COVID-19 Resources for Mental Health Coaches... Learn More

0836-2773878

“ಆನಂದ ಪಾಂಡುರಂಗಿ ಬೆಳಗಿಸಿದ ಸತ್ಯ: ಮನಸ್ಸು ತಪ್ಪಿದಾಗ ಬದುಕು ದಾರಿ ತಪ್ಪುತ್ತದೆ”

ಒಂದು ಕ್ಷಣದ ದುಡುಕು ತಂದೀತು ಕೆಡುಕು
ಮೊನ್ನೆ ಮೊನ್ನೆಯಷ್ಟೇ ಎರಡು ಹೃದಯ ವಿದ್ರಾವಕ ಘಟನೆಗಳು ಸಂಭವಿಸಿದವು. ಒಂದು: ಹಸುವಿನ ಕೆಚ್ಚಲು ಕತ್ತರಿಸಿದ ಅಮಾನವೀಯ ಘಟನೆ. ಇನ್ನೊಂದು: ಕೌಟುಂಬಿಕ ಕಲಹದ ಕಾರಣ ತಾಯಿ ಹೆತ್ತ ಮಕ್ಕಳನ್ನೇ ಕಾಲುವೆಗೆ ಎಸೆದದ್ದು. ಈ ಎರಡೂ ಘಟನೆಗಳು ಎಂಥವರ ಕರುಳನ್ನೂ ಕರಗಿಸದಿರಲಾರದು. ಇದು ಕ್ರೌರ್ಯದ ಪರಮಾವಧಿ ಎಂದರೂ ತಪ್ಪಾಗದು. ಈ ಘಟನೆ ಹಿಂದಿನ ಕಾರಣ ಬೆನ್ನತ್ತಿ ಹೊರಟರೆ ಸಿಗುವ ಅಂಶ ಎಂದರೆ ಒಂದು ಮನಸ್ಥಿತಿ, ಇನ್ನೊಂದು ಮನೆ ಸ್ಥಿತಿ. ಹೌದು ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದಲ್ಲಿ ಆ ದುಷ್ಕೃತ್ಯ ಎಸಗಿದ ವ್ಯಕ್ತಿ ಪಾನಮತ್ತನಾಗಿದ್ದ. ಅದರ ಅಮಲಿನಲ್ಲಿ ಮಾಡಿದ ಎಂಬ ಮಾಹಿತಿ ಸ್ವತಃ ಗೃಹಸಚಿವರಿಂದ ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಪತಿ ಮನೆಯವರ ಕಡೆಯಿಂದ ಆಗಾಗ್ಗೆ ನಡೆಯುತ್ತಿದ್ದ ಆಸ್ತಿ ವ್ಯಾಜ್ಯ, ಕೌಟುಂಬಿಕ ಕಲಹದಿಂದ ಬೇಸತ್ತು ಸಾವಿಗೆ ಶರಣಾಗುವ ಮನಸ್ಥಿತಿಗೆ ಬಂದ ಆ ಮಹಿಳೆಯ ದುಡುಕಿನ ನಿರ್ಧಾರ. ಮನ ಮತ್ತು ಮನೆ ಎರಡರ ಸ್ವಾಸ್ಥ್ಯಕ್ಕೆ ಧಕ್ಕೆ ಬಂದಾಗ ಆಗುವ ಅನಾಹುತಕ್ಕೆ ಇದಕ್ಕಿಂತ ಬೇರೆ ಉತ್ತಮ ನಿದರ್ಶನವಿಲ್ಲ. ಇದೀಗ ಸೋಷಿಯಲ್ ಮೀಡಿಯಾ ಹೆಚ್ಚು ಪ್ರಚಲಿತವಾಗಿರುವ ಹಿನ್ನೆಲೆಯಲ್ಲಿ ಇವು ಬೆಳಕಿಗೆ ಬಂದಿವೆ. ಆದರೆ ಇದಕ್ಕೂ ಮುನ್ನ ಅದೆಷ್ಟೋ ಈ ತರಹದ ಘಟನೆಗಳು ನಡೆದಿದ್ದರೂ ಬಹುತೇಕ ಬೆಳಕಿಗೆ ಬಂದಿಲ್ಲ. ಅದೇನೇ ಇರಲಿ ಈ ತರಹದ ಘಟನೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರ ಎನ್ನುವುದಂತೂ ಸತ್ಯ. ಹಾಗಾದರೆ ಈ ತರಹ ಯಾಕೆ ಆಗುತ್ತದೆ? ಎಂದರೆ, ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಿಸುವಲ್ಲಿ ವಿಫಲನಾಗುವುದಕ್ಕೆ ಮತ್ತು ದುಡುಕುವುದಕ್ಕೆ ಹೌದು ಮದ್ಯಸೇವನೆ ತಪ್ಪು. ಅದರಲ್ಲೂ ಅತಿಯಾದ ಮದ್ಯಸೇವಿಸಿದಾಗ ವ್ಯಕ್ತಿ ತನ್ನೆಲ್ಲ ಸ್ಥಿತಿ ಕಳೆದುಕೊಳ್ಳುತ್ತಾನೆ. ತಾನೇನು ಮಾಡುತ್ತಿರುವೆ ಎಂಬುದರ ಪರಿಜ್ಞಾನವೂ ಆತನಿಗೆ ಇರುವುದಿಲ್ಲ. ಇನ್ನು ದುಡುಕುವ ವಿಚಾರ ಬಂದಾಗ ಆ ಒಂದು ಆವೇಶದ ಕ್ಷಣಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವುದರ ಕನಿಷ್ಠ ಊಹೆಯೂ ಇರುವುದಿಲ್ಲ. ಈ ಮೇಲಿನ ಪ್ರಕರಣಗಳಲ್ಲಿ ಸಂಭವಿಸಿದ್ದೂ ಅದೇ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ಯಾರದೋ ಸಿಟ್ಟು ಅಥವಾ ರೋಷವನ್ನು ಇನ್ಯಾರದೋ ಮೇಲೆ ತೀರಿಸಿಕೊಂಡ ಪರಿಣಾಮ ಮಾತುಬರದ ಮುಗ್ಧ ಹಸುಗಳು ಪರಿತಪಿಸಬೇಕಾಯಿತು. ಇನ್ನೊಂದು ಪ್ರಕರಣದಲ್ಲಿ ಆ ಮಹಾತಾಯಿ ತನ್ನ ಕರುಳಕುಡಿಗಳನ್ನೇ ಬಾರದಲೋಕಕ್ಕೆ ಕಳಿಸುವ ಹಂತಕ್ಕೆ ಬಂದಳು ಎಂದರೆ ಅವಳ ಮನಸ್ಥಿತಿ ಬಗ್ಗೆ ನಾವು ಊಹಿಸಬಹುದಾಗಿದೆ. ಆಸ್ತಿ ವ್ಯಾಜ್ಯವೇ ಇರಲಿ, ಕೌಟುಂಬಿಕ ಕಲಹವೇ ಇರಲಿ ಅದಕ್ಕೆ ಏನೂ ಅರಿಯದ ಮುಗ್ಧ ಕಂದಮ್ಮಗಳು ಬಲಿಪಶುಗಳಾಗಬೇಕು ಎಂದರೆ ಇದ್ಯಾವ ನ್ಯಾಯ? ಇವರಿವರ ಆಸ್ತಿ ವ್ಯಾಜ್ಯಕ್ಕೆ, ಮನಸ್ತಾಪಕ್ಕೆ ಮಕ್ಕಳು ಪ್ರಯೋಗಶೀಲತೆಗೆ ಒಳಗಾಗಬೇಕೇ? ಇದನ್ನು ಸಮಾಜ ಮೆಚ್ಚುವುದಿಲ್ಲ. ಅದಕ್ಕೆ ಹೇಳುವುದು ತೀರಾ ರೇಸಿಗೆ ಹುಟ್ಟಿಸಿದ, ಬೇಸರ ಮೂಡಿಸಿದ ಆ ಕ್ಷಣ ದುಡುಕಿನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬಲು ಅಪಾಯಕಾರಿ. ಅದು ಈ ಘಟನೆಯಿಂದ ಸಾಬೀತು ಕೂಡ ಆಗಿದೆ.
