COVID-19 Resources for Mental Health Coaches... Learn More
ಇಟ್ಟ ಹೆಜ್ಜೆ ಹಿಂದಿಡದೇ ದಿಟ್ಟ ಹೆಜ್ಜೆ ಇಡಿ.
ಜೀವನವನ್ನು ಅಲ್ಲಗಳೆಯಬೇಡ, ವೈಫಲ್ಯಗಳ ಕುರಿತು ಕೊರಗಬೇಡ, ವಿಧಿಲಿಖಿತವನ್ನು ಶಪಿಸಬೇಡ.ಸಾಹಸದಿಂದ ಹೋರಾಡು, ಸತ್ಯಕ್ಕಾಗಿ ಬದುಕು, ಸಮಯ ಬಂದರೆ ಸತ್ಯಕ್ಕಾಗಿ ಪ್ರಾಣ ಬಿಡು…
ಇವು ಸ್ವಾಮಿ ವಿವೇಕಾನಂದರು ನಾಡಿನ ಯುವಶಕ್ತಿಗೆ ಹೇಳಿದ ನುಡಿಮುತ್ತುಗಳು. ಇಂದು ಈ ಮಾತುಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಇಂದಿನ ಯುವಜನಾಂಗ ಎತ್ತ ಸಾಗಿದೆ ಎಂಬುದರ ಅವಲೋಕನ ಮಾಡಿದಾಗ ಕೊಂಚ ಬೇಸರ ಅಥವಾ ಹಿನ್ನಡೆ ಎನಿಸುತ್ತದೆ. ಏಕೆಂದರೆ ಬದಲಾದ ಸನ್ನಿವೇಶದಲ್ಲಿ ಯುವಸಮುದಾಯ ನಿರೀಕ್ಷಿತ ಸಾಧನೆಯ ದಿಕ್ಕಿನಲ್ಲಿ ಸಾಗುತ್ತಿಲ್ಲ. ತಲೆಯಲ್ಲಿ ಹುಚ್ಚು ಎದೆಯಲ್ಲಿ ಕಿಚ್ಚು ಇದ್ದರೂ ಅವರ ಆಯ್ಕೆ ಮತ್ತು ಆದ್ಯತೆಗಳು ಬದಲಾಗಿವೆ. ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಯಾವುದೇ ಒಂದು ದೇಶದ ಉಜ್ವಲ ಭವಿಷ್ಯ ನಿರ್ಧರಿಸುವವರು ಯುವಕರೇ. ಅವರ ಶಕ್ತಿ ಮತ್ತು ಯುಕ್ತಿಯ ಸದ್ವಿನಿಯೋಗ ಆದಲ್ಲಿ ದೇಶದ ಭವಿಷ್ಯ ಉಜ್ವಲ ಹಾಗೂ ಸುಭದ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಯುವಶಕ್ತಿ ಬಗ್ಗೆ ಇಷ್ಟೆಲ್ಲಾ ಪೀಠಿಕೆ ಏಕೆೆಂದರೆ ಮೊನ್ನೆ ನನ್ನ ಬಳಿ ಒಬ್ಬ ಯುವಕ ಬಂದಿದ್ದ. ಆತ ಇನ್ನೂ ಎಂಜಿನಿಯರಿಂಗ್ ಪದವಿ ಓದುತ್ತಿರುವ ಮಧ್ಯಮವರ್ಗದ ಕುಟುಂಬದವ. ಆತನ ಹೆತ್ತವರು ಇದ್ದುದರಲ್ಲೇ ಅವನಿಚ್ಛೆಯಂತೆ ಓದಿಸುತ್ತಿದ್ದಾರೆ. ಆತನೂ ಆ ನಿಟ್ಟಿನಲ್ಲಿ ಸಾಗುತ್ತ ಬಂದವನೇ. ಈ ಮಧ್ಯೆ ಅದೇನು ಆಕರ್ಷಣೆಯೋ ಅಥವಾ ಹವ್ಯಾಸಗಳ ವಿಷವರ್ತಲಕ್ಕೆ ಸಿಲುಕಿಯೋ ಓದಿನಿಂದ ದೂರ ಸಾಗುತ್ತಿದ್ದಾನೆ. ದುಶ್ಚಟಗಳು ಅವನಿಗೆ ಅರಿವಿಲ್ಲದಂತೆ ಸೇರಿಕೊಂಡಿವೆ. ಪರಿಣಾಮ ಆರಂಭದಲ್ಲಿ ಆತನಲ್ಲಿದ್ದ ಸಾಧನೆಯ ತುಡಿತಕ್ಕೆ ತುಕ್ಕು ಹಿಡಿದಿದೆ. ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಹೆತ್ತವರ ಕನಸು ಕಮರುತ್ತಿವೆ. ಇದರ ಅರಿವು ಅವನಿಗೂ ಆಗಿದೆ. ಆದರೆ ಅದರ ಕಪಿಮುಷ್ಟಿಯಿಂದ ಹೊರಬರಲಾರದೇ ಒದ್ದಾಡುತ್ತಿದ್ದಾನೆ. ಈ ಕಾರಣಕ್ಕೆ ಚಿಕಿತ್ಸೆ ಅಥವಾ ಆಪ್ತ ಸಮಾಲೋಚನೆ ಅರಸಿ ನನ್ನ ಬಳಿ ಬಂದಿದ್ದ.
ನಾನು ಆತನ ಕೌಟುಂಬಿಕ ಹಿನ್ನೆಲೆ ವಿಚಾರಿಸಿದೆ. ಆಗ ತಿಳಿದು ಬಂದ ವಿಷಯ ಕೇಳಿ ಒಂದು ಕ್ಷಣ ನನಗೂ ದುಃಖ ಎನಿಸಿತು. ಆತನ ಹೆತ್ತವರ ಸ್ಥಿತಿ ಊಹಿಸಿ ಮರುಕಹುಟ್ಟಿತು. ಆತನ ತಂದೆ ಖಾಸಗಿ ಕಂಪನಿಯಲ್ಲಿ ಚಿಕ್ಕ ಉದ್ಯೋಗಿ. ಮನೆ ನಡೆಯುವಷ್ಟು ಸಂಬಳ. ಹೆಚ್ಚಿನ ಆದಾಯ ಮೂಲಗಳಿಲ್ಲ. ತಾಯಿ ಗೃಹಿಣಿ. ಮಗಳ ಮದುವೆಗೆಂದು ಮಾಡಿದ ಸಾಲದ ಶೂಲವೇ ಇನ್ನೂ ಬಗೆಹರಿದಿಲ್ಲ. ಇದೆಲ್ಲದರ ಮಧ್ಯೆ ವಂಶೋದ್ಧಾರಕನ ಭವಿಷ್ಯ ಪ್ರಜ್ವಲಿಸಲಿ ಎಂಬ ಮಹದಾಸೆಯಿಂದ ಕಷ್ಟ ಪಟ್ಟು ಈತನನ್ನು ಓದಿಸುತ್ತಿದ್ದಾರೆ.
