೊಂದಾಣಿಕೆಯೇ ಸುಖೀ ದಾಂಪತ್ಯದ ಸೂತ್ರ”
ಹೌದು ಮದುವೆ ಎಂಬ ಮೂರಕ್ಷರ ಕಿವಿಗೆ ಬಿದ್ದಾಕ್ಷಣ ಯುವಜೋಡಿಗಳಿಗೆ ಮಧುರಾನುಭೂತಿಯ ಅನುಭವ ಮದುವೆ ಬಗ್ಗೆ ಎಲ್ಲ ಯುವಮನಸ್ಸುಗಳಿಗೆ ನೂರೆಂಟು ಕನಸುಗಳಿರುತ್ತವೆ. ತಮ್ಮದೇ ಆದ ಆಲೋಚನೆಗಳಿರುತ್ತವೆ. ಆದರೆ ಇವೆಲ್ಲಾ ಸಾಕಾರಗೊಳ್ಳುವುದು ಎಲ್ಲವೂ ಅಂದುಕೊಂಡಂತೆ ಸಾಗಿದಾಗ. ಮದುವೆ ಕೇವಲ ಎರಡು ವ್ಯಕ್ತಿಗಳ ಬೆಸುಗೆಯಲ್ಲ, ಭಾವದ ಬೆಸುಗೆ, ಎರಡು ಕುಟುಂಬಗಳ ಬೆಸುಗೆ. ಅದೊಂದು ಧಾರ್ಮಿಕ ಆಚರಣೆ ಮಾತ್ರವಲ್ಲ, ಸಾಮಾಜಿಕ ಹೊಣೆ. ನಮ್ಮ ದೇಶದಲ್ಲಿ ಆಯಾ ಕಾಲಘಟ್ಟದಲ್ಲಿ ಮದುವೆ ಅವರವರ ಸಂಪ್ರದಾಯ, ಸಂಸ್ಕೃತಿಗನುಸಾರ ಆಗುತ್ತ ಬಂದಿವೆ. ಎರಡೂ ಜೀವ ಒಂದಾಗಿ ಸಂಸಾರ ರಥ ಎಳೆಯಲು ಮುಂದಾಗುವ ಈ ಮದುವೆ ಪರಸ್ಪರ ಬದ್ಧತೆಯ ಬಂಧದಲ್ಲಿ ಕಟ್ಟಿ ಹಾಕುತ್ತದೆ.
ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯದ ಸವಿಜೇನು ಸವಿಯಲು ಸಜ್ಜಾಗುತ್ತಾರೆ. ಕೇವಲ ದೈಹಿಕವಾಗಿ ಒಂದಾಗುವುದಷ್ಟೇ ಅಲ್ಲ ಮಾನಸಿಕವಾಗಿ, ಸಾಮಾಜಿಕವಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಒಮ್ಮತದ ಮಂತ್ರ ಪಠಿಸಿದಾಗ ಮದುವೆಯಲ್ಲಿ ಹಾಕಿದ ಮೂರು ಗಂಟಿನ ನಂಟು ಶಾಶ್ವತವಾಗಿ ಉಳಿಯುತ್ತದೆ. ಇದರಲ್ಲಿ ಸ್ವಲ್ಪವೇನಾದರೂ ವ್ಯತ್ಯಾಸ ಅಭಿಪ್ರಾಯ ಭೇದ ಬಂದಲ್ಲಿ ಸಂಬಂಧದಲ್ಲಿ ಬಿರುಕು, ಮನಸ್ತಾಪಕ್ಕೆ ಎಡೆ ಹಲೋ ಡಾಕ್ಟರ್ ಡಾ. ಆನಂದ ಪಾಂಡುರಂಗಿ ಖ್ಯಾತ ಮನೋವೈದ್ಯರು ಮಾಡಿಕೊಟ್ಟಂತಾಗುತ್ತದೆ. ಮದುವೆಯ ಅರ್ಥವನ್ನು ಅರಿತು ಸದ್ಬಳಕೆ ಮಾಡಿಕೊಂಡಲ್ಲಿ ಸಂಸಾರ ಸುಲಭ, ಇಲ್ಲದೇ ಹೊದರೆ ಬಲುಭಾರ, ಕೆಲ ದಿನಗಳ ಹಿಂದಷ್ಟೇ ಒಂದು ದೊಡ್ಡ ಮನೆತನದ ಕುಟುಂಬ ನನ್ನ ಬಳಿ ಬಂದಿದ್ದರು. ಗಂಡ ಹೆಂಡತಿ ಇಬ್ಬರೂ ಉನ್ನತ ಹುದ್ದೆಯಲ್ಲಿದ್ದು ಸೇವಾ ನಿವೃತ್ತಿಯಾಗಿದ್ದರು. ಇವರಿಗೆ ಒಬ್ಬನೇ ಮಗ, ಯಾವುದಕ್ಕೂ ಕೊರತೆಯಾಗದಂತೆ ಬೆಳೆಸಿದ್ದರು. ಮಗನೂ ಅಷ್ಟೇ, ತಂದೆ ತಾಯಿ ಎಂದರೆ ಪಂಚಪ್ರಾಣ. ಅತ್ಯುನ್ನತ ಹುದ್ದೆಯ ಉದ್ಯೋಗ ಹೊಂದಿದ್ದ. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿದ್ದ ಆತನಿಗೆ ಬಡತನ ಕೊರತೆ ಎಂಬುದರ ಅರಿವೇ ಇರಲಿಲ್ಲ. ತನ್ನಂತೆ ಎಲ್ಲರೂ ಬೆಳೆದು ಬಂದಿರುತ್ತಾರೆ ಎನ್ನುವ ಆಲೋಚನೆ ಅವನದು. ಮದುವೆ ವಯಸ್ಸಾದಾಗ ಒಂದು ಒಳ್ಳೆಯ ಹುಡುಗಿ ನೋಡಿದರು. ಆಕೆ ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯ ಹುಡುಗಿ, ಸಂಸ್ಕೃತಿ, ಸಂಪ್ರದಾಯ, ಆಚಾರ- ವಿಚಾರಗಳನ್ನು ಪಾಲಿಸುತ್ತ ಬೆಳೆದ ಸುಸಂಸ್ಕೃತ ಯುವತಿ ಏಕೈಕ ಪುತ್ರನ ಮದುವೆ ಎಂದು ಹುಡುಗನ ಕಡೆಯವರೇ ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಮುಂದೆ ದಿನಗಳುರುಳಿದಂತೆ ಹೊಸಜೋಡಿ ಹೊಸ ಹುರುಪಿನಲ್ಲಿ ಕೈ ಕೈ ಹಿಡಿದು ನಲಿದಾಡಿದ್ದೂ ಆಯಿತು. ಅದೊಂದು ದಿನ ಹುಡುಗಿಯ ಪಾಲಕರು ಬೀಗರ ಮನೆಗೆ ಬರುತ್ತಾರೆ. ಅವರ ಬಟ್ಟೆ ಬರೆ ಅಳಿಯನ ಮನೆಗೆ ತಕ್ಕುದಾಗಿರಲಿಲ್ಲ. ಇದು ಹುಡುಗನಿಗೆ ಯಾಕೋ ಕಸಿವಿಸಿ ಸೃಷ್ಟಿಸಿತು. ಅವರು ಪದೇಪದೆ ಮನೆಗೆ ಬರೋದು ಬೇಡ. ನಿಮ್ಮಪ್ಪ ಹೀಗೆ.. ನಿಮ್ಮಮ್ಮ ಹೀಗೆ ಎಂಬ ಟೀಕೆ ಟಿಪ್ಪಣಿಗಳು ಶುರುವಾದವು. ಇದಕ್ಕೆ ಪ್ರತಿಯಾಗಿ ಆತನ ಹೆಂಡತಿ ನನಗೆ ಜೀವ ಕೊಟ್ಟಿದ್ದಲ್ಲದೇ ನನ್ನಲ್ಲಿ ಸಂಸ್ಕಾರದ ಬೀಜ ಬಿತ್ತಿದವರು ಎಂದೆಲ್ಲಾ ಹೇಳುತ್ತಿದ್ದಂತೆ ಆತನಿಗೆ ಅದು ಹಿಡಿಸಲಿಲ್ಲ. ಹೀಗೆ ವಾದ ವಿವಾದ ಶುರುವಾದವು. ಕೊನೆಗೆ ವಿಚ್ಛೇದನ ಹಂತಕ್ಕೆ ಬಂದು ನಿಂತಿತು. ಆಗ ಯಾರೋ ಹಿತೈಷಿಗಳ ಸಲಹೆ ಮೇರೆಗೆ ಹುಡುಗನ ತಂದೆ ತಾಯಿ ಮಗ ಸೊಸೆ ಸಮೇತ ನನ್ನಲ್ಲಿಗೆ ಬಂದು ಸಮಸ್ಯೆಯನ್ನು ವಿವರಿಸಿದರು. ಆಗ ನಾನವರಿಗೆ ಹೇಳಿದ್ದು ಇಷ್ಟೇ” ಇದು ನಿಮ್ಮದೊಬ್ಬರ ಸಮಸ್ಯೆಯಲ್ಲ. ಇದು ಇತ್ತೀಚೆಗೆ ಫರ್ ಫರ್ ಕಿ ಕಹಾನಿ ಆಗಿದೆ. ವಿಭಿನ್ನ ಪರಿಸರದಲ್ಲಿ ಬೆಳೆದ ಎರಡು ಜೀವ ಋಣಾನುಬಂಧದಿಂದ ಮದುವೆ ಆದ ನಂತರದ ದಿನಗಳಲ್ಲಿ ಎಲ್ಲವೂ ಹೊಸತು. ಹೊಂದಾಣಿಕೆ ಇಲ್ಲಿ ಬಲು ಮುಖ್ಯ.ಏಕೆಂದರೆ ಇಷ್ಟು ವರ್ಷ ಹತ್ತು ಹೊತ್ತು ಸಾಕಿದವರನ್ನು ಬಿಟ್ಟು ಬಂದವಳಿಗೆ ಹೊಂದಾಣಿಕೆ ಆಗಲು ಸಮಯ ಬೇಕು. ಮಗಳ ಮನೆ ಅಂದ ಮೇಲೆ ಅತ್ತೆ ಮಾವ ಬರುವವರೇ, ಅವರು ಬೆಳೆದು ಬಂದ ಹಿನ್ನೆಲೆಯೇ ಬೇರೆ. ಅವರನ್ನೂ ನಮ್ಮ ಮೂಗಿನ ನೇರಕ್ಕೆ ನೋಡುವುದು ತಪ್ಪು, ಒಡಹುಟ್ಟಿದವರೇ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಇಂತಹ ಕ್ಷುಲ್ಲಕ ವಿಚಾರಗಳಿಗೆ ವಿರಾಮ ಹೇಳಿ ಮನಸ್ತಾಪಗಳನ್ನು ದೂರ ಮಾಡಿ ಬದುಕಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸುಖ ಎಂದು ತಿಳಿ ಹೇಳಿದೆ. ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಯಿತು. ನಾನೊಂದು ತೀರ ನೀನೊಂದು ತೀರ ಎನ್ನುವ ಹಂತಕ್ಕೆ ಬಂದಿದ್ದ ಎರಡೂ ಜೀವ ನಾ ನಿನ್ನ ಮರೆಯಲಾರೆ ಎಂದು ಕೈ ಕೈ ಹಿಡಿದು ಹಾಡುತ್ತಾ ಹೆಜ್ಜೆ ಹಾಕುವಂತಾಯಿತು. ಎರಡು ಆತ್ಮಗಳು ಮತ್ತೆ ಮಿಲನಗೊಂಡವು.