ಮನುಷ್ಯನಿಗೆ ವಿಚಾರಶಕ್ತಿ ಇದೆ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ನಿರ್ಧರಿಸುವ ಅಲೋಚನಾ ಸಾಮರ್ಥ್ಯವಿದೆ. ಆದರೆ ವ್ಯಸನ ಅಥವಾ ಒಂದು ಕ್ಷಣದ ಆತುರದ ಎದುರು ಎಲ್ಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ ಸರಿ. ನಾನು ಏನು ಮಾಡುತ್ತಿರುವೆ? ಅತಿಯಾದ ಒತ್ತಡದ ಪರಿಣಾಮ ಮನಸ್ಸು ಮಂಕಾಗುತ್ತದೆ. ನನ್ನ ಸೇಡನ್ನು ಯಾರ ಮೇಲೆ ತೀರಿಸಿಕೊಳ್ಳುತ್ತಿರುವೆ? ಎಂಬುದರ ಅರಿವು ಆ ಕ್ಷಣದಲ್ಲಿ ಮಾಯವಾಗಿರುತ್ತದೆ. ಈಗ ಆ ಮಕ್ಕಳು ಮರಳಿ ಬಾ ಎಂದರೆ ಬರಲು ಸಾಧ್ಯವೇ? ಸಮಾಜದಲ್ಲಿ ಮಕ್ಕಳಿಗಾಗಿ ಪರಿತಪಿಸುವ ಅದೆಷ್ಟೋ ಜನ ಇದ್ದಾರೆ. ಅಂತಹುದರಲ್ಲಿ ಇರುವ ಮಕ್ಕಳನ್ನು ಈ ತರಹ ಅಮಾನವೀಯವಾಗಿ ಯಾರದೋ ಮೇಲಿನ ಸಿಟ್ಟಿಗಾಗಿ ಬಲಿ ಕೊಡುವುದು ಎಷ್ಟು ಸರಿ? ಆ ಮೇಲೆ ಹಣೆಹಣೆ ಬಡಿದುಕೊಂಡರೆ ಏನು ಪ್ರಯೋಜನ? ಎಲ್ಲವೂ ಶೂನ್ಯ.
ಈ ಘಟನೆಗಳಿಂದ ನಮ್ಮ ಸಮಾಜದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅರಿವಿನ ಕಣ್ಣನ್ನು ಸದಾ ತೆರೆದುಕೊಂಡು ಇಟ್ಟುಕೊಳ್ಳುವ ತುರ್ತು ಅಗತ್ಯ ಇದೆ. ಮಾನವೀಯತೆ ಉಳಿಯಬೇಕು, ಅದರ ಮೌಲ್ಯ ಪ್ರಜ್ವಲಿಸಬೇಕು ಎಂದರೆ ಮನುಷ್ಯ ಸದಾ ಶಾಂತಚಿತ್ತನಾಗಿ ಮನೋನೆಮ್ಮದಿ ಮತ್ತು ಸ್ವಾಸ್ಥ್ಯ ಹಾಳು ಮಾಡಿಕೊಳ್ಳದೇ ಇದ್ದಲ್ಲಿ ಸಮಾಜವೂ ಸ್ವಸ್ಥವಾಗಿರುತ್ತದೆ. ಆ ನಿಟ್ಟಿನಲ್ಲಿ ನಮ್ಮ ನಿಮ್ಮೆಲ್ಲರ ಚಿತ್ತ ಇರಲಿ ಅಷ್ಟೇ.

About Author:

Leave Your Comments

Your email address will not be published. Required fields are marked *