ಆ ಯುವಕ ಸಹ ಪಾಲಕರ ಕನಸು ನನಸು ಮಾಡಬೇಕೆಂದು ಹೊರಟವನೇ. ಆದರೆ ವಯೋಸಹಜ ಮನೋಕಾಂಕ್ಷೆಗಳ ಮೋಹಪಾಶಕ್ಕೆ ಸಿಲುಕಿ ಆತನ ದಿಕ್ಕು ಬದಲಾಯಿತು. ಜತೆಗಿದ್ದ ಶ್ರೀಮಂತ ಸ್ನೇಹಿತರ ಜೀವನಶೈಲಿ ಆಕರ್ಷಿಸಿತು. ‘ಮಸ್ತ್ ಮಜಾ ಮಾಡು ಮುಂದೆ ವಯಸ್ಸು ಬರೋದಿಲ್ಲ’ ಎಂದು ಹೇಳಿಕೊಟ್ಟ ಸ್ನೇಹಿತರ ಮಾತು ಸರಿ ಎನಿಸಿದವು. ದಾರಿ ತಪ್ಪಿಸಿದ ಸ್ನೇಹಿತರ ಒತ್ತಾಯಕ್ಕೆ ಆತ ಮಣಿದಿದ್ದ. ಪರಿಣಾಮ ಅಭ್ಯಾಸದಿಂದ ವಿಮುಖನಾಗತೊಡಗಿದ. ಫಲಿತಾಂಶ ಕ್ಷೀಣಿಸಿತು. ಈ ಮುಂಚಿನ ಎಲ್ಲ ಸೆಮಿಸ್ಟರ್ಗಳಿಗಿಂತ ಫಲಿತಾಂಶ ಕಳಪೆಯಾಗುತ್ತ ಸಾಗಿತು. ಇದು ಹೆತ್ತವರ ಆತಂಕಕ್ಕೂ ಕಾರಣವಾಯಿತು. ಕೇಳಿದರೆ ಅವರಿಂದ ದೂರವಾಗುವ, ಸಿಡಿ ಸಿಡಿ ಹಾಯುವ ಪ್ರವೃತ್ತಿ ಹೆಚ್ಚಿತು. ಅವರೆದುರು ನಿಲ್ಲುವ ನೈತಿಕ ಸ್ಥೈರ್ಯ ಆತನಲ್ಲಿ ಕುಸಿದಿತ್ತು. ಭವಿಷ್ಯ ಮಂಕುಗೊಳ್ಳುವ ಮುನ್ಸೂಚನೆ ನೀಡಿತ್ತು. ಇದರಿಂದ ಕಂಗೆಟ್ಟ ಆತ ನನ್ನ ಬಳಿ ಬಂದಿದ್ದ. ನಾನವನಿಗೆ ಹೇಳಿದ್ದು ಇಷ್ಟೇ. ‘ಇನ್ನೂ ಕಾಲ ಮಿಂಚಿಲ್ಲ. ತಿದ್ದಿಕೊ. ಮನಸ್ಸು ಗಟ್ಟಿ ಮಾಡು. ಹೆತ್ತವರನ್ನು ಕಣ್ಣೆದುರು ತಂದುಕೊ. ನಿನ್ನ ಗುರಿ ನೆನಪಿಸಿಕೊಂಡು ಮತ್ತೆ ಸಾಧಕನಾಗು. ಕಷ್ಟಪಟ್ಟು ಓದು. ಪರಿಶ್ರಮ ಮತ್ತು ಧೈರ್ಯದಿಂದ ಮುನ್ನುಗ್ಗು. ಇಷ್ಟ ಪಟ್ಟು ಬದುಕು ಸಾಗಿಸು. ಈ ಚಟಗಳೆಲ್ಲ ನಿನ್ನನ್ನು ಚಟ್ಟಕ್ಕೆ ಹತ್ತಿಸುತ್ತವೆ ಎನ್ನುವ ವಾಸ್ತವ ಅರಿ’ ಎಂದು ಹೇಳಿ ಅದಕ್ಕೆ ಪೂರಕವಾದ ಚಿಕಿತ್ಸೆ ನೀಡಿದೆ. ಇದು ಒಂದು ಉದಾಹರಣೆಯಷ್ಟೇ. ಸಮಾಜದಲ್ಲಿ ಇಂತಹ ಅದೆಷ್ಟೋ ಯುವಕರು ದಾರಿ ತಪ್ಪಿದ ಮತ್ತು ತಪ್ಪುತ್ತಿರುವುದನ್ನು ನಾವು ನೋಡಬಹುದು. ಇಂತಹ ಪ್ರಕರಣಗಳು ಹೆಚ್ಚಬಾರದು ಎಂದರೆ ಇಂದಿನ ಯುವಸಮುದಾಯ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಂದಾಗ ವಿವೇಕಾನಂದರ ಆಶಯ, ಕನಸು ಸಾಕಾರಗೊಳ್ಳುವುದರಲ್ಲಿ ಸಂಶಯವೇ ಇಲ್ಲ.