COVID-19 Resources for Mental Health Coaches... Learn More

0836-2773878

“ಆನಂದ ಪಾಂಡುರಂಗಿಯೊಂದಿಗೆ ಸಮಯಪಾಲನೆಯ ಸತ್ವ: ಸಾಧನೆಯ ದಾರಿಯ ಬೆಳಕು”

ಸಾಧನೆಯ ಹಾದಿಗೆ ಅತಿ ಅಗತ್ಯ ಸಮಯಪಾಲನೆ
ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಆ ಮೂಲಕ ಜೀವನವನ್ನು ಗಟ್ಟಿ ಮಾಡಿಕೊಳ್ಳಿ, ತಂತ್ರಜ್ಞಾನದ ಸದ್ಬಳಕೆಯಾಗಲಿ – ಇವು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಮೊನ್ನೆಯಷ್ಟೇ ಪರೀಕ್ಷಾ ಭೀತಿ ಹೋಗಲಾಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತುಗಳು. ಇದನ್ನೇ ನಮ್ಮ ಹಿರಿಯರು ಹೇಳಿದ್ದರು. ಈಗಿನವರೂ ಹೇಳುತ್ತಿದ್ದಾರೆ. ಮುಂದೆಯೂ ಇದೇ ಸಾರ್ವಕಾಲಿಕ ಕಿವಿಮಾತು. ಏಕೆಂದರೆ ಎಲ್ಲದಕ್ಕೂ ಇಲ್ಲಿ ಸಮಯ ಎನ್ನುವುದು ಮುಖ್ಯ, ಆದರೆ ಈ ಕಾಲದ ಮಹತ್ವ ಅರಿತವರು ಕೆಲವೇ ಕೆಲವರು. ಮಹತ್ವ ಅರಿತು ಅದನ್ನು ಪಾಲಿಸಿದವರು ಸಾಧಕರಾದರು. ಉಳಿದವರು ಗೊಣಗುತ್ತಾ ಉಳಿದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಕಾಲವೆನ್ನುವುದು ಯಾರಿಗೂ ಎಂದಿಗೂ ನಿಲ್ಲುವುದಿಲ್ಲ. ಅದನ್ನು ನಾವು ಪಾಲಿಸಿದರೆ ಅದು ನಮ್ಮನ್ನು ಪೋಷಿಸುತ್ತದೆ. ಅಸಡ್ಡೆ ತೋರಿದರೆ ಬಿಟ್ಟು ಸಾಗುತ್ತದೆ. ಯಾರೊಬ್ಬರೂ ಹುಟ್ಟಿನಿಂದಲೇ ಜಾಣರಿರುವುದಿಲ್ಲ. ಎಲ್ಲರಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಸಮಯಪ್ರಜ್ಞೆ ಮೂಲಕ ಬೆಳೆಸಿಕೊಂಡು ಪಾಲಿಸಿಕೊಂಡು ಹೋದರೆ ಯಶಸ್ಸು ಖಚಿತ. ಇಲ್ಲದಿದ್ದರೆ ಇದ್ದ ಬುದ್ದಿಯೂ ಕ್ಷೀಣಿಸುತ್ತದೆ. ಸತತ ಪರಿಶ್ರಮ ಎಲ್ಲ ಕ್ಷೇತ್ರಗಳಲ್ಲಿನ ಯಶಸ್ಸಿನ ಗುಟ್ಟು. ಸೋಲೇ ಗೆಲುವಿನ ಸೋಪಾನ ಎಂದುಕೊಂಡು ಸೋತರೂ ಧೃತಿಗೆಡದೆ ನಿರಂತರ ಯತ್ನ ಮಾಡಿದ್ದೇ ಅದಲ್ಲಿ ಗೆಲುವು ನಮ್ಮದೇ. ಇದೆಲ್ಲ ಸರಿ. ಆದರೆ ಇದೀಗ ಕಾಲ ಬದಲಾಗಿದೆ. ಆಧುನಿಕತೆ ಅಗತ್ಯ, ತಂತ್ರಜ್ಞಾನವಂತೂ ಇನ್ನೂ ಅತ್ಯಗತ್ಯ. ಆದರೆ ಇದು ಅಭಿವೃದ್ಧಿ ಮತ್ತು ಜ್ಞಾನವೃದ್ಧಿಗೆ ಬಳಕೆಯಾದರೆ ಸೂಕ್ತ. ಇಲ್ಲದೇ ಕೇವಲ ಮನರಂಜನೆಗೆ ಹೆಚ್ಚು ಬಳಕೆಯಾದರೆ ರಿಯಲ್ ಲೈಫ್ ಕೂಡ ರೀಲ್ಸ್ ತರಹ ಆಗಿ ಹೋಗುತ್ತದೆ. ರೀಲ್ಸ್ನಲ್ಲಿನ ನಟನೆ ರಿಯಲ್ ಲೈಫ್‌ನಲ್ಲಿ ಆಗುವುದಿಲ್ಲ. ರಿಯಲ್ ಬೇರೆ ರೀಲ್ ಬೇರೆ. ಕ್ಷಣ ಹೊತ್ತಿನ ರೀಲ್ಸ್ನ ಮನರಂಜನೆ ತರಹ ದಿಯಲ್ ಲೈಫ್ ಅಲ್ಲ. ರೀಲ್ಸ್ನಲ್ಲಿ ರಿಟೇಕ್‌ಗೆ ಅವಕಾಶ ಇರುತ್ತದೆ. ಆದರೆ ರಿಯಲ್ ನಲ್ಲಿ ರಿಟೇಕ್ ಇಲ್ಲ. ಕಾಲ ಮಿಂಚಿದರೆ ಮೇಲಿನವನ ಕಾಲ್ ಬರುತ್ತದೆ ಅಷ್ಟೇ. ಇಲ್ಲಿ ಪ್ರಧಾನಿ ಮೋದಿ ಅವರು ಹೇಳಿದ ಇನ್ನೊಂದು ಮಾತು ತುಂಬಾ ಗಮನಾರ್ಹವಾಗಿದೆ. ಅದೇನೆಂದರೆ ಜ್ಞಾನ ಮತ್ತು ಪರೀಕ್ಷೆ ಎರಡೂ ಬೇರೆ ಎಂಬುದು. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಕೆಯೊಂದಿಗೆ ಉತ್ತೀರ್ಣರಾಗುವುದು ಜೀವನದ ಗುರಿಯಲ್ಲ, ಅಥವಾ ಬುದ್ದಿವಂತಿಕೆಯ ಮಾನದಂಡವಲ್ಲ, ಅನುತ್ತೀರ್ಣರಾದರೆ ಕೊರಗು ಬೇಡ. ಜೀವನದ ವ್ಯಾಖ್ಯಾನ ಬೇರೆಯೇ ಇದೆ. ಅದೆಷ್ಟೋ ಸಾಧಕರು ಅನುತ್ತೀರ್ಣ ಎಂಬ ಹಂತ ದಾಟಿಯೇ ಬಂದಿದ್ದಾರೆ. ಕಾಲಕ್ಕೆ ತಕ್ಕಂತೆ ಸಕಾಲಿಕವಾಗಿ ಅವರು ಮಾಡಿಕೊಂಡ ಅಗತ್ಯ ಮಾರ್ಪಾಡು ಅವರನ್ನು ಗೆಲುವಿನ ದಡ ಸೇರಿಸಿದೆ. ಹಾಗೆ ನಾವು ಕೂಡ ಸಕಾಲಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇದಕ್ಕೆ ನಮಗೆ ನಮ್ಮ ಸಾಮರ್ಥ್ಯಗಳ ಇತಿ ಮಿತಿ ಗೊತ್ತಿರಬೇಕು. ನಮ್ಮ ಗುರಿಯ ಸಾಧಕ ಬಾಧಕಗಳ ಅರಿವಿರಬೇಕು. ಗುರಿ ಇರಬೇಕು, ಜತೆಗೆ ಗುರುವೂ ಬೇಕು. ಇದೆಲ್ಲದರ ಜೊತೆಗೆ ಬೆವರು ಸುರಿಸಬೇಕು. ನಂತರ ಅಂದುಕೊಂಡದ್ದು ಆಗದಿದ್ದರೆ ಹೇಳಿ! ಒಂದು ವೇಳೆ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಪರವಾಗಿಲ್ಲ. ಅನುಭವ ಸಿಗುತ್ತದೆ. ಆ ಅನುಭವದ ಆಧಾರದ ಮೇರೆಗೆ ಆದ ಲೋಪದೋಷ ಅಥವಾ ನ್ಯೂನತೆ ಸರಿಪಡಿಸಿಕೊಂಡು ಹೋದರೆ ಒಂದು ಹೆಜ್ಜೆ ಮುಂದೆ ಹೋಗುತ್ತೇವೆ. ನಮಗೆಲ್ಲ ಮೇಷ್ಟು ಹೇಳುತ್ತಿದ್ದರು. ‘ನೋಡ್ರಪಾ ಹೊಸ ತಪ್ಪು ಮಾಡಿದರೆ, ಹೇಳಿಕೊಡ್ತೀನಿ, ಆದರೆ ಮಾಡಿದ ತಪ್ಪೇ ಮಾಡಬೇಡಿ’ ಅಂತ. ಕಲಿಕೆ ನಿರಂತರ. ಈ ವೇಳೆ ಎಡವುವುದು, ತಪ್ಪು ಮಾಡುವುದು ಸಾಮಾನ್ಯ- ಒಂದೇ ತಪ್ಪು ಪುನರಾವರ್ತನೆಯಾಗಬಾರದು. ಹೊಸ ತಪ್ಪು ಹೊಸ ಕಲಿಕೆ ಕಲಿಸುತ್ತದೆ. ಹಾಗೆಯೇ ನಾವು ಕೂಡ ಒಂದೊಂದೇ ಹೆಜ್ಜೆ ಇಡುತ್ತಾ ಸಾಗಬೇಕು. ಆ ಹೆಜ್ಜೆ ಗುರಿ ತಲುಪಿಸುವುದು ಖಚಿತ.”
ನಮ್ಮ ಹಿರಿಯರು, ಅನುಭವಿಗಳು, ತಜ್ಞರು ಕಾಲಕಾಲಕ್ಕೆ ಈ ತರಹದ ಮಾರ್ಗದರ್ಶನದ ಮಾತುಗಳನ್ನು ಹೇಳಿದ್ದಾರೆ. ಈಗಲೂ ಹೇಳುತ್ತಿದ್ದಾರೆ. ಮುಂದೆಯೂ ಹೇಳುತ್ತಾರೆ. ಆದರೆ ಸಿದ್ದೇಶ್ವರ ಸ್ವಾಮಿಗಳು ಹೇಳಿದಂತೆ, ‘ಹೇಳುವುದು ಎಲ್ಲ ಹೇಳಿಯಾಗಿದೆ. ಇನ್ನೇನಿದ್ದರೂ ಅದನ್ನು ಪಾಲಿಸುವುದು ಮಾತ್ರ.’ ಎಷ್ಟೊಂದು ಅರ್ಥಗರ್ಭಿತ ಮತ್ತು ವಾಸ್ತವಾಂಶ ಕೂಡಿದ ಮಾತಿದು. ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ತಿಳಿಸುವ ಇಂತಹ ಜ್ಞಾನಯೋಗಿಗಳ ಮಾತು ಬರೀ ಮಾತಲ್ಲ, ಬದುಕು ಉದ್ದಾರವಾಗುವ ರಹದಾರಿ. ಆದರೆ ಇಂದಿನ ಪೀಳಿಗೆಗೆ ಇದರ ಅರಿವಾಗಬೇಕು. ಆ ಅರಿವು ಅದಲ್ಲಿ ಎಲ್ಲರ ಮಾತುಗಳು ಸಾರ್ಥಕ.

About Author:

Leave Your Comments

Your email address will not be published. Required fields are marked *