COVID-19 Resources for Mental Health Coaches... Learn More

0836-2773878

“ಅತಿಯಾದ ವ್ಯಾಮೋಹ ಭವಿಷ್ಯ ಡೋಲಾಯಮಾನ”

ಆತ 24ವಯಸ್ಸಿನ ಯುವಕ. ಈಗಷ್ಟೇ ಬಿಇ ಮುಗಿಸಿದ್ದಾನೆ. ಓದಿನಲ್ಲಿ ತುಂಬಾ ಪ್ರತಿಭಾವಂತ. ಪಾಲಕರು ಹೇಳಿದ ಮಾತು ವೇದವಾಕ್ಯ. ಅದರಲ್ಲೂ ಪಿತೃವಾಕ್ಯ ಪರಿಪಾಲಕ. ತಂದೆ ಹಾಕಿದ ಗೆರೆ ದಾಟಿದ ವ್ಯಕ್ತಿತ್ವ. ತಂದೆ ಎಂದರೆ ಅಷ್ಟೊಂದು ಭಯ, ಭಕ್ತಿ ಮತ್ತು ಅಭಿಮಾನ, ತಂದೆಗೂ ಮಗನೆಂದರೆ ಇನ್ನಿಲ್ಲದ ಪ್ರೀತಿ. ಆದರೆ ಇದೇ ಪ್ರೀತಿ ಅತಿಯಾಗಿ ಮುಂದೊಂದು ದಿನ ಆತನ ಭವಿಷ್ಯವೇ ಡೋಲಾಯಮಾನವಾದ ಕಥೆ ಇದು.

ಹೌದು, ಇದು ಓದಲು ಕಥೆ ಎನಿಸಿದರೂ ವಾಸ್ತವ ಪ್ರಕರಣ. ಆ ಯುವಕ ಬಾಲ್ಯದಿಂದಲೇ ತಂದೆಯ ಅಕ್ಕರೆಯಲ್ಲಿ ಬೆಳೆದ. ತಂದೆಯೂ ಆತನಿಗೆ ಯಾವುದೇ ವಸ್ತು ಅಥವಾ ಉಪಚಾರದಲ್ಲಿ ಕೊರತೆಯಾಗದಂತೆ ನೋಡಿಕೊಂಡಿದ್ದರು. ఆత ಬೇಡಿದ್ದನ್ನೆಲ್ಲಾ ಕೊಡಿಸಿದ್ದರು. ತಂದೆಗೆ ಈತ ಏಕೈಕ ಸುಪುತ್ರ. ಕಣ್ಣೆದುರೇ ಇರಲಿ ಎನ್ನುವ ಅಪೇಕ್ಷೆಯೂ ಇತ್ತು. ಅದರಂತೆ ತಮ್ಮ ಬಳಿ ಇಟ್ಟುಕೊಂಡು ಉತ್ತಮ ಶಿಕ್ಷಣ ಕೊಡಿಸಿದರು. ಅದಕ್ಕೆ ತಕ್ಕಂತೆ ಮಗನೂ ಚೆನ್ನಾಗಿ ಓದಿದ. ಮೆರಿಟ್ ಸೀಟು ಪಡೆದು ಇಂಜಿನಿಯರಿಂಗ್ ಪದವಿ ಕೂಡ ಪೂರೈಸಿದ. ಪದವಿ ಮುಗಿಸಿದ್ದೇ ತಡ ನೋಡಿ ಶುರುವಾಯ್ತು ಭವಿಷ್ಯದ ತಳಮಳ. ತಂದೆ ಮಗ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಈ ಮಧ್ಯೆ ತಂದೆ ಮಗನಿಗೆ ತಿಂಗಳಿಗೆ ಕೈ ಖರ್ಚಿಗೆ ಎಂದು ಒಂದಿಷ್ಟು ಹಣ ಕೊಡುವ ರೂಢಿ ಇಟ್ಟುಕೊಂಡಿದ್ದರು. ಹೀಗಾಗಿ ಮಗನಿಗೆ ದುಡಿಯಬೇಕು, ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವ ಆಲೋಚನೆ ಬರಲೇ ಇಲ್ಲ. ಬರಲೇ ಇಲ್ಲ ಎನ್ನುವುದಕ್ಕಿಂತ ತಂದೆಯೂ ಮಗನನ್ನು ದುಡಿಮೆಗೆ ಕಳಿಸುವ ಗೋಜಿಗೆ ಹೋಗಲಿಲ್ಲ. ತಂದೆಗೆ ಧೃತರಾಷ್ಟ್ರನಂತೆ ಮಗನ ಮೇಲೆ ಇನ್ನಿಲ್ಲದ ಅಂಧ ವ್ಯಾಮೋಹ ಆವರಿಸಿತ್ತು. ಏನೇ ಆದರೂ ಮಗ ಕಣ್ಣೆದುರೇ ಇರಲಿ ಎನ್ನುವ ಹುಚ್ಚು ಆಸೆ ಮಗನ ಭವಿಷ್ಯದ ಮೇಲೆ ಕಲ್ಲು ಹಾಕಿತ್ತು. ಇದು ಹೀಗೆ ಸ್ವಲ್ಪ ಸಾಗಿತಾದರೂ ಕೊನೆಗೆ ಮಗನಿಗೆ ಭಿನ್ನತೆ ಆವರಿಸಲು ಆರಂಭವಾಯಿತು. ಪರಿಣಾಮ ಮನೆಯಲ್ಲಿ ಎಲ್ಲರೊಡನೆ ಹಂತ ಹಂತವಾಗಿ ಜಗಳ, ಮನಸ್ತಾಪ, ಕಿರಿಕಿರಿ ಶುರುವಾಯಿತು. ಇದು ಮನೆ ಮಂದಿಗೆಲ್ಲ ತೊಂದರೆ ನೀಡಲು ಕಾರಣವಾಯಿತು.

ದಿನಗಳು ಹೀಗೆ ಕಳೆಯುತ್ತಿದ್ದಂತೆ ತಾಯಿಗೆ ಮಗನ ವರ್ತನೆ ಬೇಸರ ತರಲಾರಂಭಿಸಿತು. ಇರುವ ಒಬ್ಬ ಮಗ ವಂಶೋದ್ಧಾರಕ ಹೀಗೆ ದುಡಿಮೆ ಇಲ್ಲದೇ ಮನೆಯಲ್ಲಿ ಕುಳಿತರೆ ಮುಂದೆ ಆತನ ಮದುವೆ ಏನು? ಸಂಸಾರದ ಕಥೆ ಏನು ಎಂಬೆಲ್ಲಾ ವಿಚಾರಗಳು ತಾಯಿಯನ್ನು ಕಾಡಲಾರಂಭಿಸಿದವು. ಆತನ ಫಲಿತಾಂಶಕ್ಕೆ ಒಳ್ಳೆಯ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಬಂದರೂ ಮಗ ಹೋಗಲು ಒಪ್ಪುತ್ತಿಲ್ಲ. ಮನೆಯಲ್ಲಿ ಕುಳಿತು ಕುಳಿತು ಆತನಿಗೆ ಭಿನ್ನತೆ ಪುರುವಾಗಿದೆ. ದುಡಿಮೆ ಅಥವಾ ಅದರ ಅಗತ್ಯ, ಮಹತ್ವ ಆತನಿಗೆ ಅರಿವಾಗಲೇ ಇರಲಿಲ್ಲ. ಇದೆಲ್ಲ ಗಮನಿಸಿದ ತಾಯಿ ಮುಂದೊಂದು ದಿನ ಯಾರೋ ಮನೋವೈದ್ಯರ ಬಳಿ ತೋರಿಸಿ ಎಂದು ಸೂಚಿಸಿದ್ದರೆ ಪ್ರಕಾರ ನನ್ನ ಕಡೆ ಕರೆದುಕೊಂಡು ಬಂದಿದ್ದರು. ಆತ ತಾಯಿಯೊಡನೆ ಬಂದಾಗ ಈತನಿಗೆ ಭಿನ್ನತೆ ಅವರಿಸಿದೆ ಎಂಬ ಲಕ್ಷಣ ಇರಲಿಲ್ಲ, ಸುಂದರ ರೂಪ, ಆಕರ್ಷಕ ಮೈ ಕಟ್ಟು ನೋಡಿದರೆ ಈತನಿಗೆ ಎದುರಾಗಿರುವ ಸಮಸ್ಯೆಯಾದರೂ ಏನು? ಎಂಬ ಪ್ರಶ್ನೆ ನನಗೂ ಎದುರಾಯಿತು. ಕೊನೆಗೆ ಆತನ ತಾಯಿಯಲ್ಲಿ, ಎನಾಗಿದೆ. ಮಗ ಒಳ್ಳೆಯ ಗುಂಡಕಲ್ಲು ಇದ್ದ ಹಾಗೆ ಇದ್ದಾನೆ. ಇವನನ್ನೇಕೆ ಕರೆದುಕೊಂಡು ಬಂದಿರುವಿರಿ? ಎಂದು ಕೇಳಿದೆ. ನೋಡಲು ಚೆನ್ನಾಗಿಯೇ. ಸದೃಢವಾಗಿಯೇ ಇದ್ದಾನೆ ಸರ್. ಆದರೆ ಬಲು ಸೋಮಾರಿ ಯಾವುದೇ ಕೆಲಸದಲ್ಲಿ ಅಸಕ್ತಿ ಇಲ್ಲ. ಕೆಲಸ ಮಾಡಬೇಕು ಎಂದು ಈತನಿಗೆ ಅನಿಸುವುದೇ ಇಲ್ಲ. ಆತನ ತಂದೆ ಇವನನ್ನು ಹಾಗೆ ಮಾಡಿಟ್ಟಿದ್ದಾರೆ ಎಂದು ತಿಳಿಸಿದರು. ಎಲ್ಲ ವೃತ್ತಾಂತ ಹಾಗೂ ಹಿನ್ನೆಲೆ ಕೇಳಿ ಸದ್ಯಕ್ಕೆ ಆತನ ಮೂಡ್ ಚೇಂಜ್ ಆಗುವ ನಿಟ್ಟಿನಲ್ಲಿ, ವೈಜ್ಞಾನಿಕ ಚಿಕಿತ್ಸೆ ಸೂಚಿಸಿದೆ. ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ನಾವು ಗಮನಿಸಬೇಕಿರುವ ವಿಷಯವೆಂದರೆ ಅತಿಯಾದ ವ್ಯಾಮೋಹ ಇಲ್ಲಿ ಆತನನ್ನು ಎಲ್ಲದಕ್ಕೂ ಅರ್ಹಸಿದ್ದರೂ ಮೂಲೆಗುಂಪಾಗಿಸಿತ್ತು.

ಪಾಲಕರು ಇದಕ್ಕೆ ಅವಕಾಶ ಕೊಡಬಾರದು. ಪ್ರೀತಿ ಬೇರೆ, ಅಂಧ ವ್ಯಾಮೋಹ ಬೇರೆ. ಅತಿಯಾದ ಮುದ್ದು ಮಕ್ಕಳ ಭವಿಷ್ಯಕ್ಕೆ ಮುಳುವಾದರೆ ಹೇಗೆ? ಆ ಆಲೋಚನೆಯೂ ಪಾಲಕರಿಗೆ ಇರಬೇಕು. ಮಕ್ಕಳಿಗೆ ಜವಾಬ್ದಾರಿ ಕಲಿಸಬೇಕು. ಆಗ ಅವರು ಹೆಮ್ಮೆಯ ಪುತ್ರರಾಗುತ್ತಾರೆ. ಇಲ್ಲದಿದ್ದರೆ ಹೆತ್ತವರಿಗೂ ಬೇಡವಾಗುತ್ತಾರೆ.

About Author:

Leave Your Comments

Your email address will not be published. Required fields are marked *